ಯುಎಸ್ ಮೂಲದ ಸಂಸ್ಥೆಯಾದ ಹಿಂಡನ್‌ಬರ್ಗ್ ಈ ಹಿಂದೆ ಭಾರತದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಗೌತಮ್ ಅದಾನಿಯನ್ನು ಗುರಿಯಾಗಿಸಿದೆ. ಅದಾನಿ ಗ್ರೂಪ್ ಸ್ಟಾಕ್ ಮಾರುಕಟ್ಟೆಯಲ್ಲಿ ಹಲವಾರು ವಂಚನೆಗಳನ್ನು ಮಾಡಿದೆ ಎಂದು ಆರೋಪಿಸಿದೆ. ಅದಾದ ಬಳಿಕ ಅದಾನಿ ಗ್ರೂಪ್ ಷೇರುಗಳು ಭಾರೀ ನಷ್ಟವನ್ನು ಕಂಡಿದೆ. ನಿನ್ನೆಯಷ್ಟೇ ಹೊಸ ವಂಚನೆ ಪ್ರಕರಣ ಬಯಲು ಮಾಡುತ್ತೇವೆ ಎಂದು ಹೇಳಿದ ಹಿಂಡನ್‌ಬರ್ಗ್ ಈಗ ಟ್ವಿಟ್ಟರ್ ಮಾಜಿ ಸಿಇಒ ಜ್ಯಾಕ್ ಪ್ಯಾಟ್ರಿಕ್ ಡಾರ್ಸಿಯನ್ನು ಗುರಿಯಾಗಿಸಿಕೊಂಡಿದೆ. ಹಲವಾರು ವಂಚನೆ ಆರೋಪಗಳನ್ನು ಜ್ಯಾಕ್ ಮೇಲೆ ಹಿಂಡನ್‌ಬರ್ಗ್ ಮಾಡಿದೆ.
ಹಿಂಡನ್‌ಬರ್ಗ್ ಸಂಶೋಧನೆಯ ಪ್ರಕಾರ, ಈ ಹಿಂದೆ ಸ್ಕ್ವೇರ್ ಇಂಕ್ ಎಂದು ಕರೆಯಲಾಗುತ್ತಿದ್ದ ಬ್ಲಾಕ್ ಇಂಕ್ ಸಂಸ್ಥೆಯ ಮಾರುಕಟ್ಟೆ ಮೌಲ್ಯವು 44 ಬಿಲಿಯನ್ ಡಾಲರ್ ಆಗಿದೆ. ತಮ್ಮ ಸಂಸ್ಥೆಯು ಮ್ಯಾಜಿಕಲ್, ಯಾವುದೇ ಘರ್ಷಣೆಯಿಲ್ಲದ ಹಣಕಾಸು ವ್ಯವಸ್ಥೆಯಮ್ನು ರಚಿಸಿದೆ. ಯಾರಲ್ಲಿ ತಮ್ಮದೇ ಆದ ಬ್ಯಾಂಕ್ ಖಾತೆ ಇಲ್ಲವೋ, ಯಾರಿಗೆ ಬ್ಯಾಂಕ್‌ನ ಬಗ್ಗೆ ಅಧಿಕ ಮಾಹಿತಿ ಇಲ್ಲವೋ ಅವರನ್ನು ಸಬಲೀಕರಣ ಮಾಡುವ ಉದ್ದೇಶದಿಂದ ಮ್ಯಾಜಿಕಲ್, ಯಾವುದೇ ಘರ್ಷಣೆಯಿಲ್ಲದ ಹಣಕಾಸು ವ್ಯವಸ್ಥೆ ರಚನೆ ಮಾಡಲಾಗಿದೆ ಎಂದು ವಿವರಿಸಿಕೊಂಡಿದೆ.

ಹಿಂಡನ್‌ಬರ್ಗ್ ಆರೋಪವೇನು?
