ಉದ್ದೇಶಪೂರ್ವಕ ಸುಸ್ತಿದಾರರ (ವಿಲ್ ಫುಲ್ ಡಿಫಾಲ್ಟರ್ಸ್) ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಲಾಗಿದೆ. ಆಲ್ ಇಂಡಿಯಾ ಬ್ಯಾಂಕ್ ಎಂಪ್ಲಾಯೀಸ್ ಅಸೋಸಿಯೇಷನ್ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ 2,426 ಮಂದಿಯಿಂದ 1.47 ಲಕ್ಷ ಕೋಟಿ ರುಪಾಯಿ ಸಾಲದ ಬಾಕಿ ಬರಬೇಕಿದೆ. 17 ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳಿಗೆ ಬರಬೇಕಾದ ಮೊತ್ತವೇ ಇಷ್ಟಿದೆ.
ಇಷ್ಟು ಮೊತ್ತವನ್ನು 'ಲೂಟಿ' ಮಾಡಿದ್ದರಲ್ಲಾ, ಇದರಲ್ಲಿ ಕೆಲಸ ಇಲ್ಲದ ವಲಸಿಗ ಉದ್ಯೋಗಿಗಳ ಖಾತೆಗೆ ಲಕ್ಷಾಂತರ ರುಪಾಯಿ ವರ್ಗಾವಣೆ ಮಾಡಬಹುದಿತ್ತು ಎಂದು ತೃಣಮೂಲ ಕಾಂಗ್ರೆಸ್ ಟೀಕಿಸಿದೆ.
"ಆಲ್ ಇಂಡಿಯಾ ಬ್ಯಾಂಕ್ ಎಂಪ್ಲಾಯೀಸ್ ಅಸೋಸಿಯೇಷನ್ (AIBEA) ನಿಂದ 2426 ಮಂದಿ ಉದ್ದೇಶಿತ ಸುಸ್ತಿದಾರರ ಪಟ್ಟಿ ಸಿಕ್ಕಿತು. ಸಾಮಾನ್ಯ ಜನರಿಂದ 1,47,350 ಕೋಟಿ ಲೂಟಿ ಮಾಡಲಾಗಿದೆ. ಈ ಹಣದಲ್ಲಿ ಪ್ರತಿ ನಿರುದ್ಯೋಗಿ ವಲಸಿಗ ಕಾರ್ಮಿಕರಿಗೆ ಲಕ್ಷಾಂತರ ರುಪಾಯಿ ವರ್ಗಾವಣೆ ಮಾಡಬಹುದಿತ್ತು" ಎಂದು ಟಿಎಂಸಿ ಸಂಸದ ಡೆರೆಕ್ ಒ ಬ್ರಯಾನ್ ಟ್ವೀಟ್ ಮಾಡಿದ್ದಾರೆ.
ಸಾಲಗಾರರ ಪಟ್ಟಿಯಲ್ಲಿ ಚೋಕ್ಸಿಯ ಕಂಪೆನಿ ನಂಬರ್ ಒನ್
ಮೆಹುಲ್ ಚೋಕ್ಸಿ ಒಡೆತನದ ಗೀತಾಂಜಲಿ ಜೆಮ್ಸ್ 4644 ಕೋಟಿ ರುಪಾಯಿಯನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಬಾಕಿ ಉಳಿಸಿಕೊಂಡಿದ್ದು ಪಟ್ಟಿಯಲ್ಲಿ ಟಾಪ್ ನಲ್ಲಿದೆ. ಆ ನಂತರ ಎಬಿಜಿ ಶಿಪ್ ಯಾರ್ಡ್ ನಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ 1875 ಕೋಟಿ ಬರಬೇಕಿದೆ. ಆರ್ ಇಐ ಆಗ್ರೋ ಲಿಮಿಟೆಡ್, ರುಚಿ ಸೋಯಾ ಇಂಡಸ್ಟ್ರೀಸ್, ಗಿಲಿ ಇಂಡಿಯಾ, ವಿನ್ಸಮ್ ಡೈಮಂಡ್ಸ್ ಅಂಡ್ ಜ್ಯುವೆಲ್ಲರಿ, ಕುಡೋಸ್ ಕೆಮಿ ಮತ್ತು ನಕ್ಷತ್ರ ಬ್ರ್ಯಾಂಡ್ಸ್ ಲಿಮಿಟೆಡ್ ಈ ಸಂಸ್ಥೆಗಳು ತಲಾ 1,000 ಕೋಟಿ ರುಪಾಯಿಗೂ ಹೆಚ್ಚು ಸಾಲವನ್ನು ಬಾಕಿ ಉಳಿಸಿಕೊಂಡಿವೆ.
