ಪ್ರಸ್ತುತ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ತುಟ್ಟಿಭತ್ಯೆ ಏರಿಕೆಯ ಸುದ್ದಿಗಾಗಿ ಕಾಯುತ್ತಿದ್ದಾರೆ. ಕೇಂದ್ರ ಸರ್ಕಾರವು ತುಟ್ಟಿಭತ್ಯೆಯನ್ನು ಏರಿಕೆ ಮಾಡಿದಂತೆ ಶೀಘ್ರವೇ ತುಟ್ಟಿಭತ್ಯೆ ಶೇಕಡ 50ಕ್ಕೆ ತಲುಪಲಿದೆ. ಪ್ರಸ್ತುತ 7ನೇ ವೇತನ ಆಯೋಗದ ಅಡಿಯಲ್ಲಿ, ತುಟ್ಟಿಭತ್ಯೆಯನ್ನು ಏರಿಕೆ ಮಾಡಲಾಗುತ್ತಿದೆ. ಆದರೆ ಈಗ 8ನೇ ವೇತನ ಆಯೋಗವನ್ನು ಆರಂಭ ಮಾಡುವ ಮನವಿ ಕೇಳಿ ಬಂದಿದೆ.
ಜನವರಿ 1, 2024ರಿಂದ ಜಾರಿಗೆ ಬರುವಂತೆ 8ನೇ ವೇತನ ಆಯೋಗವನ್ನು ಜಾರಿ ಮಾಡಬೇಕು ಎಂದು ರೈಲ್ವೆ ಸಿನಿಯರ್ ಸಿಟಿಜನ್ ವೆಲ್ಫೇರ್ ಸೊಸೈಟಿ (ಆರ್‌ಎಸ್‌ಸಿಡಬ್ಲ್ಯೂಎಸ್) ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಳಿ ಮನವಿ ಮಾಡಿದ್ದಾರೆ. ಜನವರಿ 2023ರಲ್ಲಿ ಕೇಂದ್ರ ಸರ್ಕಾರವು ತುಟ್ಟಿಭತ್ಯೆ ಅಥವಾ ಡಿಎ ಮತ್ತು ಡಿಯರೆನ್ಸ್ ರಿಲೀಫ್ ಅಥವಾ ಡಿಆರ್ ಏರಿಸಿದಾಗ ಡಿಎ/ ಡಿಆರ್ ಶೇಕಡ 50ಕ್ಕಿಂತ ಅಧಿಕವಾಗಲಿದೆ ಎಂಬ ಕಾರಣದಿಂದಾಗಿ 8ನೇ ವೇತನ ಆಯೋಗದ ಬೇಡಿಕೆಯಿದೆ.

ಕಳೆದ ಮೂರು ಕೇಂದ್ರ ವೇತನ ಆಯೋಗದ ಶಿಫಾರಸುಗಳ ಪ್ರಕಾರ ಡಿಎ/ ಡಿಆರ್ ಶೇಕಡ 50ಕ್ಕಿಂತ ಅಧಿಕವಾದಾಗ ಅಥವಾ ಮೂಲ ವೇತನಕ್ಕಿಂತ ಅಧಿಕವಾದಾಗ ಪಾವತಿ ಆಯೋಗವನ್ನು ಪರಿಷ್ಕರಣೆ ಮಾಡಬೇಕಾಗುತ್ತದೆ ಎಂದು ಮೇ 30, 2023ರ ದಿನಾಂಕವನ್ನು ಉಲ್ಲೇಖಿಸಿರುವ ಮೆಮೆರೆಂಡಮ್‌ನಲ್ಲಿ ಆರ್‌ಎಸ್‌ಸಿಡಬ್ಲ್ಯೂಎಸ್ ತಿಳಿಸಿದೆ. ಇದನ್ನು ಕೇಂದ್ರ ಹಣಕಾಸು ಸಚಿವಾಲಯಕ್ಕೆ ಸಲ್ಲಿಕೆ ಮಾಡಲಾಗಿದೆ.
ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ಏರಿಕೆ
ತುಟ್ಟಿಭತ್ಯೆ (ಡಿಎ) ಮತ್ತು ತುಟ್ಟಿಭತ್ಯೆ (ಡಿಆರ್) ವರ್ಷಕ್ಕೆ ಎರಡು ಬಾರಿ ಪರಿಷ್ಕರಣೆ ಮಾಡಲಾಗುತ್ತದೆ. ಈ ಏರಿಕೆಯು ಜನವರಿ 1 ಮತ್ತು ಜುಲೈ 1 ರಿಂದ ಜಾರಿಗೆ ಬರುತ್ತದೆ. ಕಳೆದ ಬಾರಿಗೆ ಡಿಎಯನ್ನು ಮಾರ್ಚ್‌ನಲ್ಲಿ ಶೇಕಡ 4ರಷ್ಟು ಏರಿಕೆ ಮಾಡಲಾಗಿದೆ. ಇದು ಜನವರಿ 1, 2023 ರಿಂದ ಜಾರಿಗೆ ಬಂದಿದೆ. ಶೇಕಡ 4ರಷ್ಟು ಡಿಎ ಏರಿಕೆ ಬಳಿಕ ಡಿಎ 42ಕ್ಕೆ ಏರಿದೆ. ಶೀಘ್ರದಲ್ಲೇ ಕೇಂದ್ರ ಸರ್ಕಾರ ಮತ್ತೆ ಡಿಎ ಹೆಚ್ಚಳ ಮಾಡುವ ನಿರೀಕ್ಷೆಯಿದೆ.
