ಕಳೆದ ವಾರ ಭಾರತದಲ್ಲಿ ಚಿನ್ನದ ದೇಶೀ ಬೆಲೆಯಲ್ಲಿ ಪ್ರತಿ ಔನ್ಸ್ ಗೆ (28.3495 ಗ್ರಾಮ್) $ 5 ಪ್ರೀಮಿಯಂ ವಿಧಿಸುತ್ತಿದ್ದದ್ದು, ಈ ವಾರ ಔನ್ಸ್ ಗೆ $ 1 ಪ್ರೀಮಿಯಂ ಇದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ದೇಶೀ ಚಿನ್ನದ ಬೆಲೆಯಲ್ಲಿ 12.5% ಆಮದು ಸುಂಕ, 3% GST ಒಳಗೊಂಡಿರುತ್ತದೆ. MCX ಫ್ಯೂಚರ್ಸ್ ನಲ್ಲಿ ಕಳೆದ ವಾರ ಪ್ರತಿ 10 ಗ್ರಾಮ್ ಚಿನ್ನದ ಬೆಲೆ 50,700 ರುಪಾಯಿ ಇತ್ತು.
ಈ ತಿಂಗಳು ದೀಪಾವಳಿ ಮತ್ತು ಧನ್ ತೇರಾಸ್ ಮುಂದಿನ ದಿನಗಳಲ್ಲಿ ನಡೆಯಲಿದ್ದು, ಆ ಹಿನ್ನೆಲೆಯಲ್ಲಿ ಆಭರಣ ಮಾಲೀಕರು ಒಡವೆಗಳ ಸಂಗ್ರಹ ಪ್ರಮಾಣ ಹೆಚ್ಚು ಮಾಡಿದ್ದಾರೆ. ಕಳೆದ ಆಗಸ್ಟ್ ನಲ್ಲಿ ಭಾರತದಲ್ಲಿ ಫ್ಯೂಚರ್ಸ್ ಮಾರ್ಕೆಟ್ ನಲ್ಲಿ ದಾಖಲೆಯ 56,200 ರುಪಾಯಿ ತಲುಪಿತ್ತು. ಆ ನಂತರ ಚಿನ್ನದ ಬೆಲೆ ಚಲನೆ ಕಳೆದುಕೊಂಡಿತ್ತು.

ಕಳೆದ ಶುಕ್ರವಾರ ಚಿನ್ನದ ಬೆಲೆ ಏರಿಕೆ ಕಂಡಿತ್ತು. ಇನ್ನೇನು ಯುಎಸ್ ಅಧ್ಯಕ್ಷೀಯ ಚುನಾವಣೆ ಮುಂದಿನ ವಾರ ಇದ್ದು ಡಾಲರ್ ಸ್ಥಿರವಾಗಿದೆ. ಮುಂದಿನ ವಾರ ನಡೆಯಲಿರುವ ಯುಎಸ್ ಅಧ್ಯಕ್ಷೀಯ ಚುನಾವಣೆ ಅನಿಶ್ಚಿತತೆ ಕಾರಣಕ್ಕೆ ಶುಕ್ರವಾರದಂದು ಚಿನ್ನದ ಬೆಲೆ ಏರಿದೆ. ಯುರೋಪ್ ನಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ಪ್ರಕರಣಗಳು ಮತ್ತು ಯುಎಸ್ ಡಾಲರ್ ಮೇಲಿನ ಹೂಡಿಕೆ ಸುರಕ್ಷಿತ ಎಂಬ ಭಾವನೆ ನೆಪದಲ್ಲಿ ಕಳೆದ ತಿಂಗಳು ಚಿನ್ನದ ಬೆಲೆ ಮೇಲೆ ಒತ್ತಡ ಕಂಡುಬಂತು.
ತಜ್ಞರ ಅಭಿಪ್ರಾಯದಂತೆ, ಕೊರೊನಾ ಆತಂಕ ಹಾಗೂ ಯುಎಸ್ ಅಧ್ಯಕ್ಷೀಯ ಚುನಾವಣೆ ಹಿನ್ನೆಲೆಯಲ್ಲಿ ಮುಂದಿನ ವಾರ ಚಿನ್ನ- ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಳಿತ ಆಗುವಂತಿದೆ. ಇನ್ನು ಇಟಿಎಫ್ ಹೂಡಿಕೆದಾರರು ಚಿನ್ನ ಯಾವ ದಿಕ್ಕಿನತ್ತ ಸಾಗಬಹುದು ಎಂಬುದರ ಕಡೆಗೆ ನೋಡುತ್ತಿದ್ದಾರೆ.


Click it and Unblock the Notifications