ಆದರೆ ಬ್ಲಾಕ್ ಯಾರಿಗೆ ಸೇವೆ ಸಲ್ಲಿಸುತ್ತಿದೆ ಎಂದು ಹೇಳುತ್ತಿದೆಯೋ ಆ ಜನರನ್ನೇ ಶೋಷಣೆಗೆ ಒಳಪಡಿಸುತ್ತಿದೆ ಎಂದು ಹಿಂಡನ್‌ಬರ್ಗ್ ಆರೋಪ ಮಾಡಿದೆ. ಸಂಸ್ಥೆಯು ಮ್ಯಾಜಿಕ್ ಎಂಬ ಪದವನ್ನು ತಪ್ಪಾಗಿ ಬಳಸುತ್ತಿದೆ. ಗ್ರಾಹಕರು ಮತ್ತು ಸರ್ಕಾರದ ವಿರುದ್ಧದ ಹಗರಣಗಳಿಗೆ ಸಹಾಯ ಮಾಡುವಲ್ಲಿ ಸಂಸ್ಥೆಯು ಸಾಮರ್ಥ್ಯವನ್ನು ಹೊಂದಿದೆ. ಬ್ಲಾಕ್ ಸಂಸ್ಥೆಯು ಹೊಸ ತಂತ್ರಜ್ಞಾನವನ್ನು ಅವಲಡಿಸಿಕೊಳ್ಳುವ ಬದಲಾಗಿ, ರೆಗ್ಯೂಲೇಷನ್‌ಗಳನ್ನು ಪಾಲಿಸದಿರುವುದು, ಸಾಲದ ವಿಚಾರದಲ್ಲಿ ಭ್ರಷ್ಟಾಚಾರ, ಹೊಸ ಆವಿಷ್ಕಾರಗಳಿಗೆ ಶುಲ್ಕ, ಹಣದುಬ್ಬರದ ನಡುವೆ ಜನರನ್ನು ಮೋಸ ಮಾಡುವುದರ ವಿಚಾರದಲ್ಲಿ ಮ್ಯಾಜಿಕ್ ಅನ್ನು ಮಾಡಿದೆ ಎಂದು ಹಿಂಡನ್‌ಬರ್ಗ್ ಆರೋಪಿಸಿದೆ.
ಜ್ಯಾಕ್ ಡಾರ್ಸಿ ವಿರುದ್ಧ ದೂರು
ಬ್ಲಾಕ್ ಸಂಸ್ಥೆಯಲ್ಲಿ ವಂಚನೆಗೆ ಪ್ರೋತ್ಸಾಹ, ಬೆಂಬಲವನ್ನು ನೀಡಿದ ಆರೋಪದಲ್ಲಿ ಟ್ವಿಟ್ಟರ್ ಮಾಜಿ ಸಿಇಒ ಜ್ಯಾಕ್ ಪ್ಯಾಟ್ರಿಕ್ ಡಾರ್ಸಿ ವಿರುದ್ಧ ಹಿಂಡನ್‌ಬರ್ಗ್ ದೂರು ದಾಖಲಿಸಿದೆ. ಟ್ವಿಟ್ಟರ್ ಸಹಸಂಸ್ಥಾಪಕರಾದ ಜ್ಯಾಕ್ ಡಾರ್ಸಿ 2015ರಿಂದ 2021ರವರೆಗೆ ಸಂಸ್ಥೆಯ ಸಿಇಒ ಆಗಿ ಕಾರ್ಯನಿರ್ವಹಣೆ ಮಾಡಿದ್ದಾರೆ. ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಜ್ಯಾಕ್ ಪ್ಯಾಟ್ರಿಕ್ ಡಾರ್ಸಿ ಬಿಲಿಯನ್ ಡಾಲರ್ ಈಕ್ವಿಟಿಗಳನ್ನು ಮಾರಾಟ ಮಾಡಿ ಲಾಭವನ್ನು ಪಡೆದಿದ್ದಾರೆ ಎಂದು ಹಿಂಡನ್‌ಬರ್ಗ್ ಹೇಳಿಕೊಂಡಿದೆ.
