ಪ್ರಸ್ತುತ ಜಾಗತಿಕವಾಗಿ ಬ್ಯಾಂಕಿಂಗ್ ವಲಯದಲ್ಲಿ ಬಿಕ್ಕಟ್ಟು ಕಂಡು ಬಂದಿದೆ. ಸಿಲಿಕಾನ್ ವ್ಯಾಲಿ ಬ್ಯಾಂಕ್ ಹಣಕಾಸು ಸಂಕಷ್ಟದಿಂದ ಮುಚ್ಚಿದ ಬಳಿಕ ಸಿಗ್ನೇಚರ್ ಬ್ಯಾಂಕ್ ಕೂಡಾ ಮುಚ್ಚಲ್ಪಟ್ಟಿದೆ. ಇದಾದ ಬೆನ್ನಲ್ಲೇ ಕ್ರೆಡಿಟ್ ಸ್ಯೂಸ್‌ನಲ್ಲಿ ಭಾರೀ ಆರ್ಥಿಕ ಬಿಕ್ಕಟ್ಟು ಕಂಡು ಬಂದಿದೆ. ಬೇರೆ ಬ್ಯಾಂಕುಗಳು ಇದನ್ನು ಖರೀದಿ ಮಾಡುತ್ತದೆಯೇ ಎಂಬ ಸುದ್ದಿಗಳು ಕೂಡಾ ಹರಿದಾಡಿದೆ. ಈಗ ಕ್ರೆಡಿಟ್ ಸ್ಯೂಸ್ ಅನ್ನು ಬ್ಯಾಂಕಿಂಗ್ ವಲಯದ ದೈತ್ಯವಾದ ಯುಬಿಎಸ್ ಖರೀದಿ ಮಾಡುತ್ತಿದೆ ಎಂದು ವರದಿಯಾಗಿದೆ.
ಮಾರುಕಟ್ಟೆಯಲ್ಲಿ ಉಂಟಾಗುತ್ತಿರುವ ಆತಂಕಕಾರಿ ಬೆಳವಣಿಗೆಯನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಸ್ವಿಸ್ ರೆಗ್ಯೂಲೇಟರ್ಸ್ (ಸ್ವಿಸ್ ನಿಯಂತ್ರಕರು) ಈ ಕ್ರೆಡಿಟ್ ಸ್ಯೂಸ್ ಡೀಲ್‌ನ ಮಧ್ಯಸ್ಥಿಕೆಯನ್ನು ವಹಿಸಿಕೊಂಡಿದೆ. ಇದು ಬರೋಬ್ಬರಿ 3.2 ಬಿಲಿಯನ್ ಡಾಲರ್‌ನ ಡೀಲ್ ಆಗಿದೆ. ಸುಮಾರು 5.4 ಬಿಲಿಯನ್ ಡಾಲರ್ ನಷ್ಟವನ್ನು ಒಪ್ಪಿ ಕ್ರೆಡಿಟ್ ಸ್ಯೂಸ್ ಖರೀದಿಗೆ ಯುಬಿಎಸ್ ಮುಂದಾಗಿದ್ದು, ಈ ಐತಿಹಾಸಿಕ ಡೀಲ್ 2023ರ ಅಂತ್ಯದೊಳಗೆ ಪೂರ್ಣವಾಗುವ ನಿರೀಕ್ಷೆಯಿದೆ.

ಕ್ರೆಡಿಟ್ ಸ್ಯೂಸ್ ಬ್ಯಾಂಕ್‌ನ ಬಿಕ್ಕಟ್ಟಿನ ಬಗ್ಗೆ ಮಾಹಿತಿ
ಕ್ರೆಡಿಟ್ ಸ್ಯೂಸ್ ಹಾಗೂ ಇತರೆ ಬ್ಯಾಂಕುಗಳು ಷೇರು ಮೌಲ್ಯವು ಕಳೆದ ವಾರದಲ್ಲಿ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದೆ. ಮುಖ್ಯವಾಗಿ, ಎರಡು ಯುಎಸ್‌ನ ಬ್ಯಾಂಕ್‌ಗಳಾದ ಸಿಲಿಕಾನ್ ವ್ಯಾಲಿ ಹಾಗೂ ಸಿಗ್ನೇಚರ್ ಬ್ಯಾಂಕ್ ಬಂದ್ ಆದ ಬಳಿಕ ಬ್ಯಾಂಕಿಂಗ್ ವಲಯದಲ್ಲಿ ಗಂಭೀರ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಕ್ರೆಡಿಟ್ ಸ್ಯೂಸ್ ಅನ್ನು ಖರೀದಿ ಮಾಡಲು ಬ್ಯಾಂಕಿಂಗ್ ದೈತ್ಯ ಯುಬಿಎಸ್ ನಿರ್ಧಾರವನ್ನು ವಾಷಿಂಗ್ಟನ್, ಲಂಡನ್, ಬ್ರಸೆಲ್ ಸ್ವಾಗತಿಸಿದೆ. ವಿಶ್ವದ ಅತೀ ಪ್ರಮುಖ 30 ಹಣಕಾಸು ಸಂಸ್ಥೆಗಳಲ್ಲಿ ಕ್ರೆಡಿಟ್ ಸ್ಯೂಸ್ ಕೂಡಾ ಒಂದಾಗಿದೆ. ಈ ಬ್ಯಾಂಕ್‌ನ ವೈಫಲ್ಯ ಬೇರೆ ಬ್ಯಾಂಕ್‌ಗಳ ಮೇಲೆಯೂ ಪ್ರಭಾವ ಬೀರುವ ಆತಂಕವಿತ್ತು.
