ರಾಜಧಾನಿ ಬೆಂಗಳೂರಿಗೆ ವಿಶೇಷ ಒತ್ತು ನೀಡಲಾಗಿದ್ದು ಒಟ್ಟಾರೆ 8,772 ಕೋಟಿ ಅನುದಾನದಲ್ಲಿ, ನವನಗರೋತ್ಥಾನ ಯೋಜನೆಯಡಿಯಲ್ಲಿ 8,334 ಕೋಟಿ ನೆರವು ನೀಡುತ್ತಿದ್ದು, ಘನತ್ಯಾಜ್ಯ ನಿವಾರಣೆ ಮಾದರಿ ಯೋಜನೆ ಜಾರಿಗೆ ತರಲು ಗಮನ ವಹಿಸಲಾಗಿದೆ.
ಕೆರೆಗಳ ಒತ್ತುವರಿ ತಡೆಗೆ ಕ್ರಮದ ಜೊತೆಗೆ, ಶುಭ್ರ ಬೆಂಗಳೂರು ಯೋಜನೆಯಡಿ ಘನತ್ಯಾಜ್ಯ ನಿರ್ವಹಣೆಗೆ 999 ಕೋಟಿ ಮಂಜೂರು ಮಾಡಲಾಗಿದೆ. ಕೆರೆಗಳ ಅಭಿವೃದ್ಧಿಗೆ 100 ಕೋಟಿ ರುಪಾಯಿ ಅನುಧಾನ ನೀಡಲಾಗಿದೆ. ಬಿಡದಿಯಲ್ಲಿ ತ್ಯಾಜ್ಯ ವಿದ್ಯುತ್ ಉತ್ಪಾದನೆ ಮಾಡುವ ಯೋಜನೆಗೆ ಒತ್ತು. ಹಾಗಿದ್ದರೆ ಬೆಂಗಳೂರಿಗೆ ಏನೆಲ್ಲಾ ನೀಡಲಾಗಿದೆ ಎಂಬುದುನ್ನು ಈ ಕೆಳಗೆ ಓದಿ.
ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಅನುದಾನ
ಬೆಂಗಳೂರಿನ ಸಂಚಾರೆ ದಟ್ಟಣೆ ಕಡಿಮೆ ಮಾಡಲು ಉಪನಗರ ರೈಲು ಯೋಜನೆಗೆ ಕೇಂದ್ರ ಸರ್ಕಾರ 18,000 ಕೋಟಿ ರುಪಾಯಿ ಮಂಜೂರು ಮಾಡಿದೆ. ಈ ಯೋಜನೆಗೆ ರಾಜ್ಯ ಸರ್ಕಾರ 500 ಕೋಟಿ ಅನುದಾನ ಮೀಸಲಿಡಲಿದೆ.
BMTCಗೆ ಪ್ರತಿ ವರ್ಷಕ್ಕೆ 100 ಕೋಟಿ ರುಪಾಯಿ ಸಾಲರೂಪದ ಸಹಾಯಧನ
ಬಿಎಂಟಿಸಿಗೆ 600 ಕೋಟಿ ವೆಚ್ಚದಲ್ಲಿ 1,500 ಬಸ್‌ಗಳ ಖರೀದಿ. ಇದಕ್ಕಾಗಿ ಬಿಎಂಟಿಸಿಗೆ ರಾಜ್ಯ ಸರ್ಕಾರದಿಂದ ಪ್ರತಿ ವರ್ಷಕ್ಕೆ 100 ಕೋಟಿ ರುಪಾಯಿ ಸಾಲರೂಪದ ಸಹಾಯಧನ ನೀಡಲಾಗುವುದು.
