ಪೊಲೀಸರಿಗೆ ಬಟ್ಟೆ ಹರಿದು ಹಾಕಿಕೊಳ್ಳಬೇಕು ಅಂಥದ್ದೊಂದು ತಲೆನೋವಿನ ಕೇಸ್ ತಗುಲಿಕೊಂಡಿದೆ. ಈ ಬಗ್ಗೆ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. ಏನಪ್ಪಾ ಪೊಲೀಸರ ತಲೆ ನೋವು ಅಂದರೆ, ದೆಹಲಿ- ಜೈಪುರ್ ಹೆದ್ದಾರಿಯಲ್ಲಿ ಇರುವ 8 ಎಕರೆ ಭೂಮಿ ನನಗೆ ಸೇರಿದ್ದು ಎಂದು ಚರಣ್ ಜೀತ್ ಸಿಂಗ್ ಕೋರ್ಟ್ ಮೆಟ್ಟಿಲೇರಿದ್ದಾರೆ. ಆ 8 ಎಕರೆ ಜಾಗದ ಇಂದಿನ ಮಾರುಕಟ್ಟೆ ಬೆಲೆ 400 ಕೋಟಿ ರುಪಾಯಿ.
ಅಯ್ಯೋ, ಇದಕ್ಕೆ ಯಾಕೆ ಇಷ್ಟೆಲ್ಲ ಚಿಂತೆ ಅಂತ ನಿಮಗೆ ಅನಿಸಿರಬಹುದು. ಕೋರ್ಟ್ ಮೆಟ್ಟಿಲೇರಿರುವುದು ಚರಣ್ ಜೀತ್ ಸಿಂಗ್. ಆದರೆ ಅದೇ ಹೆಸರಿನಲ್ಲಿ 6 ಮಂದಿ ಚರಣ್ ಜೀತ್ ಸಿಂಗ್ ಗಳು ಈ ಪ್ರಕರಣದಲ್ಲಿ ಒಳಗೊಂಡಿದ್ದಾರೆ. ಈಗ ಆ ಜಾಗದ ಮಾಲೀಕತ್ವ ತಮ್ಮದು ಎಂದು ಹದಿಮೂರು ಮಂದಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಪ್ರಕರಣದಲ್ಲಿನ ಚರಣ್ ಜೀತ್ ಸಿಂಗ್ ಗಳು ದೆಹಲಿ, ಪಂಜಾಬ್, ಉತ್ತರಪ್ರದೇಶ ಹಾಗೂ ಉತ್ತರಾಖಂಡ್ ನವರಾಗಿದ್ದು, ಪೊಲೀಸರು ನಿದ್ದೆ ಕೆಡುವಂತಾಗಿದೆ.
ಆಸಕ್ತಿಕರ ಸಂಗತಿ ಏನೆಂದರೆ, ಭೂಮಿಯ ಮಾಲೀಕ ಎಂದು ಯಾವ ವ್ಯಕ್ತಿಯನ್ನು ಪೊಲೀಸರು ಚರಣ್ ಜೀತ್ ಸಿಂಗ್ ಎಂದು ಭಾವಿಸಿದ್ದಾರೋ ಆತ ಈಗಾಗಲೇ ಸಾವನ್ನಪ್ಪಿರಬಹುದು. ಅಷ್ಟೇ ಅಲ್ಲ, ಆತನ ಹೆಂಡತಿ ಕೂಡ ತೀರಿಕೊಂಡಿದ್ದು, ಅವರಿಗೆ ಉತ್ತರಾಧಿಕಾರಿಗಳೇ ಇಲ್ಲ ಎನ್ನಲಾಗುತ್ತಿದೆ.
