ಭಾರತದ ಕೋರ್ಟ್ ನಿಂದ ಅಲಿಬಾಬ ಹಾಗೂ ಅದರ ಸ್ಥಾಪಕ ಜಾಕ್ ಮಾ ಅವರಿಗೆ ಸಮನ್ಸ್ ನೀಡಲಾಗಿದೆ. ಭಾರತದಲ್ಲಿನ ಮಾಜಿ ಉದ್ಯೋಗಿಯೊಬ್ಬರನ್ನು ತಪ್ಪಾದ ಕಾರಣಗಳಿಗಾಗಿ ಕೆಲಸದಿಂದ ಕಿತ್ತುಹಾಕಿರುವುದಾಗಿ ತಿಳಿಸಿದ್ದು, ಕಂಪೆನಿಯ ಅಪ್ಲಿಕೇಷನ್ ನಲ್ಲಿ ಸೆನ್ಸಾರ್ ಷಿಪ್ ಮಾಡಿದ್ದನ್ನು ಹಾಗೂ ಸುಳ್ಳು ಸುದ್ದಿಯನ್ನು ಆಕ್ಷೇಪಿಸಿದ್ದಕ್ಕಾಗಿ ಹೀಗೆ ಮಾಡಲಾಗಿದೆ ಎಂದು ದಾವೆ ಹೂಡಿದ್ದಾರೆ ಎಂಬ ದಾಖಲೆಯು ರಾಯಿಟರ್ಸ್ ಗಮನಕ್ಕೆ ಬಂದಿದೆ.
ಅಲಿಬಾಬದ ಯು.ಸಿ. ನ್ಯೂಸ್, ಬ್ರೌಸರ್ ಸೇರಿದಂತೆ ಇತರ 57 ಅಪ್ಲಿಕೇಷನ್ ಗಳನ್ನು ಭಾರತ ನಿಷೇಧಿಸಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ಈ ನಿಷೇಧವನ್ನು ಚೀನಾ ಟೀಕಿಸಿದರೆ, ಭಾರತವು ಈ ಕಂಪೆನಿಗಳಿಂದ ಲಿಖಿತ ಉತ್ತರ ಕೇಳಿತ್ತು. ಮಾಹಿತಿಯನ್ನು ಸೆನ್ಸಾರ್ ಮಾಡಲಾಗಿದೆಯಾ ಅಥವಾ ಯಾವುದಾದರೂ ವಿದೇಶೀ ಕಂಪೆನಿಗಳ ಪರವಾಗಿ ಕೆಲಸ ಮಾಡಿದೆಯಾ ಎಂದು ಕೇಳಲಾಗಿತ್ತು.
ಜುಲೈ 20ನೇ ತಾರೀಕು ಕೋರ್ಟ್ ನಲ್ಲಿ ಪ್ರಕರಣ ದಾಖಲಾಗಿದೆ. ಅಲಿಬಾಬದ ಯುಸಿ ವೆಬ್ ಮಾಜಿ ಉದ್ಯೋಗಿ ಪುಷ್ಪಂದ್ರ ಸಿಂಗ್ ಪರ್ಮರ್, ಯಾವ ವಿಷಯ ಚೀನಾಗೆ ವ್ಯತಿರಿಕ್ತವಾಗಿರುತ್ತದೋ ಅಂಥದ್ದನ್ನು ಯು.ಸಿ. ಬ್ರೌಸರ್ ಹಾಗೂ ಯು.ಸಿ. ನ್ಯೂಸ್ ನಲ್ಲಿ ಸೆನ್ಸಾರ್ ಮಾಡಲಾಗಿದೆ. ಸಾಮಾಜಿಕ ಹಾಗೂ ರಾಜಕೀಯ ಬಿಕ್ಕಟ್ಟು ಸೃಷ್ಟಿಸಲು ತಪ್ಪಾದ ಸುದ್ದಿ ತೋರಿಸಲಾಗಿದೆ ಎಂದು ಆರೋಪ ಮಾಡಿದ್ದಾರೆ.