ಜ್ಯಾಕ್ ಡಾರ್ಸಿ ಹಾಗೂ ಜೇಮ್ಸ್ ಮ್ಯಾಕೆಲ್ವಿ ಜೊತೆಯಾಗಿ ಒಂದು ಬಿಲಿಯನ್ ಡಾಲರ್‌ಗೂ ಹೆಚ್ಚಿನ ಸ್ಟಾಕ್‌ಗಳನ್ನು ಕೋವಿಡ್ ಸಂದರ್ಭದಲ್ಲಿ ಮಾರಾಟ ಮಾಡಿದ್ದಾರೆ. ಹಗರಣದ ಬೆಂಬಲದಿಂದಾಗಿ ಬ್ಲಾಕ್ ಸಂಸ್ಥೆಯ ಸ್ಟಾಕ್‌ಗಳು ಏರಿಕೆಯಾಗಿದೆ ಎಂದು ಆರೋಪ ಮಾಡಲಾಗಿದೆ. ಈ ವಂಚನೆ ಪ್ರಕರಣದಲ್ಲಿ ಸಿಎಫ್‌ಒ ಅಮೃತಾ ಅಹುಜಾ, ಕ್ಯಾಷ್ ಆಪ್‌ನ ಮುಖ್ಯ ನಿರ್ವಾಹಕ ಬ್ರಿಯಾನ್ ಗ್ರಾಸ್ಸಡೊನಿಯಾ ಹೆಸರು ಕೂಡಾ ಉಲ್ಲೇಖ ಮಾಡಲಾಗಿದೆ.
ತಾನು ಶೋಷಣೆ ಮಾಡುವ ಜನರ ಮೇಲೆ ಕಾಳಜಿ ಇದೆ ಎಂಬಂತೆ ತೋರ್ಪಡಿಸಿಕೊಳ್ಳುವ ಜ್ಯಾಕ್ ವೈಯಕ್ತಿಕವಾಗಿ ಬಿಲಿಯನ್ ಡಾಲರ್ ಸಂಪತ್ತು ವೃದ್ಧಿಸಿಕೊಂಡಿದ್ದಾರೆ. ಡಾರ್ಸಿ ಹಾಗೂ ಮುಖ್ಯ ಅಧಿಕಾರಿಗಳು ಈಗಾಗಲೇ ಸಾಂಕ್ರಾಮಿಕ ಸಂದರ್ಭದಲ್ಲಿ ಒಂದು ಬಿಲಿಯನ್ ಡಾಲರ್ ಈಕ್ವಿಟಿ ಮಾರಾಟ ಮಾಡಿದ್ದಾರೆ. ಉಳಿದ ಜನರಿಗೆ ಏನಾಗುತ್ತದೆ ಎಂಬ ಚಿಂತನೆ ನಡೆಸದೆ ತಮ್ಮನ್ನು ತಾವು ಉಳಿಸಿಕೊಳ್ಳುವ ಆಟವಾಡಿದ್ದಾರೆ ಎಂದು ಹಿಂಡನ್‌ಬರ್ಗ್ ವರದಿಯು ಆರೋಪಿಸಿದೆ.
