ಪ್ರಸ್ತುತ ಅತೀ ಹೆಚ್ಚು ಚರ್ಚೆಗೆ ಗ್ರಾಸವಾಗುತ್ತಿರುವ, ಸರ್ಕಾರದ ಘೋಷಣೆಗಾಗಿ ಕಾಯುತ್ತಿರುವ ವಿಚಾರವೆಂದರೆ 7ನೇ ವೇತನ ಆಯೋಗದ ಅಡಿಯಲ್ಲಿ ಡಿಎ ಏರಿಕೆ ಮಾಡುವುದು. ಈಗಾಗಲೇ ಕೇಂದ್ರ ಸರ್ಕಾರವು ತುಟ್ಟಿಭತ್ಯೆ (ಡಿಎ) ಅನ್ನು ಏರಿಕೆ ಮಾಡುವ ನಿರೀಕ್ಷೆಯಲ್ಲಿದ್ದ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಸಿಹಿ ಸುದ್ದಿಯನ್ನು ನೀಡಿದೆ. ಕೇಂದ್ರ ಸರ್ಕಾರವು ತುಟ್ಟಿ ಭತ್ಯೆ (ಡಿಎ) ಮತ್ತು ಡಿಯರೆನ್ಸ್ ರಿಲೀಫ್ (ಡಿಆರ್- ತುಟ್ಟಿಭತ್ಯೆ ಪರಿಹಾರ) ಶೇಕಡ 4ರಷ್ಟು ಏರಿಕೆ ಮಾಡಿದೆ.
ಈ ನಡುವೆ ಕೆಲವು ರಾಜ್ಯ ಸರ್ಕಾರಗಳು ಕೂಡಾ ತುಟ್ಟಿಭತ್ಯೆ ಏರಿಕೆಯ ಕ್ರಮವನ್ನು ಕೈಗೊಂಡಿದೆ. ಈಗ ಈ ರಾಜ್ಯವೊಂದರಲ್ಲಿ ಸರ್ಕಾರವು ಡಿಎ ಏರಿಕೆಯನ್ನು ಮಾಡಿದೆ. ಶನಿವಾರ 76ನೇ ಹಿಮಾಚಲ ದಿನವನ್ನು ಆಚರಣೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ವಿಶೇಷವಾದ ಗಿಫ್ಟ್ ಒಂದನ್ನು ಸರ್ಕಾರಿ ನೌಕರರಿಗೆ ನೀಡಿದ್ದಾರೆ. ಮಹಿಳೆಯರಿಗೂ ವಿಶೇಷ ಸವಲತ್ತನ್ನು ಘೋಷಣೆ ಮಾಡಿದ್ದಾರೆ.

ಎಷ್ಟು ಡಿಎ ಏರಿಕೆ?
ಹಿಮಾಚಲ ಪ್ರದೇಶ ಸರ್ಕಾರವು ಸರ್ಕಾರಿ ನೌಕರರಿಗೆ ಹಾಗೂ ಮಹಿಳೆಯರಿಗಾಗಿ ಡಿಎ ಹಾಗೂ ಆರ್ಥಿಕ ಸಹಾಯದ ಘೋಷಣೆಯನ್ನು ಮಾಡಿದೆ. ಸರ್ಕಾರಿ ನೌಕರರಿಗೆ ಡಿಎ ಏರಿಕೆ ಮಾಡಲಾಗಿದ್ದು, ಇದು ನಿವೃತ್ತಿ ಹೊಂದಿರುವವರಿಗೂ ಅನ್ವಯವಾಗಲಿದೆ. ಪ್ರಸ್ತುತ ಹಿಮಾಚಲ ಪ್ರದೇಶ ಸರ್ಕಾರವು ಶೇಕಡ 3ರಷ್ಟು ಡಿಎ ಏರಿಕೆ ಮಾಡುವ ಘೋಷಣೆಯನ್ನು ಮಾಡಿದೆ.
ಸರ್ಕಾರಿ ನೌಕರರಿಗೆ ಡಿಎಯನ್ನು ಶೇಕಡ 31ರಿಂದ ಶೇಕಡ 34ಕ್ಕೆ ಏರಿಕೆ ಮಾಡಿದ್ದು ಇದು ಸುಮಾರು 2.15 ಲಕ್ಷ ಉದ್ಯೋಗಿಗಳಿಗೆ ಮತ್ತು 1.90 ಲಕ್ಷ ನಿವೃತ್ತಿದಾರರಿಗೆ ಪ್ರಯೋಜನವನ್ನು ಉಂಟು ಮಾಡಿದ್ದಾರೆ. ಈ ನಿರ್ಧಾರದಿಂದಾಗಿ ರಾಜ್ಯದ ಬೊಕ್ಕಸಕ್ಕೆ ಸುಮಾರು 500 ಕೋಟಿ ರೂಪಾಯಿ ಹೆಚ್ಚುವರಿ ಹೊರೆ ಬೀಳಲಿದೆ ಎಂದು ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.