30 ದಿನದೊಳಗಾಗಿ ಲಿಖಿತ ಪ್ರತಿಕ್ರಿಯೆ ನೀಡುವಂತೆ ಸೂಚನೆ
ಗುರುಗ್ರಾಮ್ ಜಿಲ್ಲಾ ಕೋರ್ಟ್ ನಲ್ಲಿ ಸಿವಿಲ್ ನ್ಯಾಯಾಧೀಶರಾದ ಸೋನಿಯಾ ಶಿಯೋಕಂದ್ ಅವರು ಅಲಿಬಾಬ ಹಾಗೂ ಜಾಕ್ ಮಾ ಅವರಿಗೆ ಸಮನ್ಸ್ ನೀಡಿದ್ದಾರೆ. ಹತ್ತಕ್ಕೂ ಹೆಚ್ಚು ಮಂದಿ ಅಥವಾ ಕಂಪೆನಿ ಘಟಕಗಳು ಅವರನ್ನು ಕೋರ್ಟ್ ಮುಂದೆ ಹಾಜರಾಗುವಂತೆ ಅಥವಾ ವಕೀಲರ ಮೂಲಕ ಜುಲೈ 29ನೇ ತಾರೀಕು ಸಂಪರ್ಕಿಸುವಂತೆ ಸಮನ್ಸ್ ನೀಡಲಾಗಿದೆ ಎಂದು ಕೋರ್ಟ್ ದಾಖಲೆಗಳಿಂದ ತಿಳಿದುಬಂದಿದೆ. ಸಮನ್ಸ್ ಗೆ 30 ದಿನದೊಳಗಾಗಿ ಲಿಖಿತ ಪ್ರತಿಕ್ರಿಯೆ ನೀಡುವಂತೆ ನ್ಯಾಯಾಧೀಶರು ಕಂಪೆನಿ ಹಾಗೂ ಅಧಿಕಾರಿಗಳಿಗೆ ಕೇಳಿದ್ದಾರೆ. ಯು.ಸಿ. ಇಂಡಿಯಾದಿಂದ ಮಾತನಾಡಿ, ಭಾರತದ ಮಾರುಕಟ್ಟೆ ಹಾಗೂ ಸ್ಥಳೀಯ ಸಿಬ್ಬಂದಿಯ ಹಿತರಕ್ಷಣೆಗೆ ಬದ್ಧವಾಗಿದೆ. ಸ್ಥಳೀಯ ಸುದ್ದಿ ನಿಯಮಗಳಿಗೆ ಬದ್ಧರಾಗಿದ್ದೇವೆ. ಈಗಿನ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆ ನೀಡಲು ಆಗಲ್ಲ ಎಂದಿದೆ.
2,68,000 USD ಹಾನಿಯನ್ನು ಕಟ್ಟಿಕೊಡುವಂತೆ ಕೇಳಿದ್ದಾರೆ
ಗುರುಗ್ರಾಮದಲ್ಲಿ ಇರುವ ಯು.ಸಿ.ವೆಬ್ ಕಚೇರಿಯಲ್ಲಿ 2017ರ ಅಕ್ಟೋಬರ್ ತನಕ ಸಹಾಯಕ ನಿರ್ದೇಶಕರಾಗಿ ಪರ್ಮರ್ ಕೆಲಸ ಮಾಡಿದ್ದರು. 2,68,000 USD ಹಾನಿಯನ್ನು ಕಟ್ಟಿಕೊಡುವಂತೆ ಕೇಳಿಕೊಂಡಿದ್ದಾರೆ. ಆದರೆ ಇದು ನ್ಯಾಯಾಂಗ ವ್ಯಾಪ್ತಿಗೆ ಬರುವ ಕಾರಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಪರ್ಮರ್ ಪರ ವಕೀಲರು ತಿಳಿಸಿದ್ದಾರೆ. ನಿಷೇಧಕ್ಕೆ ಗುರಿಯಾಗುವ ಮುನ್ನ ಯು.ಸಿ. ಬ್ರೌಸರ್ ಭಾರತದಲ್ಲಿ 68.9 ಕೋಟಿ ಬಾರಿ ಡೌನ್ ಲೋಡ್ ಆಗಿದೆ. ಇನ್ನು ಯು.ಸಿ. ನ್ಯೂಸ್ 7.98 ಕೋಟಿ ಬಾರಿ ಡೌನ್ ಲೋಡ್ ಆಗಿದೆ. ಅದರಲ್ಲಿ 2017 ಹಾಗೂ 2018ರಲ್ಲೇ ಹೆಚ್ಚು ಡೌನ್ ಲೋಡ್ ಆಗಿದೆ ಎಂದು ಸೆನ್ಸಾರ್ ಟವರ್ ದತ್ತಾಂಶಗಳಿಂದು ತಿಳಿದುಬರುತ್ತದೆ
ಸುಳ್ಳು ಸುದ್ದಿ ಪ್ರಕಟಿಸಿದೆ ಎಂಬ ಆರೋಪ
