ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಆಗ- ಈಗ ಬದಲಾವಣೆ ಆಗುತ್ತಲೇ ಇರುತ್ತದೆ. ಬಿಲ್ ಗೇಟ್ಸ್ ಇದ್ದ ನಂಬರ್ ಒನ್ ಸ್ಥಾನಕ್ಕೆ ಈಗ ಜೆಫ್ ಬೆಜೋಸ್. ನಾಳೆ ಇನ್ಯಾರೋ? ಬಲ್ಲವರು ಯಾರು? ಆದರೆ ಸಾರ್ವಕಾಲಿಕ ಶ್ರೀಮಂತನೊಬ್ಬನ ಬಗ್ಗೆ ತಿಳಿದುಕೊಳ್ಳುವ ಕುತೂಹಲಕ್ಕೆ ಹುಡುಕಾಡಿದಾಗ ಸಿಕ್ಕ ಮಾಹಿತಿ ಇದು. ಆತನ ಶ್ರೀಮಂತಿಕೆ ಎಷ್ಟಿತ್ತು ಎಂಬುದನ್ನು ಇವತ್ತಿಗೆ ಅಂದಾಜು ಮಾಡಲು ಕೂಡ ಸಾಧ್ಯವಿಲ್ಲ ಅನ್ನೋರೇ ಹೆಚ್ಚು.
ಆದರೂ ಕೆಲವರು ಆ ಪ್ರಯತ್ನ ಮಾಡಿದ್ದಾರೆ. ಸಾರ್ವಕಾಲಿಕ ಶ್ರೀಮಂತ ಎಂಬ ಕಿರೀಟ ಹೊತ್ತ ವ್ಯಕ್ತಿ ಮನ್ಸ ಮೂಸಾ. ಆತ ಹದಿನಾಲ್ಕನೇ ಶತಮಾನದಲ್ಲಿ ಪಶ್ಚಿಮ ಆಫ್ರಿಕಾದ ಒಬ್ಬ ರಾಜ. ಆತ ವಿಪರೀತ ಅಂದರೆ ವಿಪರೀತ ಶ್ರೀಮಂತನಾಗಿದ್ದ. ಆತನ ಉದಾರತೆಯಿಂದ ಕೊನೆಗೆ ಇಡೀ ದೇಶವೇ ಆರ್ಥಿಕ ಸಮಸ್ಯೆಗೆ ಸಿಲುಕಿಕೊಂಡಿತು.
ಮನ್ಸ ಮೂಸಾನ ಶ್ರೀಮಂತಿಕೆಯನ್ನು ಯಾರ ಜತೆಗೂ ಹೋಲಿಸುವುದಕ್ಕೆ ಸಾಧ್ಯವೇ ಇಲ್ಲ ಎನ್ನುತ್ತಾರೆ ಇತಿಹಾಸಕಾರರು. ಆದರೆ 2012ರಲ್ಲಿ ಯು.ಎಸ್. ವೆಬ್ ಸೈಟ್ ವೊಂದು ಅಂದಾಜು ಮೊತ್ತವನ್ನು ಪ್ರಕಟಿಸಿತ್ತು. ಅದು ಎಷ್ಟು ಗೊತ್ತಾ? $ 400 ಬಿಲಿಯನ್. 40 ಸಾವಿರ ಕೋಟಿ ಅಮೆರಿಕನ್ ಡಾಲರ್. ಆದರೆ ಕೆಲವು ಆರ್ಥಶಾಸ್ತ್ರ ಇತಿಹಾಸಕಾರರ ಪ್ರಕಾರ, ಮೂಸಾನ ಸಂಪತ್ತನ್ನು ಸಂಖ್ಯೆಗಳಲ್ಲಿ ತೆರೆದಿಡಲು ಸಾಧ್ಯವಿಲ್ಲ.
ಮನ್ಸ ಮೂಸಾ ಹುಟ್ಟಿದ್ದು 1280ರಲ್ಲಿ. ಒಂದು ರಾಜ ಕುಟುಂಬದಲ್ಲಿ. ಆತನ ಸೋದರ ಮನ್ಸ ಅಬು-ಬಕರ್ 1312ರ ತನಕ ಆಳ್ವಿಕೆ ಮಾಡಿ, ಸಾಮ್ರಾಜ್ಯ ವಿಸ್ತರಣೆಗಾಗಿ ತೆರಳಿದವನು ವಾಪಸಾಗಲೇ ಇಲ್ಲ. ಕೆಲವು ಇತಿಹಾಸಕಾರರ ಪ್ರಕಾರ, ಅಬು- ಬಕರ್ ದಕ್ಷಿಣ ಅಮೆರಿಕವನ್ನು ತಲುಪಿಕೊಂಡ. ಆದರೆ ಆ ವಾದಕ್ಕೆ ಯಾವ ಸಾಕ್ಷ್ಯವೂ ಇಲ್ಲ.
