ASEAN 10 ಸದಸ್ಯ ರಾಷ್ಟ್ರಗಳು ಸೇರಿದಂತೆ ಭಾರತ ಒಳಗೊಂಡ ಇತರ ಎಂಟು ದೇಶಗಳ ಹಣಕಾಸು ಸಚಿವರು ಪ್ರಾದೇಶಿಕ ಪೂರೈಕೆ ಜಾಲ ಬಲಪಡಿಸುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ಆರ್ಥಿಕತೆಯ ಸುಸ್ಥಿರ ಬೆಳವಣಿಗೆಗಾಗಿ ಪೂರೈಕೆ ಜಾಲ ಗಟ್ಟಿಗೊಳಿಸುವ ವಿಚಾರಕ್ಕೆ ಆದ್ಯತೆ ನೀಡಲಾಗುವುದು ಎಂದಿದ್ದಾರೆ. ದೆಹಲಿಯಲ್ಲಿ ಈಚೆಗೆ ಎಂಟನೇ ಈಸ್ಟ್ ಏಷ್ಯಾ ಸಮಿಟ್ ಎಕನಾಮಿಕ್ ಮಿನಿಸ್ಟರ್ಸ್ ವರ್ಚುವಲ್ ಮೀಟಿಂಗ್ ನಲ್ಲಿ(EAS- EMM) ಜಂಟಿ ಹೇಳಿಕೆ ನೀಡಲಾಗಿದೆ.
ವಾಣಿಜ್ಯ ಹಾಗೂ ಹೂಡಿಕೆ ಉತ್ತೇಜನಕ್ಕೆ ಸಂಬಂಧಿಸಿದಂತೆ ತಮ್ಮ ಬದ್ಧತೆಯ ಕುರಿತು ಮತ್ತೊಮ್ಮೆ ಖಾತ್ರಿ ಪಡಿಸಿದ್ದಾರೆ. ವ್ಯಾಪಾರ ಹಾಗೂ ಜಾಗತಿಕ ಪೂರೈಕೆ ಜಾಲದ ಅಡೆತಡೆಗಳನ್ನು ಕಡಿಮೆ ಮಾಡುವುದು ಹಾಗೂ ಪೂರೈಕೆ ಜಾಲದ ಸಂಪರ್ಕ ವ್ಯವಸ್ಥೆ ಮಾಡುವುದು ಈ ದೇಶಗಳ ಆದ್ಯತೆ ಎಂಬುದನ್ನು ಹೇಳಲಾಗಿದೆ.
ಪ್ರಾದೇಶಿಕ ವಲಯದಲ್ಲಿ ಅಗತ್ಯ ವಸ್ತುಗಳಾದ ವೈದ್ಯಕೀಯ ಪೂರೈಕೆ, ಔಷಧ, ಲಸಿಕೆ, ಆಹಾರ, ವಸ್ತುಗಳು ಹಾಗೂ ಇತರ ಪೂರೈಕೆ ಮತ್ತು ಸೇವೆಗಳನ್ನು ಒದಗಿಸಲು ಬದ್ಧವಾಗಿರುವುದಾಗಿ ಹೇಳಿವೆ. ಗಡಿಗಳ ಆಚೆಗೂ ಜನರ ಸಂಚಾರದ ಅಗತ್ಯವನ್ನೂ ಸಚಿವರು ಗುರುತಿಸಿದ್ದಾರೆ. ಕೊರೊನಾ ವೈರಸ್ ಹರಡದಂತೆ ಇದು ಹೇಗೆ ಸಾಧ್ಯ ಮಾಡಬಹುದು ಎಂಬ ಕುರಿತು ಚರ್ಚೆ ಆಗಿದೆ.

ವಿಯೆಟ್ನಾಮ್ ನ ಕೈಗಾರಿಕೆ ಮತ್ತು ವ್ಯಾಪಾರದ ಸಚಿವ ಟ್ರಾನ್ ಟೌನ್ ಅನ್ಹ್ ಈ ಸಭೆಯ ಅಧ್ಯಕ್ಷರಾಗಿದ್ದರು. ಭಾರತದಿಂದ ಪಿಯೂಷ್ ಗೋಯೆಲ್, ಆಸ್ಟ್ರೇಲಿಯಾ, ಚೀನಾ, ಜಪಾನ್, ದಕ್ಷಿಣ ಕೊರಿಯಾ, ನ್ಯೂಜಿಲ್ಯಾಂಡ್, ರಷ್ಯನ್ ಫೆಡರೇಷನ್ ಹಾಗೂ ಯುನೈಟೆಡ್ ಸ್ಟೇಟ್ಸ್ ನ ಹಣಕಾಸು ಸಚಿವರು ಭಾಗಿ ಆಗಿದ್ದರು.
