ಮುಂಬೈ, ಏಪ್ರಿಲ್ 24: 'ರಿಲಯನ್ಸ್ ಇಂಡಸ್ಟ್ರೀಸ್' ಷೇರುಗಳಿಗೆ ಈಗ ಭಾರಿ ಡಿಮ್ಯಾಂಡ್ ಬಂದಿದೆ. ಕಳೆದ ಕೆಲವು ದಿನಗಳಿಂದ ನಿರಂತರವಾಗಿ 'ರಿಲಯನ್ಸ್ ಇಂಡಸ್ಟ್ರೀಸ್' ಷೇರುಗಳು ಮೇಲಕ್ಕೆ ಹೋಗುತ್ತಿದ್ದು, ಹೂಡಿಕೆ ಮಾಡಿದ್ದವರಿಗೆ ಕೂಡ ಖುಷಿ ನೀಡಿತ್ತು. ಆದರೆ ದಿಢೀರ್ ಆಗಿದ್ದೇ ಬೇರೆ, ಷೇರು ವಹಿವಾಟಿನ ವೇಳೆ 'ರಿಲಯನ್ಸ್ ಇಂಡಸ್ಟ್ರೀಸ್' ಭಾರಿ ನಷ್ಟ ಅನುಭವಿಸಿದೆ.
2023-24ನೇ ಆರ್ಥಿಕ ವರ್ಷದ ಕೊನೆಯ ತ್ರೈಮಾಸಿಕದಲ್ಲಿ 'ರಿಲಯನ್ಸ್ ಇಂಡಸ್ಟ್ರೀಸ್' ಸಂಸ್ಥೆಗೆ ಉತ್ತಮ ಲಾಭ ಬಂದಿದ್ದು, ವಹಿವಾಟಿನಲ್ಲಿ ಷೇರುಗಳು ಮಾರಾಟದ ಒತ್ತಡಕ್ಕೆ ಸಿಲುಕಿದ್ದರಿಂದ ಕಂಪನಿ ಷೇರಿನ ಮೌಲ್ಯ ಇಳಿಕೆ ಆಗಿತ್ತು. ಈ ಮೂಲಕ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಷೇರಿನ ಮೌಲ್ಯ ನಿನ್ನೆ ಶೇಕಡಾ 1 ರಷ್ಟು ಕುಸಿತವನ್ನ ಕಂಡಿತ್ತು. ಬಿಎಸ್‌ಇ ಮಾರುಕಟ್ಟೆಯಲ್ಲಿ, ಷೇರಿನ ಮೌಲ್ಯ ಶೇಕಡಾ 0.85 ರಷ್ಟು ಕುಸಿತ ಕಂಡು, ಪ್ರತಿ ಷೇರಿನ ಬೆಲೆ 2,986 ರೂ. ಆಗಿತ್ತು.

ಎನ್‌ಎಸ್‌ಇ ಮಾರುಕಟ್ಟೆಯಲ್ಲಿ ಶೇಕಡಾ 1.35 ರಷ್ಟು ಇಳಿಕೆ ಕಂಡಿದ್ದು, ಪ್ರತಿ ಷೇರಿನ ಬೆಲೆಯು 2,919.50 ರೂಪಾಯಿ ಆಗಿತ್ತು. ಹೀಗಾಗಿ, ಒಂದೇ ದಿನ ಕಂಪನಿಯ ಮಾರುಕಟ್ಟೆ ಮೌಲ್ಯವು 28,607 ಕೋಟಿ ರೂಪಾಯಿಯಷ್ಟು ಕುಸಿತ ಕಂಡಿತ್ತು. ಈ ಮೂಲಕ, ಒಟ್ಟು ಮಾರುಕಟ್ಟೆ ಮೌಲ್ಯ 19.74 ಲಕ್ಷ ಕೋಟಿ ರೂಪಾಯಿ ಆಗಿತ್ತು. ಆದರೆ ಇಂದು ಒಂದಷ್ಟು ಚೇತರಿಕೆಯ ಕಂಡಿರುವ 'ರಿಲಯನ್ಸ್ ಇಂಡಸ್ಟ್ರೀಸ್' ಷೇರುಗಳು, ಮತ್ತೆ ಮುಂದೆ ನುಗ್ಗುವ ಮುನ್ಸೂಚನೆ ನೀಡಿವೆ.
