ಕರ್ನಾಟಕ ರಾಜ್ಯದಲ್ಲಿ ಹಲವಾರು ಸರ್ಕಾರಿ ಹುದ್ದೆಗಳು ಖಾಲಿಯಾಗಿಯೇ ಇದೆ. ಉಪ ನೋಂದಣಿ ಕಚೇರಿಗಳು ಸಿಬ್ಬಂದಿ ಕೊರತೆಯಿಂದ ತತ್ತರಿಸುತ್ತಿವೆ. ಆದರೂ ಕರ್ನಾಟಕದಾದ್ಯಂತ ಆಸ್ತಿಯ ನೋಂದಣಿಯನ್ನು ಸುಗಮಗೊಳಿಸಲು ಹೊಸ ಕಾವೇರಿ 2.0 ಸಾಫ್ಟ್‌ವೇರ್ ಅನುಷ್ಠಾನವು ಸಿಬ್ಬಂದಿಯ ಅಗತ್ಯವನ್ನು ತೀವ್ರವಾಗಿ ಕಡಿತಗೊಳಿಸಿದೆ ಎಂದು 'ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ.
ಈ ನಡುವೆ ಅಗತ್ಯವಿದ್ದರೆ ಮಾತ್ರ "ಹೊರಗುತ್ತಿಗೆ ಸಿಬ್ಬಂದಿಯನ್ನು" ನೇಮಿಸಿಕೊಳ್ಳಲಾಗುತ್ತದೆ ಎಂದು ಸರ್ಕಾರ ಹೇಳಿದೆ. ರಾಜ್ಯದಾದ್ಯಂತ ಬಹುತೇಕ ಎಲ್ಲ ಸರ್ಕಾರಿ ಕಚೇರಿಗಳಲ್ಲು ಉದ್ಯೋಗಿಗಳ ಕೊರತೆಗಳಿದ್ದರೂ, ಬೆಂಗಳೂರಿನ ಉಪ ನೋಂದಣಿ ಕಚೇರಿಗಳಲ್ಲಿ ಈ ಸಮಸ್ಯೆ ಅಧಿಕವಾಗಿಯೇ ಉಳಿದಿದೆ.

ಅದರಲ್ಲೂ ವಿಶೇಷವಾಗಿ ಕಾವೇರಿ ಸಾಫ್ಟ್‌ವೇರ್ ದೋಷವಿದೆ ಎಂದು ದೂರುಗಳು ಕೂಡಾ ಕೇಳಿಬಂದಿದೆ. ಈ ವಿಚಾರವನ್ನು ಪರಿಷತ್ತಿನಲ್ಲಿ ಪ್ರಸ್ತಾಪಿಸಿದ ಕಾಂಗ್ರೆಸ್‌ನ ಮಂಜುನಾಥ ಭಂಡಾರಿ, ಸರ್ಕಾರ ಹೆಚ್ಚಿನ ಸಿಬ್ಬಂದಿಯನ್ನು ನೇಮಕ ಮಾಡುವ ಉದ್ದೇಶ ಹೊಂದಿದೆಯೇ ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯೆಯಾಗಿ, ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಮಾನವ ಸಂಪನ್ಮೂಲ ಕುಸಿತವಾಗಿದೆ (ಉದ್ಯೋಗಿಗಳ ಪ್ರಮಾಣ ಕುಗ್ಗಿದೆ) ಎಂದು ಒಪ್ಪಿಕೊಂಡರು.
"ಹಿಂದಿನ ಆಡಳಿತದಲ್ಲಿದ್ದ ನೋಂದಣಿ ವ್ಯವಸ್ಥೆಗಿಂತ ಭಿನ್ನವಾಗಿ, ಇಂದು ಹೆಚ್ಚಿನ ನೋಂದಣಿ ಪ್ರಕ್ರಿಯೆಯನ್ನು ಸ್ವಯಂಚಾಲಿತವಾಗಿ ಆನ್‌ಲೈನ್‌ನಲ್ಲಿ ಮಾಡಿಕೊಳ್ಳಲಾಗಿದೆ. ಖರೀದಿದಾರರು ಮತ್ತು ಮಾರಾಟಗಾರರು ದಾಖಲೆಗಳಿಗೆ ಸಹಿ ಮಾಡಲು ಮತ್ತು ಫೋಟೋಗಳನ್ನು ಸೆರೆಹಿಡಿಯಲು ಮಾತ್ರ ಕಚೇರಿಗಳಿಗೆ ಭೇಟಿ ನೀಡಬೇಕಾಗುತ್ತದೆ," ಎಂದು ಹೇಳಿದರು.
