ಬೆಂಗಳೂರು, ಮೇ 14: ಇಂದಿನಿಂದ (ಮೇ 14) ಬೆಂಗಳೂರಿನ ಪ್ರಮುಖ ಹೆಬ್ಬಾಳ ಫ್ಲೈಓವರ್‌ನಲ್ಲಿ ಎಲ್ಲ ಮಾದರಿಯ ವಾಹನ ಸಂಚಾರವನ್ನು ನಿರ್ಬಂಧಿಸಿರುವುದಾಗಿ ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಹೆಬ್ಬಾಳ ಫ್ಲೈಓವರ್‌ನ ಕೆಆರ್ ಪುರಂ ಆಪ್ ರ್ಯಾಂಪ್ ಅನ್ನು ಮುಚ್ಚಲಾಗುತ್ತಿರುವುದರಿಂದ ನಾಗವಾರ ಕಡೆಯಿಂದ ಹೆಬ್ಬಾಳ ಮೇಲ್ಸೇತುವೆ ಕಡೆಗೆ ಬರುವ ಎಲ್ಲ ಮಾದರಿಯ ವಾಹನಗಳ ಸಂಚಾರವನ್ನು ಮೇಲ್ಸೇತುವೆ ಮೇಲೆ ನಿರ್ಬಂಧಿಸಲಾಗಿದೆ.

ಹೆಬ್ಬಾಳ ಮೇಲ್ಸೇತುವೆಗೆ ಎರಡು ಹೊಸ ಟ್ಯ್ರಾಕ್‌ಗಳನ್ನು ಸೇರಿಸಲು ಬಿಡಿಎ ಕಾಮಗಾರಿಯನ್ನು ಆರಂಭಿಸಿರುವುದರಿಂದ ಈಗಾಗಲೇ ಏಪ್ರಿಲ್ ಹದಿನೇಳರಿಂದ ಕೆಆರ್ ಪುರಂ ಲೂಪ್ ಸೇರುವ ಟ್ರ್ಯಾಕ್‌ನಲ್ಲಿ ದ್ವಿಚಕ್ರ ವಾಹನಗಳನ್ನು ಹೊರತುಪಡಿಸಿ ಎಲ್ಲಾ ಮಾದರಿಯ ವಾಹನಗಳನ್ನು ಸಂಚಾರವನ್ನು ನಿಷೇಧಿಸಲಾಗಿತ್ತು.
ಈಗ ಇಂದಿನಿಂದ ಕೆಆರ್ ಪುರಂ ಕಡೆಯಿಂದ ಬರುವ ಲೂಪ್ ಹೆಬ್ಬಾಳ ಫ್ಲೈಓವರ್ ಮುಖ್ಯ ಟ್ರ್ಯಾಕ್‌ಗೆ ಸೇರಿಸುವ ಎರಡು ಲಿಂಕ್ ಸ್ಟ್ಯಾನ್‌ಗಳನ್ನು ತೆಗೆದುಹಾಕಲಾಗುತ್ತಿರುವುದರಿಂದ ರ್ಯಾಂಪ್ ಮತ್ತು ಮುಖ್ಯ ಟ್ರ್ಯಾಕ್‌ಗೆ ಸಂಪರ್ಕ ಇಲ್ಲದಾಗುತ್ತಿರುವುದರಿಂದ ಯಾವುದೇ ರೀತಿಯ ವಾಹನ ಸಂಚಾರವು ಸಾಧ್ಯವಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಕಾಮಗಾರಿ ಮುಕ್ತಾಯವಾಗುವವರೆಗೆ ಸಾರ್ವಜನಿಕ ಸಂಚಾರಕ್ಕಾಗಿ ಈ ಮಾರ್ಪಡುಗಳನ್ನು ಮಾಡಲಾಗಿದೆ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.
