2010ರಲ್ಲಿ ಜಾರಿಗೆ ಬಂದ ಆಧಾರ್ ಈ ತನಕ 37,000 ಕೋಟಿ ಬಾರಿ ಬಳಕೆ
ಆಧಾರ್ ಹಾಗೂ ಆಧಾರ್ ಬಳಕೆದಾರರ ಬಗ್ಗೆ ಆಸಕ್ತಿಕರ ಅಂಕಿ- ಅಂಶ ಬಹಿರಂಗವಾಗಿದೆ. 2010ನೇ ಇಸವಿಯಲ್ಲಿ ವಿತರಿಸಲು ಆರಂಭವಾದ ಆಧಾರ್ ಈಗ 125 ಕೋಟಿ ಸಂಖ್ಯೆಯನ್ನು ದಾಟಿದೆ. ಇಷ್ಟು ಸಂಖ್ಯೆಯ ಭಾರತೀಯರ ಬಳಿ ಈಗ ಆಧಾರ್ ಸಂಖ್ಯೆ ಇದೆ. ಅಷ್ಟೇ ಅಲ್ಲ, 12 ಸಂಖ್ಯೆಯ ಆಧಾರ್ ಕಾರ್ಡ್ ಅನ್ನು ಪ್ರಾಥಮಿಕ ದಾಖಲೆಯಾಗಿ ಬಳಸುತ್ತಿರುವವರು ಹೆಚ್ಚಾಗುತ್ತಿದ್ದಾರೆ.
ಆಧಾರ್ ಆಧಾರಿತ ಅಥೆಂಟಿಕೇಷನ್ ಸೇವೆಯನ್ನು ಆರಂಭವಾದ ದಿನದಿಂದ ಇಲ್ಲಿಯ ತನಕ 37,000 ಕೋಟಿ ಬಾರಿ ಬಳಸಲಾಗಿದೆ. ಸದ್ಯಕ್ಕೆ ನಿತ್ಯವೂ 3 ಕೋಟಿಯಷ್ಟು ಅಥೆಂಟಿಕೇಷನ್ ಮನವಿ ಬರುತ್ತಿದೆ ಸರ್ಕಾರದ ಮೂಲಗಳೇ ತಿಳಿಸಿವೆ. ಜನರು ಸಹ ಆಧಾರ್ ಮಾಹಿತಿಯನ್ನು ಅಗತ್ಯ ಇದ್ದಾಗ ಆಗಿಂದಾಗಲೇ ಅಪ್ ಡೇಟ್ ಮಾಡುತ್ತಿದ್ದಾರೆ.
ಯುಐಡಿಎಐನಿಂದ 331 ಕೋಟಿ ಯಶಸ್ವಿ ಆಧಾರ್ ಅಪ್ ಡೇಟ್ಸ್- ಬಯೋಮೆಟ್ರಿಕ್ ಹಾಗೂ ಭೌಗೋಳಿಕ ಪ್ರದೇಶದ ಮಾಹಿತಿ ಬದಲಾಯಿಸಲಾಗಿದೆ. ಸದ್ಯಕ್ಕೆ ನಿತ್ಯವೂ 3-4 ಲಕ್ಷ ಆಧಾರ್ ಅಪ್ ಡೇಟ್ ಗೆ ಮನವಿ ಬರುತ್ತಿದೆ.

ಅಂದ ಹಾಗೆ, 2010ರಲ್ಲಿ ಯುಪಿಎ ಆಡಳಿತಾವಧಿಯಲ್ಲಿ ಆಧಾರ್ ಜಾರಿಗೆ ಬಂತು. ಪ್ರತಿ ಭಾರತೀಯರಿಗೂ ವಿಶಿಷ್ಟ ಸಂಖ್ಯೆಯನ್ನು ಒದಗಿಸುವುದು ಈ ಯೋಜನೆ ಉದ್ದೇಶವಾಗಿತ್ತು. ಸರ್ಕಾರದಿಂದ ನೀಡುವ ಸವಲತ್ತುಗಳನ್ನು ಬಳಸಿಕೊಳ್ಳಲು ಈ ವಿಶಿಷ್ಟ ಸಂಖ್ಯೆಯನ್ನು ಬಳಸಿಕೊಳ್ಳಬಹುದು.
ಇನ್ನು ಈಗಾಗಲೇ ಆದಾಯ ತೆರಿಗೆ ಇಲಾಖೆಯಿಂದ ಘೋಷಣೆ ಮಾಡಿರುವಂತೆ, PAN ಅನ್ನು ಡಿಸೆಂಬರ್ 31, 2019ರೊಳಗೆ ಆಧಾರ್ ಸಂಖ್ಯೆ ಜತೆ ಜೋಡಣೆ ಮಾಡಬೇಕು. ಇದಕ್ಕಾಗಿ ಈ ಹಿಂದೆ ನೀಡಿದ್ದ ಗಡುವನ್ನು ಡಿಸೆಂಬರ್ 31ರ ತನಕ ಕೇಂದ್ರೀಯ ನೇರ ತೆರಿಗೆ ಮಂಡಳಿ (CBDT) ವಿಸ್ತರಣೆ ಮಾಡಿದೆ.