ಕಾಫಿ ಬೆಲೆಯು ಕಳೆದ ಏಳು ವರ್ಷದ ಬಳಿಕ 10 ಸಾವಿರದ ಗಡಿ ದಾಟಿದ್ದು, ಕಾಫಿ ಬೆಳೆಗಾರರಲ್ಲಿ ಸಂತಸ ಹೆಚ್ಚಿಸುವಂತಹ ಸುದ್ದಿಯಾದರೂ ಬೆಳೆ ಇಲ್ಲದ ಸ್ಥಿತಿ ಎದುರಿಗಿದೆ.
ಜನವರಿ ಹಾಗೂ ಫೆಬ್ರವರಿ ತಿಂಗಳಿನಲ್ಲಿ ಅರೆಬಿಕಾ ಪಾರ್ಚ್‌ಮೆಂಟ್‌ನ 50ಕೆಜಿ ಚೀಲಕ್ಕೆ 9000 ರುಪಾಯಿವರೆಗೆ ತಲುಪಿತ್ತು. ಇದೇ ಉತ್ತಮ ಬೆಲೆ ಎಂದು ಬಹುತೇಕ ಕಾಫಿ ಬೆಳೆಗಾರರು ಖುಷಿಪಟ್ಟು ಮಾರಾಟ ಮಾಡಿದ್ದು ಇದೆ. ಆದರೆ ಕಳೆದ ಮೂರು ದಿನಗಳಲ್ಲಿ ಕಾಫಿ ಬೆಲೆ ದಿಢೀರ್ ಆಗಿ 10,000 ಗಡಿ ದಾಟಿದೆ.
ಕಾಫಿ ಬೆಲೆ ಹೆಚ್ಚಳದಿಂದಾಗಿ ರಾಜ್ಯದಲ್ಲಿ ಹೆಚ್ಚು ಕಾಫಿ ಬೆಳೆಯುವ ಚಿಕ್ಕಮಗಳೂರು, ಕೊಡಗು, ಹಾಸನ ಜಿಲ್ಲೆಯ ಬೆಳೆಗಾರರು ಬೆಲೆ ಏರಿಕೆಯಿಂದ ಸಂತಸ ಪಟ್ಟಿದ್ದಾರೆ. ಆದರೆ ಈಗಾಗಲೇ ಕಾಫಿ ಮಾರಿದವರು ಕೈ-ಕೈ ಹಿಸುಕಿಕೊಳ್ಳುವಂತಾಗಿದೆ.
10,600 ರುಪಾಯಿ ತಲುಪಿದ್ದ ಅರೆಬಿಕಾ ಪಾರ್ಚ್‌ಮೆಂಟ್
ಅರೆಬಿಕಾ ಪಾರ್ಚ್‌ಮೆಂಟ್ ಕಳೆದ ಮೂರು ದಿನಗಳಲ್ಲಿ ದಿಢೀರ್ ಏರಿಕೆಯಾಗಿದೆ. ಎರಡು ದಿನಗಳ ಹಿಂದೆ ಅರೆಬಿಕಾ ಪಾರ್ಚ್‌ಮೆಂಟ್ ಚೀಲ 10,600 ರುಪಾಯಿವರೆಗೂ ಮಾರಾಟವಾಗಿತ್ತು. ಬುಧವಾರ(ಮಾರ್ಚ್ 05) ಈ ಬೆಲೆಯು 10,500 ರುಪಾಯಿಗೆ ಇಳಿದಿದ್ದು, ಗುರುವಾರ (ಮಾರ್ಚ್ 05) 10,400 ರುಪಾಯಿಗೆ ತಲುಪಿದೆ.
7 ವರ್ಷದ ಬಳಿಕ 10 ಸಾವಿರ ಗಡಿ ದಾಟಿದ ಬೆಲೆ
ಅರೆಬಿಕಾ ಪಾರ್ಚ್‌ಮೆಂಟ್ ಇಷ್ಟು ಬೆಲೆ ತಲುಪಿದ್ದು ಕಳೆದ ಏಳು ವರ್ಷದಲ್ಲೇ ಇದೇ ಮೊದಲು. ಕಳೆದ ವರ್ಷ ಅರೆಬಿಯಾ ಪಾರ್ಚ್‌ಮೆಂಟ್ ಬೆಲೆ ತೀವ್ರ ಇಳಿಕೆಯಾಗಿದ್ದು. ಚೀಲಕ್ಕೆ 6,000 ದಿಂದ 6,500 ರುಪಾಯಿಗೆ ತಲುಪಿತ್ತು. ಆದರೆ ಏಳು ವರ್ಷಗಳಲ್ಲಿ ಇದು ಉತ್ತಮ ಬೆಲೆಯಾಗಿದೆ. ಆದರೆ ಏಳು ವರ್ಷಗಳ ಹಿಂದೆ 12,000 ಗಡಿ ಮುಟ್ಟಿದ್ದ ಉದಾಹರಣೆಯು ಇದೆ.
ಬೆಲೆ ಹೆಚ್ಚಾಗಲು ಕಾರಣ ಏನು?
ಬೆಲೆ ಹೆಚ್ಚಾಗಲು ಬಹುಮುಖ್ಯ ಕಾರಣ ಉತ್ಪಾದನೆ ಪ್ರಮಾಣದಲ್ಲಿ ಆಗಿರುವ ಕುಸಿತ. ಅತಿ ಹೆಚ್ಚು ಉತ್ಪಾದನೆ ಮಾಡುವ ಬ್ರೆಜಿಲ್, ಕೊಲಂಬಿಯಾದಲ್ಲಿ ಉತ್ಪಾದನೆ ಪ್ರಮಾಣ ಗಣನೀಯವಾಗಿ ತಗ್ಗಿದೆ.
