ಭಾರತದ ಮೂರನೇ ಅತಿ ದೊಡ್ಡ ಖಾಸಗಿ ಬ್ಯಾಂಕ್ ಆದ ಆಕ್ಸಿಸ್ ಬ್ಯಾಂಕ್ ನಿಂದ 75 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಉದ್ಯೋಗಿಗಳಿಗೆ 12 ಪರ್ಸೆಂಟ್ ತನಕ ವೇತನ ಹೆಚ್ಚಳ ಮಾಡಲಾಗುವುದು. ಈ ಬಗ್ಗೆ ಮಂಗಳವಾರ ಮೂಲಗಳು ಮಾಹಿತಿಯನ್ನು ಹೊರಹಾಕಿವೆ. ಕೆಲ ಶ್ರೇಣಿಯ ಕೆಳಗೆ ಇರುವ ಅಧಿಕಾರಿಗಳಿಗೆ ಈಗಾಗಲೇ ಆಕ್ಸಿಸ್ ಬ್ಯಾಂಕ್ ವಾರ್ಷಿಕ ಬೋನಸ್ ನೀಡಿಯಾಗಿದೆ. ಮೂಲಗಳು ತಿಳಿಸುವಂತೆ, ಈಗ ಎಲ್ಲರಿಗೂ ವಿತರಿಸಲಿದೆ.
ಕೊರೊನಾ ಜಾಗತಿಕ ಬಿಕ್ಕಟ್ಟು ಎಂಬ ಕಾರಣಕ್ಕೆ ಎಷ್ಟೋ ಸಂಸ್ಥೆಗಳು ಮುಚ್ಚುತ್ತಿವೆ, ವೇತನ ಕಡಿತ ಮಾಡುತ್ತಿವೆ ಅಥವಾ ವೇತನ ನಿಲ್ಲಿಸುತ್ತಿವೆ, ಇದು ಅದು ಎಂಬ ಭೇದ ಇಲ್ಲದೆ ವಿವಿಧ ವಲಯದ ಉದ್ಯೋಗಿಗಳಿಗೆ ವೇತನ ಹೆಚ್ಚಳ ಆಗಿಲ್ಲ. ಅಂಥದ್ದರಲ್ಲಿ ಹಲವು ದೊಡ್ಡ ಖಾಸಗಿ ಬ್ಯಾಂಕ್ ಗಳು ತಮ್ಮ ಉದ್ಯೋಗಿಗಳಿಗೆ ವಾರ್ಷಿಕ ವೇತನ ಹೆಚ್ಚಳವನ್ನು ಮಾಡಿವೆ.
ಅಕ್ಟೋಬರ್ 1ನೇ ತಾರೀಕಿನಿಂದ ವೇತನ ಹೆಚ್ಚಳ ಅನ್ವಯ
ಮೂಲಗಳು ಮಾತನಾಡಿ, "ವೈಯಕ್ತಿಕ ಮಟ್ಟದಲ್ಲಿ ವೇತನ ಹೆಚ್ಚಳ ಮತ್ತು ಬೋನಸ್ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ," ಎಂದಿವೆ. ಇನ್ನು ವೇತನ ಹೆಚ್ಚಳ ಎಷ್ಟಿರುತ್ತದೆ ಎಂಬ ಪ್ರಶ್ನೆಗೆ, 4ರಿಂದ 12 ಪರ್ಸೆಂಟ್ ತನಕ, ಆಯಾ ವ್ಯಕ್ತಿಯ ವೈಯಕ್ತಿಕ ಸಾಮರ್ಥ್ಯ ಹಾಗೂ ಕೆಲಸ ನಿರ್ವಹಣೆ ಆಧಾರದಲ್ಲಿ ಎಂಬ ಉತ್ತರ ಸಿಗುತ್ತದೆ. ಈ ಹೆಚ್ಚಳವು ಅಕ್ಟೋಬರ್ 1ನೇ ತಾರೀಕಿನಿಂದ ಅನ್ವಯ ಆಗಲಿದೆ. ಸಾಮಾನ್ಯವಾಗಿ ಪ್ರತಿ ವರ್ಷ ಏಪ್ರಿಲ್ 1ನೇ ತಾರೀಕಿನಿಂದ ಜಾರಿಗೆ ಬರುತ್ತದೆ.
ಬಾಕಿ ಇರುವ ಎಲ್ಲ ಸಿಬ್ಬಂದಿಗೆ ಬೋನಸ್
ಈ ಹಿಂದೆ ಅನುಸರಿಸಿಕೊಂಡು ಬರುತ್ತಿದ್ದ ರೀತಿಯಲ್ಲೇ ಬಡ್ತಿಯನ್ನು ನೀಡಲಾಗುತ್ತದೆ. ಆದರೆ ಬೋನಸ್ ಅನ್ನು ಡೆಪ್ಯೂಟಿ ವೈಸ್ ಪ್ರೆಸಿಡೆಂಟ್ ಹುದ್ದೆಯ ತನಕ ನೀಡಲಾಗುತ್ತದೆ. ಈಗ ಯಾವ ಸಿಬ್ಬಂದಿಗೆ ಬೋನಸ್ ಬಾಕಿ ಇತ್ತು, ಎಲ್ಲರಿಗೂ ಸಿಗುತ್ತದೆ. ಈ ಮಾಹಿತಿ ಕುರಿತಂತೆ ಪ್ರತಿಕ್ರಿಯೆ ಪಡೆಯಲು ಮಾಧ್ಯಮಗಳಿಂದ ಬ್ಯಾಂಕ್ ವಕ್ತಾರರಿಗೆ ಕಳುಹಿಸಿದ ಇ ಮೇಲ್ ಗೆ ಪ್ರತಿಕ್ರಿಯೆ ಬಂದಿಲ್ಲ.
ಎಚ್ ಡಿಎಫ್ ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ನಿಂದಲೂ ವೇತನ ಹೆಚ್ಚಳ
ಈಗಾಗಲೇ ಬಂದಿರುವ ವರದಿ ಪ್ರಕಾರ, ಈ ಹಿಂದಿನ ಯೋಜನೆಯಂತೆಯೇ ಎಚ್ ಡಿಎಫ್ ಸಿ ಬ್ಯಾಂಕ್ ನಿಂದ ವೇತನ ಹೆಚ್ಚಳ ಆಗಲಿದೆ. ಇನ್ನು ಬ್ಯಾಂಕ್ ನಿಂದ ನಿರ್ಗಮಿಸುತ್ತಿರುವ ಸಿಇಒ ಹಾಗೂ ಎಂ.ಡಿ. ಆದಿತ್ಯ ಪುರಿ ಅವರು ಸಿಬ್ಬಂದಿಗೆ ಉದ್ಯೋಗ ಖಾತ್ರಿ, ವೇತನ ಹೆಚ್ಚಳ ಮತ್ತು ಬೋನಸ ಸಿಗುವ ಬಗ್ಗೆ ಭರವಸೆ ನೀಡಿದ್ದಾರೆ. ಐಸಿಐಸಿಐ ಬ್ಯಾಂಕ್ ನಿಂದ ಕೂಡ ದೊಡ್ಡ ಸಂಖ್ಯೆಯ ಸಿಬ್ಬಂದಿಗೆ ವೇತನ ಹೆಚ್ಚಳ ಮಾಡಲಾಗಿದೆ. ಆದರೆ ಮಾಮೂಲಿಗಿಂತ ಸ್ವಲ್ಪ ತಡವಾಗಿ ಪಡೆದಿದ್ದಾರೆ.


Click it and Unblock the Notifications