ಹಣಕಾಸು ವರದಿಯಲ್ಲಿ ಕೆಲವು ತೊಂದರೆಗಳನ್ನು ಕ್ರೆಡಿಟ್ ಸ್ಯೂಸ್ ಘೋಷಣೆ ಮಾಡಿದ ಬಳಿಕ ಈ ಬಿಕ್ಕಟ್ಟು ಆರಂಭವಾಗಿದೆ. ಕ್ರೆಡಿಟ್ ಸ್ಯೂಸ್‌ನ ವರದಿಯು ಜಾಗತಿಕ ಮಾರುಕಟ್ಟೆಯ ಮೇಲೆ ಭಾರೀ ಪ್ರಭಾವ ಬೀರಿದೆ. ಹೂಡಿಕೆದಾರರು ಹೆಚ್ಚಿನ ಹೂಡಿಕೆ ಮಾಡುವರಿಂದ ಹಿಂಜರಿದಿದ್ದಾರೆ. ಕ್ರೆಡಿಡ್ ಸ್ಯೂಸ್ ಸ್ಟಾಕ್ ಶೇಕಡ 30ರಷ್ಟು ಕುಸಿತ ಕಂಡಿದೆ. ಹೂಡಿಕೆದಾರರು ಮತ್ತು ಗ್ರಾಹಕರ ವಿಶ್ವಾಸವನ್ನು ಮತ್ತೆ ಪಡೆದುಕೊಳ್ಳುವ ನಿಟ್ಟಿನಲ್ಲಿ ಕ್ರೆಡಿಟ್ ಸ್ಯೂಸ್ 54 ಬಿಲಿಯನ್ ಡಾಲರ್ ಸಹಾಯಕ್ಕಾಗಿ ಅಥವಾ ಸಾಲಕ್ಕಾಗಿ ಕೇಂದ್ರೀಯ ಬ್ಯಾಂಕ್ ಕದ ತಟ್ಟಿತ್ತು.
ವಿಲೀನದ ಬಳಿಕ ಷೇರುಗಳ ಹಂಚಿಕೆ ಹೇಗಿರಲಿದೆ?
ಇನ್ನು ವಿಲೀನದ ಬಳಿಕ ಷೇರುಗಳ ಹಂಚಿಕೆ ಹೇಗಿರಲಿದೆ ಎಂಬ ಬಗ್ಗೆಯೂ ಕ್ರೆಡಿಟ್ ಸ್ಯೂಸ್ ಮಾಹಿತಿ ನೀಡಿದೆ. ಯುಬಿಎಸ್ ಕ್ರೆಡಿಟ್ ಸ್ಯೂಸ್ ಅನ್ನು ಖರೀದಿ ಮಾಡಲಿದೆ. ಇದು ಸುಮಾರು ಮೂರು ಬಿಲಿಯನ್ ಡಾಲರ್‌ನ ಡೀಲ್ ಆಗಿದೆ. ಕ್ರೆಡಿಟ್ ಸ್ಯೂಸ್ - ಯುಬಿಎಸ್ ಡೀಲ್ ಬಳಿಕ ಕ್ರೆಡಿಟ್ ಸ್ಯೂಸ್‌ನ ಷೇರುದಾರರು ಪ್ರತಿ 22.48 ಕ್ರೆಡಿಟ್ ಸ್ಯೂಸ್ ಷೇರಿಗೆ ಒಂದು ಯುಬಿಎಸ್ ಷೇರನ್ನು ಪಡೆಯಲಿದ್ದಾರೆ ಎಂದು ಹೇಳಿದೆ. ಕ್ರೆಡಿಟ್ ಸ್ಯೂಸ್‌ನ ಟೈರ್ 1 ಷೇರು ಮೌಲ್ಯವು 16 ಬಿಲಿಯನ್ ಸ್ವಿಸ್ ಫ್ರಾನ್ಸ್ಕ್ ಆಗಿದೆ. ಅಂದರೆ 17.2 ಬಿಲಿಯನ್ ಡಾಲರ್ ಆಗಿದೆ.
ಇನ್ನು ಈ ಹಿಂದೆ ಹೂಡಿಕೆದಾರರ ಆತಂಕವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸ್ವಿಸ್ ಫೈನಾನ್ಶಿಯಲ್ ರೆಗ್ಯೂಲೇಟರ್ ಎಫ್‌ಐಎನ್‌ಎಂಎ ಮತ್ತು ರಾಷ್ಟ್ರದ ಕೇಂದ್ರ ಬ್ಯಾಂಕ್ ಜಂಠಿ ಹೇಳಿಕೆಯನ್ನು ನೀಡಿದೆ. "ಪ್ರಮುಖ ಬ್ಯಾಂಕ್‌ಗಳ ಮೇಲೆ ವಿಧಿಸಲಾದ ಬಂಡವಾಳ ಮತ್ತು ಸಾಲದ ಅಗತ್ಯತೆಯನ್ನು ಪೂರೈಸಲಾಗುವುದು," ಎಂದು ಹೇಳಿದೆ.


Click it and Unblock the Notifications