ದೇಶದ ಮೊದಲ ಕಂಪನಿ ಎಂಬ ಹೆಮ್ಮೆ!
'ರಿಲಯನ್ಸ್ ಇಂಡಸ್ಟ್ರೀಸ್' ದೇಶದಲ್ಲಿ ದೊಡ್ಡ ದೊಡ್ಡ ಉದ್ಯಮಗಳನ್ನು ನಡೆಸುತ್ತಿದ್ದು, ಈ ಮೂಲಕ ದೇಶದ ಆರ್ಥಿಕತೆಯಲ್ಲಿ ಹಿಡಿತ ಹೊಂದಿದೆ. ಈ ಹಿನ್ನೆಲೆ, 2023-24ನೇ ಆರ್ಥಿಕ ವರ್ಷದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ವಹಿವಾಟು ₹10 ಲಕ್ಷ ಕೋಟಿ ದಾಟಿದೆ. ಈ ಸಾಧನೆ ಮಾಡಿದ ದೇಶದ ಮೊದಲ ಕಂಪನಿ 'ರಿಲಯನ್ಸ್ ಇಂಡಸ್ಟ್ರೀಸ್' ಆಗಿದೆ. ಮತ್ತೊಂದು ಕಡೆ 2022-23ನೇ ಆರ್ಥಿಕ ವರ್ಷದಲ್ಲಿ ಭರ್ಜರಿ 9.74 ಲಕ್ಷ ಕೋಟಿ ರೂ. ವಹಿವಾಟು ನಡೆಸಿತ್ತು 'ರಿಲಯನ್ಸ್ ಇಂಡಸ್ಟ್ರೀಸ್'. ಈ ವರ್ಷ ಮತ್ತೊಂದು ಮೈಲಿಗಲ್ಲನ್ನೂ ತಲುಪಿದೆ 'ರಿಲಯನ್ಸ್ ಇಂಡಸ್ಟ್ರೀಸ್' ಸಂಸ್ಥೆ.
'ಜಿಯೊ' ಸಂಸ್ಥೆಗೂ ಭರ್ಜರಿ ಲಾಭ
ಮತ್ತೊಂದು ಕಡೆ 'ಜಿಯೊ' ಸಂಸ್ಥೆಗೂ ಭರ್ಜರಿ ಲಾಭ ಬಂದಿದ್ದು, ರಿಲಯನ್ಸ್ ಜಿಯೊ ಈಗ ಕೊನೇ ತ್ರೈಮಾಸಿಕದಲ್ಲಿ ₹5,337 ಕೋಟಿ ನಿವ್ವಳ ಲಾಭ ಗಳಿಸುವ ಮೂಲಕ ದಾಖಲೆ ಬರೆದಿದೆ. ಹಿಂದಿನ ಇದೇ ಅವಧಿಯಲ್ಲಿ 4,716 ಕೋಟಿ ರೂ. ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಶೇ 13 ರಷ್ಟು ಇದೀಗ ಲಾಭದಲ್ಲಿ ಹೆಚ್ಚಳವಾಗಿದೆ. ಹಾಗೇ ವರಮಾನ ಕೂಡ, ಶೇಕಡಾ 11 ರಷ್ಟು ಏರಿಕೆ ಕಂಡು 25,959 ಕೋಟಿ ರೂಪಾಯಿಗೆ ಮುಟ್ಟಿದೆ.


Click it and Unblock the Notifications