ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) 2000 ರೂಪಾಯಿ ನೋಟಿನ ಬಗ್ಗೆ ಮೇ 19ರಂದು ದೇಶದಲ್ಲಿ ಚಲಾವಣೆಯಲ್ಲಿದ್ದ 2000 ರೂಪಾಯಿ ಮುಖಬೆಲೆಯ ನೋಟು ಚಲಾವಣೆ ಸ್ಥಗಿತಗೊಳಿಸಿ, ಅದನ್ನು ವಾಪಾಸ್ ಪಡೆಯುವುದಾಗಿ ತಿಳಿಸಿದೆ. ಮೇ 23ರಿಂದ ನೋಟು ಬದಲಾವಣೆ ಪ್ರಕ್ರಿಯೆ ಆರಂಭವಾಗಿದ್ದು ಒಂದು ವಾರದಲ್ಲೇ ಕೋಟ್ಯಾಂತರ ರೂಪಾಯಿ ವಾಪಾಸ್ ಲಭಿಸಿದೆ.
ಭಾರತದ ಅತೀ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ (ಎಸ್‌ಬಿಐ) ಒಂದು ವಾರದಲ್ಲೇ 2000 ರೂಪಾಯಿ ಮುಖಬೆಲೆಯ 14,000 ಕೋಟಿ ರೂಪಾಯಿಯನ್ನು ಡೆಪಾಸಿಟ್ ಮಾಡಲಾಗಿದೆ. ಇನ್ನು 3,000 ಕೋಟಿ ರೂಪಾಯಿಯಷ್ಟು 2000 ರೂಪಾಯಿಯ ನೋಟನ್ನು ಬದಲಾವಣೆ ಮಾಡಲಾಗಿದೆ. ಇಲ್ಲಿದೆ ವಿವರ ಮುಂದೆ ಓದಿ...

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಎಸ್‌ಬಿಐ ಅಧ್ಯಕ್ಷ ದಿನೇಶ್ ಖಾರಾ, "ಸುಮಾರು 14,000 ಕೋಟಿ ರೂಪಾಯಿಯ ಮೌಲ್ಯದ 2,000 ಕರೆನ್ಸಿ ನೋಟುಗಳು ಖಾತೆಗಳಿಗೆ ಗ್ರಾಹಕರು ಡೆಪಾಸಿಟ್ ಮಾಡಿದ್ದಾರೆ. 3,000 ಕೋಟಿ ರೂಪಾಯಿ ಮೌಲ್ಯದ 2000 ರೂಪಾಯಿಯ ನೋಟುಗಳನ್ನು ಬದಲಾವಣೆ ಮಾಡಿದೆ. ಮಾರುಕಟ್ಟೆಯಲ್ಲಿರುವ ಶೇಕಡ 20ರಷ್ಟು ನೋಟು ನಮ್ಮಲ್ಲಿದೆ," ಎಂದು ತಿಳಿಸಿದ್ದಾರೆ.
2000 ರೂಪಾಯಿ ನೋಟು ಬದಲಾವಣೆ ಮಾಹಿತಿ
ಈಗಾಗಲೇ ಆರ್‌ಬಿಐ 2000 ರೂಪಾಯಿಯ ನೋಟನ್ನು ಬದಲಾವಣೆ ಮಾಡುವ ವಿಚಾರದಲ್ಲಿ ಆತಂಕ ಬೇಡ ಎಂದು ಜನರಿಗೆ ಮಾಹಿತಿ ನೀಡಿದೆ. ಆರ್‌ಬಿಐ ನೋಟು ಬದಲಾವಣೆಗೆ ಸೆಪ್ಟೆಂಬರ್ 30ರವರೆಗೆ ಸಮಯವಕಾಶವನ್ನು ನೀಡಿದ್ದು ನೀವು ಒಂದು ಬಾರಿ 2000 ರೂಪಾಯಿಯ 10 ನೋಟುಗಳಂತೆ ಒಟ್ಟು 20 ಸಾವಿರ ರೂಪಾಯಿ ಜಮೆ ಅಥವಾ ಬದಲಾವಣೆ ಮಾಡಿಕೊಳ್ಳಬಹುದು.
ಇನ್ನು ಈ ನೋಟುಗಳು ಕಾನೂನಾತ್ಮಕವಾಗಿ ಮುಂದುವರಿಯಲಿದೆ. "ಈ ನೋಟುಗಳು ಕಾನೂನಾತ್ಮಕವಾಗಿ ಮುಂದುವರಿಯಲಿದೆ. ನಾವು ಒಟ್ಟಾಗಿ ಎಷ್ಟು ನೋಟುಗಳು ವಾಪಾಸ್ ಲಭ್ಯವಾಗುತ್ತದೆ ಎಂದು ನೋಡುತ್ತೇವೆ. ಸೆಪ್ಟೆಂಬರ್ 30ರ ನಂತದ ಏನಾಗುತ್ತದೆ ಎಂಬ ಬಗ್ಗೆ ಈಗಲೇ ನಾವು ಊಹೆ ಮಾಡಲು ಸಾಧ್ಯವಿಲ್ಲ," ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.
