ಬೆಂಗಳೂರು, ಫೆಬ್ರವರಿ 6: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಪ್ರತಿಕೂಲ ಹವಾಮಾನದಿಂದ 46 ವಿಮಾನಗಳ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಬೆಳಗಿನ ವೇಳೆಯಲ್ಲಿ ವಿಮಾನಗಳ ಮಾರ್ಗ ಬದಲಾವಣೆಯಾಗಿವೆ.
ಮಂಜಿನಿಂದಾಗಿ ಅಡಚಣೆಗಳು ಉಂಟಾಗಿವೆ. ವಿಸಿಬಿಲಿಟಿ ಬೆಳಿಗ್ಗೆ ಸುಮಾರು 50 ಮೀಟರ್‌ಗಳಷ್ಟು ಕಡಿಮೆಯಾಗಿದೆ ಎಂದು ವಿಮಾನ ನಿಲ್ದಾಣದ ನಿರ್ವಾಹಕರು ತಿಳಿಸಿದ್ದಾರೆ. ಬ್ರಿಟಿಷ್ ಏರ್‌ವೇಸ್ ನಿರ್ವಹಿಸುವ ಅಂತರರಾಷ್ಟ್ರೀಯ ವಿಮಾನ ಮತ್ತು ಸರಕು ಸಾಗಣೆ ವಿಮಾನಗಳು ಪೀಡಿತ ವಿಮಾನಗಳಲ್ಲಿ ಸೇರಿವೆ.

"ದೆಹಲಿ, ಅಹಮದಾಬಾದ್ ಮತ್ತು ಮುಂಬೈನಿಂದ ಆಗಮಿಸಬೇಕಿದ್ದ ಮೂರು ವಿಮಾನಗಳನ್ನು ಚೆನ್ನೈಗೆ ಕಡೆಗೆ ತಿರುಗಿಸಲಾಗಿದೆ" ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ. ಪ್ರತಿಕೂಲ ಹವಾಮಾನದಿಂದ ವಿಮಾನ ಕಾರ್ಯಾಚರಣೆಗಳ ಮೇಲೆ ಉಂಟಾಗುವ ಪರಿಣಾಮವನ್ನು ಉಲ್ಲೇಖಿಸಿ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಗೆ ಸಲಹೆಗಳನ್ನು ನೀಡಿವೆ. ಇಂಡಿಗೋ ತನ್ನ ಸಲಹೆಯಲ್ಲಿ ವಿಮಾನ ನಿಲ್ದಾಣಕ್ಕೆ ಹೊರಡುವ ಮೊದಲು ತಮ್ಮ ವಿಮಾನಗಳ ಸ್ಥಿತಿಯನ್ನು ಖಚಿತಪಡಿಸಲು ಪ್ರಯಾಣಿಕರಿಗೆ ತಿಳಿಸಿದೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಪ್ರತಿಕೂಲ ಹವಾಮಾನದಿಂದಾಗಿ ಮುಂಬೈನಿಂದ ಬೆಂಗಳೂರಿಗೆ ಯುಕೆ 845 ವಿಮಾನವನ್ನು ಕೊಯಮತ್ತೂರ್‌ಗೆ ಕಡೆಗೆ ತಿರುಗಿಸಲಾಗಿದೆ. ನಂತರ, ಮಾರ್ಗ ಬದಲಿಸಿದ ವಿಮಾನವು ಕೊಯಮತ್ತೂರಿನಿಂದ ಬೆಂಗಳೂರಿಗೆ ಬೆಳಿಗ್ಗೆ 9:49 ಕ್ಕೆ ಹೊರಟಿತು ಎಂದು ವಿಸ್ತಾರಾ ಸಂಸ್ಥೆ ತಿಳಿಸಿದೆ.'
ಮಧ್ಯಾಹ್ನದ ಮೊದಲು ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆಗಳು ಸಹಜ ಸ್ಥಿತಿಗೆ ಮರಳಿದವು. ಭಾರತೀಯ ಹವಾಮಾನ ಇಲಾಖೆ ಹೊರಡಿಸಿದ ಏಳು ದಿನಗಳ ಹವಾಮಾನ ವರದಿಯು ಫೆಬ್ರವರಿ 12 ರವರೆಗಿನ ಅವಧಿಯಲ್ಲಿ ನಗರದಲ್ಲಿ ಮಂಜು ಕವಿದಿದೆ ಎಂದು ಮುನ್ಸೂಚನೆ ನೀಡಿದೆ.


Click it and Unblock the Notifications