ಚೀನಾದ ಕಂಪೆನಿಗಳು ಹಣ ಹೂಡಿರುವ ಪೇಟಿಎಂ, ಓಲಾ, ಝೊಮ್ಯಾಟೋ, ಮೇಕ್ ಮೈ ಟ್ರಿಪ್ ಗಳ ಮೇಲೆ ಈಗ ಭಾರತೀಯರ ಸಿಟ್ಟು ತಿರುಗಿದೆ. ಗೂಗಲ್ ಪ್ಲೇ ಸ್ಟೋರ್ ನಲ್ಲಿ ಈ ಅಪ್ಲಿಕೇಷನ್ ಗಳ ರೇಟಿಂಗ್ ಅನ್ನು ಗುರಿ ಮಾಡಿಕೊಂಡಿದ್ದಾರೆ. ಏಕೆಂದರೆ, ಚೀನಾದ ಉತ್ಪನ್ನಗಳನ್ನು ಬಿಟ್ಟುಹಾಕುವುದು ಕಷ್ಟ.
ಕಳೆದ ಒಂದು ವಾರದಿಂದ ಇವುಗಳ ಪೈಕಿ ಬಹುತೇಕ ಮೊಬೈಲ್ ಅಪ್ಲಿಕೇಷನ್ ಗಳ ವಿರುದ್ಧ ಕಮೆಂಟ್ ಗಳು ಹೆಚ್ಚಾಗಿದ್ದು, ಗ್ರಾಹಕರಿಂದ ಅತ್ಯಂತ ಕಡಿಮೆ ರೇಟಿಂಗ್ ದೊರೆಯುತ್ತಿದೆ. ಅಷ್ಟೇ ಅಲ್ಲ, ಇಂಟರ್ ನೆ ಕಂಪೆನಿಗಳಾದ ಟೆನ್ಸೆಂಟ್, ಆಲಿಬಾಬ ಹಾಗೂ ಸಿಟ್ರಿಪ್ ಗಳ ಬೆಂಬಲ ಇರುವ ಅಪ್ಲಿಕೇಷನ್ ಗಳನ್ನು ಸಹ ಅನ್ ಇನ್ ಸ್ಟಾಲ್ ಮಾಡುತ್ತಿದ್ದಾರೆ.
ಆಸಕ್ತಿಕರ ಸಂಗತಿ ಏನೆಂದರೆ, ಈ ಕಂಪೆನಿಗಳ ಮೂಲ ಹೊರದೇಶಗಳಲ್ಲೇ ಇರಬಹುದು. ಆದರೆ ಇವುಗಳನ್ನು ನಡೆಸುತ್ತಿರುವವರು ಭಾರತೀಯ ಉದ್ಯಮಿಗಳು.
ಚೀನಾದ ಸ್ಮಾರ್ಟ್ ಫೋನ್ ಬ್ರ್ಯಾಂಡ್ ಗಳ ಪಾಲು ಶೇ 73
ಈ ಅಪ್ಲಿಕೇಷನ್ ಗಳಿಗೆ ಕಡಿಮೆ ರೇಟಿಂಗ್ ನೀಡಿರುವುದು ಒಟ್ಟಾರೆ ರೇಟಿಂಗ್ ಮೇಲೇನೂ ಪರಿಣಾಮ ಬೀರಿಲ್ಲ. ಆಪರೆ ಗಡಿ ವಿವಾದದಲ್ಲಿ ಚೀನೀ ಸೈನಿಕರು ಇಪ್ಪತ್ತು ಭಾರತೀಯ ಸೈನಿಕರನ್ನು ಕೊಂದಿದ್ದು ಗ್ರಾಹಕರ ಭಾವನೆ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ ಎಂಬುದನ್ನು ತೋರಿಸುತ್ತದೆ. ಚೀನಾದ ಉತ್ಪನ್ನಗಳಲ್ಲಿ ಸ್ಮಾರ್ಟ್ ಫೋನ್ ತಯಾರಿಸುವ ಶಿಯೋಮಿ, ವಿವೋ ಮತ್ತು ಎಲೆಕ್ಟ್ರಾನಿಕ್ ವಸ್ತುಗಳು ಇ- ಕಾಮರ್ಸ್ ಪ್ಲಾಟ್ ಫಾರ್ಮ್ ಗಳಾದ ಫ್ಲಿಪ್ ಕಾರ್ಟ್ ನಂಥವಲ್ಲಿ ಮುಖ್ಯವಾಗಿ ಕಾಣಿಸಿಕೊಳ್ಳುತ್ತವೆ. ಕೊರೊನಾ ಬಿಕ್ಕಟ್ಟು ಉದ್ಭವಿಸಿದ ನಂತರ ಇದೇ ಮೊದಲ ಬಾರಿಗೆ ಬೇಸಿಗೆ ಮಾರಾಟ ಈ ವಾರ ನಡೆಯಲಿದೆ. ಮಾರ್ಚ್ ಅಂತ್ಯದ ಹೊತ್ತಿಗೆ ಚೀನಾದ ಸ್ಮಾರ್ಟ್ ಫೋನ್ ಬ್ರ್ಯಾಂಡ್ ಗಳಾದ ಶಿಯೋಮಿ, ವಿವೋ, ಒಪ್ಪೋ ಸೇರಿ ಮಾರ್ಕೆಟ್ ನಲ್ಲಿ 73% ಪಾಲನ್ನು ಹೊಂದಿದ್ದವು. ಆದರೆ ಗ್ರಾಹಕರ ಈ ಪ್ರತಿಕ್ರಿಯೆ ಇರುವುದು ಹೌದಾ ಎಂಬ ಪ್ರಶ್ನೆಗೆ ಯಾವ ಕಂಪೆನಿಗಳೂ ಉತ್ತರ ನೀಡಿಲ್ಲ.
