ವಾಹನ ಉದ್ಯಮ ಶಾಕಿಂಗ್! ಕಳೆದ ಮೂರು ತಿಂಗಳಲ್ಲಿ 2 ಲಕ್ಷ ಉದ್ಯೋಗ ಕಡಿತ
ವಾಹನ ಉತ್ಪಾದನೆ ಮತ್ತು ಮಾರಾಟದ ವಹಿವಾಟು ಭಾರೀ ಕುಸಿತ ಕಂಡಿರುವುದು ಉದ್ಯೋಗದ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಭಾರತದಲ್ಲಿ ಕಳೆದ ಮೂರು ತಿಂಗಳಲ್ಲಿ ವಾಹನ ಮಾರಾಟಗಾರರಲ್ಲಿ ಸುಮಾರು 2 ಲಕ್ಷ ಉದ್ಯೋಗ ಕಡಿತವಾಗಿದೆ.
ವಾಹನ ಉತ್ಪಾದನೆ ಮತ್ತು ಮಾರಾಟದ ವಹಿವಾಟು ಭಾರೀ ಕುಸಿತ ಕಂಡಿರುವುದು ಉದ್ಯೋಗದ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಭಾರತದಲ್ಲಿ ಕಳೆದ ಮೂರು ತಿಂಗಳಲ್ಲಿ ವಾಹನ ಮಾರಾಟಗಾರರಲ್ಲಿ ಸುಮಾರು 2 ಲಕ್ಷ ಉದ್ಯೋಗ ಕಡಿತವಾಗಿದೆ. ಆಟೋಮೊಬೈಲ್ ಮಾರಾಟ ಕುಸಿತದ ಪರಿಣಾಮ ವಾಹನ ಚಿಲ್ಲರೆ ವ್ಯಾಪಾರಿಗಳು ಉದ್ಯೋಗಿಗಳನ್ನು ಕಡಿತಗೊಳಿಸುವ ಕೊನೆಯ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎಂದು ಆಟೋಮೊಬೈಲ್ ಡೀಲರ್ಸ್ ಸಂಘಟನೆಗಳ ಒಕ್ಕೂಟ (ಎಫ್‌ಎಡಿಎ) ಹೇಳಿದೆ.

ಪ್ರಸ್ತುತ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಾಣುತ್ತಿಲ್ಲ. ಆಟೋಮೊಬೈಲ್ ವಲಯದಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚಿನ ಶೋರೂಂಗಳನ್ನು ಮುಚ್ಚುವುದರೊಂದಿಗೆ ಉದ್ಯೋಗ ಕಡಿತ ಮುಂದುವರೆಯಬಹುದೆಂದು ಆತಂಕ ವ್ಯಕ್ತಪಡಿಸಿದೆ. ಆಟೋಮೊಬೈಲ್ ಉದ್ಯಮದ ಉತ್ತೇಜನಕ್ಕಾಗಿ ಸರ್ಕಾರದ ಮಧ್ಯಪ್ರವೇಶ ಅಗತ್ಯವಿದ್ದು, ಜಿಎಸ್ಟಿ ದರ ಇಳಿಸಿ ತಾತ್ಕಾಲಿಕವಾಗಿ ಶಕ್ತಿ ತುಂಬುವ ಕಾರ್ಯ ಆಗಬೇಕು. ಪ್ರಸ್ತುತ ಮಾರಾಟ ವಿಭಾಗದ ಉದ್ಯೋಗಿಗಳು ಹೆಚ್ಚಿನ ಕೆಲಸ ಕಳೆದುಕೊಂಡಿದ್ದಾರೆ. ಇದೇ ಪರಿಸ್ಥಿತಿ ಮುಂದುವರೆದರೆ ತಾಂತ್ರಿಕ ವಿಭಾಗದ ಹುದ್ದೆಗಳನ್ನೂ ಕಡಿತ ಮಾಡುವ ಸಾದ್ಯತೆ ಇದೆ. ಕಾರಣ ವಾಹನ ಮಾರಾಟ ವಹಿವಾಟು ಕಡಿಮೆಯಾದರೆ ತಾಂತ್ರಿಕ ಭಾಗದ ಉದ್ಯೋಗಿಗಳ ಸೇವೆ ಕೂಡ ತಗ್ಗುತ್ತದೆ ಎಂದು ಎಫ್‌ಎಡಿಎ ಹೇಳಿದೆ.
ಕಳೆದ ಮೂರು ತಿಂಗಳಲ್ಲಿ ಹೆಚ್ಚಿನ ಉದ್ಯೋಗ ಕಡಿತ ಸಂಭವಿಸಿದೆ. ಇದು ಮೇ ತಿಂಗಳಲ್ಲಿ ಪ್ರಾರಂಭವಾಗಿ, ಜೂನ್ ಮತ್ತು ಜುಲೈ ವರೆಗೆ ಮುಂದುವರೆದಿದೆ ಎಂದು ಫಾಡಾ ಅಧ್ಯಕ್ಷ ಆಶಿಶ್ ಹರ್ಷರಾಜ್ ಕಾಳೆ ತಿಳಿಸಿದ್ದಾರೆ.
15,000 ವಿತರಕರು ನಿರ್ವಹಿಸುವ ಸುಮಾರು 26,000 ಆಟೋಮೊಬೈಲ್ ಶೋ ರೂಂಗಳ ಮೂಲಕ ಸುಮಾರು 25 ಲಕ್ಷ ಜನ ನೇರ ಉದ್ಯೋಗಿಗಳಿದ್ದಾರೆ. ಜೊತೆಗೆ ಪರೋಕ್ಷವಾಗಿ 25 ಲಕ್ಷ ಉದ್ಯೋಗಿಗಳು ಕಾರ್ಯನಿರತವಾಗಿದ್ದಾರೆ.
ಕಳೆದ 18 ತಿಂಗಳಲ್ಲಿ ಏಪ್ರಿಲ್ ಕೊನೆಗೆ 271 ನಗರಗಳಲ್ಲಿನ 286 ಶೋ ರೂಂಗಳು ಬಾಗಿಲು ಮುಚ್ಚಲ್ಪಟ್ಟಿದ್ದು, ಸುಮಾರು 32 ಸಾವಿರ ಜನ ಕೆಲಸ ಕಳೆದುಕೊಂಡಿದ್ದಾರೆ. ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ವಾಹನಗಳ ಮಾರಾಟವು ಶೇ.12.35ರಷ್ಟು ಕುಸಿತ ಕಂಡಿದೆ. ಟಾಟಾ ಮೋಟಾರ್ಸ್ ಶೇ. 31 ರಷ್ಟು, ಹೋಂಡಾ ಕಾರ್ಸ್ ಇಂಡಿಯಾ ಶೇ. 48.67ರಷ್ಟು ಹಾಗು ಮಹೀಂದ್ರ ಆ್ಯಂಡ್ ಮಹೀಂದ್ರ ಮಾರಾಟ ವಹಿವಾಟು ಶೇ.16, ರಷ್ಟು ಕುಸಿದಿದೆ.


Click it and Unblock the Notifications