ಇನ್ನೂರಕ್ಕೂ ಹೆಚ್ಚು ಪುಟಗಳಲ್ಲಿ ಮಾಹಿತಿಯನ್ನು ಕೋರ್ಟ್ ಗೆ ಸಲ್ಲಿಸಲಾಗಿದೆ. ಅದರಲ್ಲಿ ಯು.ಸಿ. ನ್ಯೂಸ್ ಅಪ್ಲಿಕೇಷನ್ ನಲ್ಲಿ ಸುಳ್ಳು ಸುದ್ದಿ ಮಾಡಲಾಗಿತ್ತು ಎಂದು ಆರೋಪಿಸಿಲಾಗಿದ್ದನ್ನು ಪರ್ಮರ್ ಕೆಲವು ಪೋಸ್ಟ್ ಗಳ ಕ್ಲಿಪ್ಪಿಂಗ್ ಸೇರಿಸಿದ್ದಾರೆ. ಒಂದು ಪೋಸ್ಟ್ 2017ರಲ್ಲಿ ಹಿಂದಿಯಲ್ಲಿ ಪ್ರಕಟಿಸಲಾಗಿದ್ದು "2000 ರುಪಾಯಿ ನೋಟು ಇಂದು ಮಧ್ಯರಾತ್ರಿಯಿಂದ ನಿಷೇಧ" ಎಂದಿದೆ. 2018ರಲ್ಲಿ "ಇದೀಗ ಬಂದ ಸುದ್ದಿ: ಭಾರತ ಹಾಗೂ ಪಾಕಿಸ್ತಾನ ಮಧ್ಯೆ ಯುದ್ಧ ಆರಂಭ" ಎಂದು ಬಂದಿದೆ. ಎರಡು ದೇಶಗಳ ಮಧ್ಯದ ವಿವಾದಿತ ಗಡಿಯಲ್ಲಿ ಗುಂಡಿನ ಚಕಮಕಿ ಎಂದು ಸಹ ಇದೆ.
ಯಾವುದೇ ಪ್ರತಿಕ್ರಿಯೆ ನೀಡಿಲ್ಲ
ಕೋರ್ಟ್ ನಲ್ಲಿ ಸಲ್ಲಿಸಿರುವ ಮಾಹಿತಿಯ ಸತ್ಯಾಸತ್ಯತೆ ಬಗ್ಗೆ ರಾಯಿಟರ್ಸ್ ನಿಂದ ಪರಿಶೀಲನೆ ಮಾಡಿಲ್ಲ. ಭಾರತವು 2000 ರುಪಾಯಿ ನೋಟು ನಿಷೇಧಿಸಲಿಲ್ಲ. 2018ರಲ್ಲಿ ಭಾರತ ಮತ್ತು ಪಾಕಿಸ್ತಾನ ಮಧ್ಯೆ ಯುದ್ಧ ನಡೆಯಲಿಲ್ಲ. ಇನ್ನು ಕಾನೂನು ದಾವೆಯಲ್ಲಿ ಕೆಲವು "ಸೂಕ್ಷ್ಮ ಪದಗಳ ಪಟ್ಟಿ"ಯನ್ನು ಹಿಂದಿ, ಇಂಗ್ಲಿಷ್ ನಲ್ಲಿ ಕೀ ವರ್ಡ್ಸ್ ಆಗಿ ಬಳಸಿದ್ದನ್ನು ಹಾಗೂ ಇಂಡಿಯಾ- ಚೀನಾ ಬಾರ್ಡರ್, ಸೈನೋ ಇಂಡಿಯಾ ವಾರ್ ಇಂಥ ಪದಗಳನ್ನು ಬಳಸಿದ್ದ ಸುದ್ದಿಯನ್ನು ಯುಸಿ ವೆಬ್ ಬ್ರೌಸರ್ ನ ಭಾರತದ ಪ್ಲಾಟ್ ಫಾರ್ಮ್ ನಲ್ಲಿ ಸೆನ್ಸಾರ್ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಯಾವುದೇ ಸುದ್ದಿ ಅಥವಾ ವಿಷಯ ಚೀನಾಗೆ ವಿರುದ್ಧವಾಗಿದ್ದಲ್ಲಿ ತಾನಾಗಿಯೇ ಮತ್ತು ಕೆಲವು ಸಲ ಮ್ಯಾನ್ಯುಯಲ್ ಆಗಿ ತಿರಸ್ಕೃತ ಆಗುತ್ತಿದ್ದವು ಎನ್ನಲಾಗಿದೆ. ಇನ್ನು ಈ ಪ್ರಕರಣ ಬಗ್ಗೆ ದೆಹಲಿಯಲ್ಲಿ ಇರುವ ಚೀನಾ ರಾಯಭಾರ ಕಚೇರಿ, ಬೀಜಿಂಗ್ ನಲ್ಲಿನ ಚೀನಾ ವಿದೇಶಾಂಗ ಸಚಿವಾಲಯ ಹಾಗೂ ನವದೆಹಲಿಯಲ್ಲಿನ ಐ.ಟಿ. ಸಚಿವಾಲಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.


Click it and Unblock the Notifications