ವಿಜಯ್ ಹಾಗೂ ವಿಜಯ್ ಸೇತುಪತಿ ಅಭಿನಯದ 'ಮಾಸ್ಟರ್' ಸಿನಿಮಾ ಎರಡು ವಾರಗಳಲ್ಲಿ 97 ಕೋಟಿ ರುಪಾಯಿ ಸಂಗ್ರಹಿಸುವ ಮೂಲಕ ಸಾರ್ವಕಾಲಿಕವಾಗಿ ಅತಿ ಹೆಚ್ಚು ಹಣ ಗಳಿಸಿದ ಏಳನೇ ಸಿನಿಮಾ ಎಂಬ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.
"ಕೋವಿಡ್ ಸನ್ನಿವೇಶದಲ್ಲೂ, ಶೇಕಡಾ ನೂರರಷ್ಟು ವೀಕ್ಷಕರಿಗೆ ತಮಿಳುನಾಡಿನಲ್ಲಿ (ಬಿಡುಗಡೆ ಸಂದರ್ಭದಲ್ಲಿ) ವೀಕ್ಷನೆಗೆ ಅವಕಾಶ ಮಾಡಿಕೊಟ್ಟಿದ್ದಲ್ಲಿ ತಮಿಳುನಾಡಿನಲ್ಲಿ ಅತಿ ಹೆಚ್ಚು ಗಳಿಕೆ ಕಂಡ ತಮಿಳು ಸಿನಿಮಾ 'ಮಾಸ್ಟರ್' ಎನಿಸಿಕೊಳ್ಳುತ್ತಿತ್ತು. ಬಾಹುಬಲಿ- ದ ಕನ್ ಕ್ಲೂಷನ್ ಗಳಿಕೆಯನ್ನೂ ಮಾಸ್ಟರ್ ಮೀರಿಸಿದೆ," ಎಂದು ಸಿನಿಮಾ ವಹಿವಾಟಿನ ವೆಬ್ ಸೈಟ್ ಬಾಕ್ಸ್ ಆಫೀಸ್ ಇಂಡಿಯಾ ಬ್ಲಾಗ್ ಪೋಸ್ಟ್ ನಲ್ಲಿ ತಿಳಿಸಿದೆ.
ಚಿತ್ರಮಂದಿರದಲ್ಲಿ ಶೇಕಡಾ ನೂರರಷ್ಟು ವೀಕ್ಷಕರ ಸಾಮರ್ಥ್ಯದೊಂದಿಗೆ ಚಿತ್ರ ಪ್ರದರ್ಶಿಸುವುದಕ್ಕೆ ಗೃಹ ಸಚಿವಾಯಲವು ಅವಕಾಶ ನೀಡುವುದಕ್ಕೆ ಮುಂಚೆಯೇ ತಮಿಳುನಾಡಿನಲ್ಲಿ ಹಲವು ಚಿತ್ರಮಂದಿರಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುತ್ತಿದ್ದವು. ಇದರಿಂದಲೇ ಸಿನಿಮಾ ಹೇಗೆ ಇಂಥ ಸಂಖ್ಯೆ ಮುಟ್ಟಲು ಸಾಧ್ಯವಾಯಿತು ಎಂಬುದು ತಿಳಿಯುತ್ತದೆ.

ಭಾರತೀಯ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಸ್ಥಳೀಯ ಭಾಷೆ ಮೊದಲ ದೊಡ್ಡ ಸಿನಿಮಾ ಮಾಸ್ಟರ್. ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇಕಡಾ 67ರಷ್ಟು ಕುಗ್ಗಬಹುದು ಎಂದು ಅಂದಾಜು ಮಾಡಿದ್ದ ಸನ್ನಿವೇಶದಲ್ಲಿ ಈ ಸಿನಿಮಾದಿಂದ ಉದ್ಯಮಕ್ಕೆ ಚೈತನ್ಯ ಸಿಕ್ಕಂತಾಗಿದೆ.
ಕೊರೊನಾ ಲಾಕ್ ಡೌನ್ ನಿಂದಾಗಿ ನಷ್ಟವನ್ನು ಭರಿಸಲು ಸಾಧ್ಯವಾಗದೆ ದೇಶದಾದ್ಯಂತ ಸಾವಿರಕ್ಕೂ ಹೆಚ್ಚು ಸಿಂಗಲ್ ಸ್ಕ್ರೀನ್ ಗಳನ್ನು ಮುಚ್ಚಲಾಗಿದೆ. ದಕ್ಷಿಣ ಭಾರತದಲ್ಲಿ ಸಿನಿಮಾಗಳಿಗಾಗಿ ಚಿತ್ರಮಂದಿರಗಳಿಗೆ ಹೋಗುವ ಹಾಗೂ ನಟರನ್ನು ಆರಾಧಿಸುವ ವೀಕ್ಷಕರ ಸಂಖ್ಯೆ ದೊಡ್ಡ ಮಟ್ಟದಲ್ಲಿ ಇದೆ. ಜತೆಗೆ ವಿಜಯ್ ಜನಪ್ರಿಯತೆಯೂ ಸೇರಿ ಮಾಸ್ಟರ್ ಸಿನಿಮಾದಿಂದ ಚಿತ್ರಮಂದಿರ ವ್ಯವಹಾರ ಚೇತರಿಸಿಕೊಳ್ಳುವಂತೆ ಮಾಡಿದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.
ಮಾಸ್ಟರ್ ಸಿನಿಮಾದಲ್ಲಿ ಖಳನಾಯಕನಾಗಿ ವಿಜಯ್ ಸೇತುಪತಿ ಮಿಂಚು ಹರಿಸಿದ್ದು, ಇಬ್ಬರು ನಟರ ಪೋಟಾಪೋಟಿ ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಸೆಳೆಯುತ್ತಿದೆ.
ಇನ್ನು ಹಿಂದಿ ಸಿನಿಮಾ ರಂಗದ ಅಕ್ಷಯ್ ಕುಮಾರ್ ಅಭಿನಯಿಸಿರುವ ಸೂರ್ಯವಂಶಿ, '83', ಸಲ್ಮಾನ್ ಖಾನ್ ಅಭಿನಯದ ರಾಧೆ, ಯಶ್ ರಾಜ್ ಫಿಲ್ಮ್ಸ್ 'ಬಂಟಿ ಔರ್ ಬಬ್ಲಿ 2' ಬಿಡುಗಡೆಯ ದಿನಾಂಕವನ್ನು ಸದ್ಯದಲ್ಲೇ ಘೋಷಣೆ ಮಾಡಲಿದ್ದಾರೆ.


Click it and Unblock the Notifications