ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಕಟ್ಟಕಡೆಯ ಬಜೆಟ್ ಇಂದು(ಫೆಬ್ರವರಿ 01) ಮಂಡನೆಯಾಗಿದೆ. ವಿತ್ತ ಸಚಿವ ಅರುಣ್ ಜೇಟ್ಲಿ ಅವರ ಅನುಪಸ್ಥಿತಿಯಲ್ಲಿ ಮಂಡನೆಯಾಗುತ್ತಿರುವ ಮಧ್ಯಂತರ ಬಜೆಟ್ ಇದಾಗಿದೆ.
ಮುಂಗಡ ಪತ್ರ, ಸಾಮಾನ್ಯ ಆರ್ಥಿಕ ಸಮೀಕ್ಷೆ ಹಾಗೂ ನೀತಿಗಳ ಕುರಿತ ಹೇಳಿಕೆ, ತೆರಿಗೆ ಪ್ರಸ್ತಾವನೆ, ಆಯ-ವ್ಯಯ ತಯಾರಿಸಲು ವಿತ್ತ ಸಚಿವ ಪಿಯೂಶ್ ಗೋಯಲ್ ಅವರ ಜತೆಗೆ ಅನೇಕ ಉನ್ನತ ಅಧಿಕಾರಿಗಳಿರುತ್ತಾರೆ.
ಹಣಕಾಸು ಸಚಿವಾಲಯ, ನೀತಿ ಆಯೋಗ ಮತ್ತು ಇತರೆ ಸಚಿವಾಲಯಗಳ ಉನ್ನತಾಧಿಕಾರಿಗಳು ಸಮಾಲೋಚನಾ ಪ್ರಕ್ರಿಯೆ ಮೂಲಕ ಮುಂಗಡಪತ್ರವನ್ನು ಸಿದ್ಧಪಡಿಸಲಾಗುತ್ತದೆ.
ಖರ್ಚು ವೆಚ್ಚವನ್ನಾಧರಿಸಿ ಮಾರ್ಗಸೂಚಿಯನ್ನು ಪ್ರಕಟಿಸಿ, ಇದಕ್ಕೆ ಅನುಗುಣವಾಗಿ ವಿವಿಧ ಸಚಿವಾಲಯಗಳು ಬೇಡಿಕೆಯನ್ನು ಮುಂದಿರಿಸುತ್ತವೆ. ಹಣಕಾಸು ಸಚಿವಾಲಯದ ಅಧೀನದಲ್ಲಿರುವ ಆರ್ಥಿಕ ವ್ಯವಹಾರಗಳ ಇಲಾಖೆಯ ಮುಂಗಡಪತ್ರ ವಿಭಾಗವು ಇದನ್ನು ಸಿದ್ಧಪಡಿಸುತ್ತದೆ.
ಬಜೆಟ್ ಗೆ ಒಂದು ವಾರದ ಮೊದಲೇ ಬಜೆಟ್ ತಯಾರಿ ಪ್ರಕ್ರಿಯೆಯಲ್ಲಿ ಭಾಗವಹಿಸುವ ಅಧಿಕಾರಿಗಳು ಹೊರಜಗತ್ತಿನ ಯಾರನ್ನು ಸಂಪರ್ಕಿಸದಂತೆ ಎಚ್ಚರ ವಹಿಸಲಾಗುತ್ತದೆ. ಬಜೆಟ್ ನ ಮಾಹಿತಿ ಹೊರಹೋಗದಿರಲು ಈ ಕ್ರಮ ಕೈಗೊಳ್ಳಲಾಗುತ್ತದೆ.
ಬಜೆಟ್ ತಯಾರಿ ಪ್ರಕ್ರಿಯೆ ತೀರಾ ರಹಸ್ಯ
ಬಜೆಟ್ ತಯಾರಿ ಪ್ರಕ್ರಿಯೆ ತೀರಾ ರಹಸ್ಯವಾಗಿ ನಡೆಯುತ್ತದೆ. ಗುಪ್ತಚರ ಇಲಾಖೆ ಅಧಿಕಾರಿಗಳು ಯಾವುದೇ ಬಜೆಟ್ ಮಾಹಿತಿ ಹೊರಹೋಗದಂತೆ ಎಚ್ಚರ ವಹಿಸುತ್ತಾರೆ. ನವದೆಹಲಿಯ ಸಂಸತ್ ಭವನದ ಬಳಿಯಿರುವ ನಾರ್ಥ್ ಬ್ಲಾಕ್ ಕಟ್ಟಡದಲ್ಲಿ ಕಟ್ಟೆಚ್ಚರ ಇರುತ್ತದೆ. ಏಕೆಂದರೆ ವಿತ್ತ ಸಚಿವಾಲಯ ಇರುವ ಕಟ್ಟಡ ಅದು. ಡಿಸೆಂಬರ್ ನಲ್ಲೇ ಮಾಧ್ಯಮಗಳಿಗೆ ಪ್ರವೇಶ ಇರುವುದಿಲ್ಲ. ನಾರ್ಥ್ ಬ್ಲಾಕ್ ನಲ್ಲಿರುವ ಪ್ರಿಂಟಿಂಗ್ ಪ್ರೆಸ್ ನಲ್ಲಿ ಬಜೆಟ್ ದಾಖಲೆಗಳ ಮುದ್ರಣ ನಡೆಯುತ್ತದೆ.
