ಕೊರೊನಾ ಬಿಕ್ಕಟ್ಟಿನಿಂದಾಗಿ ಮಾರ್ಚ್ ಮಧ್ಯದಿಂದ ಈಚೆಗೆ ಕರ್ನಾಟಕದಲ್ಲಿ ಪ್ರವಾಸೋದ್ಯಮ ವಲಯದಲ್ಲಿ 30 ಲಕ್ಷದಷ್ಟು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಗುರುವಾರ ಹೇಳಿದ್ದಾರೆ.
"ಕೊರೊನಾ ವೈರಸ್ ಹಬ್ಬಿದ ಮೇಲೆ ಮಾರ್ಚ್ ಮಧ್ಯದಿಂದ ಈಚೆಗೆ 30 ಲಕ್ಷದಷ್ಟು ಮಂದಿ ಬದುಕನ್ನು ಕಸಿದುಕೊಂಡಿದೆ. ಅವರಿಗೆ ಉದ್ಯೋಗ ಇಲ್ಲದಂತೆ ಆಗಿದೆ. ಕೊರೊನಾ ನಿಯಂತ್ರಣಕ್ಕೆ ಲಾಕ್ ಡೌನ್ ಹೇರಿದ್ದು ಹಾಗೂ ಅದರ ವಿಸ್ತರಣೆ ಮಾಡಿದ್ದರಿಂದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಪೆಟ್ಟು ಬಿದ್ದಿದೆ" ಎಂದು ಬೆಂಗಳೂರಿನಲ್ಲಿ ಮಾಧ್ಯಮ ವರದಿಗಾರರಿಗೆ ರವಿ ಹೇಳಿದ್ದಾರೆ.
ಮಾರ್ಚ್ 25ರಂದು ದಿಢೀರ್ ಲಾಕ್ ಡೌನ್ ಹೇರಿದ್ದು ಮತ್ತು ಮೇ 31ನೇ ತಾರೀಕಿನ ತನಕ ವಿಸ್ತರಣೆ ಆಯಿತು. ಇದರಿಂದ ಪ್ರವಾಸ, ಪ್ರಯಾಣ ಹಾಗೂ ಸಾರ್ವಜನಿಕ ಸ್ಥಳಗಳಾಲ್ಲಿ ಸಮಾರಂಭ ಮಾಡದಂತೆ ನಿರ್ಬಂಧ ಹಾಕಲಾಯಿತು. ಈ ಕಾರಣಕ್ಕೆ ಹಲವು ವರ್ಷಗಳ ನಂತರ ಮೊದಲ ಬಾರಿಗೆ ದೇಶೀ ಹಾಗೂ ವಿದೇಶಿ ಪ್ರವಾಸಿಗರ ಇಳಿಮುಖವಾಯಿತು.

ಕೃಷಿ ಹಾಗೂ ನಿರ್ಮಾಣ ಕ್ಷೇತ್ರದ ನಂತರ ಅತಿ ಹೆಚ್ಚು ಪ್ರತ್ಯಕ್ಷ ಹಾಗೂ ಪರೋಕ್ಷ ಉದ್ಯೋಗ ಒದಗಿಸುವ ವಲಯ ಪ್ರವಾಸೋದ್ಯಮ. ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ಈ ಕ್ಷೇತ್ರಕ್ಕೆ ಭಾರೀ ಸಮಸ್ಯೆಯಾಯಿತು ಎಂದು ಅವರು ಹೇಳಿದ್ದಾರೆ.
ಟೂರ್ ಆಪರೇಟರ್ ಗಳು, ಟ್ಯಾಕ್ಸಿ ಚಾಲಕರು, ಹೋಟೆಲ್ ಮಾಲೀಕರು, ಟೂರಿಸ್ಟ್ ಗೈಡ್ ಗಳು... ಹೀಗೆ ಪ್ರವಾಸ ಸ್ಥಳಗಳಲ್ಲಿ ವಿವಿಧ ಉದ್ಯೋಗ- ವ್ಯಾಪಾರಗಳಲ್ಲಿ ತೊಂದರೆಯಾಗಿದೆ.
ಕೊರೊನಾ ನಂತರ ಪ್ರವಾಸೋದ್ಯಮ ಕ್ಷೇತ್ರ ಚೇತರಿಕೆ ಕಂಡ ಮೇಲೆ ತಾತ್ಕಾಲಿಕವಾಗಿ ಕೆಲಸ ಕಳೆದುಕೊಂಡವರಿಗೆ ಮತ್ತೆ ದೊರೆಯಲಿದೆ ಎಂದು ಸಿ.ಟಿ. ರವಿ ಆಶಾ ಭಾವನೆ ವ್ಯಕ್ತಪಡಿಸಿದ್ದಾರೆ. ಸೆಪ್ಟೆಂಬರ್ 21ನೇ ತಾರೀಕಿನಂದು ವಿಧಾನಸಭೆ ಅಧಿವೇಶನದಲ್ಲಿ ಹೊಸ ಪ್ರವಾಸೋದ್ಯಮ ನೀತಿಯ ಕರಡನ್ನು ಮಂಡಿಸಲಾಗುವುದು ಎಂದಿದ್ದಾರೆ.


Click it and Unblock the Notifications