ಗುರುಗ್ರಾಮದ ಸೆಕ್ಟರ್ 37 ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಕೇಸ್
ಇದೀಗ ಗುರುಗ್ರಾಮದ ಸೆಕ್ಟರ್ 37 ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಕೇಸ್ ದಾಖಲಾಗಿದೆ ಎಂದು ವರದಿಯಾಗಿದೆ. ಆರ್ ಟಿಐ ಕಾರ್ಯಕರ್ತ ರಮೇಶ್ ಯಾದವ್ ದಾಖಲಿಸಿದ ದೂರಿನ ಅನ್ವಯ ಈ ಕೇಸ್ ದಾಖಲಾಗಿದೆ. ಯಾದವ್ ಹೇಳುವ ಪ್ರಕಾರ ನಿಜವಾದ ಚರಣ್ ಜೀತ್ ಸಿಂಗ್ ತಂದೆಹೆಸರು ನಂದಿ ಸಿಂಗ್, ಮತ್ತು ಚರಣ್ ಪತ್ನಿ ಹೆಸರು ಮಂಜೀತ್ ಕೌರ್. ಅವರೇ ಭೂಮಿಯ ನಿಜವಾದ ಮಾಲೀಕರು. ಅವರಿಬ್ಬರು ತೀರಿಕೊಂಡಿದ್ದಾರೆ. ಅವರಿಗೆ ಉತ್ತರಾಧಿಕಾರಿಗಳೇ ಇಲ್ಲ. ಆದರೆ ಈ ರಮೇಶ್ ಯಾದವ್ ನ ಪತ್ತೆ ಹಚ್ಚಿ, ಪ್ರಶ್ನೆ ಮಾಡಬೇಕು ಅಂದರೆ ಪೊಲೀಸರಿಗೆ ಲಾಕ್ ಡೌನ್ ಅಡ್ಡಿಯಾಗಿದೆ. ಕಂದಾಯ ಇಲಾಖೆ ದಾಖಲೆ ಪ್ರಕಾರ, ಚರಣ್ ಜೀತ್ ಸಿಂಗ್, ಆತನ ಪತ್ನಿ ಮಂಜೀತ್ ಕೌರ್ ಹಾಗೂ ತಂದೆ ನಂದಿ ಸಿಂಗ್ ದೆಹಲಿಯ ಗ್ರೇಟರ್ ಕೈಲಾಶ್ ನಿವಾಸಿಗಳು. ಆದರೆ ಅವರನ್ನು ಪತ್ತೆ ಮಾಡಲು ಆಗುತ್ತಿಲ್ಲ.
ನಕಲಿಗಳ ವಿರುದ್ಧ ಕ್ರಿಮಿನಲ್ ಕೇಸ್ ಹಾಕಬಹುದು
ಪೊಲೀಸರಿಗೆ ನಿಜವಾದ ಚರಣ್ ಜೀತ್ ಸಿಂಗ್ ಸಿಕ್ಕಿಬಿಟ್ಟರೆ ಆಗ ಸುಳ್ಳು ಹೇಳಿ, ಕೋರ್ಟ್ ಮೆಟ್ಟಿಲೇರಿರುವ ನಕಲಿಗಳ ವಿರುದ್ಧ ಕ್ರಿಮಿನಲ್ ಕೇಸ್ ಹಾಕಬಹುದು. ಆದರೆ ಅದು ಸಾಧ್ಯವಾಗುತ್ತಿಲ್ಲ. ಪತ್ರಿಕೆಯ ವರದಿ ಪ್ರಕಾರ, ಆರು ಮಂದಿ ಚರಣ್ ಜೀತ್ ಸಿಂಗ್ ಹೆಸರಿನವರು ಯಾರ್ಯಾರು ಈ ಭೂಮಿ ತಮ್ಮದೇ ಎನ್ನುತ್ತಿದ್ದಾರೆ ಅವರೆಲ್ಲರೂ ತಮ್ಮ ತಂದೆ ಹೆಸರು ನಂದಿ ಸಿಂಗ್ ಎಂದಿದ್ದಾರೆ. ಅಷ್ಟೇ ಅಲ್ಲ, ಅವರೆಲ್ಲ ಉತ್ತರಪ್ರದೇಶದ ಪಿಲ್ಭಿಟ್, ಪಟಿಯಾಲ, ಪಂಜಾಬ್ ನ ಆನಂದ್ ಪುರ್ ಸಾಹಿಬ್, ಉತ್ತರಾ ಖಂಡದ ಉಧಂ ಸಿಂಗ್ ನಗರ್ ನವರು ಎಂದಿದ್ದಾರೆ. ಅದರಲ್ಲಿ ಏಳನೇ ವ್ಯಕ್ತಿ ಹೆಸರು ಗುರ್ನಾಮ್ ಸಿಂಗ್. ಆತ ತಾನು ಚರಣ್ ಜೀತ್ ಸಿಂಗ್ ಮಗ ಎನ್ನುತ್ತಿದ್ದಾನೆ. ಆರು ಮಂದಿಯ ಬಳಿ ಒಂದೋ ಈ ಭೂಮಿಗೆ ಸಂಬಂಧಿಸಿದ ಜಿಪಿಎ ಇದೆ ಅಥವಾ ನೋಂದಣಿಯಾದ ಕ್ರಯ ಒಪ್ಪಂದ ಇದೆ. ಅವರ ಹೆಸರು ಹರಿ ಮೋಹನ್ ಸಿಂಗ್, ಗಜೇಂದರ್ ಸಿಂಗ್, ಹರೀಶ್ ಅಹುಜಾ, ದಿಲೀಪ್ ರವೀಂದರ್ ಸಿಂಗ್ ಮತ್ತು ಮನೀಶ್ ಭಾರದ್ವಾಜ್. ಇವರೆಲ್ಲರ ಮೂಲ ಗುರ್ ಗಾಂವ್ ಅಥವಾ ದೆಹಲಿ.
