ಸೆಪ್ಟೆಂಬರ್ 2023 ರಲ್ಲಿ ದೇಶದಲ್ಲಿ ಜಿಎಸ್‌ಟಿ ಸಂಗ್ರಹವು ಬರೋಬ್ಬರಿ ಶೇಕಡ 10 ರಷ್ಟು ಏರಿಕೆಯಾಗಿ ಸಂಗ್ರಹ ಪ್ರಮಾಣ 1.62 ಲಕ್ಷ ಕೋಟಿ ರೂಪಾಯಿಗೆ ಜಿಗಿತ ಕಂಡಿದೆ. ಈ ನಡುವೆ ಯಾವ ರಾಜ್ಯದಲ್ಲಿ ಅತೀ ಅಧಿಕ ಜಿಎಸ್‌ಟಿ ಸಂಗ್ರಹ ಮಾಡಲಾಗಿದೆ ಎಂದು ನಾವು ನೋಡಿದಾಗ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ಮಹಾರಾಷ್ಟ್ರ ಕಾಣಿಸಿಕೊಂಡಿದೆ.
ಇನ್ನು ನಾವು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ಹಣಕಾಸು ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹಣೆಯಲ್ಲಿ ಅತೀ ಅಧಿಕ ಬೆಳವಣಿಗೆ ಕಂಡ ರಾಜ್ಯಗಳ ಪಟ್ಟಿಯಲ್ಲಿ ನೋಡಿದಾಗಲೂ ಕರ್ನಾಟಕ ಎರಡನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಮೂರು ಸ್ಥಾನದಲ್ಲಿ ಕ್ರಮವಾಗಿ ಮಧ್ಯಪ್ರದೇಶ, ಕರ್ನಾಟಕ ಮತ್ತು ಉತ್ತರ ಪ್ರದೇಶ ಕಾಣಿಸಿಕೊಂಡಿದೆ.

ಹೆಚ್ಚಿನ ಜನಸಂಖ್ಯೆ, ಹೆಚ್ಚಿನ ಕೊಳ್ಳುವ ಶಕ್ತಿ, ಮೊದಲಾದವುಗಳ ಆಧಾರದಲ್ಲಿ ಈ ಜಿಎಸ್‌ಟಿ ಬೆಳವಣಿಗೆ ಆಗುತ್ತದೆ. ಅಧಿಕ ಜಿಎಸ್‌ಟಿ ಸಂಗ್ರಹಣೆನ್ನು ಹೊಂದಿರುವ ಅಗ್ರ 15 ರಾಜ್ಯಗಳನ್ನು ಪರಿಶೀಲನೆ ಮಾಡಿದಾಗ, ಎಲ್ಲ ರಾಜ್ಯಗಳು ಮತ್ತು ಎಲ್ಲ ರಾಜ್ಯಾಡಳಿತ ಪ್ರದೇಶಗಳಿಂದ ಒಟ್ಟು ಜಿಎಸ್‌ಟಿ ಸಂಗ್ರಹವು ಶೇಕಡ 68ರಷ್ಟಿದೆ.
GST On Online Gaming: ಅಕ್ಟೋಬರ್ 1 ರಿಂದ ಆನ್‌ಲೈನ್ ಗೇಮಿಂಗ್ ಮೇಲೆ ಶೇ.28 ಜಿಎಸ್‌ಟಿ
ಮಧ್ಯಪ್ರದೇಶದಲ್ಲಿ ಜಿಎಸ್‌ಟಿ ಸಂಗ್ರಹದಲ್ಲಿ ಶೇಕಡ 21ರಷ್ಟು ಬೆಳವಣಿಗೆ ಕಂಡು ಬಂದಿದೆ. ಕರ್ನಾಟಕದಲ್ಲಿ ಶೇಕಡ 20 ರಷ್ಟು ಬೆಳವಣಿಗೆ ದಾಖಲಾಗಿದೆ. ಇನ್ನು ಉತ್ತರ ಪ್ರದೇದಲ್ಲಿ ಶೇಕಡ 19 ರಷ್ಟು ಜಿಎಸ್‌ಟಿ ಸಂಗ್ರಹಣೆ ದರ ಬೆಳವಣಿಗೆ ಕಂಡು ಬಂದಿದೆ. ಇನ್ನು ದೇಶದಲ್ಲೇ ಅಧಿಕ ಜಿಎಸ್‌ಟಿ ಸಂಗ್ರಹ ಮಾಡಿರುವ ರಾಜ್ಯವಾದ ಮಹಾರಾಷ್ಟ್ರದಲ್ಲಿ ಜಿಎಸ್‌ಟಿ ಸಂಗ್ರಹ ಬೆಳವಣಿಗೆ ದರ ಶೇಕರ 18ರಷ್ಟಿದೆ.
