ಹಲವು ಉದ್ಯಮ, ವ್ಯವಹಾರಗಳ ಸ್ವರೂಪ ಬದಲಾಗಿದೆ ಹಾಗೂ ಬದಲಾಗುತ್ತಿದೆ. ದೈನಂದಿನ ಚಟುವಟಿಕೆಗಳಲ್ಲಿ ಸಿಬ್ಬಂದಿ ಹಾಗೂ ಗ್ರಾಹಕರ ಮಧ್ಯೆ ನೇರ ಸಂಪರ್ಕವನ್ನು ತಡೆಯುವ ಉದ್ದೇಶದಿಂದಲೇ ಬದಲಾವಣೆಗಳನ್ನು ಮಾಡುತ್ತಿದ್ದಾರೆ ಮಾಲೀಕರು. ಅಂಥದ್ದೇ ಒಂದು ಉದಾಹರಣೆ ಈಗ ಪುಣೆಯಲ್ಲಿ ವರದಿ ಆಗಿದೆ. ಅಲ್ಲಿ "ಆತ್ಮನಿರ್ಭರ್ ಅಭಿಯಾನ" ಆರಂಭಿಸಲಾಗಿದೆ.
ಸಿಬ್ಬಂದಿ ಹಾಗೂ ಗ್ರಾಹಕರ ಮಧ್ಯೆ ಸಾಮಾಜಿಕ ಅಂತರ ಕಾಯ್ದುಕೊಂಡು ಸುರಕ್ಷತೆ ಖಾತ್ರಿ ಮಾಡಿಕೊಳ್ಳುವುದು ಈ ಅಭಿಯಾನದ ಉದ್ದೇಶ. ಅಂದ ಹಾಗೆ ಈ ಆತ್ಮನಿರ್ಭರ್ ಪೆಟ್ರೋಲ್ ಬಂಕ್ ಹೇಗೆ ಕಾರ್ಯ ನಿರ್ವಹಿಸುತ್ತದೆ ಗೊತ್ತಾ? ಹಂತ ಹಂತವಾಗಿ ಇಲ್ಲಿ ವಿವರಿಸಲಾಗುತ್ತಿದೆ, ಮುಂದೆ ಓದಿ.
ಪೆಟ್ರೋಲ್ ಬಂಕ್ ನಲ್ಲಿ ವ್ಯವಹಾರ ಹೇಗೆ ನಡೆಯುತ್ತದೆ?
* ಮೊದಲಿಗೆ ಗ್ರಾಹಕರಿಗೆ ಕೈಗೆ ಸ್ಯಾನಿಟೈಸ್ ಹಾಕಿಕೊಳ್ಳಲು ಹೇಳಲಾಗುತ್ತದೆ.
* ಎಷ್ಟು ತೈಲ ಬೇಕು ಎಂಬುದನ್ನು ಅಂಕಿಗಳನ್ನು ನಮೂದಿಸಲು ತಿಳಿಸಲಾಗುತ್ತದೆ. ಬಂಕ್ ಸಿಬ್ಬಂದಿ ದೂರ ನಿಂತು ಈ ಬಗ್ಗೆ ಮಾರ್ಗದರ್ಶನ ಮಾಡುತ್ತಾರೆ.
* ಪೆಟ್ರೋಲ್/ಡೀಸೆಲ್ ತುಂಬುವ ನೋಜಲ್ ಅನ್ನು ತೆಗೆದು, ಮೀಟರ್ ನಲ್ಲಿ ಶೂನ್ಯವನ್ನು ಖಾತ್ರಿ ಮಾಡಿಕೊಂಡು, ನೋಜಲ್ ಅನ್ನು ಗ್ರಾಹಕರೇ ವಾಹನದ ತೈಲ ತುಂಬುವ ಜಾಗದಲ್ಲಿ ಬಿಗಿ ಮಾಡಿ ಇಟ್ಟರೆ ತುಂಬಿಕೊಳ್ಳುತ್ತದೆ.
* ಎಷ್ಟು ಮೊತ್ತ ನಮೂದಿಸಲಾಗಿರುತ್ತದೋ ಅಷ್ಟಕ್ಕೆ ತೈಲ ಭರ್ತಿಯಾದ ಮೇಲೆ ತಾನಾಗಿಯೇ ಹರಿದು ಬರುತ್ತಿದ್ದದ್ದು ನಿಲ್ಲುತ್ತದೆ.
* ನೋಜಲ್ ಹೊರತೆಗೆದು, ಮತ್ತೆ ಮಷೀನ್ ನಲ್ಲೇ ಇಡಬೇಕು. "ವಾಲ್ಯೂಮ್" ಬಟನ್ ಒತ್ತಬೇಕು.
* ಪೆಟ್ರೋಲ್ ಬಂಕ್ ಸಿಬ್ಬಂದಿ ಬಳಿ ಇರುವಂತೆ ಮಶೀನ್ ನಗದು, ಕಾರ್ಡ್ ಅಥವಾ ಡಿಜಿಟಲ್ ಪಾವತಿ ಸ್ವೀಕರಿಸುತ್ತದೆ.
* ಕನಿಷ್ಠ 30 ರುಪಾಯಿ ಹಾಗೂ ಗರಿಷ್ಠ 400 ರುಪಾಯಿಗೆ ದ್ವಿಚಕ್ರ ವಾಹನಕ್ಕೆ ತೈಲ ತುಂಬಿಸಬಹುದು.
ಈ ನಿಯಮ ಹೇಗೆ ಇದು ನಡೆಯುತ್ತಿದೆ?
ತೈಲ ಭರ್ತಿ ಮಾಡುವಾಗ ಅಳತೆ ವಿಚಾರದಲ್ಲಿ ಗ್ರಾಹಕರು- ಸಿಬ್ಬಂದಿ ಮಧ್ಯೆ ವಾಗ್ವಾದ ನಡೆಯುತ್ತಿತ್ತು. ಆದರೆ ಈಗ ಆ ಸಮಸ್ಯೆ ಇರುವುದಿಲ್ಲ. ಜತೆಗೆ ಮಾರಾಟ ಮಾಡುವವರು ಹಾಗೂ ಗ್ರಾಹಕರ ಮಧ್ಯೆ ಸಾಮಾಜಿಕ ಅಂತರ ಕೂಡ ಕಾಯ್ದುಕೊಳ್ಳಬಹುದು. ಈ ಹೊಸ ಆಲೋಚನೆ ಚೆನ್ನಾಗಿ ಕೆಲಸ ಮಾಡುತ್ತಿದೆ.
ಎಷ್ಟು ಲೀಟರ್ ಪೆಟ್ರೋಲ್- ಡೀಸೆಲ್?
ಒಂದು ದಿನಕ್ಕೆ 800ರಿಂದ 900 ಲೀಟರ್ ಪೆಟ್ರೋಲ್ ಹಾಗೂ 500ರಿಂದ 600 ಲೀಟರ್ ಡೀಸೆಲ್ ಮಾರಾಟ ಆಗುತ್ತಿದೆ ಎಂದು ಪುಣೆಯ ಈ ಪೆಟ್ರೋಲ್ ಬಂಕ್ ಮ್ಯಾನೇಜರ್ ಸಂಕೇತ್ ವರುಡೆ ತಿಳಿಸಿದ್ದಾರೆ ಎಂಬುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಈ ಹೊಸ ನಿಯಮದ ಬಗ್ಗೆ ಇತರರು ಕೂಡ ಆಸಕ್ತಿ ತೋರುತ್ತಿದ್ದಾರೆ.


Click it and Unblock the Notifications