ಏರ್ ಇಂಡಿಯಾ ಸಂಸ್ಥೆಯು ತಮ್ಮ ಸಿಬ್ಬಂದಿಗಳಿಗೆ ಆಫರ್ ಒಂದನ್ನು ನೀಡಿದೆ. ಸಿಬ್ಬಂದಿಗಳಿಗೆ ಸ್ವಯಂ ನಿವೃತ್ತಿ ಪಡೆಯುವ ಆಫರ್ ಅನ್ನು ಶುಕ್ರವಾರ ಏರ್ ಇಂಡಿಯಾ ನೀಡಿದೆ. ಟಾಟಾ ಗ್ರೂಪ್ ಕಳೆದ ವರ್ಷ 2022ರ ಜನವರಿಯಲ್ಲಿ ನಷ್ಟದಲ್ಲಿ ಏರ್ ಇಂಡಿಯಾವನ್ನು ಖರೀದಿ ಮಾಡಿದೆ. ಇದಾದ ಬಳಿಕ ಎರಡನೇ ಬಾರಿಗೆ ಟಾಟಾ ಗ್ರೂಪ್ ಏರ್ ಇಂಡಿಯಾದ ವಿಮಾನದಲ್ಲಿರುವ ಸಿಬ್ಬಂದಿಗಳನ್ನು ಹೊರತುಪಡಿಸಿ ಇತರೆ ಸಿಬ್ಬಂದಿಗಳಿಗೆ ಸ್ವಯಂ ನಿವೃತ್ತಿ ಪಡೆಯುವ ಆಫರ್ ಅನ್ನು ನೀಡಿದೆ.
40 ವರ್ಷ ವಯಸ್ಸಿನವರು ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಪರ್ಮನೆಂಟ್ ಜನರಲ್ ಕ್ಯಾಡೇಟ್ ಆಫೀಸರ್‌ಗಳಿಗೆ ಈ ಆಫರ್ ಅನ್ನು ನೀಡಲಾಗಿದೆ. ಹಾಗೆಯೇ ಈ ಸಿಬ್ಬಂದಿಗಳು ಏರ್‌ಲೈನ್‌ನಲ್ಲಿ ಕನಿಷ್ಠ 5 ವರ್ಷಗಳ ಸೇವೆಯನ್ನು ಸಲ್ಲಿಸಿರಬೇಕು ಎಂಬುವುದನ್ನು ಹೇಳಿಕೆಯಲ್ಲಿ ತಿಳಿಸಲಾಗಿದೆ. ಈ ಆಫರ್ ಏಪ್ರಿಲ್ 30ರವರೆಗೆ ಇರಲಿದೆ. ಈ ಸ್ವಯಂ ನಿವೃತ್ತಿ ಪಡೆಯುವ ಆಫರ್ ಅನ್ನು ಒಟ್ಟಾಗಿ 2,100 ಉದ್ಯೋಗಿಗಳು ಹೊಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಪ್ರಸ್ತುತ ಏರ್ ಇಂಡಿಯಾದಲ್ಲಿ ಒಟ್ಟು 11,000 ಮಂದಿ ಸಿಬ್ಬಂದಿಗಳು ಇದ್ದಾರೆ.

ಈ ಹಿಂದೆ ಏರ್ ಇಂಡಿಯಾ ಆಫರ್ ನೀಡಿದ್ದು ಯಾವಾಗ?
ಜೂನ್ 2022ರಲ್ಲಿ ಮೊದಲ ಬಾರಿಗೆ ಏರ್‌ಇಂಡಿಯಾ ಸ್ವಯಂ ನಿವೃತ್ತಿ ಪಡೆಯುವ ಆಫರ್ ನೀಡಿದೆ. ಅದುವೇ ಮೊದಲ ಹಂತದ ಆಫರ್ ಆಗಿದೆ. ಅದಾದ ಬಳಿಕ ಮಾರ್ಚ್ 17ರಂದು ಈ ಆಫರ್ ನೀಡಲಾಗಿದೆ. ಇತರೆ ಖಾಯಂ ಸಿಬ್ಬಂದಿಗಳಿಗೂ ಸ್ವಯಂ ನಿವೃತ್ತಿ ಪಡೆಯುವ ಆಯ್ಕೆಯನ್ನು ನೀಡಬೇಕು ಎಂಬುವುದು ಉದ್ಯೋಗಿಗಳ ಮನವಿಯಾಗಿದೆ. ಈ ಮನವಿಗೆ ಪ್ರತಿಕ್ರಿಯೆಯಾಗಿ ಏರ್ ಇಂಡಿಯಾವು ಎರಡನೇ ಬಾರಿಗೆ ಸ್ವಯಂ ನಿವೃತ್ತಿ ಪಡೆಯುವ ಆಯ್ಕೆಯನ್ನು ನೀಡಿದೆ.
