ಚಾಮರಾಜಪೇಟೆಗೂ ಬಿಬಿಸಿ ಚಾನೆಲ್ ಗೂ ನಂಟು ತೋರಿಸುವ ವರದಿ ಇದು. ಬುಧವಾರ ಬೆಳಗ್ಗೆ ತಿಂಡಿಕೇಂದ್ರವೊಂದಕ್ಕೆ ಬಂದ ಬಿಬಿಸಿ ಚಾನೆಲ್ ನ ಪ್ರತಿನಿಧಿಗಳು ಚಿತ್ರಾನ್ನಕ್ಕೆ ಹಾಕುವ ಅರಿಶಿಣದ ಬಗ್ಗೆ ಕಾರ್ಯಕ್ರಮವೊಂದನ್ನು ಮಾಡಿಕೊಂಡಿದ್ದಾರೆ. ಭಾರತೀಯ ಆಹಾರ ಕ್ರಮಕ್ಕೆ ಜಾಗತಿಕ ಮಟ್ಟದಲ್ಲಿ ಹೇಗೆ ಬೇಡಿಕೆ ಇದೆ ಎಂದು ತೋರಿಸುವ ನಿದರ್ಶನ ಇದು.
ಚಾಮರಾಜಪೇಟೆಯ ಎರಡನೇ ಮುಖ್ಯರಸ್ತೆಯ, ಮೂರನೇ ಅಡ್ಡ ರಸ್ತೆಯಲ್ಲಿ ಬಾಟಾ ಶೋರೂಂ ಎದುರಿಗೆ ಕನ್ನಡ ತಿಂಡಿ ಕೇಂದ್ರ ಎಂಬುದೊಂದು ಪುಟ್ಟ ಹೋಟೆಲ್ ಇದೆ. ಅಕ್ಕ-ಪಕ್ಕದಲ್ಲೇ ಅಣ್ಣ- ತಮ್ಮ ಕೆ. ವಿ. ಅಶ್ವತ್ಠನಾರಾಯಣ ಮತ್ತು ಕೆ.ವಿ. ರಾಮಚಂದ್ರ ಅವರು ಈ ವ್ಯವಹಾರ ನೋಡಿಕೊಳ್ಳುತ್ತಾರೆ.
ದಶಕಗಳಿಂದ ನಡೆಯುತ್ತಿರುವ ಇವರಿಬ್ಬರ ತಿಂಡಿಕೇಂದ್ರಕ್ಕೆ ನೂರಾರು ಸಂಖ್ಯೆಯಲ್ಲಿ ಜನರು ಬರುತ್ತಾರೆ. ಅಷ್ಟೇ ಆಗಿದ್ದರೆ ಇದು ಬೇರೆಲ್ಲ ತಿಂಡಿ ಕೇಂದ್ರಗಳಂತೆಯೇ ಆಗಿರುತ್ತಿತ್ತು. ಆದರೆ ಈ ಸೋದರರ ಕನ್ನಡ ಪ್ರೇಮ, ಸಾಮಾಜಿಕ ಸೇವೆ, ಅಂಗದಾನದ ಬಗ್ಗೆ ನಡೆಸುತ್ತಿರುವ ಜಾಗೃತಿ ಅಭಿಯಾನ ಇವೆಲ್ಲವೂ ಸೇರಿ ಕನ್ನಡ ತಿಂಡಿ ಕೇಂದ್ರದ ಬಗ್ಗೆ ಭಾವನಾತ್ಮಕ ನಂಟನ್ನೂ ಬೆಸೆದಿದೆ. ಕನ್ನಡ ತಿಂಡಿ ಕೇಂದ್ರದಲ್ಲಿ ರೈಸ್ ಬಾತ್ ಮತ್ತಿತರ ಖಾದ್ಯಗಳಿಗೆ ಕನ್ನಡ ಸಾಹಿತಿಗಳ ಹೆಸರನ್ನು ಇಡಲಾಗಿದೆ.

ನೂರಾ ಮೂವತ್ತು ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ ಭಾರತದಲ್ಲಿ ಆಹಾರ ಕ್ರಮಗಳು ನಾನಾ ಬಗೆಯಲ್ಲಿ ಇವೆ. ಅದರಲ್ಲೂ ಬೆಂಗಳೂರಲ್ಲಿ ನಾನಾ ಬಗೆಯ, ನಾನಾ ವಿಧದ ಆಹಾರ ಖಾದ್ಯಗಳು ದೊರೆಯುತ್ತವೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬಿಬಿಸಿ ಚಾನೆಲ್ ನಿಂದ ಕರ್ನಾಟಕದ ಆಹಾರ ಪದಾರ್ಥಗಳು, ಇಲ್ಲಿನ ವಿಧಾನಗಳ ಬಗ್ಗೆ ಚಿತ್ರೀಕರಣ ನಡೆಯುವುದರಲ್ಲಿ ಏನೂ ಅಚ್ಚರಿ ಇಲ್ಲ, ಅಲ್ಲವೆ?


Click it and Unblock the Notifications