ಇನ್ನೇನು ವರ್ಷದ ಕೊನೆಯ ಹತ್ತಿರಕ್ಕೆ ಬಂದಿದ್ದೀವಿ. 'ಸಿನಿಮಾ ಇಂಡಸ್ಟ್ರಿ'ಯ ಎಕಾನಮಿಯನ್ನು ಲೆಕ್ಕ ಸಹಿತವಾಗಿ ನಿಮ್ಮೆದುರು ಇಡಲಾಗುತ್ತಿದೆ. ಇದು ರಾಷ್ಟ್ರ ಮಟ್ಟದಲ್ಲಿ ಕಡಿಮೆ ಬಂಡವಾಳದಲ್ಲಿ ಹೆಚ್ಚು ಹಣ ಮಾಡಿದ ಚಿತ್ರಗಳ ಪಟ್ಟಿ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಚಿತ್ರಗಳನ್ನು ಒಳಗೊಂಡ ಈ ಪಟ್ಟಿಯಲ್ಲಿ ಆಯ್ದ ಚಲನಚಿತ್ರಗಳ ಲೆಕ್ಕಾಚಾರವನ್ನಷ್ಟೇ ನೀಡಲಾಗುತ್ತಿದೆ.
ಸೈರಾ ನರಸಿಂಹ ರೆಡ್ಡಿ, ಸಾಹೋ, ವಿನಯ ವಿಧೇಯ ರಾಮದಂಥ ಚಿತ್ರಗಳು ಹಾಕಿದ ಬಜೆಟ್ ಗಿಂತ ಹೆಚ್ಚು ಹಣ ಮಾಡಿದ್ದರೂ ಆದರೆ ಮಾರುಕಟ್ಟೆ ಹಾಗೂ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಅಷ್ಟೇನೂ ಯಶಸ್ವಿ ಆಗಿಲ್ಲ. ಕೆಲವು ಸಣ್ಣ ಬಜೆಟ್ ನ ಚಿತ್ರಗಳು ಸೂಪರ್ ಡೂಪರ್ ಹಿಟ್ ಆಗಿವೆ. ಅಂಥ ಚಲನಚಿತ್ರಗಳ ವಿವರ ಇಲ್ಲಿದೆ.
ಇಲ್ಲಿರುವ ಚಿತ್ರದ ಬಜೆಟ್ ಹಾಗೂ ಗಳಿಕೆ ಮಾಹಿತಿಗೆ ಐಎಂಡಿಬಿ.ಕಾಮ್ ಆಧಾರ.
ವಾರ್
ಸಿದ್ಧಾರ್ಥ್ ಆನಂದ್ ನಿರ್ದೇಶನದ ಹೃತಿಕ್ ರೋಷನ್ ಹಾಗೂ ಟೈಗರ್ ಶ್ರಾಫ್ ಅಭಿನಯದ ಹಿಂದಿ ಬ್ಲಾಕ್ ಬಸ್ಟರ್ ಸಿನಿಮಾ 'ವಾರ್'. 200 ಕೋಟಿ ವೆಚ್ಚದಲ್ಲಿ ತಯಾರಾದ ಈ ಸಿನಿಮಾ ಒಟ್ಟಾರೆಯಾಗಿ ಗಳಿಕೆ ಮಾಡಿದ್ದು 456 ಕೋಟಿ ರುಪಾಯಿ.
ಕಬೀರ್ ಸಿಂಗ್
ಶಾಹೀದ್ ಕಪೂರ್ ಅಭಿನಯದ ಕಬೀರ್ ಸಿಂಗ್ ಹಿಂದಿ ಸಿನಿಮಾ ತೆಲುಗಿನ ಅರ್ಜುನ್ ರೆಡ್ಡಿಯ ರೀಮೇಕ್. ಈ ಸಿನಿಮಾವನ್ನು ಸಹ ಸಂದೀಪ್ ರೆಡ್ಡಿ ವಂಗಾ ಅವರೇ ನಿರ್ದೇಶಿಸಿದ್ದಾರೆ. 50 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಈ ಸಿನಿಮಾದ ಒಟ್ಟು ಗಳಿಕೆ 365.5 ಕೋಟಿ ರುಪಾಯಿ.
