ಭಾರತದ ಷೇರು ಮಾರುಕಟ್ಟೆ ಸೋಮವಾರದಂದು ಭಾರೀ ಇಳಿಕೆ ಕಂಡಿದೆ. ಬಿಎಸ್ ಇ ಸೆನ್ಸೆಕ್ಸ್ 350ಕ್ಕೂ ಹೆಚ್ಚು ಅಂಶಗಳು ಕುಸಿತ ಕಂಡಿತು. ಫೈನಾನ್ಷಿಯಲ್ ಹಾಗೂ ಫಾರ್ಮಾ ಷೇರುಗಳಲ್ಲಿನ ದೌರ್ಬಲ್ಯ ಇಳಿಕೆಗೆ ಕಾರಣವಾಯಿತು. ಸೆನ್ಸೆಕ್ಸ್ 369 ಅಂಶಗಳ ಕುಸಿತ ಕಂಡು, ದಿನಾಂತ್ಯಕ್ಕೆ 35,657 ಅಂಶಗಳ ಜತೆಗೆ ವಹಿವಾಟು ಕೊನೆಗೊಳಿಸಿತು.
ಇನ್ನು ನಿಫ್ಟಿ ಸೂಚ್ಯಂಕವು 119 ಅಂಶಗಳ ಕುಸಿತ ಕಂಡು ದಿನದ ಕೊನೆಗೆ 10,662 ಅಂಶಗಳಿಗೆ ವ್ಯವಹಾರ ಮುಗಿಸಿತು. ಬಿಎಸ್ ಇ ಸೂಚ್ಯಂಕದಲ್ಲಿ ಬಜಾಜ್ ಫೈನಾನ್ಸ್, ಯೆಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್, ಬಜಾಜ್ ಆಟೋ ಹಾಗೂ ಹೀರೋ ಮೋಟಾರ್ ಕಾರ್ಪ್ ಷೇರುಗಳು ಐದು ಪರ್ಸೆಂಟ್ ಗಿಂತ ಹೆಚ್ಚು ಕುಸಿದು, ಪ್ರಮುಖವಾಗಿ ನಷ್ಟವನ್ನು ಅನುಭವಿಸಿದವು.
ನಿಫ್ಟಿಯಲ್ಲಿ ಫಾರ್ಮಾ, ಖಾಸಗಿ ಬ್ಯಾಂಕ್ ಮತ್ತು ಫೈನಾನ್ಷಿಯಲ್ ಸರ್ವೀಸ್ ವಲಯದ ಷೇರುಗಳು ಪ್ರಮುಖವಾಗಿ ನಷ್ಟ ಕಂಡವು. "ಐಎಲ್ ಅಂಡ್ ಎಫ್ ಎಸ್ ನ ಬಿಕ್ಕಟ್ಟು ಇನ್ನೂ ಪರಿಹಾರ ಆಗಿಲ್ಲ. ಆದ್ದರಿಂದಲೇ ಹೌಸಿಂಗ್ ಫೈನಾನ್ಸ್ ಕಂಪನಿ ಷೇರುಗಳು ಈ ದಿನ ಇಳಿಕೆ ಕಂಡವು" ಎಂದು ಮಾರುಕಟ್ಟೆ ತಜ್ಞರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.

ಪ್ರಮುಖವಾದ ಮೂಲ ಸೌಕರ್ಯ ಫೈನಾನ್ಸಿಂಗ್ ಹಾಗೂ ನಿರ್ಮಾಣ ಕಂಪನಿಗಳ ಷೇರುಗಳಲ್ಲಿ ತೀವ್ರವಾದ ಕುಸಿತವಾಯಿತು. ದೇಶದ ಆರ್ಥಿಕ ವಲಯದ ಇತರ ಕಂಪನಿಗಳ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕ ಕೂಡ ಹೂಡಿಕೆದಾರರ ಮೇಲೆ ಪರಿಣಾಮ ಬೀರಿದೆ.
ಇನ್ನು ಕೇಂದ್ರದ ಬಜೆಟ್ ಎದುರಿಗೆ ಇರುವುದರಿಂದ ಹೂಡಿಕೆದಾರರು ಕಾದುನೋಡುವ ತಂತ್ರ ಅನುಸರಿಸುತ್ತಿದ್ದಾರೆ. ಜತೆಗೆ ಡಿಸೆಂಬರ್ ಕೊನೆಯ ತ್ರೈಮಾಸಿಕದಲ್ಲಿ ಕಾರ್ಪೊರೇಟ್ ಫಲಿತಾಂಶಗಳು ಉತ್ತಮವಾಗಿಲ್ಲ. ಪ್ರಗತಿ ದರ ಕೂಡ ಏಳೆಂಟು ಪರ್ಸೆಂಟ್ ಈ ವರ್ಷ ಇರಬಹುದು ಎಂಬ ಕಾರಣ ಕೂಡ ಕೊಡುಗೆ ನೀಡಿವೆ.
ಇವೆಲ್ಲದರ ಹೊರತಾಗಿ ಅಮೆರಿಕ ಮತ್ತು ಚೀನಾ ಮಧ್ಯದ ಉನ್ನತ ಮಟ್ಟದ ವ್ಯಾಪಾರ ಮಾತುಕತೆಗಳು ಹೂಡಿಕೆದಾರರ ಭಾವನೆಗಳ ಮೇಲೆ ಪರಿಣಾಮ ಬೀರಿವೆ. ಕಳೆದ ಶುಕ್ರವಾರ ವಿದೇಶಿ ಪೋರ್ಟ್ ಫೋಲಿಯೊ ಹೂಡಿಕೆದಾರರು ಏಳು ನೂರು ಕೋಟಿ ರುಪಾಯಿಯಷ್ಟು ಷೇರುಗಳನ್ನು ಖರೀದಿಸಿದ್ದರೆ, ದೇಶೀಯ ಸಾಂಸ್ಥಿಕ ಹೂಡಿಕೆದಾರರು ನೂರಾ ನಲವತ್ತೆಂಟು ಕೋಟಿಯಷ್ಟು ಷೇರುಗಳ ಮಾರಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.


Click it and Unblock the Notifications