44.01 ಕೋಟಿ ರುಪಾಯಿ ಪಾವತಿ ಮಾಡಲಾಗಿದೆ
ದೆಹಲಿ- ಜೈಪುರ್ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನರಸಿಂಗ್ ಪುರ್ ಹಳ್ಳಿ ಬಳಿ 8 ಎಕರೆಯ ಭೂಮಿ ಇದು. ಇದನ್ನು ಆಗಸ್ಟ್ 2014ರಲ್ಲಿ ಹರ್ಯಾಣ ಸರ್ಕಾರ ಸ್ವಾಧೀನ ಮಾಡಿಕೊಂಡಿದೆ. ಟ್ರಾನ್ಸ್ ಪೋರ್ಟ್ ಮತ್ತು ಕಮ್ಯೂನಿಕೇಷನ್ ವಲಯ ಸೃಷ್ಟಿಸುವುದಕ್ಕಾಗಿ ಈ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲಾಗಿದೆ. ಭೂಮಿಯ ಮಾಲೀಕರಿಗೆ ಸ್ವಾಧೀನದ ಸಂದರ್ಭದಲ್ಲಿ 44.01 ಕೋಟಿ ರುಪಾಯಿ ನೀಡಲಾಗಿದೆ. ಆದರೆ ಇತರ ಭೂಮಿಯ ಮಾಲೀಕರು ಹೆಚ್ಚಿನ ಪರಿಹಾರಕ್ಕೆ ಒತ್ತಾಯಿಸಿ, ಕೋರ್ಟ್ ಮೆಟ್ಟಿಲೇರಿದಾಗ ಕಾನೂನು ಸಮಸ್ಯೆ ಎದುರಾಗಿದೆ.
ದರ ಏರಿಕೆ ಆಗುತ್ತಲೇ ಹೋಗುತ್ತದೆ
ಕೆಲವು ವರ್ಷಗಳ ನಂತರ ಭೂಮಿಯ ಮಾರ್ಕೆಟ್ ಮೌಲ್ಯ 200 ಕೋಟಿ ರುಪಾಯಿಗೂ ಹೆಚ್ಚಾಗಿದೆ. ಸದ್ಯಕ್ಕೆ ಬಡ್ಡಿಯೂ ಸೇರಿಸಿ, ಈ ಭೂಮಿಯ ಮೌಲ್ಯ 400 ಕೋಟಿ ರುಪಾಯಿಯಷ್ಟು ಆಗಿದೆ. "ಈ ಮೊತ್ತವು ಏರುತ್ತಲೇ ಹೋಗುತ್ತದೆ. ಎಲ್ಲಿಯವರೆಗೆ ಅಂದರೆ, ಎಫ್ ಐಆರ್ ತಾರ್ಕಿಕ ಅಂತ್ಯ ಕಾಣಬೇಕು ಹಾಗೂ ಕೋರ್ಟ್ ನಿಂದ ನಿಜವಾದ ಚರಣ್ ಜೀತ್ ಸಿಂಗ್ ಯಾರು ಅಂತ ಕಂಡುಹಿಡಿಯಬೇಕು" ಎನ್ನುತ್ತಾರೆ ದೂರು ದಾಖಲಿಸಿರುವ ಗುರುಗ್ರಾಮ ಮೂಲದ ರಮೇಶ್ ಯಾದವ್. ಈ ಪ್ರಕರಣವನ್ನು ಗುರುಗ್ರಾಮದ ಭೂಸ್ವಾಧೀನಾಧಿಕಾರಿ ಅವರು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ವ್ಯಾಪ್ತಿಗೆ 2018ರಲ್ಲಿ ಒಪ್ಪಿಸಿದ್ದಾರೆ.


Click it and Unblock the Notifications