ಸ್ಯಾಮ್ಸಂಗ್ ನಂಥ ಬ್ರ್ಯಾಂಡ್ ಗಳಿಗೆ ಅವಕಾಶ
ಇನ್ನು ತಜ್ಞರು ಹೇಳುವಂತೆ, ಈಗಿನ ಸನ್ನಿವೇಶವು ಸ್ಯಾಮ್ಸಂಗ್ ನಂಥ ಬ್ರ್ಯಾಂಡ್ ಗಳಿಗೆ ಅವಕಾಶ ಒದಗಿಸುತ್ತದೆ. ಚೀನಾವಿರೋಧಿ ಮನಸ್ಥಿತಿಯ ಗ್ರಾಹಕರಿಗೆ ಕಡಿಮೆ ಹಾಗೂ ಮಧ್ಯಮ ಬೆಲೆಯ ಇತರ ಆಯ್ಕೆಗಳು ಸಹ ಇಲ್ಲ. "ಒಂದು ಅಪ್ಲಿಕೇಷನ್ ಅನ್ನು ಡಿಲೀಟ್ ಮಾಡೋದು ಫೋನ್ ಅನ್ನು ಬಿಸಾಡುವುದಕ್ಕಿಂತ ಸಲೀಸು. ಚೀನಾ ಬ್ರ್ಯಾಂಡ್ ಗಳಿಗೆ ಸ್ಮಾರ್ಟ್ ಫೋನ್ ಕ್ಷೇತ್ರದಲ್ಲಿ ಪಾರಮ್ಯ ಇದೆ. ಆದ್ದರಿಂದ ಸ್ಮಾರ್ಟ್ ವಾಚ್ ಸೆಗ್ಮೆಂಟ್ ನಲ್ಲಿ ಇರುವಂತೆ ಫೋನ್ ಗೆ ಹೆಚ್ಚಿನ ಆಯ್ಕೆಗಳಿಲ್ಲ" ಎನ್ನುತ್ತಾರೆ ಮುಖ್ಯ ಕಂಪೆನಿಯೊಂದರ ಸಿಇಒ. ಇನ್ನೊಂದು ಕಡೆ ಫ್ಲಿಪ್ ಕಾರ್ಟ್ ನದೇ ಖಾಸಗಿಯಾದ ಸ್ವಂತ ಬ್ರ್ಯಾಂಡ್ ಗಳಿವೆ. ಸ್ಮಾರ್ಟ್ ಬೈ, ಮಾರ್ ಕ್ಯೂ, ಮಿಸ್ ಅಮ್ಡ್ ಚೀಫ್... ಹೀಗೆ. ಇವುಗಳ ಅಡಿಯಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳು, ವಾಷಿಂಗ್ ಮಷೀನ್, ಆಟಿಕೆಗಳನ್ನು ಮಾರಲಾಗುತ್ತದೆ. ಆದರೆ ಅವುಗಳು ಕೂಡ ಮೇಡ್ ಇನ್ ಚೀನಾ. ಉತ್ಪನ್ನದ ಬಗ್ಗೆ ಇರುವ ಮಾಹಿತಿ ಗಮನಿಸಿದಾಗ ಇದು ಗೊತ್ತಾಗುತ್ತದೆ. ಅಮೆಜಾನ್ ಇಂಡಿಯಾದೂ ಅದೇ ಕಥೆ. ಆದರೆ ಮೇಡ್ ಇನ್ ಚೀನಾ ವಸ್ತುಗಳು ಉಳಿದವುಕ್ಕಿಂತ ಹೆಚ್ಚಿನ ರಿಯಾಯಿತಿ ದರದಲ್ಲಿ ಸಿಗುತ್ತವೆ.
