ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟದ ನೆಪವೊಡ್ಡಿ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಏರಿಕೆಯನ್ನು (ಡಿಎ) ತಡೆಹಿಡಿಯಲಾಗಿತ್ತು. ಇದಾದ ಬಳಿಕ ಈವರೆಗೂ ಕೇಂದ್ರ ಸರ್ಕಾರಿ ಉದ್ಯೋಗಿಗಳು ಈ ಬಾಕಿಯಿರುವ ಡಿಎಯನ್ನು ನೀಡಬೇಕು ಎಂದು ಸರ್ಕಾರದ ಬಳಿ ಬೇಡಿಕೆ ಇಟ್ಟಿದ್ದಾರೆ. ಹಲವಾರು ಹೋರಾಟಗಳನ್ನು ಕೂಡಾ ನಡೆಸಿದ್ದಾರೆ. ಈಗ ಬಗ್ಗೆ ಕೇಂದ್ರ ಸರ್ಕಾರವು ಶಾಕಿಂಗ್ ಹೇಳಿಕೆಯನ್ನು ನೀಡಿದೆ.
ಜನವರಿ 2020ರಿಂದ ಜೂನ್ 2021ರವರೆಗಿನ ಅವಧಿಗೆ ಕೇಂದ್ರ ಸರ್ಕಾರವು ಡಿಎ ಏರಿಕೆಯನ್ನು ತಡೆಹಿಡಿದಿದೆ. ಜುಲೈ 14, 2021ರಿಂದ ಮತ್ತೆ ಡಿಎ ಏರಿಕೆಯನ್ನು ಸಂಸತ್ತು ಸಭೆಯ ಬಳಿಕ ಆರಂಭಿಸಲಾಗಿದೆ. ಆ ಸಂದರ್ಭದಲ್ಲಿ ಶೇಕಡ 11ರಷ್ಟು ಡಿಎ ಏರಿಕೆ ಮಾಡಲಾಗಿತ್ತು. ಆದರೆ ಕೇಂದ್ರ ಸರ್ಕಾರಿ ನೌಕರರು ಬಾಕಿಯಿರುವ ಡಿಎಯನ್ನು ಸರ್ಕಾರ ನೀಡಬೇಕು ಎಂಬ ಬೇಡಿಕೆಯನ್ನು ಇಟ್ಟಿದ್ದಾರೆ. ಸರ್ಕಾರ ಇದನ್ನು ಪರಿಗಣನೆಗೆ ತೆಗೆದುಕೊಳ್ಳಲಿದೆ ಎಂದು ಕಾತುರದಿಂದ ಇದ್ದಾರೆ.

ಕೇಂದ್ರ ನೌಕರರ ಬೇಡಿಕೆಗೆ ಸರ್ಕಾರದ ಉತ್ತರ
ಕೇಂದ್ರ ಸರ್ಕಾರಿ ನೌಕರರ ನಿರೀಕ್ಷೆಯು ಹುಸಿಯಾಗಿದೆ. ಕೇಂದ್ರ ಸಚಿವ ಪಂಕಜ್ ಚೌಧರಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. "2020-21ರ ಹಣಕಾಸು ವರ್ಷದ ಡಿಎ/ಡಿಆರ್ ಅನ್ನು ನೀಡುವುದು ಕಷ್ಟವಾಗಲಿದ್ದು, ಅದನ್ನು ನಾವು ಪರಿಗಣಿಸಲಾಗದು. 2020ರಲ್ಲಿ ಕೋವಿಡ್ ಸಾಂಕ್ರಾಮಿಕದಿಂದಾಗಿ ಹಣಕಾಸಿನ ಮೇಲೆ ಪ್ರಭಾವ ಉಂಟಾಗಿದೆ," ಎಂದು ತಿಳಿಸಿದ್ದಾರೆ. ಈ ಮೂಲಕ ಸರ್ಕಾರಿ ಉದ್ಯೋಗಿಗಳಿಗೆ ಬಾಕಿ ಡಿಎ ಲಭ್ಯವಾಗುವುದನ್ನು ತಳ್ಳಿಹಾಕಿದ್ದಾರೆ.
"01.01.2020, 01.07.2020 ಮತ್ತು 01.01.2021ರ ಅವಧಿಯಲ್ಲಿ ಕೇಂದ್ರ ಸರ್ಕಾರ ನೌಕರರಿಗೆ/ ಪಿಂಚಣಿದಾರರಿಗೆ ಡಿಆರ್/ಡಿಎ ಅನ್ನು ನೀಡುವುದನ್ನು ತಡೆಹಿಡಿಯಲಾಗಿದೆ. ಕೋವಿಡ್ ಕಾರಣದಿಂದಾಗಿ ಸರ್ಕಾರದ ಮೇಲೆ ಒತ್ತಡವಿದ್ದ ಕಾರಣ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. 2020-2021ನೇ ಹಣಕಾಸು ವರ್ಷದಲ್ಲಿ ಸರ್ಕಾರಕ್ಕೆ ಭಾರೀ ಆರ್ಥಿಕ ಸಂಕಷ್ಟ ಉಂಟಾಗಿದೆ," ಎಂದು ಡಿಎ ಬಗ್ಗೆ ಕೇಳಲಾದ ಪ್ರಶ್ನೆಗೆ ಕೇಂದ್ರ ಸಚಿವ ಪಂಕಜ್ ಚೌಧರಿ ಲಿಖಿತ ಉತ್ತರ ನೀಡಿದ್ದಾರೆ.
ಕೇಂದ್ರ ಸಚಿವ ಪಂಕಜ್ ಚೌಧರಿ ಪ್ರತಿಕ್ರಿಯೆಯು ಕೇಂದ್ರ ಸರ್ಕಾರಿ ನೌಕರರಿಗೆ ಬಾಕಿ ಡಿಎ ಲಭ್ಯವಾಗುವ ಸಾಧ್ಯತೆ ಇಲ್ಲ ಎಂಬವುದನ್ನು ಸೂಚಿಸಿದೆ. ಆದರೆ ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರಿ ನೌಕರರು 2023ರ ಸಾಲಿನ ಮೊದಲ ಡಿಎ ಏರಿಕೆಗಾಗಿ ಕಾಯುತ್ತಿದ್ದಾರೆ. ಹೋಳಿಗೂ ಮುನ್ನ ಡಿಎ ಹೆಚ್ಚಳವಾಗಲಿದೆ ಎಂದು ಸುದ್ದಿಯಾಗಿತ್ತು, ಅದಾದ ಬಳಿಕ ಹೋಳಿ ಮುಗಿದ ಬಳಿಕ ಡಿಎ ಹೆಚ್ಚಾಗಲಿದೆ ಎಂದು ವರದಿಯಾಗಿತ್ತು. ಮಾಹಿತಿ ಪ್ರಕಾರ ಶೀಘ್ರವೇ ಡಿಎ ಏರಿಕೆಯಾಗಲಿದೆ.


Click it and Unblock the Notifications