ಬಜೆಟ್ ಭಾಷಣ ಪ್ರತಿ ಮುದ್ರಣ
ಬಜೆಟ್ ಭಾಷಣದ ಎರಡು ದಿನ ಮೊದಲು ಪ್ರೆಸ್ ಇನ್ ಫರ್ಮೇಷನ್ ಬ್ಯುರೋದ ಇಪ್ಪತ್ತು ಅಧಿಕಾರಿಗಳ ತಂಡವು ಪತ್ರಿಕಾ ಪ್ರಕಟಣೆಗಳನ್ನು ಸಿದ್ಧಪಡಿಸುತ್ತಾರೆ. ಅದು ಇಂಗ್ಲಿಷ್, ಹಿಂದಿ ಹಾಗೂ ಉರ್ದು ಭಾಷೆಯಲ್ಲಿರುತ್ತದೆ. ವಿತ್ತ ಸಚಿವರು ಸಂಸತ್ ನಲ್ಲಿ ಬಜೆಟ್ ಭಾಷಣ ಪೂರ್ಣಗೊಳಿಸುವವರೆಗೆ ಆ ಅಧಿಕಾರಿಗಳು ವಿತ್ತ ಸಚಿವಾಲಯದ ಕಟ್ಟಡ ಬಿಟ್ಟು ಹೋಗದಂತೆ ನೋಡಿಕೊಳ್ಳಲಾಗುತ್ತದೆ. ಸಂಸತ್ ನಲ್ಲಿ ಬಜೆಟ್ ದಿನ ಮಂಡನೆಯಾಗುವ ಹತ್ತು ನಿಮಿಷದ ಮೊದಲು, ಬಜೆಟ್ ನ ಹೂರಣದ ಬಗ್ಗೆ ಸಂಪುಟಕ್ಕೆ ಮಾಹಿತಿ ನೀಡಲಾಗುತ್ತದೆ.
ಅಜಯ್ ನಾರಾಯಣ್
ಹಣಕಾಸು, ಕಂದಾಯ ಇಲಾಖೆಯ ಕಾರ್ಯದರ್ಶಿ ಅಜಯ್ ನಾರಾಯಣ್, ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಷ್ ಚಂದ್ರ ಗರ್ಗ್, ಕಂದಾಯ ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ, ವಿತ್ತ ಸಚಿವಾಲಯದ ರಾಜೀವ್ ಕುಮಾರ್, ಬಜೆಟ್ ಆತನು ಚಕ್ರವರ್ತಿ, ಸಿಬಿಟಿಡಿ ಚೇರ್ಮನ್ ಸುಶೀಲ್ ಚಂದ್ರ ಹಾಗೂ ಪ್ರಣಬ್ ಮುಖರ್ಜಿ, ಸಿಬಿಇಸಿ ಇಲಾಖೆಯ ಅಧಿಕಾರಿಗಳು, ಹಣಕಾಸು ಇಲಾಖೆಯ ಕೃಷ್ಣಮೂರ್ತಿ ಸುಬ್ರಮಣಿಯನ್ ಸೇರಿದಂತೆ 34 ಪ್ರಮುಖ ಅಧಿಕಾರಿಗಳು ಸೇರಿ ಒಟ್ಟು ನೂರಕ್ಕೂ ಸಿಬ್ಬಂದಿಗಳು ಬಜೆಟ್ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ನಾರ್ತ್ ಬ್ಲಾಕ್ ನಲ್ಲಿ ಎಲ್ಲವೂ ತಯಾರಿ
ಬಜೆಟ್ ತಯಾರಿ ಪ್ರಕ್ರಿಯೆಯಲ್ಲಿ ಒಳಗೊಂಡಿರುವ ಎಲ್ಲ ಅಧಿಕಾರಿಗಳು, ತಂತ್ರಜ್ಞರು, ಕಾನೂನು ಸಚಿವಾಲಯದ ಕಾನೂನು ತಜ್ಞರು ಮತ್ತು ಇತರೆ ಸಹಾಯಕ ಸಿಬ್ಬಂದಿಯ ಚಲನವಲನ ಹಣಕಾಸು ಸಚಿವಾಲಯವಿರುವ ಸಂಸತ್ತಿನ ನಾರ್ತ್ಬ್ಲಾಕ್ಗಷ್ಟೇ ಸೀಮಿತವಾಗಿರುತ್ತದೆ. ಈ ಅವಧಿಯಲ್ಲಿ ಅವರು ನಾರ್ತ್ಬ್ಲಾಕ್ ಬಿಟ್ಟು ಬೇರೆಲ್ಲೂ ತೆರಳುವಂತಿಲ್ಲ. ಬಜೆಟ್ ಪ್ರತಿ ಮುದ್ರಣವಾಗಿ ಬಂದು ಹಣಕಾಸು ಸಚಿವರು ಅದನ್ನು ಸಂಸತ್ತಿನಲ್ಲಿ ಮಂಡಿಸಿದ ಬಳಿಕವಷ್ಟೆ ಈ ಎಲ್ಲ ಸಿಬ್ಬಂದಿ ನಾರ್ತ್ಬ್ಲಾಕ್ನಿಂದ ತೆರಳಬಹುದು.


Click it and Unblock the Notifications