ಕೊರೊನಾದಿಂದಾಗಿ ಈ ಹಿಂದೆ ಕಾಣದಂಥ ಸವಾಲುಗಳು ಸೃಷ್ಟಿಯಾಗಿವೆ. ವಿಶ್ವದಾದ್ಯಂತ ಜೀವಹಾನಿ ಮಾತ್ರವಲ್ಲ, ಆರ್ಥಿಕ ಸ್ಥಿತಿ ಕೂಡ ಅಧೋಗತಿಗೆ ತಲುಪಿದೆ ಎಂದು ಅವರು ಹೇಳಿದರು. ಪ್ರಾದೇಶಿಕ ಆರ್ಥಿಕ ಸಹಕಾರ ಬಲಪಡಿಸುವ ಅಗತ್ಯವನ್ನು ಒತ್ತು ನೀಡಿದ ಹೇಳಿದರು. ಕೊರೊನಾ ಬಿಕ್ಕಟ್ಟಿನಿಂದ ಉದ್ಭವಿಸಿರುವ ಆರ್ಥಿಕ ಪರಿಣಾಮ ಎದುರಿಸಲು ತಕ್ಷಣ ಕ್ರಮ ತೆಗೆದುಕೊಳ್ಳಬೇಕಾಗಿದೆ. ಪ್ರಾದೇಶಿಕವಾಗಿ ವ್ಯಾಪಾರ- ವ್ಯವಹಾರದಲ್ಲಿ ಮತ್ತೆ ನಂಬಿಕೆ ಮೂಡಿಸಬೇಕಿದೆ ಎಂದು ತಿಳಿಸಲಾಯಿತು.
ಪೂರ್ವ ಏಷ್ಯಾ ರಾಷ್ಟ್ರಗಳ ಆರ್ಥಿಕತೆ ಮಧ್ಯೆ ವ್ಯವಹಾರ, ಹೂಡಿಕೆ ಬಲವಾಗಿರುವುದನ್ನು ಸ್ವಾಗತಿಸಲಾಯಿತು. 2019ರಲ್ಲಿ ಒಟ್ಟಾರೆ ಜಿಡಿಪಿ 51.6 ಲಕ್ಷ ಕೋಟಿ ಅಮೆರಿಕನ್ ಡಾಲರ್ ತಲುಪಿದೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ 4.1% ಏರಿಕೆ ದಾಖಲಿಸಿದೆ. ASEAN ವ್ಯವಹಾರದಲ್ಲಿ ವಿದೇಶಿ ನೇರ ಬಂಡವಾಳ 6120 ಕೋಟಿ ಅಮೆರಿಕನ್ ಡಾಲರ್ ತಲುಪಿದೆ.
ASEAN ರಾಷ್ಟ್ರಗಳೆಂದರೆ ಬ್ರೂನೈ, ಕಾಂಬೋಡಿಯಾ, ಇಂಡೋನೇಷ್ಯಾ, ಲಾವೋಸ್, ಮಲೇಷ್ಯಾ, ಮ್ಯಾನ್ಮಾರ್, ಫಿಲಿಪೈನ್ಸ್, ಸಿಂಗಾಪೂರ್, ಥಾಯ್ಲೆಂಡ್, ವಿಯೆಟ್ನಾಂ ಒಳಗೊಂಡಿವೆ. ಕೊರೊನಾ ಬಿಕ್ಕಟ್ಟಿನಿಂದ ಹೊರಬರಲು ASEAn COVID- 19 ಪರಿಹಾರ ನಿಧಿ ಸ್ಥಾಪಿಸಲು ಮುಂದಾಗಿರುವುದನ್ನು ಸ್ವಾಗತಿಸಲಾಯಿತು.


Click it and Unblock the Notifications