ಒಪ್ಪೊ ಕಚೇರಿ ಎದುರು ಪ್ರತಿಭಟನೆ
ಕಳೆದ ಗುರುವಾರದಂದು ಅಮೆಜಾನ್ ಇಂಡಿಯಾದಲ್ಲಿ ಒನ್ ಪ್ಲಸ್ ಮಾರಾಟ ಕೊನೆಯಾಯಿತು. ಇನ್ನು ಈಗ ನಡೆಯುತ್ತಿರುವ Myntra ಮಾರಾಟದಲ್ಲೂ ಚೀನಾ ಮೂಲದ ಉತ್ಪನ್ನಗಳಿವೆ. ಇದರಿಂದ ಏನು ಗೊತ್ತಾಗುತ್ತದೆ ಅಂದರೆ, ಮೊಬೈಲ್, ಸ್ಮಾರ್ಟ್ ಟಿವಿ, ಪವರ್ ಬ್ಯಾಂಕ್ ಹಾಗೂ ಹೆಡ್ ಫೋನ್ ಗಳಲ್ಲಿ ಚೀನಾ ಕಂಪೆನಿಗಳದೇ ಮೇಲುಗೈ. ಆನ್ ಲೈನ್ ನಲ್ಲಿ ಜನರು ತಮ್ಮ ಸಿಟ್ಟನ್ನು ಹೊರ ಹಾಕುತ್ತಿದ್ದಾರೆ. ಭಾನುವಾರದಂದು ಗ್ರೇಟರ್ ನೋಯ್ಡಾದಲ್ಲಿ ಇರುವ ಒಪ್ಪೊ ಕಚೇರಿ ಹೊರಗೆ ಪ್ರತಿಭಟನೆ ನಡೆದಿದೆ. ಆದರೆ ತಕ್ಷಣಕ್ಕೆ ಪರಿಣಾಮ ಆಗುವುದು ಮೊಬೈಲ್ ಅಪ್ಲಿಕೇಷನ್ ಗಳ ಮೇಲೆ. ಚೀನಾದ ಮೊಬೈಲ್ ಸಲಕರಣೆ ಸೇರಿ ಇತರ ಉತ್ಪನ್ನಗಳು ಸಸ್ತಾ. ಆದ್ದರಿಂದ ಅವುಗಳ ಮೇಲೆ ಏನೂ ಪರಿಣಾಮ ಆಗಲ್ಲ ಎಂಬ ನಂಬಿಕೆ ಮಾರ್ಕೆಟ್ ನಲ್ಲಿದೆ.
ನೆಗೆಟಿವ್ ರೇಟಿಂಗ್ ಹಾಗೂ ಕಮೆಂಟ್
ಚೀನಾ- ಭಾರತ ಗಡಿ ವಿವಾದದಿಂದಾಗಿ ಭಾರತದಲ್ಲಿ ಬಳಕೆ ಆಗುವ ಚೀನಾಗೆ ಸೇರಿದ ಹಲವು ಬ್ರ್ಯಾಂಡ್ ಗಳ ಮೇಲೆ ಖಂಡಿತಾ ಪರಿಣಾಮ ಆಗುತ್ತದೆ. ಅದರಲ್ಲೂ ಜನರಲ್ಲಿ ಇರುವ ಚೀನಾವಿರೋಧಿ ಮನಸ್ಥಿತಿ ಹಾಗೂ ಅದಕ್ಕೆ ಮಾಧ್ಯಮದ ವರದಿಗಳಿಂದ ಸಿಗುತ್ತಿರುವ ಪುಷ್ಟಿ ಸಹ ಸೇರಿಕೊಂಡಿದೆ. ಚೀನಾ ಫೋನ್ ಗಳನ್ನು ಬಳಸದಿರುವಂತೆ ನಡೆಯುತ್ತಿರುವ ಅಭಿಯಾನಕ್ಕೆ ಧ್ವನಿ ಸೇರುತ್ತಲೇ ಇದೆ. ಅದರಲ್ಲೂ ಕಡಿಮೆ ಬೆಲೆಯ ಫೋನ್ ಗಳ ಮೇಲೆ ಪರಿಣಾಮ ಕಾಣಬಹುದು. ಇದೇ ಸಂಗತಿ ಅಪ್ಲಿಕೇಷನ್ ಗಳಿಗೂ ಅನ್ವಯ ಆಗುತ್ತದೆ. ಹಲವರು ಅವುಗಳಿಗೆ ಪರ್ಯಾಯ ಹುಡುಕಿಕೊಳ್ಳುತ್ತಿದ್ದಾರೆ. ಜತೆಗೆ ಆ ಅಪ್ಲಿಕೇಷನ್ ಗಳಿಗೆ ನೆಗೆಟಿವ್ ರೇಟಿಂಗ್ ನೀಡಿ ಹಾಗೂ ಕಮೆಂಟ್ ಗಳಲ್ಲಿ ಮೂದಲಿಸುತ್ತಿದ್ದಾರೆ. ಆದರೆ ಈ ಮನಸ್ಥಿತಿ ತಾತ್ಕಾಲಿಕವೇ ಹೊರತು ಶಾಶ್ವತ ಅಲ್ಲ ಎಂದು ಈ ಕಂಪೆನಿಗಳಲ್ಲಿ ಉನ್ನತ ಸ್ಥಾನದಲ್ಲಿ ಇರುವವರು ಅಭಿಪ್ರಾಯ ಪಡುತ್ತಾರೆ.


Click it and Unblock the Notifications