ಮುಂಬರುವ ಬಜೆಟ್‌ನಲ್ಲಿ ಮೂಲಸೌಕರ್ಯ ಯೋಜನೆಗಳು ಮತ್ತು ವಿವಿಧ ಯೋಜನೆಗಳನ್ನು ಜಾರಿಗೊಳಿಸಲು 8,050 ಕೋಟಿ ರೂಪಾಯಿಗಳ ಆರ್ಥಿಕ ನೆರವು ನೀಡುವಂತೆ ಬಿಬಿಎಂಪಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ.
ಬಿಬಿಎಂಪಿ ಅಧಿಕಾರಿಗಳ ಪ್ರಕಾರ, ಗುತ್ತಿಗೆದಾರರಿಗೆ ಬಾಕಿ ಬಿಲ್ ಪಾವತಿ ಮತ್ತು ನಡೆಯುತ್ತಿರುವ ಕಾಮಗಾರಿಗಳಿಗೆ ಸುಮಾರು 3,000 ಕೋಟಿ ರೂಪಾಯಿ ಆಗುತ್ತದೆ. ಗುತ್ತಿಗೆದಾರರಿಗೆ ಬಿಬಿಎಂಪಿ ನೀಡಬೇಕಿರುವ ಒಟ್ಟು ಮೊತ್ತ 2,700 ಕೋಟಿ ರೂಪಾಯಿ ಎಂದು ಪಾಲಿಕೆ ಮೂಲಗಳು ಟೈಮ್ಸ್ ಆಫ್ ಇಂಡಿಯಾಕ್ಕೆ ತಿಳಿಸಿದೆ.

ಯಾವುದಕ್ಕೆ ಎಷ್ಟು?
ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ 200 ಕೋಟಿ ರೂಪಾಯಿ, ಘನತ್ಯಾಜ್ಯ ನಿರ್ವಹಣೆಗೆ 600 ಕೋಟಿ ರೂಪಾಯಿ, ಮಳೆ ನೀರು ಚರಂಡಿಗಳ ಅಭಿವೃದ್ಧಿಗೆ 200 ಕೋಟಿ ರೂಪಾಯಿ ಬೇಕಾಗುತ್ತದೆ ಎಂದು ಬಿಬಿಎಂಪಿ ಅಂದಾಜು ಮಾಡಿದೆ. ಉಳಿದ ಹಣವನ್ನು ಹೊಸ ಯೋಜನೆಗಳ ಅನುಷ್ಠಾನಕ್ಕೆ ಬಳಸಲಾಗುವುದು.
ಮೂಲಗಳ ಪ್ರಕಾರ, ಬಿಬಿಎಂಪಿ ಕಳೆದ ವರ್ಷ ಸುಮಾರು 9,000 ಕೋಟಿ ಅನುದಾನವನ್ನು ಕೋರಿತ್ತು ಮತ್ತು ಸರ್ಕಾರ ಕೇವಲ 3,732 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡುತ್ತದೆ. ಈ ಬಾರಿ ನಗರದ ಮೊದಲ ಸುರಂಗ ರಸ್ತೆ ಯೋಜನೆ ಮತ್ತು ಸ್ಕೈ ಡೆಕ್ ಯೋಜನೆಯನ್ನು ಪ್ರಾರಂಭಿಸಲು ಸರ್ಕಾರ ಉತ್ಸುಕವಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ, ಅಧಿಕಾರಿಗಳು ತಾವು ಕೇಳಿದ ಹಣವನ್ನು ಸರ್ಕಾರ ಮಂಜೂರು ಮಾಡುವ ನಿರೀಕ್ಷೆಯಲ್ಲಿದ್ದಾರೆ.
ಕರ್ನಾಟಕ ಬಜೆಟ್
ಸೋಮವಾರದಿಂದ ಕರ್ನಾಟಕ ವಿಧಾನಮಂಡಲದ 10 ದಿನಗಳ ಬಜೆಟ್ ಅಧಿವೇಶನ ಆರಂಭವಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ತಮ್ಮ ದಾಖಲೆಯ 15 ನೇ ಬಜೆಟ್ ಅನ್ನು ಮಂಡಿಸಲಿದ್ದು, ಅವರ ಹಿಂದಿನ ಬಜೆಟ್‌ಗಿಂತ ಸುಮಾರು 70,000 ಕೋಟಿ ರೂಪಾಯಿ ಅಧಿಕವಾಗುವ ನಿರೀಕ್ಷೆಯಿದೆ. ಕಳೆದ ವರ್ಷ ಜುಲೈನಲ್ಲಿ ಸಿಎಂ ಅವರ ಹಿಂದಿನ ಬಜೆಟ್ ಒಟ್ಟು 3,27,747 ಕೋಟಿ ರೂಪಾಯಿಯದ್ದಾಗಿತ್ತು. ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ ಫೆಬ್ರವರಿ 2023 ರಲ್ಲಿ ಅವರ ಹಿಂದಿನ ಬಸವರಾಜ್ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್‌ನಲ್ಲಿ 3,09,182 ಕೋಟಿ ರೂಪಾಯಿ ಇತ್ತು.
ಬೆಂಗಳೂರಿನ ನಿರೀಕ್ಷೆಯೇನು?
ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ಹೆಬ್ಬಾಳ ಜಂಕ್ಷನ್‌ನಿಂದ ಮೇಖ್ರಿ ವೃತ್ತದವರೆಗೆ ಸುರಂಗ ರಸ್ತೆ ನಿರ್ಮಾಣ ಮಾಡುವುದು. ಐಟಿ, ನಗರಾಭಿವೃದ್ಧಿಗೆ ಉತ್ತೇಜನ ನೀಡುವುದು. ಇಂದಿರಾ ಕ್ಯಾಂಟೀನ್‌ಗಳಿಗೆ ಆಹಾರ ಪೂರೈಕೆ ಹಾಗೂ ನಿರ್ವಹಣೆಗೆ 200 ಕೋಟಿ ರೂಪಾಯಿ ನೀಡುವುದು.
ಬಿಬಿಎಂಪಿ ವ್ಯಾಪ್ತಿಯಲ್ಲಿ ನಿತ್ಯ ಉತ್ಪತ್ತಿಯಾಗುವ ಘನತ್ಯಾಜ್ಯ ನಿರ್ವಹಣೆಗೆ 600 ಕೋಟಿ ರೂಪಾಯಿ ವಿನಿಯೋಗ ಮಾಡುವುದು. ನಗರದಲ್ಲಿನ 75 ಪ್ರಮುಖ ಜಂಕ್ಷನ್‌ಗಳ ಅಭಿವೃದ್ಧಿಗಾಗಿ 100 ಕೋಟಿ ರೂಪಾಯಿ ಅನುದಾನ ನಿರೀಕ್ಷೆಯಿದೆ. ರಸ್ತೆಗಳ ವೈಟ್‌ಟಾಪಿಂಗ್‌ಗೆ 1700 ಕೋಟಿ ರೂಪಾಯಿ ನಿರೀಕ್ಷೆಯಿದೆ. 350 ಮೀಟರ್ ಎತ್ತರದ ಸ್ಕೈ ಡೆಕ್ ನಿರ್ಮಾಣದ ಬೇಡಿಕೆಯಿದೆ.


Click it and Unblock the Notifications