ಕೇಂದ್ರ ಸರ್ಕಾರ ಹಾಗೂ ಕೆಲವು ರಾಜ್ಯ ಸರ್ಕಾರಗಳು ಡಿಎ ಏರಿಕೆಯನ್ನು ಮಾಡಿದ ಬಳಿಕ ಹಿಮಾಚಲ ಪ್ರದೇಶವು ಡಿಎ ಏರಿಕೆಯನ್ನು ಮಾಡಿದೆ. ಕೇಂದ್ರ ಸರ್ಕಾರವು ತನ್ನ ಉದ್ಯೋಗಿಗಳಿಗೆ ಹಾಗೂ ಪಿಂಚಣಿದಾರರಿಗೆ ಪ್ರಸ್ತುತ ಶೇಕಡ 42ರಷ್ಟು ಡಿಎಯನ್ನು ನೀಡುತ್ತದೆ. ಕೇಂದ್ರ ಸರ್ಕಾರವು ಕಳೆದ ಬಾರಿ ಶೇಕಡ 4ರಷ್ಟು ಡಿಎ ಏರಿಕೆ ಮಾಡಿದೆ.
ಮಹಿಳೆಯರಿಗೆ ಮಾಸಿಕ ಆರ್ಥಿಕ ಸಹಾಯ?
ತುಟ್ಟಿಭತ್ಯೆ ಹೆಚ್ಚಳದ ನಂತರವೂ, ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಮಹಿಳೆಯರಿಗೆ ಆರ್ಥಿಕ ಸಹಾಯದ ಬಗ್ಗೆ ಘೋಷಣೆ ಮಾಡಿದ್ದಾರೆ. 2018 ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ 9,000 ಮಹಿಳೆಯರಿಗೆ ಮಾಸಿಕವಾಗಿ 1500 ರೂಪಾಯಿ ಆರ್ಥಿಕ ಸಹಾಯ ಘೋಷಣೆ ಮಾಡಿದ್ದಾರೆ. ಇದು ಜೂನ್ 2023 ರಿಂದ ಪ್ರಾರಂಭವಾಗುತ್ತದೆ.
ಈ ಹಿಂದೆ ಕೇಂದ್ರ ಸರ್ಕಾರವು ಮಾರ್ಚ್ ತಿಂಗಳಲ್ಲಿ ತುಟ್ಟಿಭತ್ಯೆಯನ್ನು ಶೇಕಡ 4ರಷ್ಟು ಏರಿಕೆ ಮಾಡಿದೆ. ಇದೀಗ ಮತ್ತೆ ಕೇಂದ್ರ ಸರ್ಕಾರವು ಜುಲೈ ತಿಂಗಳಿನಲ್ಲಿ ತುಟ್ಟಿಭತ್ಯೆಯನ್ನು ಏರಿಕೆ ಮಾಡುವ ಸಾಧ್ಯತೆಯ ಬಗ್ಗೆ ವರದಿಯಾಗಿದೆ. ಆದರೆ ಈ ಬಗ್ಗೆ ಕೇಂದ್ರ ಸರ್ಕಾರದಿಂದ ಯಾವುದೇ ಸ್ಪಷ್ಟತೆಯು ದೊರೆತಿಲ್ಲ. ಕಳೆದ ನಾಲ್ಕು ತಿಂಗಳ ಡೇಟಾವನ್ನು ಪರಿಶೀಲನೆ ಮಾಡಿ ನೋಡಿದ ತಜ್ಞರ ಪ್ರಕಾರ ಜುಲೈನಲ್ಲಿ ಕೇಂದ್ರ ಸರ್ಕಾರವು ಶೇಕಡ 4ರಷ್ಟು ಡಿಎಯನ್ನು ಹೆಚ್ಚಳ ಮಾಡಲಿದೆ. ಆದರೆ ಕೇಂದ್ರ ಸರ್ಕಾರವು ಡಿಎ ಏರಿಕೆಗೆ ಹೊಸ ಸೂತ್ರವನ್ನು ಜಾರಿ ಮಾಡುವ ಸಾಧ್ಯತೆಯಿದೆ ಎಂದು ಕೂಡಾ ವರದಿಯಾಗಿದೆ.


Click it and Unblock the Notifications