ಹಿಂದಿನ ಉದ್ಯೋಗಿಗಳನ್ನು ನೋಂದಣಿಯ ಹಸ್ತಚಾಲಿತ ಪ್ರಕ್ರಿಯೆಗೆ ಸರಿಹೊಂದುವಂತೆ ವಿನ್ಯಾಸಗೊಳಿಸಲಾಗಿದೆ. ಆದರೆ ಸ್ವಯಂಚಾಲಿತ ವರ್ಚುವಲ್ ವ್ಯವಸ್ಥೆಯಿಂದ ಈಗಿರುವ ಸಿಬ್ಬಂದಿ ಎಲ್ಲ ಕೆಲಸಗಳನ್ನು ನಿಭಾಯಿಸಬಲ್ಲರು ಎಂದರು.
ಈಗಾಗಲೇ 900 ಹೊರಗುತ್ತಿಗೆ ಸಿಬ್ಬಂದಿ ಇತರರಿಗೆ ಮತ್ತು ಸಾಫ್ಟ್‌ವೇರ್‌ನಲ್ಲಿನ ದೋಷಗಳನ್ನು ಸರಿಪಡಿಸಲು ಸಹಾಯ ಮಾಡುತ್ತಿದ್ದಾರೆ. ಆದರೂ ಅಗತ್ಯವಿದ್ದರೆ, ಹೆಚ್ಚಿನ ಹೊರಗುತ್ತಿಗೆ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಸರ್ಕಾರ ಸಿದ್ಧವಾಗಿದೆ ಎಂದು ಹೇಳಿದರು.
ಎಲ್ಲಿ ಅಧಿಕ ಸಿಬ್ಬಂದಿಗಳ ಕೊರತೆ
ಸರ್ಕಾರವು ಮಂಡಿಸಿದ ವಿವರಗಳ ಪ್ರಕಾರ ಬೆಂಗಳೂರಿನಲ್ಲಿರುವ ಐದು ಸಬ್ ರಿಜಿಸ್ಟ್ರಾರ್‌ಗಳ ಕಚೇರಿಗಳಾದ ಬಸವನಗುಡಿ, ಶಿವಾಜಿನಗರ, ರಾಜಾಜಿನಗರ, ಗಾಂಧಿನಗರ ಮತ್ತು ಜಯನಗರದಲ್ಲಿ ಶೇಕಡ 28 ರಷ್ಟು ಸಿಬ್ಬಂದಿಗಳ ಕೊರತೆ ಕಾಣಿಸಿಕೊಂಡಿದೆ.
ಐದು ಕಚೇರಿಗಳಲ್ಲಿ 234 ಮಂಜೂರಾದ ಹುದ್ದೆಗಳ ಪೈಕಿ 66 ಹುದ್ದೆಗಳು ಖಾಲಿ ಇವೆ. ಬೆಂಗಳೂರಿನ ಗಾಂಧಿನಗರ ಕಚೇರಿಯಲ್ಲಿ ಅತಿ ಹೆಚ್ಚು ಅಂದರೆ ಶೇಕಡ 35 ರಷ್ಟು ಕೊರತೆ ಕಾಣಿಸಿಕೊಂಡಿದೆ. ನಂತರದ ಸ್ಥಾನದಲ್ಲಿ ಬಸವನಗುಡಿ, ರಾಜಾಜಿನಗರ, ಶಿವಾಜಿನಗರ ಮತ್ತು ಜಯನಗರ ಕಾಣಿಸಿಕೊಂಡಿದೆ.
ಮಿನಿ ವಿಧಾನಸೌಧದಲ್ಲಿ ಸ್ಥಳಾವಕಾಶವಿಲ್ಲದ ಕಾರಣ ಬೆಂಗಳೂರು ಮತ್ತು ರಾಜ್ಯದ ಇತರ ಭಾಗಗಳಲ್ಲಿ ಹೆಚ್ಚಿನ ಕಚೇರಿಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಬೈರೇಗೌಡ ಬಹಿರಂಗಪಡಿಸಿದರು. ಎಲ್ಲಾ ಸಬ್ ರಿಜಿಸ್ಟ್ರಾರ್ ಕಚೇರಿಗಳನ್ನು ಮಿನಿ ವಿಧಾನ ಸೌಧಕ್ಕೆ ಸ್ಥಳಾಂತರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುತ್ತೇವೆ ಎಂದು ಸಚಿವರು ಹೇಳಿದರು.
256 ಉಪನೋಂದಣಾಧಿಕಾರಿಗಳ ಕಚೇರಿಗಳ ಪೈಕಿ 24 ಮಾತ್ರ ಸ್ವಂತ ಕಟ್ಟಡ ಹೊಂದಿದ್ದರೆ 135 ಸರ್ಕಾರಿ ಇಲಾಖೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಐದು ಜಿಲ್ಲಾ ನೋಂದಣಾಧಿಕಾರಿಗಳ ಕಛೇರಿಗಳ ಅಡಿಯಲ್ಲಿ 38 ಉಪ-ನೋಂದಣಿದಾರರ ಕಛೇರಿಗಳು ಸೇರಿದಂತೆ 97 ಕಛೇರಿಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತವೆ ಎಂದು ಡೇಟಾ ತೋರಿಸುತ್ತದೆ.


Click it and Unblock the Notifications