ಒಮ್ಮೊಮ್ಮೆ ಹೀಗೂ ಆಗಬಹುದು! ಕೋಲ್ಕತ್ತಾದ ವ್ಯಕ್ತಿಯೊಬ್ಬರು ಫ್ರೆಡ್ರಿಚ್ ಇಂಗೆಲ್ಸ್ ಹಾಗೂ ಕಾರ್ಲ್ ಮಾರ್ಕ್ಸ್ ಅವರ 'ದ ಕಮ್ಯುನಿಸ್ಟ್ ಮ್ಯಾನಿಫೆಸ್ಟೊ' ಎಂಬ ಪುಸ್ತಕವನ್ನು ಅಮೆಜಾನ್ ನಲ್ಲಿ ಆರ್ಡರ್ ಮಾಡಿದ್ದಾರೆ. ಆದರೆ ಅವರಿಗೆ ಜೂನ್ 13ನೇ ತಾರೀಕಿನಂದು 'ಭಗವದ್ಗೀತಾ' ಗ್ರಂಥವು ತಲುಪಿದೆ.
ಸುತಿರ್ಥ ದಾಸ್ ಎಂಬ ಕೋಲ್ಕತ್ತಾದ ಗರಿಯಾ ನಿವಾಸಿ ಫೇಸ್ ಬುಕ್ ಪೋಸ್ಟ್ ನಲ್ಲಿ ತಮ್ಮ ದುಃಖವನ್ನು ಹಂಚಿಕೊಂಡಿದ್ದಾರೆ. "ಕಳೆದ ಬುಧವಾರ, ಜೂನ್ 10ರಂದು 'ದ ಕಮ್ಯುನಿಸ್ಟ್ ಮ್ಯಾನಿಫೆಸ್ಟೊ' ಪುಸ್ತಕವನ್ನು 90 ರುಪಾಯಿ ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿರುವುದನ್ನು ನೋಡಿದೆ. ಆ ತಕ್ಷಣವೇ ಹಣ ಪಾವತಿಸಿ, ಬುಕ್ ಆರ್ಡರ್ ಮಾಡಿದೆ. ಶುಕ್ರವಾರ ಅಥವಾ ಶನಿವಾರದ ದಿನ ಪುಸ್ತಕ ಡೆಲಿವರಿ ಆಗುತ್ತದೆ ಎಂಬ ಸಂದೇಶ ಬಂತು" ಎಂದು ದಾಸ್ ಬರೆದುಕೊಂಡಿದ್ದಾರೆ.
ಪುಸ್ತಕ ಡೆಲಿವರಿಗೆ ಹೊರಟಿದೆ ಎಂದು ಶನಿವಾರ ಬೆಳಗ್ಗೆ ಅಮೆಜಾನ್ ನಿಂದ ಸಂದೇಶ ಬಂತು. ಮಧ್ಯಾಹ್ನ 2 ಗಂಟೆಗೆ, ಕಚೇರಿಯಲ್ಲಿ ಇರುವಾಗ ಪುಸ್ತಕ ಡೆಲಿವರಿ ಆಗಿದೆ ಎಂಬ ವಿಚಾರ ನನಗೆ ಗೊತ್ತಾಯಿತು. ಸಂಜೆ ವಾಪಸ್ ಬಂದು, ಗಮನಿಸಿದಾಗ ಗೊತ್ತಾಯಿತು, 'ದ ಕಮ್ಯುನಿಸ್ಟ್ ಮ್ಯಾನಿಫೆಸ್ಟೊ' ಪುಸ್ತಕವು ಭಗವದ್ಗೀತಾ ಇಂಗ್ಲಿಷ್ ಪುಸ್ತಕ ಆಗಿತ್ತು ಎಂದಿದ್ದಾರೆ ದಾಸ್.

ಫೇಸ್ ಬುಕ್ ಪೋಸ್ಟ್ ಗೆ ಹಲವರು ಕಾಮೆಂಟ್ ಮಾಡಿದ್ದಾರೆ. ಆನ್ ಲೈನ್ ಡೆಲಿವರಿಯಲ್ಲೂ 'ರಾಜಕೀಯ' ಮಾಡಲಾಗುತ್ತಿದೆ ಮತ್ತು ಪರೋಕ್ಷ ಸೆನ್ಸಾರ್ ಷಿಪ್ ನಡೆಯುತ್ತಿದೆ ಎಂದು ಆರೋಪಿಸಲಾಗಿದೆ. ಇನ್ನು ಪುಸ್ತಕ ಮಾರಾಟಗಾರ ಡೀಲರ್ ಸ್ಪೆಕ್ಟ್ರಲ್ ವಕ್ತಾರರು ಮಾತನಾಡಿ, ಇದು ತಾತ್ಸಾರದಿಂದ ಆಗಿರುವ ತಪ್ಪು ಎಂದಿದ್ದಾರೆ.
ಈಗ ಆಗಿರುವ ತಪ್ಪಿಗೆ ವಿಷಾದಿಸುತ್ತೇವೆ. ಗ್ರಾಹಕರು ನೀಡಿದ ಮೊತ್ತಕ್ಕೆ ಪುಸ್ತಕವನ್ನು ಬದಲಿಸಿಕೊಡುತ್ತೇವೆ ಎಂದು ವಕ್ತಾರರು ಹೇಳಿರುವುದಾಗಿ ವರದಿ ಆಗಿದೆ.


Click it and Unblock the Notifications