ತಮಿಳುನಾಡಿನಲ್ಲಿಯೂ ಜಿಎಸ್‌ಟಿ ಸಂಗ್ರಹ ದರವು ಶೇಕಡ 18ರಷ್ಟಿದೆ. ಅಚ್ಚರಿಯೆಂದರೆ, ಕೈಗಾರಿಕೆಯಲ್ಲಿ ಶ್ರೀಮಂತ ರಾಜ್ಯವೆಂದು ಗುರುತಿಸಲ್ಪಟ್ಟಿರುವ ಗುಜರಾತ್ ಜಿಎಸ್‌ಟಿ ಸಂಗ್ರಹದಲ್ಲಿ ಕೇವಲ ಶೇಕಡ 6 ರಷ್ಟು ಮಾತ್ರ ಬೆಳವಣಿಗೆ ಕಂಡು ಬಂದಿದೆ. ಆಂಧ್ರಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢ ಕೂಡ ಜಿಎಸ್‌ಟಿ ಸಂಗ್ರಹದಲ್ಲಿ ಒಂದೇ ಅಂಕಿಯ ಬೆಳವಣಿಗೆಯನ್ನು ದಾಖಲಿಸಿದೆ.
ದೇಶದಲ್ಲಿ ಜಿಎಸ್‌ಟಿ ಸಂಗ್ರಹ
ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು ಜಿಎಸ್‌ಟಿಯು ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್-ಜುಲೈನಲ್ಲಿ 5.10-ಲಕ್ಷ ಕೋಟಿ ರೂಪಾಯಿ ಆಗಿದೆ. ಕಳೆದ ಹಣಕಾಸು ವರ್ಷದಲ್ಲಿ ಇದೇ ಅವಧಿಯಲ್ಲಿ 4.42-ಲಕ್ಷ ಕೋಟಿ ರೂಪಾಯಿ ಜಿಎಸ್‌ಟಿ ಸಂಗ್ರಹವಾಗಿತ್ತು. ಇದಕ್ಕೆ ಹೋಲಿಕೆ ಮಾಡಿದಾಗ ಈ ವರ್ಷ ಸಂಗ್ರಹವು ಸುಮಾರು ಶೇಕಡ 15 ರಷ್ಟು ಏರಿಕೆ ಕಂಡಿದೆ.
ದೇಶದಲ್ಲಿ ಒಟ್ಟು ಜಿಎಸ್‌ಟಿ ಸಂಗ್ರಹವು ಸತತ ನಾಲ್ಕನೇ ಬಾರಿಗೆ ಹಣಕಾಸು ವರ್ಷ 2023-24ರಲ್ಲಿ 1.60 ಲಕ್ಷ ಕೋಟಿ ರೂಪಾಯಿ ಗಡಿಯನ್ನು ದಾಟಿದೆ. ಹಣಕಾಸು ವರ್ಷ 2023-24ರ ಮೊದಲಾರ್ಧದಲ್ಲಿ 9,92,508 ಕೋಟಿ ರೂಪಾಯಿ ಒಟ್ಟು ಜಿಎಸ್‌ಟಿ ಸಂಗ್ರಹವಾಗಿದ್ದು, ವರ್ಷದಿಂದ ವರ್ಷಕ್ಕೆ ಶೇಕಡ 11ರಷ್ಟು ಹೆಚ್ಚಳವನ್ನು ನಾವು ಕಾಣಬಹುದು.
ದಾಖಲೆ ಸಂಗ್ರಹ
ಮೌಲ್ಯದ ಲೆಕ್ಕಾಚಾರದಲ್ಲಿ ನಾವು ಜಿಎಸ್‌ಟಿ ಸಂಗ್ರಹಣೆಯನ್ನು ನೋಡಿದಾಗ ದಾಖಲೆ ಸಂಗ್ರಹವನ್ನು ನಾವು ಕಾಣಬಹುದಾಗಿದೆ. ಹೆಚ್ಚು ಜಿಎಸ್‌ಟಿ ಸಂಗ್ರಹವಾಗಿರುವ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದು, ಈ ರಾಜ್ಯದಲ್ಲಿ 1.09 ಲಕ್ಷ ಕೋಟಿ ರೂಪಾಯಿ ಜಿಎಸ್‌ಟಿ ಸಂಗ್ರಹವಾಗಿದೆ. ಇನ್ನು ಕರ್ನಾಟಕ ಎರಡನೇ ಸ್ಥಾನದಲ್ಲಿದ್ದು, ರಾಜ್ಯದಲ್ಲಿ 47,608 ಕೋಟಿ ರೂಪಾಯಿ ಸಂಗ್ರಹವಾಗಿದೆ.
ಮೂರನೇ ಸ್ಥಾನದಲ್ಲಿ ಗುಜರಾತ್ ಇದ್ದು, ಇಲ್ಲಿ 41,428 ಕೋಟಿ ರೂಪಾಯಿ ಜಿಎಸ್‌ಟಿ ಸಂಗ್ರಹವಾಗಿದೆ. ಇನ್ನು ಅದರ ನಂತರದ ಸ್ಥಾನದಲ್ಲಿ ತಮಿಳುನಾಡು ಮತ್ತು ಉತ್ತರ ಪ್ರದೇಶ ಕಾಣಿಸಿಕೊಂಡಿದ್ದು, ಈ ರಾಜ್ಯಗಳಲ್ಲಿ ಜಿಎಸ್‌ಟಿ ಸಂಗ್ರಹವು ಕ್ರಮವಾಗಿ 40,135 ಕೋಟಿ ರೂಪಾಯಿ ಮತ್ತು 34,694 ಕೋಟಿ ರೂಪಾಯಿ ಆಗಿದೆ.


Click it and Unblock the Notifications