ಕೌಟುಂಬಿಕ ಜವಾಬ್ದಾರಿಗಳ ಕಾರಣ ನೀಡಿ, ವಿಪ್ರೋ ಸಿಇಒ ಅಬಿದಲಿ ನೀಮುಚ್ ವಾಲಾ ತಮ್ಮ ಹುದ್ದೆಯನ್ನು ತ್ಯಜಿಸಿದ್ದಾರೆ. ಆದರೆ ಮುಂದಿನ ಸಿಇಒ ಆಯ್ಕೆ ಆಗುವ ತನಕ ಅವರು ಸಿಇಒ ಆಗಿ ಮುಂದುವರಿಯಲಿದ್ದಾರೆ ಎಂದು ಕಂಪೆನಿಯು ಹೇಳಿಕೆಯಲ್ಲಿ ತಿಳಿಸಿದೆ. ಈಗಾಗಲೇ ಸಿಇಒ ಆಯ್ಕೆ ಪ್ರಕ್ರಿಯೆ ಶುರುವಾಗಿದೆ ಎಂದು ಕೂಡ ತಿಳಿಸಲಾಗಿದೆ.
ಅಧ್ಯಕ್ಷ ರಿಷದ್ ಪ್ರೇಮ್ ಜೀ ಮಾತನಾಡಿ, ವಿಪ್ರೋಗೆ ಅಬಿದ್ ಅವರು ನೀಡಿದ ನಾಯಕತ್ವ ಮತ್ತು ಕೊಡುಗೆಗೆ ಧನ್ಯವಾದಗಳು. ಅನುಷ್ಠಾನದ ಬಲಿಷ್ಠ ಮನಸ್ಥಿತಿ ಬೆಳೆಯಲು ಕಳೆದ ನಾಲ್ಕು ವರ್ಷಗಳಿಂದ ಅಬಿದ್ ನೆರವು ನೀಡಿದ್ದರು. ನಮ್ಮ ಡಿಜಿಟಲ್ ವ್ಯವಹಾರ ಜಾಗತಿಕವಾಗಿ ಬೆಳೆಯಲು ಶ್ರಮಿಸಿದ್ದರು. ಅವರ ಭವಿಷ್ಯಕ್ಕೆ ನಾವು ಶುಭ ಹಾರೈಸುತ್ತೇವೆ" ಎಂದಿದ್ದಾರೆ.
ತಮ್ಮ ನಿರ್ಗಮನದ ಬಗ್ಗೆ ಮಾತನಾಡಿರುವ ನೀಮುಚ್ ವಾಲಾ, ವಿಪ್ರೋಗೆ ಸೇವೆ ಸಲ್ಲಿಸುವುದು ಗೌರವ. ಈ ಕಂಪೆನಿಗೆ ಎಪ್ಪತ್ತೈದು ವರ್ಷಗಳ ಶ್ರೀಮಂತ ಪರಂಪರೆ ಇದೆ. ಬದಲಾವಣೆಯ ನಮ್ಮ ಪಯಣದಲ್ಲಿ ಗುರುತಿಸಬಹುದಾದ ಪ್ರಗತಿ ಸಾಧಿಸಿದ್ದೇವೆ. ಪ್ರೇಮ್ ಜೀ, ರಿಷದ್, ಆಡಳಿತ ಮಂಡಳಿ ನಿರ್ದೇಶಕರು, ವಿಪ್ರೋದ ನನ್ನ ಸಹೋದ್ಯೋಗಿಗಳು ಮತ್ತು ಗ್ರಾಹಕರು ನೀಡಿದ ಬೆಂಬಲಕ್ಕೆ ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.

ನೀಮುಚ್ ವಾಲಾ ಫೆಬ್ರವರಿ 1, 2016ರಲ್ಲಿ ವಿಪ್ರೋದ ಸಿಇಒ ಆಗಿ ಅಧಿಕಾರ ವಹಿಸಿಕೊಂಡರು. ಜುಲೈ 31, 2019ರಲ್ಲಿ ಅಜೀಂ ಪ್ರೇಮ್ ಜೀ ನಿರ್ಗಮನದ ನಂತರ ಎಂ.ಡಿ. ಮತ್ತು ಸಿಇಒ ಆದರು. ಅದಕ್ಕೂ ಮುನ್ನ 2015ರಲ್ಲಿ ಅವರನ್ನು ವಿಪ್ರೋಗೆ ಸಿಒಒ ಆಗಿ ನೇಮಿಸಲಾಯಿತು. ವಿಪ್ರೋಗೆ ಸೇರುವ ಮೊದಲು 23 ವರ್ಷ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ನಲ್ಲಿ ಕಾರ್ಯ ನಿರ್ವಹಿಸಿದ್ದರು.


Click it and Unblock the Notifications