100 ಅಡಿ ಎತ್ತರದ ಕೆಂಪೇಗೌಡ ಪ್ರತಿಮೆ ನಿರ್ಮಾಣ
ಬೆಂಗಳೂರು ವಿಮಾನ ನಿಲ್ದಾಣದ ಬಳಿ 100 ಅಡಿ ಎತ್ತರದ ಕೆಂಪೇಗೌಡ ಕಂಚಿನ ಪ್ರತಿಮೆ ನಿರ್ಮಾಣ ಮಾಡಲು ಬಜೆಟ್‌ನಲ್ಲಿ ಘೋಷಿಸಲಾಗಿದೆ. 66 ಕೋಟಿ ರುಪಾಯಿ ವೆಚ್ಚದಲ್ಲಿ ಕೆಂಪೇಗೌಡ ಪ್ರತಿಮೆ ನಿರ್ಮಾಣವಾಗಲಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಕೆಂಪೇಗೌಡರ ಹೆಸರು ರಾರಾಜಿಸಲಿದೆ.
ಬೆಂಗಳೂರಿನಲ್ಲಿ ಫಿಲ್ಮ್‌ಸಿಟಿ ನಿರ್ಮಾಣ
ಕನ್ನಡ ಚಿತ್ರರಂಗದ ಬಹುಬೇಡಿಕೆಯಾದ ಫಿಲ್ಮ್ ಸಿಟಿ ನಿರ್ಮಾಣದ ಕನಸನ್ನು ಈ ಬಜೆಟ್‌ನಲ್ಲಿ ಪೂರೈಸುವ ಹೆಜ್ಜೆ ಇಡಲಾಗಿದೆ. ಚಿತ್ರನಗರಿ ಸ್ಥಾಪನೆಗೆ ಬಜೆಟ್‌ನಲ್ಲಿ 500 ಕೋಟಿ ರುಪಾಯಿ ಅನುದಾನ ನೀಡಲಾಗುವುದು. ಕನ್ನಡ ಸಿನಿಮಾ ನಿರ್ಮಾಣಕ್ಕೆ ಹೈದ್ರಾಬಾದ್ ಫಿಲ್ಮ್ ಸಿಟಿಗೆ ತೆರಳಬೇಕಿತ್ತು. ಬೆಂಗಳೂರಿನಲ್ಲೇ ನಿರ್ಮಾಣಗೊಂಡರೆ ಕನ್ನಡ ಚಿತ್ರರಂಗದ ಬಹು ವರ್ಷದ ಕನಸು ನನಸಾಗಲಿದೆ.
ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಏರ್‌ಪೋರ್ಟ್‌ಗೆ ಔಟರ್ ರಿಂಗ್ ರೋಡ್
ಸಿಲ್ಕ್‌ಬೋರ್ಡ್ ಜಂಕ್ಷನ್‌ನಿಂದ ಏರ್ ಪೋರ್ಟ್‌ಗೆ ಔಟರ್ ರಿಂಗ್ ರೋಡ್ ನಿರ್ಮಾಣಕ್ಕೆ 14,500 ಕೋಟಿ ಅನುದಾನ ಘೋಷಣೆ ಮಾಡಲಾಗಿದೆ. ಈ ರಸ್ತೆ 56 ಕಿ. ಮೀ. ಉದ್ದದ ರಸ್ತೆಯಾಗಿದೆ. ಈ ಮೂಲಕ ಟ್ರಾಫಿಕ್ ದಟ್ಟಣೆಯನ್ನು ತಪ್ಪಿಸಲು ಹಾಗೂ ಏರ್‌ಪೋರ್ಟ್‌ಗೆ ಸುಲಭವಾಗಿ ತಲುಪಲು ಸಾಧ್ಯ.
ಕೊಳೆತು ಹೋಗಬಹುದಾದ ಹಣ್ಣು ತರಕಾರಿಗಳನ್ನು ಸಾಗಿಸಲು ಕೃಷಿ ರೈಲ್ ಯೋಜನೆ
ರಾಜ್ಯ ಸರ್ಕಾರವು ಕೊಳೆತು ಹೋಗಬಹುದಾದ ಹೂವು, ಟೊಮಾಟೋ, ಆಲೂಗೆಡ್ಡೆ, ಈರುಳ್ಳಿ, ಹೂಕೋಸು, ದಾಳಿಂಬೆ ಇತ್ಯಾದಿಗಳನ್ನು ಬೆಂಗಳೂರಿನಿಂದ ದೆಹಲಿ, ಮುಂಬಯಿ ಹಾಗೂ ತಿರುವನಂತಪುರಕ್ಕೆ ಸಾಗಿಸಲು ಕೇಂದ್ರ ಸರ್ಕಾರದ ಕೃಷಿ ರೈಲ್ ಯೋಜನೆಯ ಸೌಲಭ್ಯವನ್ನು ಉಪಯೋಗಿಸಿಕೊಳ್ಳಲಾಗುವುದು.