ವಿಶ್ವದ ಒಟ್ಟು ಚಿನ್ನದ ನಿಕ್ಷೇಪದಲ್ಲಿ ಅರ್ಧದಷ್ಟು ಮಾಲಿಯಲ್ಲಿತ್ತು
ಯಾವ ಸಾಮ್ರಾಜ್ಯ ಅಬು- ಬಕರ್ ಬಿಟ್ಟು ಹೋದನೋ ಆ ಸಾಮ್ರಾಜ್ಯದ ಹೊಣೆ ಈಗ ಮೂಸಾ ಪಾಲಿಗೆ ಬಂತು. ಆತನ ಆಳ್ವಿಕೆಯಲ್ಲಿ ಮಾಲಿ ಅದ್ಭುತವಾದ ಬೆಳವಣಿಗೆ ಸಾಧಿಸಿತು. ಆ ಸಾಮ್ರಾಜ್ಯಕ್ಕೆ ಟಿಂಬಕ್ಟು ಸೇರಿದಂತೆ ಇಪತ್ನಾಲ್ಕು ನಗರಗಳನ್ನು ಆತ ಸೇರ್ಪಡೆ ಮಾಡಿಕೊಂಡ. ಮುಸಾನ ಸಾಮ್ರಾಜ್ಯ ಎರಡು ಸಾವಿರ ಮೈಲಿಯಷ್ಟು ವ್ಯಾಪಿಸಿತ್ತು. ಅಟ್ಲಾಂಟಿಕ್ ಸಾಗರದಿಂದ ಈಗಿನ ನೈಜರ್ ತನಕ ಹಬ್ಬಿತ್ತು. ಈಗಿನ ಸೆನಗಲ್, ಮಾರಿಷಿಯಾನಿಯಾ, ಮಾಲಿ, ಬುರ್ಕಿನಾ ಫಾಸೋ, ನೈಜರ್, ದ ಜಾಂಬಿಯಾ, ಗಿನಿಯಾ- ಬಿಸಾಸು, ಗಿನಿಯಾ ಮತ್ತು ಐವರಿ ಕೋಸ್ಟ್ ಆತನ ಆಡಳಿತಕ್ಕೆ ಒಳಪಟ್ಟಿತ್ತು. ಅಷ್ಟು ದೊಡ್ಡ ಭೂ ಭಾಗದಲ್ಲಿ ಚಿನ್ನ, ಉಪ್ಪಿನಂಥ ಖನಿಜಗಳು ದೊಡ್ಡ ಪ್ರಮಾಣದಲ್ಲಿ ಸಿಕ್ಕವು. ಬ್ರಿಟಿಷ್ ಮ್ಯೂಸಿಯಂನ ಮಾಹಿತಿ ತಿಳಿಸುವಂತೆ, ಆಗಿನ ವಿಶ್ವದ ಒಟ್ಟು ಚಿನ್ನದ ನಿಕ್ಷೇಪದಲ್ಲಿ ಅರ್ಧದಷ್ಟು ಆ ಮಾಲಿ ಸಾಮ್ರಾಜ್ಯದ ರಾಜನ ಅಧೀನಕ್ಕೆ ಒಳಪಟ್ಟಿತ್ತು. ಇನ್ನು ಚಿನ್ನ ಸೇರಿದಂತೆ ಯಾವ್ಯಾವ ಪ್ರಮುಖ ವಸ್ತುಗಳ ವ್ಯಾಪಾರ ಕೇಂದ್ರಗಳಿದ್ದವೋ ಅವೆಲ್ಲವೂ ಮೂಸಾ ಸಾಮ್ರಾಜ್ಯದ ವ್ಯಾಪ್ತಿಯಲ್ಲಿದ್ದವು.