ವಿನಾಯಿತಿ ನೀಡುವ ಪದ್ಧತಿ ನಿಲ್ಲಿಸಬೇಕು
ಕೋಸ್ಟಲ್ ಪ್ರಾಜೆಕ್ಟ್ಸ್ ಮತ್ತು ವಿನ್ಸಮ್ ಡೈಮಂಡ್ಸ್ ಅಂಡ್ ಜ್ಯುವೆಲ್ಲರಿ ಟಾಪ್ ಟೆನ್ ಸಾಲ ಕಟ್ಟದವರ ಪಟ್ಟಿಯಲ್ಲಿದ್ದು, ಇವೆರಡರಿಂದಲೇ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳಿಗೆ 17,005 ಕೋಟಿ ರುಪಾಯಿಗೂ ಹೆಚ್ಚು ಹಣ ಬರಬೇಕಿದೆ. ಇನ್ನು ಸದ್ಯಕ್ಕೆ ಚಾಲ್ತಿಯಲ್ಲಿರುವ ಸಾಲ ಕಟ್ಟದವರಿಗೆ ವಿನಾಯಿತಿ ನೀಡುವ ಪದ್ಧತಿಯನ್ನು ನಿಲ್ಲಿಸಬೇಕು ಎಂದು AIBEA ಒತ್ತಾಯಿಸಿದೆ.
ಕಠಿಣ ಕ್ರಮ ಕೈಗೊಳ್ಳಲು ಮುಂದಾಗಬೇಕು
ಸಾರ್ವಜನಿಕ ಬ್ಯಾಂಕ್ ಗಳನ್ನು ದುರ್ಬಲಗೊಳಿಸಿ ಅಥವಾ ಖಾಸಗೀಕರಣ ಮಾಡಿ ಸ್ವಾವಲಂಬನೆ ಸಾಧಿಸಲು ಸಾಧ್ಯವಿಲ್ಲ. ಖಾಸಗಿ ಬ್ಯಾಂಕ್ ಗಳಿಂದ ನಮ್ಮ ದೇಶದಲ್ಲಿ ಬಹಳ ಕೆಟ್ಟ ಅನುಭವಗಳಾಗಿವೆ. ಖಾಸಗಿ ಕಾರ್ಪೊರೇಟ್ ಹಾಗೂ ಕಂಪೆನಿಗಳು ಸಾಲ ಕಟ್ಟದೇ ಉಳಿಸಿಕೊಂಡಿರುವುದು ಅತಿ ದೊಡ್ಡ ಸಮಸ್ಯೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಂಡರೆ ಹಣ ವಾಪಸಾಗುತ್ತದೆ. ದೇಶದ ಅಭಿವೃದ್ಧಿಯಲ್ಲಿ ನಮ್ಮ ಬ್ಯಾಂಕ್ ಗಳು ದೊಡ್ಡ ಪಾತ್ರ ವಹಿಸುತ್ತವೆ ಎಂದು AIBEA ಪ್ರಧಾನ ಕಾರ್ಯದರ್ಶಿ ಸಿ.ಎಚ್. ವೆಂಕಟಾಚಲಂ ಹೇಳಿಕೆ ನೀಡಿದ್ದಾರೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಹೆಚ್ಚಿನ ಸಾಲ ಬಾಕಿ
17 ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳ ಪೈಕಿ ಅತಿ ಹೆಚ್ಚು ಉದ್ದೇಶಪೂರ್ವಕವಾಗಿ ಸಾಲ ಕಟ್ಟದಿರುವವರು ಇರುವುದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ. 685 ಮಂದಿಯಿಂದ 43,887 ಕೋಟಿ ರುಪಾಯಿ ಬಾಕಿ ಬರಬೇಕಿದೆ. ಇನ್ನು ನಂತರದ ಸ್ಥಾನದಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಇದ್ದು, 325 ಮಂದಿಯಿಂದ 22,370 ಕೋಟಿ ಸಾಲ ಬರಬೇಕಿದೆ.


Click it and Unblock the Notifications