ಆಪಲ್ ಕಂಪೆನಿಯಿಂದ ಸೆಪ್ಟೆಂಬರ್ 8ನೇ ತಾರೀಕು ಪ್ರಮುಖ ಘೋಷಣೆ ಮಾಡುವ ಸಾಧ್ಯತೆ ಇದೆ. ಆಪಲ್ ವಾಚ್ ಸರಣಿ 6 ಅಥವಾ ಹೊಸ ಐಪ್ಯಾಡ್ ಬಗ್ಗೆ ಮಾಹಿತಿ ಬಿಡುಗಡೆ ಮಾಡಬಹುದು. ಇನ್ನು ಬ್ಲೂಮ್ ಬರ್ಗ್ ಪ್ರಕಾರ, ಐಫೋನ್ 12ರ ಬಿಡುಗಡೆ ದಿನಾಂಕವನ್ನು ಘೋಷಿಸುವ ಸಾಧ್ಯತೆ ಇದೆ.
ಸೆಪ್ಟೆಂಬರ್ 8ನೇ ತಾರೀಕಿಗೆ ಬಿಡುಗಡೆ ಮಾಡಲು ಪತ್ರಿಕಾ ಹೇಳಿಕೆಯನ್ನು ಆಪಲ್ ಸಿದ್ಧ ಮಾಡಿಟ್ಟುಕೊಂಡಿದೆ ಎಂದು ಮೂಲಗಳು ತಿಳಿಸಿದ್ದು, ಅದರಲ್ಲಿ ಹೊಸ ಐಪ್ಯಾಡ್ ಮತ್ತು ಆಪಲ್ ವಾಚ್ ಸರಣಿ 6ರ ಮಾಹಿತಿಯೂ ಒಳಗೊಂಡಿರುತ್ತದೆ ಎಂಬುದನ್ನು ಹೇಳಲಾಗುತ್ತಿದೆ. ಆದರೆ ಯಾವ ಹೊಸ ಐಪ್ಯಾಡ್ ಎಂಬ ಕುರಿತು ಹೆಚ್ಚಿನ ವಿವರಗಳು ಇಲ್ಲ.
ಅಗ್ಗದ ಬೆಲೆ ಐಪ್ಯಾಡ್ ಅಥವಾ ಐಪ್ಯಾಡ್ ಏರ್ 4
ವದಂತಿಗಳ ಪ್ರಕಾರ, ಆಪಲ್ ನಿಂದ ಅಗ್ಗದ ಬೆಲೆ ಐಪ್ಯಾಡ್ ಅಥವಾ ಐಪ್ಯಾಡ್ ಏರ್ 4 ಅನ್ನು ಸೆಪ್ಟೆಂಬರ್ ನಲ್ಲಿ ಬಿಡುಗಡೆ ಮಾಡಬಹುದು. ಇನ್ನು ಐಪ್ಯಾಡ್ ಪ್ರೋ ಬಿಡುಗಡೆ ಬಗ್ಗೆ ಕೂಡ ಸುದ್ದಿ ಹರಿದಾಡುತ್ತಿದೆ. ಇನ್ನು ವಾಚ್ ಸರಣಿ 6ರ ಬಿಡುಗಡೆ ಬಗೆಗಿನ ವಿವರಕ್ಕೆ ಬಂದರೆ, ಈ ಹಿಂದಿನ ಸರಣಿಯ ವಾಚ್ ಮಾದರಿಯಲ್ಲೇ ಅದು ಇರಲಿದೆಯಂತೆ. ಆದರೆ ರಕ್ತದಲ್ಲಿನ ಆಮ್ಲಜನಕ ಪ್ರಮಾಣ, ನಿದ್ದೆಯ ಪ್ರಮಾಣ ಅಳೆಯುವ ಫೀಚರ್ ಹಾಗೂ ಸುಧಾರಿತ ಇಸಿಜಿ ಇನ್ನಿತರ ಫೀಚರ್ ಇರಲಿದೆ ಎಂಬ ಸುದ್ದಿ ಇದೆ.
ಆಪಲ್ ವಾಚ್/ ಐಫೋನ್ ಬಿಡುಗಡೆ
ಆದರೆ, ಬ್ಲೂಮ್ ಬರ್ಗ್ ಅಂದಾಜು ಮಾಡುವಂತೆ ಸೆಪ್ಟೆಂಬರ್ ನಲ್ಲಿ ಆಪಲ್ ವಾಚ್/ ಐಫೋನ್ ಬಿಡುಗಡೆ ಆಗಲಿದ್ದು, ಆ ಕಾರ್ಯಕ್ರಮದ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಆಪಲ್ ಕಂಪೆನಿಯಿಂದ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಲಾಗುವುದು. ಸಾಮಾನ್ಯವಾಗಿ ಯಾವುದೇ ಕಾರ್ಯಕ್ರಮಕ್ಕೆ ಎರಡು ವಾರಗಳ ಮುಂಚೆ ಆಪಲ್ ನಿಂದ ಘೋಷಣೆ ಮಾಡಲಾಗುತ್ತದೆ.
ಐಫೋನ್ 12ರ ಉತ್ಪಾದನೆ ತಡವಾಗಿದೆ
ಅದೇ ಲೆಕ್ಕದಲ್ಲಿ ಹೇಳುವುದಾದರೆ ಸೆಪ್ಟೆಂಬರ್ 8ರಂದು ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದಲ್ಲಿ, ಕಾರ್ಯಕ್ರಮವು ಆನ್ ಲೈನ್ ನಲ್ಲಿ ಸೆಪ್ಟೆಂಬರ್ 22ನೇ ತಾರೀಕಿನಂದು ನಡೆಯಬಹುದು. ಹೊಸ ಐಫೋನ್ 12ರ ಉತ್ಪಾದನೆ ತಡವಾಗಿದೆಯಂತೆ. ಆದ್ದರಿಂದ ಈ ವರ್ಷ ಅಕ್ಟೋಬರ್ ನಲ್ಲಿ ಬಿಡುಗಡೆ ಮಾಡುವ ನಿರೀಕ್ಷೆ ಇದೆ.


Click it and Unblock the Notifications