60 ಸಾವಿರ ಮಂದಿಯ ಜತೆ ಮೆಕ್ಕಾಗೆ
ಅಷ್ಟೆಲ್ಲ ಚಿನ್ನದ ನಿಕ್ಷೇಪ ಇದ್ದರೂ ಮಾಲಿ ಸಾಮ್ರಾಜ್ಯ ಅಷ್ಟೇನೂ ಚಿರಪರಿಚಿತ ಆಗಿರಲಿಲ್ಲ. ಆದರೆ ಇಸ್ಲಾಂ ಧರ್ಮ ಅನುಸರಿಸುತ್ತಿದ್ದ ಮನ್ಸ ಮೂಸಾ ಮೆಕ್ಕಾಗೆ ತೆರಳಲು ನಿರ್ಧರಿಸಿದ. ಆತ ಸಹಾರಾ ಮರಭೂಮಿ ಹಾಗೂ ಈಜಿಪ್ಟ್ ಮೂಲಕ ಮೆಕ್ಕಾಗೆ ಹೋಗಬೇಕಾಗಿತ್ತು. ಮೂಸಾ ಹೊರಟಿದ್ದು 60 ಸಾವಿರ ಮಂದಿಯ ಜತೆ. ಆತನ ಆಸ್ಥಾನದವರು, ಅಧಿಕಾರಿಗಳು, ಸೈನಿಕರು, ವಿದೂಷಕರು, ವ್ಯಾಪಾರಿಗಳು, ಒಂಟೆ ನಡೆಸುವವರು, ಹನ್ನೆರಡು ಸಾವಿರ ಮಂದಿ ಗುಲಾಮರು ಹಾಗೂ ಎಲ್ಲರಿಗೂ ಸಾಕಾಗುವಂತೆ ಮೇಕೆ, ಕುರಿ, ಆಹಾರದೊಂದಿಗೆ ಪ್ರಯಾಣ ಆರಂಭಿಸಿದ. ಒಂದು ನಗರವೇ ಮರಳುಗಾಡಿನಲ್ಲಿ ಚಲಿಸುತ್ತಿರುವಂತೆ ಇತ್ತು ಆ ಪ್ರಯಾಣದ ವೈಖರಿ. ಅತ್ಯುತ್ತಮ ಚಿನ್ನದ ದಾರ ಬಳಸಿ ಮಾಡಲಾದ ರೇಷ್ಮೆಯ ವಸ್ತ್ರ, ಟನ್ ಗಟ್ಟಲೆ ಶುದ್ಧ ಚಿನ್ನವನ್ನು ಹೇರಿಕೊಂಡು ಸಾಗಲಾಗುತ್ತಿತ್ತು. ಮೂಸಾ ಮುಂದೆ ಬಿಡಾರ ಹೂಡಿದ್ದು ಈಜಿಪ್ಟ್ ನ ಕೈರೋದಲ್ಲಿ.
ಈಜಿಪ್ಟ್ ನಲ್ಲಿ ಹತ್ತು ವರ್ಷ ಚಿನ್ನದ ಬೆಲೆ ಚೇತರಿಸಿಕೊಳ್ಳಲಿಲ್ಲ
ಈಜಿಪ್ಟ್ ನಲ್ಲಿ ಮೂಸಾನ ಬಗ್ಗೆ ಎಂಥ ಕಥೆಗಳು ಹುಟ್ಟಿಕೊಂಡವೋ ಅಂದರೆ, ಅಲ್ಲಿಗೆ ಭೇಟಿ ನೀಡಿದ ಹನ್ನೆರಡು ವರ್ಷಗಳ ನಂತರವೂ ಆತನ ಬಗ್ಗೆ ಜನರು ಮಾತನಾಡಿಕೊಳ್ಳುತ್ತಿದ್ದರು ಎಂದು ಇತಿಹಾಸಕಾರರು ದಾಖಲಿಸುತ್ತಾರೆ. ಮೂರು ತಿಂಗಳು ಮೂಸಾ ಕೈರೋದಲ್ಲಿ ಇದ್ದ. ಆ ವೇಳೆ ಅಲ್ಲಿನ ಜನರಿಗೆ ಚಿನ್ನವನ್ನು ಅದ್ಯಾವ ಪರಿ ಹಂಚಿದ್ದ ಅಂದರೆ, ಹತ್ತು ವರ್ಷಗಳ ಕಾಲ ಚಿನ್ನದ ಬೆಲೆ ಅಲ್ಲಿ ಮತ್ತೆ ಚೇತರಿಸಿಕೊಳ್ಳಲಿಲ್ಲ. ಆರ್ಥಿಕತೆ ಅಲುಗಾಡಿ ಹೋಯಿತು. ಮೂಸಾನ ಪ್ರಯಾಣದ ಅವಧಿಯಲ್ಲಿ ಮಧ್ಯಪ್ರಾಚ್ಯದಲ್ಲಿ 150 ಕೋಟಿ ಅಮೆರಿಕನ್ ಡಾಲರ್ ಆರ್ಥಿಕ ನಷ್ಟವಾಯಿತು ಎಂದು ಅಮೆರಿಕ ಮೂಲದ ಟೆಕ್ನಾಲಜಿ ಕಂಪೆನಿ SmartAsset.com ಅಂದಾಜು ಮಾಡಿದೆ. ಮೂಸಾ ಮೆಕ್ಕಾದಿಂದ ವಾಪಸ್ ತೆರಳುವಾಗ ಮತ್ತೆ ಈಜಿಪ್ಟ್ ಗೆ ಭೇಟಿ ನೀಡುತ್ತಾನೆ. ಇತಿಹಾಸದಲ್ಲಿ ದಾಖಲಾಗಿರುವ ಮಾಹಿತಿ ಪ್ರಕಾರ, ಈಜಿಪ್ಟ್ ನ ಆರ್ಥಿಕತೆಗೆ ಸಹಾಯ ಮಾಡುವ ಉದ್ದೇಶದಿಂದ ದೊಡ್ಡ ಮೊತ್ತದ ಬಡ್ಡಿ ದರಕ್ಕೆ ಈಜಿಪ್ಟ್ ಲೇವಾದೇವಿದಾರರಿಂದ ಖರೀದಿ ಮಾಡುತ್ತಾನೆ. ಅದ್ಯಾವ ಪರಿ ಅಂದರೆ, ಕೊನೆಕೊನೆಗೆ ಮೂಸಾನ ಬಳಿಯೇ ಚಿನ್ನ ಇಲ್ಲದಂತಾಗುತ್ತದೆ.
ಇಡೀ ಜಗತ್ತಿಗೆ ಮಾಲಿ ಪರಿಚಯ ಆಗಿತ್ತು
ವಿಚಿತ್ರ ಏನು ಅಂದರೆ, ತಮ್ಮ ದೊರೆ ಮೂಸಾನ ಗುಣದ ಬಗ್ಗೆ ಮಾಲಿ ದೇಶದ ಲಾವಣಿಕಾರರು ಹಾಡುವುದನ್ನೇ ನಿಲ್ಲಿಸುತ್ತಾರೆ. ಏಕೆಂದರೆ, ಆತನಿಂದ ತಮ್ಮ ದೇಶಕ್ಕೆ ಅಪಾರ ನಷ್ಟವಾಯಿತು ಎಂಬುದು ಅವರ ಅಭಿಪ್ರಾಯ. ಮಾಲಿ ದೇಶದ ಸ್ಥಳೀಯ ಸಂಪತ್ತನ್ನು ಬೇಕಾಬಿಟ್ಟಿ ಖರ್ಚು ಮಾಡಿದ ಮೂಸಾ ಎಂಬ ಸಿಟ್ಟು ಅವರದು. ಅದರಲ್ಲಿ ಅನುಮಾನವೇ ಇಲ್ಲ. ಮೂಸಾ ತನ್ನ ಪ್ರವಾಸದ ವೇಳೆ ಅಷ್ಟು ದೊಡ್ಡ ಪ್ರಮಾಣದ ಚಿನ್ನವನ್ನು ಖರ್ಚು ಅಥವಾ ಹಾಳು ಮಾಡಿಲ್ಲ. ಆ ವಿಪರೀತ ಉದಾರತೆಯು ಜಗತ್ತಿನ ಗಮನವನ್ನೂ ಸೆಳೆದಿತ್ತು. ಚಿನ್ನದ ಸಿಂಹಾಸನದ ಮೇಲೆ ಚಿನ್ನವನ್ನು ಕೈಲಿ ಹಿಡಿದು ಕೂತ ಮೂಸಾನ ಚಿತ್ರವೊಂದು 1375ರ ಹೊತ್ತಿಗೆ ಆಫ್ರಿಕಾದ ನಕ್ಷೆಯಲ್ಲಿ ಛಾಪಿಸಿದಂತಾಗಿತ್ತು. ಮಾಲಿಯ ಸುತ್ತಮುತ್ತಲ ಪ್ರದೇಶದಿಂದ ಟಿಂಬಕ್ಟುಗೆ ಜನರು ಬರಲು ಆರಂಭಿಸಿದ್ದರು. ಮೆಕ್ಕಾದಿಂದ ಬರುತ್ತಾ ಮೂಸಾ ಇಸ್ಲಾಮಿಕ್ ಪಂಡಿತರು, ಪ್ರವಾದಿ ಮೊಹ್ಮದ್ ರ ವಂಶಸ್ಥರು, ಕವಿಗಳು, ಶಿಲ್ಪಶಾಸ್ತ್ರಜ್ಞರನ್ನು ಕರೆತಂದಿದ್ದ. ಒಂದು ವರದಿ ಹೇಳುವಂತೆ ಕವಿಗೆ 200 ಕೇಜಿ ಚಿನ್ನವನ್ನು ಕೊಟ್ಟಿದ್ದನಂತೆ ಮೂಸಾ.
