ಸದ್ಯದ ಸನ್ನಿವೇಶಕ್ಕೆ ಖರೀದಿ ಮಾಡಬಹುದಾದ ಐದು ಕಂಪೆನಿಯ ಷೇರುಗಳ ಬಗ್ಗೆ ಜಿಯೋಜಿತ್ ಫೈನಾನ್ಷಿಯಲ್ ಹೌಸ್ ವರದಿ ಇತ್ತೀಚೆಗೆ ಸಲಹೆ ಮಾಡಿದೆ. ಅಂದ ಹಾಗೆ ಇವೆಲ್ಲ ಬ್ಲ್ಯೂಚಿಪ್ ಷೇರುಗಳು. ಜಿಯೋಜಿತ್ ಹೇಳುವಂತೆ ಈ ಷೇರುಗಳು ಈಗಿನ ಸನ್ನಿವೇಶದಲ್ಲಿ ಆಕರ್ಷಕ ಬೆಲೆಗೆ ಖರೀದಿಗೆ ಸಿಗುತ್ತಿದೆ.
ಇದರ ಜತೆಗೆ ಆ ಕಂಪೆನಿಗಳ ಮೌಲ್ಯ, ಬ್ರ್ಯಾಂಡ್ ವ್ಯಾಲ್ಯೂ, ಅಲ್ಲಿನ ನಾಯಕತ್ವ ಹಾಗೂ ನಗದು ಮೌಲ್ಯ ಇವುಗಳಿಂದಲೂ ಷೇರುಗಳು ಖರೀದಿಗೆ ಸೂಕ್ತವಾಗಿವೆ. ಕೊರೊನಾ ಬಿಕ್ಕಟ್ಟಿನಲ್ಲೂ ಹಾಗೂ ನಂತರದಲ್ಲೂ ಇವು ಉತ್ತಮ ರಿಟರ್ನ್ಸ್ ನೀಡುತ್ತವೆ ಎಂಬುದು ಸಲಹೆಯಲ್ಲಿನ ಮಾಹಿತಿ. ಹಾಗಿದ್ದರೆ ಆ ಷೇರುಗಳು ಯಾವುವು ಎಂಬುದರ ವಿವರ ಇಲ್ಲಿದೆ. ಮುಂದೆ ಓದಿ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಹಲವು ಬ್ರೋಕಿಂಗ್ ಸಂಸ್ಥೆಗಳು ಎಸ್ ಬಿಐ 'ಖರೀದಿ'ಗೆ ಶಿಫಾರಸು ಮಾಡಿವೆ. ಕಳೆದ ಆರ್ಥಿಕ ವರ್ಷದ ಕೊನೆ ತ್ರೈ ಮಾಸಿಕ ಫಲಿತಾಂಶ ಬಂದ ಮೇಲೆ ಈ ಷೇರು ಇನ್ನೂ ಎಂಬತ್ತು ಪರ್ಸೆಂಟ್ ಏರಿಕೆ ಕಾಣಬಹುದು ಎಂಬ ನಿರೀಕ್ಷೆ ಇದೆ. ಈ ಷೇರಿನ ವಾರ್ಷಿಕ ಗರಿಷ್ಠ ಮಟ್ಟ 373.3 ರುಪಾಯಿ. ಸದ್ಯಕ್ಕೆ ಜೂನ್ 12, 2020ಕ್ಕೆ ಷೇರಿನ ಬೆಲೆ ಬಿಎಸ್ ಇಯಲ್ಲಿ 179.25 ರುಪಾಯಿ ಇದೆ. ಸಾಲದ ಇಎಂಐ ಮೇಲಿನ ವಿನಾಯಿತಿ ಮುಗಿದ ಮೇಲೆ ಆಸ್ತಿಯ ಗುಣಮಟ್ಟ ಉತ್ತಮವಾಗುತ್ತದೆ. ದೀರ್ಘ ಕಾಲದ ದೃಷ್ಟಿಯಿಂದ ಬ್ಯಾಂಕ್ ಲಾಭದ ಪ್ರಮಾಣ ಅತ್ಯುತ್ತಮವಾಗಿದೆ ಎನ್ನಲಾಗಿದೆ.