ಉರಿ: ದ ಸರ್ಜಿಕಲ್ ಸ್ಟ್ರೈಕ್
ವಿಕ್ಕಿ ಕೌಶಲ್, ಪರೇಶ್ ರಾವಲ್ ಅಭಿನಯದಲ್ಲಿ ಹಾಗೂ ಆದಿತ್ಯ ಧರ್ ನಿರ್ದೇಶನದಲ್ಲಿ ಮೂಡಿಬಂದ ಉರಿ: ದ ಸರ್ಜಿಕಲ್ ಸ್ಟ್ರೈಕ್ ಹಿಂದಿ ಸಿನಿಮಾ 30 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಿದ್ದು, 332 ಕೋಟಿ ರುಪಾಯಿ ಗಳಿಸಿದೆ. ಸರ್ಜಿಕಲ್ ಸ್ಟ್ರೈಕ್ ಘಟನೆ ಆಧರಿಸಿದ ಈ ಸಿನಿಮಾಗೆ ಅಭೂತಪೂರ್ವ ಸ್ಪಂದನೆ ದೊರೆತಿದೆ.
ಬಿಗಿಲ್
ನಟ ವಿಜಯ್ ಅಭಿನಯದ, ಅಟ್ಲಿ ಕುಮಾರ್ ನಿರ್ದೇಶನದ ಬಿಗಿಲ್ ನ ಬಜೆಟ್ 150 ಕೋಟಿ. ಈ ವರೆಗಿನ ಅದಾಯ 287.1 ಕೋಟಿ. ಆ ಮೊತ್ತ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ನಿರ್ದೇಶಕ ಅಟ್ಲಿ ಕುಮಾರ್- ನಟ ವಿಜಯ್ ಸತತವಾಗಿ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ಜೋಡಿ.
ಮಿಷನ್ ಮಂಗಲ್
ಅಕ್ಷಯ್ ಕುಮಾರ್, ವಿದ್ಯಾ ಬಾಲನ್, ನಿತ್ಯಾ ಮೆನನ್ ಸೇರಿದಂತೆ ದೊಡ್ಡ ತಾರಾ ಬಳಗದ, ಜಗನ್ ಶಕ್ತಿ ನಿರ್ದೇಶನದ ಹಿಂದಿ ಸಿನಿಮಾ ಮಿಷನ್ ಮಂಗಳ್. 75 ಕೋಟಿ ವೆಚ್ಚದಲ್ಲಿ ತಯಾರಾದ ಈ ಸಿನಿಮಾದ ಒಟ್ಟು ಗಳಿಕೆ 282 ಕೋಟಿ ರುಪಾಯಿ.
ಬದ್ಲಾ
ಅಮಿತಾಬ್ ಬಚ್ಚನ್, ತಾಪ್ಸಿ ಪನ್ನು ಅಭಿನಯದ ಹಾಗೂ ಸುಜಯ್ ಘೋಷ್ ನಿರ್ದೇಶನದ ಈ ವರ್ಷದ ಸೂಪರ್ ಡೂಪರ್ ಹಿಟ್ ಹಿಂದಿ ಚಲನಚಿತ್ರ 'ಬದ್ಲಾ'. ಈ ಸಿನಿಮಾದ ಬಜೆಟ್ 15 ಕೋಟಿ ರುಪಾಯಿ ಮಾತ್ರ. ಆದರೆ ಬಾಕ್ಸ್ ಆಫೀಸ್ ನಲ್ಲಿ 132.4 ಕೋಟಿ ರುಪಾಯಿ ಕೊಳ್ಳೆ ಹೊಡೆದಿದೆ.
ಲೂಸಿಫರ್
ಮೋಹನ್ ಲಾಲ್, ವಿವೇಕ್ ಒಬೇರಾಯ್ ಹಾಗೂ ಮಂಜು ವಾರಿಯರ್ ಅಭಿನಯದ ಹಾಗೂ ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದ ಮಲಯಾಳಂ ಚಲನಚಿತ್ರ ಲೂಸಿಫರ್. 20 ಕೋಟಿ ರುಪಾಯಿ ಬಜೆಟ್ ನಲ್ಲಿ ತಯಾರಾದ ಈ ಚಿತ್ರದ ಒಟ್ಟು ಗಳಿಕೆ 135 ಕೋಟಿ ರುಪಾಯಿ. ಮಲಯಾಳ ಚಿತ್ರರಂಗದ ಎಲ್ಲ ದಾಖಲೆಗಳನ್ನು ಧೂಳೀಪಟ ಮಾಡಿದ ಸಿನಿಮಾ ಇದು.
