ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆ ಚಾಲನಾ ಕಾರ್ಯಕ್ರಮಕ್ಕೆ ತಗುಲಿದ ವೆಚ್ಚ, ಅನುಮೋದನೆಗೊಂಡ ಮೊತ್ತಕ್ಕಿಂತ ಎರಡು ಕೋಟಿ ಹೆಚ್ಚು ಎಂದು ವರದಿಯಾಗಿದೆ.
ಆಗಸ್ಟ್ 30ರಂದು ಮೈಸೂರಿನಲ್ಲಿ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿದಂತೆ ಗಣ್ಯರ ಸಮ್ಮುಖದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅದ್ದೂರಿ ಚಾಲನೆಯನ್ನು ನೀಡಲಾಗಿತ್ತು. ಈ ಕಾರ್ಯಕ್ರಮಕ್ಕಾಗಿ ಸರ್ಕಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 17.40 ಕೋಟಿ ರೂಪಾಯಿ ಮಂಜೂರು ಮಾಡಿತ್ತು.

ಆದರೆ, ನಿಗದಿತ ಬಜೆಟಿಗಿಂತ ಹೆಚ್ಚುವರಿಯಾಗಿ ಎರಡು ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ. ಅಲ್ಲಿಗೆ, ಈ ಕಾರ್ಯಕ್ರಮಕ್ಕೆ ಸುಮಾರು ಇಪ್ಪತ್ತು ಕೋಟಿ ಸರ್ಕಾರೀ ಖಜಾನೆಯಿಂದ ಮಂಜೂರಾದಂತಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸೂಚನೆಯ ಮೇರೆ ಈ ಆದೇಶವನ್ನು ಹೊರಡಿಸಲಾಗಿದೆ ಎಂದು ದಿ ಫೈಲ್ ವರದಿ ಮಾಡಿದೆ.
ಖಾಸಗಿ ಪ್ರಚಾರ ಫಲಕಗಳಲ್ಲಿಯೂ ಯೋಜನೆಯ ಬಗ್ಗೆ ಜಾಹೀರಾತನ್ನು ನೀಡಲು ಆದೇಶ ನೀಡಲಾಗಿತ್ತು. ಹಲವು ಗ್ಯಾರಂಟಿಗಳಿಗೆ ಹಣವನ್ನು ಒದಗಿಸಬೇಕಾಗಿರುವುದರಿಂದ ಗೃಹಲಕ್ಷ್ಮಿ ಯೋಜನೆ ಜಾರಿಗೆ ಆರ್ಥಿಕ ಇಲಾಖೆಗೆ ಒಪ್ಪಿರಲಿಲ್ಲ ಎಂದು ಹೇಳಲಾಗುತ್ತಿದೆ.
ಈ ಯೋಜನೆಗೆ ಸಂಬಂಧಿಸಿದಂತೆ ಸಾಮಾಜಿಕ ತಾಣದಲ್ಲಿ ಜಾಹೀರಾತನ್ನು ನೀಡಲು ಐವತ್ತು ಲಕ್ಷ ರೂಪಾಯಿ ಹಣವನ್ನು ಮೀಸಲಿಡಲಾಗಿತ್ತು ಎಂದು ವರದಿಯಾಗಿತ್ತು. ಮೈಸೂರಿನ ಕಾರ್ಯಕ್ರಮಕ್ಕೆ ತಗುಲಿದ ಖರ್ಚನ್ನು ಬಿಡುಗಡೆ ಮಾಡುವಂತೆ ಸೆಪ್ಟಂಬರ್ ಐದರಂದು ಇಲಾಖೆ ಆದೇಶ ಹೊರಡಿಸಿದೆ.
ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಪ್ರಮುಖ ಕಾರಣಗಳಲ್ಲೊಂದು ಗೃಹಲಕ್ಷ್ಮಿ ಯೋಜನೆ. ಪಂಚ ಗ್ಯಾರಂಟಿಗಳಲ್ಲೊಂದಾದ ಈ ಯೋಜನೆಯಡಿ ಕುಟುಂಬದ ಯಜಮಾನಿಗೆ ಮಾಸಿಕ ಎರಡು ಸಾವಿರ ರೂಪಾಯಿ ಹಣವನ್ನು ಸರ್ಕಾರ ಫಲಾನುಭವಿಗಳ ಖಾತೆಗೆ ನೇರವಾಗಿ ಜಮೆ ಮಾಡುವ ಯೋಜನೆ ಇದಾಗಿದೆ.
"1.10 ಕೋಟಿ ಫಲಾನುಭವಿಗಳ ಖಾತೆಗೆ ತಲಾ 2,000 ರೂಪಾಯಿ ಜಮೆ ಮಾಡಲಾಗುವುದು. ಶಕ್ತಿ ಯೋಜನೆ, ಅನ್ನಭಾಗ್ಯ, ಗೃಹಜ್ಯೋತಿ ಗ್ಯಾರಂಟಿ ಈಗಾಗಲೇ ಜಾರಿ ಮಾಡಿದ್ದೇವೆ. ಮನೆ ಯಜಮಾನಿ ಖಾತೆಗೆ 2 ಸಾವಿರ ರೂಪಾಯಿ ಜಮೆ ಮಾಡಿದ್ದೇವೆ" ಎಂದು ಗೃಹಲಕ್ಷ್ಮಿ ಚಾಲನಾ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದರು.


Click it and Unblock the Notifications