ಎಚ್ ಡಿಎಫ್ ಸಿ
ಈ ಕಂಪೆನಿಯು ಹೌಸಿಂಗ್ ಫೈನಾನ್ಸ್ ನೀಡುತ್ತದೆ. ಮುಂದಿನ ಒಂದು ವರ್ಷದಲ್ಲಿ 23 ಪರ್ಸೆಂಟ್ ಏರಿಕೆ ಕಾಣಬಹುದು ಎಂಬ ಅಂದಾಜಿದೆ. ಕಳೆದ ಐದು ವರ್ಷದಲ್ಲಿ ಎಚ್ ಡಿಎಫ್ ಸಿ ಬೆಳವಣಿಗೆ ಉತ್ತಮವಾಗಿದೆ. ಕಳೆದ ಆರ್ಥಿಕ ವರ್ಷದ ಕೊನೆಯ ತ್ರೈ ಮಾಸಿಕಕ್ಕೆ ತೆರಿಗೆ ನಂತರದ ಲಾಭ ಮೂರರಿಂದ ಐದು ಪರ್ಸೆಂಟ್ ಹೆಚ್ಚಾಗಿದೆ. ಇನ್ನು ಕಳೆದ ವರ್ಷಕ್ಕೆ ಹೋಲಿಸಿದರೆ ಎಯುಎಂ ಹನ್ನೆರಡು ಪರ್ಸೆಂಟ್ ಏರಿಕೆ ಆಗಿದೆ.
ಬಜಾಜ್ ಫೈನಾನ್ಸ್
ಈ ಕಂಪೆನಿ ಷೇರಿನಿಂದ ಮುಂದಿನ ಒಂದು ವರ್ಷದಲ್ಲಿ 23 ಪರ್ಸೆಂಟ್ ಏರಿಕೆ ನಿರೀಕ್ಷೆ ಮಾಡಬಹುದು ಎನ್ನಲಾಗುತ್ತಿದೆ. ಇನ್ನು ಒಂದು ವರ್ಷದ ಹಿಂದಿನ ಬೆಲೆಗೆ ಹೋಲಿಸಿದರೆ ಸದ್ಯಕ್ಕೆ 45 ಪರ್ಸೆಂಟ್ ಇಳಿಕೆ ಕಂಡಿದೆ. ಫೆಬ್ರವರಿ 20, 2020ಕ್ಕೆ ಈ ಷೇರು ವಾರ್ಷಿಕ ಗರಿಷ್ಠ ಮಟ್ಟವಾದ 4923.20 ತಲುಪಿತ್ತು. ಜೂನ್ 12, 2020ಕ್ಕೆ 2,448.95 ಇದೆ. ಕೊರೊನಾದ ಕಾರಣಕ್ಕೆ ಹೆಚ್ಚಿನ ಪ್ರಾವಿಷನ್ ಇಟ್ಟಿರುವುದರಿಂದ ಕಳೆದ ವರ್ಷಕ್ಕೆ ಹೋಲಿಸಿದರೆ ಲಾಭದಲ್ಲಿ ಇಳಿಕೆ ಆಗಿದೆ.
ಐಟಿಸಿ
ಎಫ್ ಎಂಸಿಜಿಯಿಂದ ಹೋಟೆಲ್ ತನಕ ವಿವಿಧ ವ್ಯವಹಾರಗಳನ್ನು ಮಾಡುತ್ತದೆ ಐಟಿಸಿ. ಈಗಾಗಲೇ ಕನಿಷ್ಠ ಮಟ್ಟದಿಂದ 30% ಏರಿಕೆ ಕಂಡಿದೆ. ಲಾಕ್ ಡೌನ್ ವಿನಾಯಿತಿ ತೆರವು ಹಂತಹಂತವಾಗಿ ಜಾರಿಗೆ ಬರುತ್ತಾ ಈ ಕಂಪೆನಿಯ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಾ ಸಾಗುತ್ತದೆ. ಪ್ರತಿ ಷೇರಿಗೆ 260 ರುಪಾಯಿ ತಲುಪಬಹುದು ಎಂಬ ಗುರಿಯೊಂದನ್ನು ನೀಡಲಾಗಿದೆ. ಜೂನ್ 12, 2020ಕ್ಕೆ ಈ ಷೇರಿನ ಬೆಲೆ 182.25 ರುಪಾಯಿ ಇದೆ.
ಐಸಿಐಸಿಐ ಬ್ಯಾಂಕ್
ಮುಂದಿನ ಒಂದು ವರ್ಷದ ಅವಧಿಗೆ ಐಸಿಐಸಿಐ ಬ್ಯಾಂಕ್ ಷೇರಿನ ಬೆಲೆಯಲ್ಲಿ 18 ಪರ್ಸೆಂಟ್ ಏರಿಕೆ ಕಾಣಬಹುದು. ಪ್ರತಿ ಷೇರಿನ ಬೆಲೆ 420 ರುಪಾಯಿ ಮುಟ್ಟಬಹುದು ಎನ್ನಲಾಗಿದೆ. ಜೂನ್ 12, 2020ಕ್ಕೆ ಈ ಷೇರಿನ ಬೆಲೆ 344.25 ಇದೆ. ಈ ಬ್ಯಾಂಕ್ ನ ಬ್ಯಾಲೆನ್ಸ್ ಶೀಟ್ ಉತ್ತಮವಾಗಿದೆ ಎಂಬುದು ತಜ್ಞರ ಅಭಿಪ್ರಾಯ.


Click it and Unblock the Notifications