ಈ ಬಗ್ಗೆ ಮಾಹಿತಿ ನೀಡಿದ ಏರ್‌ಲೈನ್ಸ್‌ನ ಹೆಚ್‌ಆರ್ ಸುರೇಶ್ ದತ್ತ ತ್ರಿಪಾಠಿ, "ಸ್ವಯಂ ನಿವೃತ್ತಿ ಪಡೆಯುವ ಆಯ್ಕೆಯ ಬಗ್ಗೆ ನಾವು ಸಿಬ್ಬಂದಿಗಳಿಗೆ ಶುಕ್ರವಾರವೇ ಮಾಹಿತಿ ನೀಡಿದ್ದೇವೆ," ಎಂದು ತಿಳಿಸಿದ್ದಾರೆ. "ಮಾರ್ಚ್ 17, 2023ರಿಂದ ಏಪ್ರಿಲ್ 2023ರ ಅವಧಿಯಲ್ಲಿ ಸ್ವಯಂ ನಿವೃತ್ತಿಗೆ ಯಾವ ಉದ್ಯೋಗಿ ಅರ್ಜಿ ಸಲ್ಲಿಕೆ ಮಾಡುತ್ತಾರೋ, ಅವರಿಗೆ ಕೃತಜ್ಞತಾ ಮೊತ್ತವು ಕೂಡಾ ಲಭ್ಯವಾಗಲಿದೆ," ಎಂದು ಸಂಸ್ಥೆಯು ಮಾಹಿತಿ ನೀಡಿದೆ.
"ಮಾರ್ಚ್ 17 , 2023ರಿಂದ ಏಪ್ರಿಲ್ 30ರವರೆಗಿನ ಈ ಸ್ವಯಂ ನಿವೃತ್ತಿ ಪಡೆಯುವ ಆಫರ್ ಅನ್ನು ಒಪ್ಪಿಕೊಂಡವರಿಗೆ ಸಂಭಾವನೆಯಾಗಿ 1 ಲಕ್ಷ ರೂಪಾಯಿ ನೀಡಲಾಗುತ್ತದೆ," ಎಂದು ಕೂಡಾ ತಿಳಿಸಲಾಗಿದೆ. ಮೊದಲ ಹಂತದ ಸ್ವಯಂ ನಿವೃತ್ತಿಯಲ್ಲಿ ವಿಮಾನದ ಒಳಗೆ ಕಾರ್ಯನಿರ್ಹಹಣೆ ಮಾಡುವವರು, ಹೊರಗೆ ಮಾಡುವವರನ್ನು ಒಳಗೊಂಡಿತ್ತು. ಆ ಸಂದರ್ಭದಲ್ಲಿ ಒಟ್ಟು 4200 ಮಂದಿ ಅರ್ಹರಾಗಿದ್ದರು. ಆ ಪೈಕಿ 1500 ಮಂದಿ ಆಫರ್ ಅನ್ನು ಒಪ್ಪಿಕೊಂಡಿದ್ದರು.
ಇನ್ನು ಈ ಬಗ್ಗೆ ಮಾಹಿತಿ ನೀಡಿದ ಏರ್‌ಇಂಡಿಯಾ ಸಿಇಒ ಕ್ಯಾಂಪ್‌ಬೆಲ್ ವಿಲ್ಸನ್, "ಕಳೆದ ಬಾರಿ ಏರ್ ಇಂಡಿಯಾ ಸಿಬ್ಬಂದಿಗಳಲ್ಲಿ 40 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಸ್ವಯಂ ನಿವೃತ್ತಿ ಪಡೆಯುವ ಆಯ್ಕೆಯನ್ನು ಸಂಸ್ಥೆಯು ನೀಡಿತ್ತು. ಇದಾದ ಬಳಿಕ ಹಲವಾರು ಮಂದಿ ಈ ಆಫರ್ ಅನ್ನು ಮತ್ತೆ ಆರಂಭ ಮಾಡಲಾಗುತ್ತದೆಯೇ ಎಂದು ಕೇಳಿದ್ದರು. ಇತರೆ ಸ್ಟಾಫ್‌ಗಳಿಗೂ ಈ ಆಫರ್ ನೀಡಲಾಗುತ್ತದೆಯೇ ಎಂದು ಕೂಡಾ ಪ್ರಶ್ನಿಸಲಾಗಿತ್ತು. ಇಂದು ನಾವು ಎರಡನೇ ಹಂತದ ಸ್ವಯಂ ನಿವೃತ್ತಿ ಆಯ್ಕೆಯನ್ನು ಘೋಷಣೆ ಮಾಡುತ್ತಿದ್ದೇವೆ," ಎಂದು ತಿಳಿಸಿದ್ದಾರೆ.


Click it and Unblock the Notifications