ಇನ್ನು ಭಾರತದಲ್ಲೂ ಉತ್ಪಾದನೆಯ ಮಟ್ಟ ಕುಸಿದಿದೆ. ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಯ ಸಕಲೇಶಪುರ, ಆಲೂರು ಮತ್ತು ಬೇಲೂರು ತಾಲ್ಲೂಕುಗಳಲ್ಲಿ ಉತ್ಪಾದನೆ ಪ್ರಮಾಣ ತುಂಬಾ ಕುಸಿದಿದೆ. ಮಳೆ ಹಾಗೂ ಪ್ರವಾಹದಿಂದಾಗಿ ಉತ್ಪಾದನೆ ಕುಂಠಿತವಾಗಿದೆ.
ಬೆಲೆ ಹೆಚ್ಚಿದ್ದರೂ, ಬೆಳೆ ಇಲ್ಲದ ಸ್ಥಿತಿ
ಅರೆಬಿಕಾ ಪಾರ್ಚ್‌ಮೆಂಟ್ ಬೆಲೆ ಏರಿಕೆ ಆಗಿರೋದು ಕಾಫಿ ಬೆಳೆಗಾರರಲ್ಲಿ ಸಂತಸ ತರಿಸೋದು ನಿಜ. ಆದರೆ ಈ ವರ್ಷ ಬೆಲೆಯಿದ್ದರೂ ಬೆಳೆ ಇಲ್ಲದ ಪರಿಸ್ಥಿತಿಗೆ ತಲುಪಿದ್ದಾರೆ.
ಇದಕ್ಕೆ ಕಾರಣ ಭಾರೀ ಪ್ರಮಾಣದಲ್ಲಿ ಸುರಿದ ಮಳೆ.
ರಾಜ್ಯದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಚೆನ್ನಾಗಿ ಬರಬೇಕಿದ್ದ ಕಾಫಿಯು ಹೂವು, ಕಾಯಿ ಇದ್ದಾಗಲೇ ಹೆಚ್ಚು ಉದುರಿ ಹೋಗಿದೆ. ಜೊತೆಗೆ ಅನೇಕ ಕಡೆಯಲ್ಲಿ ಗುಡ್ಡ ಕುಸಿತವು ಉತ್ಪಾದನೆಯನ್ನು ತಗ್ಗಿಸಿದೆ. ಪ್ರವಾಹದಿಂದಾಗಿ ತೋಟದೊಳಗೆ ನೀರು ನುಗ್ಗಿದ್ದರಿಂದ ಅನೇಕ ಕಡೆ ಗಿಡಗಳು ಕೊಳೆತು ಹೋದವು. ಇದರಿಂದಾಗಿ ಉತ್ಪಾದನೆಯು ಬಹಳಷ್ಟು ಪ್ರಮಾಣದಲ್ಲಿ ಕಡಿಮೆಯಾಗಿದೆ.
ಈಗಾಗಲೇ ಬಹುತೇಕ ಕಾಫಿ ಮಾರಾಟ, ದಾಸ್ತಾನು ಮಾಡಿದವರಿಗೆ ಲಾಭ
ಪ್ರತಿ ವರ್ಷವು ಬೆಲೆ ಇಲ್ಲದೆ ಬೆಳೆಗಾರರು ಸಂಕಷ್ಟವನ್ನು ಎದುರಿಸುತ್ತಿದ್ದರು. ಆದರೆ ಈ ವರ್ಷ ಬೆಲೆಯಿದ್ದರೂ ಬೆಳೆ ಇಲ್ಲ. ಇತ್ತೀಚೆಗೆ ಚೀಲಕ್ಕೆ 9,400 ರುಪಾಯಿ ತಲುಪಿದ ತಕ್ಷಣ ಬಹುತೇಕ 60 ಪರ್ಸೆಂಟ್‌ಗೂ ಹೆಚ್ಚು ಬೆಳೆಗಾರರು ಕಾಫಿ ಮಾರಾಟ ಮಾಡಿದ್ದಾರೆ. ಹೀಗಾಗಿ ಇಲ್ಲಿಯವರೆಗೂ ದಾಸ್ತಾನು ಮಾಡಿದವರಿಗೆ ಮಾತ್ರ ಒಳ್ಳೆಯ ಲಾಭ ಸಿಗಲಿದೆ.
ಬೆಲೆ ಕುಸಿತ, ಕಾರ್ಮಿಕರ ಕೊರತೆ, ದುಬಾರಿ ಖರ್ಚಿನ ಕಾರಣಕ್ಕೆ ತೋಟದ ನಿರ್ವಹಣೆಯನ್ನೇ ಕೈ ಬಿಟ್ಟಿದ್ದ ಜನರು ಇದೀಗ ಈ ಬೆಲೆಯನ್ನು ನೋಡಿ ತೋಟದತ್ತ ಮುಖಮಾಡಿದ್ದಾರೆ. ಈಗಾಗಲೇ ಬೆಳೆ ಮಾರಿದವರು ಛೇ.. ಇನ್ನು ಸ್ವಲ್ಪ ಕಾಯಬೇಕಿತ್ತು ಎಂದು ಕೈ-ಕೈ ಹಿಸುಕಿಕೊಳ್ಳುವಂತಾಗಿದೆ.


Click it and Unblock the Notifications