ಹಲವಾರು ಖಾತೆ ಹೊಂದಿರುವ ಜ್ಯಾಕ್
ಹಿಂಡನ್‌ಬರ್ಗ್ ವರದಿ ಪ್ರಕಾರ ಜ್ಯಾಕ್ ಡಾರ್ಸಿ ಹಲವಾರು ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ. ಆ ಪೈಕಿ ಕೆಲವು ಖಾತೆಗಳನ್ನು ಕ್ಯಾಷ್ ಆಪ್ ಗ್ರಾಹಕರಿಗೆ ವಂಚನೆ ಮಾಡಲು ಬಳಸಲಾಗುತ್ತಿದೆ. ಅಲ್ಲಿ ನಕಲಿ ಖಾತೆಗಳು ಕೂಡಾ ಇದೆ. ಅದು ಕೂಡಾ ಎಲಾನ್ ಮಸ್ಕ್, ಡೊನಾಲ್ಡ್ ಟ್ರಂಪ್ ಎಂಬ ಹೆಸರಿನಲ್ಲಿ ನಕಲಿ ಖಾತೆಗಳಿದೆ. ಜ್ಯಾಕ್ ಡಾರ್ಸಿ ಎಂಬ ಹೆಸರಲ್ಲಿ ಹಲವಾರು ಮಂದಿ ಈ ಅಪ್ಲಿಕೇಷನ್‌ನಲ್ಲಿ ಕಂಡು ಬರುತ್ತಾರೆ. ಈ ಖಾತೆಯನ್ನು ಬಳಸಿಕೊಂಡು ಇತರೆ ಬಳಕೆದಾರರನ್ನು ಮೋಸಗೊಳಿಸಲು ಮತ್ತು ವಂಚಿಸಲಾಗುತ್ತಿದೆ. ಇನ್ನು ಬ್ಲಾಕ್‌ನ ಮಾಜಿ ಉದ್ಯೋಗಿಗಳು ಈ ಸಂಸ್ಥೆಯಲ್ಲಿ ಶೇಕಡ 40ರಿಂದ 75 ಖಾತೆಗಳು ನಕಲಿ, ವಂಚನೆ ಮಾಡಲು ಬಳಸುವ ಖಾತೆಗಳು ಎಂದು ಹೇಳಿದ್ದಾರೆ. ಹಾಗೆಯೇ ಒಂದೇ ವ್ಯಕ್ತಿ ಹಲವಾರು ಖಾತೆಗಳನ್ನು ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.
ಬ್ಲಾಕ್ ಇಂಕ್ ಎಂದರೇನು?
ಉದ್ಯಮಿ ಜ್ಯಾಕ್ ಪ್ಯಾಟ್ರಿಕ್ ಡಾರ್ಸಿ ಬ್ಲಾಕ್ ಇಂಕ್ ಸಂಸ್ಥೆಯನ್ನು ಸ್ಥಾಪನೆ ಮಾಡಿದ್ದಾರೆ. ಇದು ಗ್ರಾಹಕರು ಮತ್ತು ಉದ್ಯಮಗಳಿಗೆ ಮೊಬೈಲ್ ನೆಟ್ ಬ್ಯಾಂಕಿಂಗ್ ಬಳಸಲು ಮತ್ತು ಪಾವತಿ ಮಾಡುವ ಅವಕಾಶವನ್ನು ಬ್ಲಾಕ್ ಇಂಕ್ ನೀಡುತ್ತದೆ. ಸ್ಕ್ವೇರ್ ಸಂಸ್ಥೆಯನ್ನು 2009ರಲ್ಲಿ ಆರಂಭ ಮಾಡಲಾಗಿದೆ. ಕ್ರಾಂತಿಕಾರಿ ಪರಿಕಲ್ಪನೆಯನ್ನು ಅಭಿವೃದ್ಧಿಪಡಿಸುವ ಪ್ರಯತ್ನವನ್ನು ಮಾಡಲಾಗಿದೆ. ಸ್ಮಾರ್ಟ್‌ಫೋನ್‌ನ ಹೆಡ್‌ಫೋನ್ ಜ್ಯಾಕ್‌ಗೆ ಪ್ಲಗ್ ಮಾಡಬಹುದಾದ ಸಣ್ಣ ಕಾರ್ಡ್ ರೀಡರ್ ಅನ್ನು ಬಳಸಿಕೊಂಡು ಜನರು ಮತ್ತು ಮಾರಾಟಗಾರರು ಕ್ರೆಡಿಟ್ ಕಾರ್ಡ್ ಪಾವತಿಗಳನ್ನು ಸ್ವೀಕರಿಸಲು ಇದು ಸರಳವಾಗಿದೆ.


Click it and Unblock the Notifications