ಯುಎಸ್ ಅಧ್ಯಕ್ಷೀಯ ಚುನಾವಣೆಯನ್ನು ಇಡೀ ವಿಶ್ವ ಎದುರು ನೋಡುತ್ತಿರುವಾಗ ಭಾರತದ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಮಂಗಳವಾರ (ನವೆಂಬರ್ 3, 2020) ಚಿನ್ನ, ಬೆಳ್ಳಿ ಬೆಲೆಯಲ್ಲಿ ಇಳಿಕೆ ಆಗಿದೆ. MCXನಲ್ಲಿ ಚಿನ್ನದ ಫ್ಯೂಚರ್ಸ್ 0.22% ಇಳಿಕೆಯಾಗಿ, ಪ್ರತಿ 10 ಗ್ರಾಮ್ ಗೆ 50,953 ರುಪಾಯಿ ತಲುಪಿದೆ.
ಇನ್ನು ಬೆಳ್ಳಿ ಬೆಲೆಯಲ್ಲೂ ಇಳಿಕೆ ಕಂಡು, ಪ್ರತಿ ಕೇಜಿಗೆ 61,942ರಂತೆ ವಹಿವಾಟು ನಡೆಸಿದೆ. ಈ ಹಿಂದಿನ ಸೆಷನ್ ನಲ್ಲಿ ಚಿನ್ನ ಹಾಗೂ ಬೆಳ್ಳಿ ಎರಡೂ ಏರಿಕೆ ದಾಖಲಿಸಿತ್ತು. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಸ್ಥಿರವಾಗಿತ್ತು. ಅದಕ್ಕೂ ಮುನ್ನ ಈ ಹಿಂದಿನ ಸೆಷನ್ ನಲ್ಲಿ ತೀಕ್ಷ್ಣ ಏರಿಕೆ ದಾಖಲಿಸಿತ್ತು.
ಡಾಲರ್ ಮೌಲ್ಯ ತಿಂಗಳ ಗರಿಷ್ಠ ಮಟ್ಟ
ಸ್ಪಾಟ್ ಚಿನ್ನ ಸ್ವಲ್ಪ ಮಟ್ಟಿಗೆ ಬದಲಾವಣೆಯಾಗಿ, ಪ್ರತಿ ಔನ್ಸ್ ಗೆ (28.3495 ಗ್ರಾಮ್) $ 1,892.51 ಇದೆ. ಅಮೆರಿಕ ಅಧ್ಯಕ್ಷೀಯ ಚುನಾವಣೆ ಹಿನ್ನೆಲೆಯಲ್ಲಿ ಹೂಡಿಕೆದಾರರು ಬಹಳ ಎಚ್ಚರಿಕೆಯಿಂದ ವಹಿವಾಟು ನಡೆಸಿದ್ದಾರೆ. ಅಂದ ಹಾಗೆ ಡಾಲರ್ ಮೌಲ್ಯದಲ್ಲಿನ ಇಳಿಕೆಯಿಂದಾಗಿ ಚಿನ್ನಕ್ಕೆ ಬೆಂಬಲ ದೊರೆಯಿತು. ಡಾಲರ್ ಸೂಚ್ಯಂಕವು ಇತರ ಕರೆನ್ಸಿಗಳ ವಿರುದ್ಧ 0.14% ಇಳಿಕೆ ಆಗಿದ್ದು, ಸೋಮವಾರದಂದು ಒಂದು ತಿಂಗಳ ಗರಿಷ್ಠ ಮಟ್ಟವನ್ನು ಮುಟ್ಟಿತು. ಈ ಹಿಂದಿನ ಸೆಷನ್ ನಲ್ಲಿ ಚಿನ್ನದ ಬೆಲೆಯಲ್ಲಿ 1%ಗೂ ಹೆಚ್ಚು ಏರಿಕೆ ಕಂಡಿತ್ತು. ಬೆಲೆ ಬಾಳುವ ಲೋಹಗಳ ಪೈಕಿ ಬೆಳ್ಳಿ ದರವು 0.3% ಇಳಿಕೆಯಾಗಿ, ಪ್ರತಿ ಔನ್ಸ್ ಗೆ $23.97 ತಲುಪಿದೆ. ಇನ್ನು ಪ್ಲಾಟಿನಂ ಔನ್ಸ್ ಗೆ 0.3% ಇಳಿದು, $ 856.04 ತಲುಪಿದ್ದು, ಪಲಾಡಿಯಂ 0.2% ಏರಿಕೆ ಕಂಡು, $2,216.45ರಲ್ಲಿ ವಹಿವಾಟು ನಡೆಸಿದೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆ ಕದನ ಕಣ ಬಿಗಿ