ನಿರ್ಬಂಧಿಸಲಾದ ವಾಹನಗಳ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ:
೧. ನಾಗವಾರ (ಓಆರ್‌ಆರ್) ಕಡೆಯಿಂದ ನಗರದ ಒಳಗೆ ಮೇಖ್ರಿ ಸರ್ಕಲ್ ಮುಖಾಂತರ ಸಂಚರಿಸುವ ವಾಹನಗಳು ಹೆಬ್ಬಾಳ ಸರ್ಕಲ್‌ನಲ್ಲಿ ಫ್ಲೈ ಓವರ್ ಕೆಳಗಿನಿಂದ ಬಲ ತಿರುವು ಪಡೆದು ಕೋಡಿಗೇಹಳ್ಳಿ ಜಂಕ್ಷನ್ ಬಳಿ ಯೂ ಟರ್ನ್ ಪಡೆದು ಸರ್ವಿಸ್ ರಸ್ತೆಯಿಂದ ಹೆಬ್ಬಾಳ ಫ್ಲೈ ಓವರ್ ರ್ಯಾಂಪ್ ಮುಖೇನ ನಗರದ ಕಡೆಗೆ ಚಲಿಸಬಹುದಾಗಿದೆ.
೨. ಕೆಆರ್ ಪುರಂ ನಾಗವಾರ ಕಡೆಯಿಂದ ನಗರದ ಕಡೆಗೆ ಬರುವ ವಾಹನಗಳು ಈ ಕೆಳಕಂಡ ರಸ್ತೆಗಳ ಮೂಲಕ ನಗರ ಪ್ರವೇಶಿಸಬಹುದಾಗಿದೆ.
ಐಓಸಿ- ಮುಕುಂದ ಥಿಯೇಟರ್ ರಸ್ತೆ.
ಲಿಂಗರಾಜಪುರ ಮೇಲ್ಸೇತುವೆ ಮಾರ್ಗ.
ನಾಗವಾರ ಟ್ಯಾನರಿ ರಸ್ತೆ ಮಾರ್ಗವಾಗಿ
೩. ಹೆಗಡೆನಗರ- ಥಣಿಸಂದ್ರ ಕಡೆಯಿಂದ ಬರುವ ವಾಹನಗಳು ಜಿಕೆ ವಿಕೆ ಜಕ್ಕೂರು ರಸ್ತೆ ಮೂಲಕ ನಗರ ಪ್ರವೇಶಿಸಬಹುದಾಗಿದೆ.
೪. ಕೆಆರ್ ಪುರಂ ಕಡೆಯಿಂದ ಹೆಬ್ಬಾಳ ಮಾರ್ಗವಾಗಿ ಯಶವಂತಪುರ ಕಡೆಗೆ ಚಲಿಸುವ ವಾಹನಗಳು ಹೆಬ್ಬಾಳ ಫ್ಲೈಓವರ್ ಕೆಳಗಡೆ ನೇರವಾಗಿ ಬಿಇಎಲ್ ಸರ್ಕಲ್ ತಪುಪಿ ಎಡ ತಿರುವು ಪಡೆದು ಸದಾಶಿವನಗರ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಐಐಎಸ್‌ಸಿ ಮುಖಾಂತರ ಚಲಿಸಬಹುದಾಗಿದೆ.
೫. ಕೆಆರ್ ಪುರಂ, ಹೆಣ್ಣೂರು, ಹೆಚ್‌ಆರ್‌ಬಿಆರ್ ಲೇಔಟ್, ಕೆಜಿ ಹಳ್ಳಿ, ಬಾಣಸವಾಡಿ ಕಡೆಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಡೆ ಸಂಚರಿಸುವ ವಾಹನಗಳು ಹೆಣ್ಣೂರು- ಬಾಗಲೂರು ರಸ್ತೆಯ ಮುಖಾಂತರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಬಹುದು ಎಂದು ಬೆಂಗಳೂರು ಸಂಚಾರಿ ಪೊಲೀಸರು ಸಂಚಾರಿ ಸಲಹೆಯಲ್ಲಿ ತಿಳಿಸಿದ್ದಾರೆ.


Click it and Unblock the Notifications