ತುಟ್ಟಿಭತ್ಯೆಯನ್ನು ಜುಲೈನಲ್ಲಿ ಸುಮಾರು ಶೇಕಡ 4ರಷ್ಟು ಏರಿಕೆ ಕಮಾಡುವ ಸಾಧ್ಯತೆಯಿದೆ. ಇದರಿಂದಾಗಿ ತುಟ್ಟಿಭತ್ಯೆಯು ಶೇಕಡ 46ಕ್ಕೆ ಹೆಚ್ಚಳವಾಗಿದೆ. ಅದಾದ ಬಳಿಕ ಮತ್ತೆ ಡಿಎ ಶೇಕಡ 4ರಷ್ಟು ಏರಿಕೆ ಮಾಡಿದರೆ, ತುಟ್ಟಿಭತ್ಯೆಯು ಶೇಕಡ 50ರಷ್ಟು ಏರಿಕೆಯಾಗಲಿದೆ. ಆದ್ದರಿಂದಾಗಿ ಈಗ 8ನೇ ವೇತನ ಆಯೋಗದ ಬೇಡಿಕೆ ಇದೆ.
"ಹಣದುಬ್ಬರದ ಪರಿಣಾಮವನ್ನು ತಟಸ್ಥಗೊಳಿಸಲು ವೇತನ ರಚನೆಗೆ ಪರಿಷ್ಕರಣೆ ಅಗತ್ಯವಿದೆ. ಜನವರಿ 2024 ರಿಂದ ಡಿಎ/ಡಿಆರ್ ದರವು ಶೇಕಡ 50 ಅಥವಾ ಅದಕ್ಕಿಂತ ಹೆಚ್ಚಳವಾಗುವ ನಿರೀಕ್ಷೆಯಿದೆ. ಅದರಂತೆ ಜನವರಿ, 2024 ರಿಂದ ವೇತನ ಮತ್ತು ಭತ್ಯೆಗಳು ಮತ್ತು ಪಿಂಚಣಿಗಳನ್ನು ಪರಿಷ್ಕರಿಸುವ ಅಗತ್ಯವಿದೆ," ಎಂದು ಮೆಮೊರಂಡಮ್ ಹೇಳಿದೆ.
"ಇದು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಅವರ ಆದಾಯಕ್ಕೆ ಉಂಟಾದ ಅತೀ ದೊಡ್ಡ ಅನ್ಯಾಯವಾಗಿದೆ. ತುಟ್ಟಿಭತ್ಯೆಗಳು ಮತ್ತು ಡಿಯರೆನ್ಸ್ ರಿಲೀಫ್‌ಗಳನ್ನು ಹಣದುಬ್ಬರದ ವಿರುದ್ಧ ಅಗತ್ಯವಾದ ಪರಿಹಾರವನ್ನು ಒದಗಿಸುವುದಿಲ್ಲ ಅಥವಾ ದೇಶದ ತಲಾ ಆದಾಯದ ಏರಿಕೆಗೆ ಅನುಗುಣವಾಗಿ ಅಗತ್ಯ ಅಂಶವನ್ನು ಒದಗಿಸುವುದಿಲ್ಲ," ಎಂದು ಕೂಡಾ ಉಲ್ಲೇಖ ಮಾಡಲಾಗಿದೆ.
ಕೇಂದ್ರ ಬಜೆಟ್ 2023ರಲ್ಲಿ ಕೇಂದ್ರ ಸರ್ಕಾರವು 8ನೇ ವೇತನ ಆಯೋಗದ ಘೋಷಣೆ ಮಾಡಬಹುದು ಎಂಬ ವದಂತಿ ಹರಡಿತ್ತು. ಆದರೆ ಫೆಬ್ರವರಿ 1, 2023ರಂದು ಮಂಡನೆ ಮಾಡಲಾದ 2023-24ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ 7ನೇ ವೇತನ ಆಯೋಗವನ್ನು 8ನೇ ವೇತನ ಆಯೋಗಕ್ಕೆ ಬದಲಾವಣೆ ಮಾಡುವ ಬಗ್ಗೆ ಯಾವುದೇ ಘೋಷಣೆಯನ್ನು ಮಾಡಿಲ್ಲ.
ಸಾಮಾನ್ಯವಾಗಿ 10 ವರ್ಷಗಳಿಗೊಮ್ಮೆ ಸರ್ಕಾರಿ ಉದ್ಯೋಗಿಗಳಿಗಾಗಿ ಇರುವ ವೇತನ ಆಯೋಗ ನಿಯಮವನ್ನು ಪರಿಷ್ಕರಣೆ ಮಾಡಲಾಗುತ್ತದೆ. ಇತ್ತೀಚಿನ 5ನೇ, 6ನೇ, 7ನೇ ವೇತನ ಆಯೋಗವನ್ನು ಜಾರಿ ಮಾಡುವಾಗಲೂ ಇದೆ ರಚನೆ ಕಂಡು ಬಂದಿದೆ. 7ನೇ ವೇತನ ಆಯೋಗವನ್ನು 8ನೇ ವೇತನ ಆಯೋಗವಾಗಿ ಬದಲಾವಣೆ ಮಾಡುವ ಬಗ್ಗೆ ಈವರೆಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.


Click it and Unblock the Notifications