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಅಭ್ಯರ್ಥಿ ಜೋ ಬಿಡೆನ್ ಸ್ಪರ್ಧೆಯ ಮುಂಚೂಣಿಯಲ್ಲಿ ಇದ್ದಾರೆ. ಆದರೂ ಕದನ ಕಣ ಬಿಗಿಯಾದ ಸ್ಪರ್ಧೆಯಿಂದ ಕೂಡಿದೆ. ಹೂಡಿಕೆದಾರರು ಅಂದಾಜು ಮಾಡುವಂತೆ, ಇನ್ನೂ ಕೆಲ ಸಮಯ ಸ್ಪಷ್ಟ ವಿಜೇತರು ಅಂತಿಮವಾಗುವುದು ಕಷ್ಟವಿದೆ. ಆದ್ದರಿಂದ ಈ ಬೆಳವಣಿಗೆಯು ಮಾರುಕಟ್ಟೆ ಮೇಲೆ ಏನು ಪರಿಣಾಮ ಬೀರುತ್ತದೆ ಎಂದು ಎದುರು ನೋಡುತ್ತಿದ್ದಾರೆ. ಅಂದ ಹಾಗೆ ಇಲ್ಲಿಯ ತನಕ, ಈ ವರ್ಷದಲ್ಲಿ ಚಿನ್ನದ ಬೆಲೆಯು ಇಪ್ಪತ್ನಾಲ್ಕು ಪರ್ಸೆಂಟ್ ಏರಿಕೆ ದಾಖಲಿಸಿದೆ. ಕೊರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ವಿವಿಧ ಸರ್ಕಾರಗಳು ಹಾಗೂ ದೇಶದಲ್ಲಿ ಘೋಷಣೆಯಾದ ಆರ್ಥಿಕ ಉತ್ತೇಜನ ಪ್ಯಾಕೇಜ್ ನಿಂದಾಗಿ ಚಿನ್ನದ ಬೆಲೆ ಹೆಚ್ಚಳಕ್ಕೆ ಕಾರಣವಾಯಿತು.
ಕೊರೊನಾ ಲಾಕ್ ಡೌನ್ ಮತ್ತೆ ಘೋಷಣೆ ಸಾಧ್ಯತೆ
ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶದ ಕಡೆಗೆ ಕಣ್ಣಿದೆ. ಇನ್ನು ಯುಕೆ, ಫ್ರಾನ್ಸ್ ನಲ್ಲಿ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, ದೇಶದಾದ್ಯಂತ ಸಂಪೂರ್ಣ ಲಾಕ್ ಡೌನ್ ಕರೆ ನೀಡುವ ಸಾಧ್ಯತೆ ಇದೆ. ಇನ್ನು ಟ್ರೇಡರ್ ಗಳು ಎಫ್ ಒಎಂಸಿ ಸಭೆ ಕಡೆಗೂ ಗಮನಿಸುತ್ತಿದ್ದಾರೆ. ಆದ್ದರಿಂದ ಇಷ್ಟೆಲ್ಲ ಬೆಳವಣಿಗೆಗಳು ಇರುವ ವಾರದಲ್ಲಿ ಚಿನ್ನದ ಬೆಲೆಗೆ ಬೆಂಬಲ ದೊರೆಯುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ. ಇನ್ನು ಮುಂದಿನ ವಾರ ಫೆಡ್ ಸಭೆ ಇದೆ. ಬುಧವಾರದಂದು ಫೆಡರಲ್ ಓಪನ್ ಮಾರ್ಕೆಟ್ ಕಮಿಟಿಯ ಎರಡು ದಿನದ ಸಭೆ ಆರಂಭವಾಗಲಿದೆ. ಕೊರೊನಾದಿಂದ ಸಂಕಷ್ಟಕ್ಕೆ ಈಡಾಗಿರುವ ಆರ್ಥಿಕತೆ ಹಿನ್ನೆಲೆಯಲ್ಲಿ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಮಾಡುವ ಸಾಧ್ಯತೆ ಇಲ್ಲ. ಇನ್ನು ಇಟಿಎಫ್ ಹೂಡಿಕೆದಾರರು ಕೂಡ ಯುಎಸ್ ಚುನಾವಣೆಯನ್ನು ಕಾದು ನೋಡುತ್ತಿದ್ದಾರೆ. ವಿಶ್ವದ ಅತಿ ದೊಡ್ಡ ಚಿನ್ನದ ಇಟಿಎಫ್ ಹೋಲ್ಡಿಂಗ್ಸ್ ಎಸ್ ಪಿಡಿಆರ್ ಗೋಲ್ಡ್ ಟ್ರಸ್ಟ್ ಸೋಮವಾರದಂದು 0.14% ಇಳಿಕೆಯಾಗಿ, ಸೋಮವಾರ 1,255.92 ಟನ್ ತಲುಪಿದೆ. ಶುಕ್ರವಾರ 1,257.67 ಟನ್ ಇತ್ತು.


Click it and Unblock the Notifications