F2: ಫನ್ ಅಂಡ್ ಫ್ರಸ್ಟ್ರೇಷನ್
ಅನಿಲ್ ರವಿಪುಡಿ ನಿರ್ದೇಶನ ಹಾಗೂ ವೆಂಕಟೇಶ್, ವರುಣ್ ತೇಜ್, ತಮನ್ನಾ ಅಭಿನಯದ ಕಾಮಿಡಿ ಚಲನಚಿತ್ರ F2: ಫನ್ ಅಂಡ್ ಫ್ರಸ್ಟ್ರೇಷನ್ ಈ ವರ್ಷ ತೆಲುಗು ಚಿತ್ರರಂಗದ ಬ್ಲಾಕ್ ಬಸ್ಟರ್. 30 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಈ ಚಿತ್ರದ ಒಟ್ಟು ಗಳಿಕೆ 140.5 ಕೋಟಿ ರುಪಾಯಿ.
ಕೈದಿ
ನಟ ಕಾರ್ತಿ ಅಭಿನಯದ, ಲೋಕೇಶ್ ಕನಗರಾಜ್ ನಿರ್ದೇಶನದ ತಮಿಳು ಸಿನಿಮಾ ಕೈದಿ, ಈ ವರ್ಷದ ಸೆನ್ಸೇಷನಲ್ ಹಿಟ್. 25 ಕೋಟಿ ವೆಚ್ಚದಲ್ಲಿ ತಯಾರಾದ ಈ ಸಿನಿಮಾದ ಈ ತನಕದ ಗಳಿಕೆ 90.3 ಕೋಟಿ ರುಪಾಯಿ. ಈ ವರ್ಷ ಬ್ಲಾಕ್ ಬಸ್ಟರ್ ಸಿನಿಮಾಗಳ ಸಾಲಿನಲ್ಲಿ ನಿಲ್ಲುವಂಥ ಚಿತ್ರವಿದು.
ಯಜಮಾನ
ದರ್ಶನ್ ಅಭಿನಯದ, ವಿ. ಹರಿಕೃಷ್ಣ- ಪೊಣ್ ಕುಮಾರನ್ ನಿರ್ದೇಶನದ ಕನ್ನಡ ಸಿನಿಮಾ ಯಜಮಾನ 15 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದ್ದು, 52 ಕೋಟಿ ರುಪಾಯಿ ಗಳಿಕೆ ಮಾಡಿದೆ. ಅ ಮೂಲಕ ವರ್ಷದ ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ಒಂದು ಎಂದು ಗುರುತಿಸಿಕೊಂಡಿದೆ.
ಅದ್ಭುತವಾದ ಗಳಿಕೆ ಕಂಡ ಚಿತ್ರಗಳು
ತೆಲುಗಿನ ಜೆರ್ಸಿ, ಮಜಿಜಿ, ಇಸ್ಮಾರ್ಟ್ ಶಂಕರ್, ಮಹರ್ಷಿ, ತಮಿಳಿನಲ್ಲಿ ನೇರ್ಕೊಂಡ ಪಾರ್ವೈ, ಅಸುರನ್, ನಮ್ಮ ವಿಟ್ಟು ಪಿಳ್ಳೈ, ಕಾಂಚನಾ 3, ಪೇಟ್ಟಾ, ಕೋಮಾಲಿ, ವಿಶ್ವಾಸಂ, ಹಿಂದಿಯಲ್ಲಿ ಬಾಲಾ, ಡ್ರೀಮ್ ಗರ್ಲ್, ಬಾಟ್ಲಾ ಹೌಸ್, ಲುಕಾ ಚುಪ್ಪಿ, ಕೇಸರಿ, ಚಿಚ್ಚೋರೆ, ಸೂಪರ್ 30, ಆರ್ಟಿಕಲ್ 15, ಟೋಟಲ್ ಧಮಾಲ್, ಗಲ್ಲಿ ಬಾಯ್, ಭರತ್, ಕನ್ನಡದ ಕುರುಕ್ಷೇತ್ರ, ಪೈಲ್ವಾನ್ ಹಾಗೂ ಪಂಜಾಬಿ ಸಿನಿಮಾ ಷಡ ಈ ವರ್ಷದಲ್ಲಿ ಅದ್ಭುತವಾದ ಗಳಿಕೆಯನ್ನು ಕಂಡಿವೆ.


Click it and Unblock the Notifications