ಡೆಪಾಸಿಟ್ ಮಾಡುವ ಒಟ್ಟು ಮೊತ್ತಕ್ಕೆ ಯಾವುದೇ ನಿರ್ಬಂಧವಿಲ್ಲ. ಆದರೆ ಒಂದು ಬಾರಿ 2000 ರೂಪಾಯಿಯ 10 ನೋಟುಗಳನ್ನು ಮಾತ್ರ ಬದಲಾವಣೆ ಮಾಡಲು ಅವಕಾಶವಿದೆ. ಒಟ್ಟಾಗಿ ಎಷ್ಟು ಡೆಪಾಸಿಟ್ ಮಾಡಬಹುದು ಎಂಬ ಗರಿಷ್ಠ ಮಿತಿಯನ್ನು ಆರ್‌ಬಿಐ ನೀಡಿಲ್ಲ. ಅಧಿಕ ಮೊತ್ತವನ್ನು ಡೆಪಾಸಿಟ್ ಮಾಡುವುದಾದರೆ ಕೆವೈಸಿ ಮಾಡಿಸಿಕೊಳ್ಳಬೇಕಾಗುತ್ತದೆ.
ಒಂದು ಖಾತೆಗೆ 50 ಸಾವಿರ ರೂಪಾಯಿಗಿಂತ ಕಡಿಮೆ ಮೊತ್ತದ ಡೆಪಾಸಿಟ್‌ಗೆ ಯಾವುದೇ ದಾಖಲೆಗಳು ಬೇಕಾಗಿಲ್ಲ. "ನಾವು ಪ್ರಕ್ರಿಯೆಯನ್ನು ನಡೆಸುತ್ತಿದ್ದೇವೆ. ನೀವು 50 ಸಾವಿರ ರೂಪಾಯಿಗಿಂತ ಅಧಿಕ ನಗದನ್ನು ಡೆಪಾಸಿಟ್ ಮಾಡುವುದಾದರೆ ಆದಾಯ ತೆರಿಗೆ ನಿಯಮ ಅನ್ವಯ ಮಾಡಲಾಗುತ್ತದೆ ಎಂಬುವುದು ನಿಮಗೆ ತಿಳಿದಿರಲಿ. ಅಧಿಕ ಮೊತ್ತ ಡೆಪಾಸಿಟ್ ಮಾಡುವಾಗ ನೀವು ಪ್ಯಾನ್ ಕಾರ್ಡ್ ಸಲ್ಲಿಸಬೇಕಾಗುತ್ತದೆ," ಎಂದು ಆರ್‌ಬಿಐ ಗವರ್ನರ್ ತಿಳಿಸಿದ್ದಾರೆ.
10 ನೋಟುಗಳನ್ನು ಜಮೆ ಮಾಡಲು requisition slip ಬೇಕಾಗಿಲ್ಲ. ಜನರು 20000 ರೂಪಾಯಿಯವರೆಗಿನ 2000 ರೂಪಾಯಿ ನೋಟುಗಳನ್ನು ಒಂದು ಬಾರಿ ಯಾವುದೇ ದಾಖಲೆಗಳನ್ನು ಸಲ್ಲಿಸದೆ ಜಮೆ ಮಾಡಬಹುದು ಎಂದು ಈಗಾಗಲೇ ಎಸ್‌ಬಿಐ ತಿಳಿಸಿದೆ.
ನೋಟು ಬದಲಾವಣೆ ಪ್ರಕ್ರಿಯೆ ಸರಳವಾಗಿ ನಡೆಯಲು ಎಲ್ಲ ಕ್ರಮವನ್ನು ಆರ್‌ಬಿಐ ಕೈಗೊಂಡಿದೆ. ಬಿಸಿಲು ಹೆಚ್ಚಾಗಿ ಇರುವ ಕಾರಣದಿಂದಾಗಿ ನೋಟು ಬದಲಾವಣೆಗೆ ಬರುವವರಿಗೆ ನಿಲ್ಲಲು, ಕೂರಲು ವ್ಯವಸ್ಥೆ ಮಾಡುವಂತೆ ಬ್ಯಾಂಕುಗಳಿಗೆ ಈಗಾಗಲೇ ಆರ್‌ಬಿಐ ತಿಳಿಸಿದೆ. ಸರತಿ ಸಾಲಿನಲ್ಲಿ ನಿಲ್ಲುವ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಕೂಡಾ ಮಾಡಲು ಆರ್‌ಬಿಐ ಹೇಳಿದೆ. ಸಾಮಾನ್ಯವಾಗಿ ನಗದು ಡೆಪಾಸಿಟ್, ನೋಟು ಬದಲಾವಣೆ ನಡೆಯುವಂತೆಯೇ ಈ ಪ್ರಕ್ರಿಯೆ ನಡೆಸಲು ಬ್ಯಾಂಕುಗಳಿಗೆ ತಿಳಿಸಲಾಗಿದೆ.


Click it and Unblock the Notifications