ಮೂಸಾನನ್ನು ಜಗತ್ತು ಮರೆಯಲು ಸಾಧ್ಯವಾಗುತ್ತಾ?
ಶಾಲೆ, ಗ್ರಂಥಾಲಯ, ಮಸಿದಿ ನಿರ್ಮಾಣಕ್ಕೆ ಧಾರಾಳವಾಗಿ ಹಣ ನೀಡಿದ್ದ ಮೂಸಾ. ಪಶ್ಚಿಮ ಆಪ್ರಿಕಾದಲ್ಲಿ ಶಿಕ್ಷಣ ಪದ್ಧತಿ ಪರಿಚಯಿಸಿದ್ದ. ಟಿಂಬಕ್ಟು ಶಿಕ್ಷಣ ಕೇಂದ್ರವಾಗಿತ್ತು. ಇಲ್ಲಿ ಶಿಕ್ಷಣ ಪಡೆಯುವ ಸಲುವಾಗಿ ಜಗತ್ತಿನಾದ್ಯಂತ ಜನರು ಬರುತ್ತಿದ್ದರು. ತನ್ನ 57ನೇ ವಯಸ್ಸಿನಲ್ಲಿ, 1337ನೇ ಇಸವಿಯಲ್ಲಿ ಮೂಸಾ ಮೃತಪಟ್ಟ. ಆ ನಂತರ ಅವನ ಮಗ ರಾಜನಾದ. ಆದರೆ ಆ ಸಾಮ್ರಾಜ್ಯವು ಸಣ್ಣ ತುಂಡುಗಳಾಯಿತು. ಆ ನಂತ್ಅರ ಶವ ಪೆಟ್ಟಿಗೆಗೆ ಕೊನೆ ಮೊಳೆ ಎಂಬಂತೆ ಯುರೋಪಿಯನ್ನರು ಬಂದರು. ಮುಸಾ ಜೀವಂತ ಇದ್ದಾಗ ಮಾಲಿಯಲ್ಲಿ ಬಲವಾಗಿದ್ದ ಸೇನೆ, ಆರ್ಥಿಕ ಶಕ್ತಿ ಎಲ್ಲವೂ ಕುಂದುತ್ತಾ ಬಂದ ಮೇಲೆ ಯುರೋಪಿಯನ್ನರು ಮಾಲಿಗೆ ತೆರಳಿದರು. ಅದೇ ಮೂಸಾ ಜೀವಂತ ಇದ್ದಾಗಲೇ ಹೋಗಿದ್ದರೆ ಪರಿಸ್ಥಿತಿ ಬೇರೆ ಇರುತ್ತಿತ್ತು ಎಂದು ಇತಿಹಾಸಕಾರರು ಅಭಿಪ್ರಾಯ ಪಡುತ್ತಾರೆ. ಆದರೂ ಉದಾರತೆಯೋ ಅಥವಾ ನಡವಳಿಕೆಯಿಂದಲೋ ತನ್ನದೇ ದೇಶದ ಇತಿಹಾಸದಲ್ಲಿ ನಿರ್ಲಕ್ಷ್ಯಕ್ಕೆ, ಜನರ ಬೇಸರಕ್ಕೆ ಕಾರಣನಾದ ದೊರೆ ಮೂಸಾನನ್ನು ಜಗತ್ತು ಮರೆಯಲು ಸಾಧ್ಯವಾಗುತ್ತಾ?


Click it and Unblock the Notifications