ಕೆರೆಗಳ ಅಭಿವೃದ್ಧಿಗೆ 100 ಕೋಟಿ ರುಪಾಯಿ
ಇತ್ತೀಚಿನ ದಿನಗಳಲ್ಲಿ ಕೆರೆಗಳ ಒತ್ತುವರಿ ಹೆಚ್ಚಾಗುತ್ತಿದೆ. ತ್ಯಾಜ್ಯ ನೀರು ಕೂಡ ಸೇರುತ್ತಿರುವುದರಿಂದ ಕೆರೆಗಳು ಕಲುಷಿತಗೊಳ್ಳುತ್ತಿವೆ. ಇದನ್ನು ತಡೆಗಟ್ಟಲು ಬೆಂಗಳೂರು ನಗರದ ಕೆರೆಗಳ ಸರ್ವತೋಮುಖ ಅಭಿವೃದ್ಧಿಗಾಗಿ "ಶುಭ್ರ ಬೆಂಗಳೂರು" ಯೋಜನೆಯಡಿ ನಗರದ ಕೆರೆಗಳ ಅಭಿವೃದ್ಧಿಗಾಗಿ 100 ಕೋಟಿ ರುಪಾಯಿಗಳನ್ನು ಬಜೆಟ್‌ನಲ್ಲಿ ಅನುಮೋದಿಸಲಾಗಿದೆ.
"ಮುಖ್ಯಮಂತ್ರಿಗಳ ನವನಗರೋತ್ಥಾನ" ಯೋಜನೆಯಡಿ ಅನುಮೋದನೆಗೊಂಡಿರುವ ಕ್ರಿಯಾಯೋಜನೆಯಲ್ಲಿ 317 ಕೋಟಿ ರೂ.ಗಳನ್ನು ಕೆರೆಗಳ ಅಭಿವೃದ್ಧಿಗೆಂದೇ ಮೀಸಲಿಡಲಾಗಿದೆ. ಈ ಅನುದಾನದ ಮೂಲಕ ಬೆಂಗಳೂರಿನ ಕೆರೆಗಳನ್ನು ಅಭಿವೃದ್ಧಿಪಡಿಸಿ ನಾಗರಿಕರಿಗೆ ಹಾಗೂ ಪಕ್ಷಿ ಸಂಕುಲಕ್ಕೆ ಹಸಿರು ತಾಣಗಳನ್ನಾಗಿ ಪರಿವರ್ತಿಸುವ ಉದ್ದೇಶ ಹೊಂದಿದೆ.
ಕೆಂಗೇರಿಯವರೆಗೆ ಮತ್ತು ಅಂಜನಾಪುರ ಟೌನ್‌ಷಿಪ್‌ವರೆಗಿನ ಮೆಟ್ರೋ ಸಂಚಾರ
ಮೈಸೂರು ರಸ್ತೆಯಲ್ಲಿ ಕೆಂಗೇರಿಯವರೆಗೆ ಮತ್ತು ಕನಕಪುರ ರಸ್ತೆಯಲ್ಲಿ ಅಂಜನಾಪುರ ಟೌನ್‍ಷಿಪ್ವರೆಗೆ ಒಟ್ಟು 12.8 ಕಿ.ಮೀ. ಉದ್ದದ ಎರಡು ಮೆಟ್ರೋ ಮಾರ್ಗಗಳ ವಿಸ್ತರಣೆಯನ್ನು ಪೂರ್ಣಗೊಳಿಸಿ 2020ರಲ್ಲಿ ಸಂಚಾರಕ್ಕೆ ತೆರೆಯಲಾಗುವುದು.


Click it and Unblock the Notifications