ಜಾಗತಿಕವಾಗಿ ಹಲವಾರು ದಿನಗಳನ್ನು ಆಚರಣೆ ಮಾಡಲಾಗುತ್ತದೆ. ಅದರಲ್ಲಿ ವಿಶ್ವ ನಿದ್ರಾ ದಿನ ಕೂಡಾ ಒಂದಾಗಿದೆ. ಇಂದು ಅಂದರೆ, ಮಾರ್ಚ್ 17ರಂದು ವಿಶ್ವ ನಿದ್ರಾ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಈ ನಡುವೆ ಬೆಂಗಳೂರಿನ ಸಂಸ್ಥೆಯೊಂದು ನಿದ್ರಾ ದಿನಕ್ಕೆ ತನ್ನ ಉದ್ಯೋಗಿಗಳಿಗೆ ವಿಶೇಷ ರಜೆಯನ್ನು ಘೋಷಣೆ ಮಾಡಿದೆ. ಹೋಮ್ ಆಂಡ್ ಸ್ಲೀಪ್ ಸೊಲ್ಯೂಷನ್ ಸ್ಟಾರ್ಟ್‌ಅಪ್ ಸಂಸ್ಥೆಯಾದ ವೇಕ್‌ಫಿಟ್ ಸುಲ್ಯೂಷನ್ ತನ್ನ ಉದ್ಯೋಗಿಗಳಿಗೆ ರಜೆ ಘೋಷಣೆ ಮಾಡಿದೆ.
ಈ ಬಗ್ಗೆ ಲಿಂಕ್ಡಿನ್‌ನಲ್ಲಿ ಸಂಸ್ಥೆಯು ಮಾಹಿತಿ ನೀಡಿದೆ. ವಿಶ್ವ ನಿದ್ರಾ ದಿನದ ಸಲುವಾಗಿ ನಾವು ಸಂಸ್ಥೆಯ ಉದ್ಯೋಗಿಗಳಿಗೆ ವಿಶೇಷ ರಜೆಯನ್ನು ಘೋಷಣೆ ಮಾಡಿದ್ದೇವೆ, ಎಂದು ಬೆಂಗಳೂರು ಮೂಲದ ಸಂಸ್ಥೆ ಹೇಳಿಕೊಂಡಿದೆ. "ಶುಕ್ರವಾರ ಮಾರ್ಚ್ 17ರಂದು ವೇಕ್‌ಫಿಟ್ ಸಂಸ್ಥೆ ಅಂತಾರಾಷ್ಟ್ರೀಯ ನಿದ್ರಾ ದಿನವನ್ನು ಆಚರಣೆ ಮಾಡುತ್ತಿದ್ದೇವೆ ಎಂದು ಹೇಳಲು ಸಂತಸವಾಗುತ್ತಿದೆ. ಈ ದಿನ ನಮ್ಮ ಎಲ್ಲ ಉದ್ಯೋಗಿಗಳಿಗೆ ವಿಶೇಷವಾದ ಆಪ್‌ಷನಲ್ ರಜೆಯನ್ನು ಘೋಷಣೆ ಮಾಡಲಾಗುತ್ತಿದೆ," ಎಂದು ವೇಕ್‌ಫಿಟ್ ಸಂಸ್ಥೆ ತಿಳಿಸಿದೆ.

ಲಿಂಕ್ಡಿನ್‌ನಲ್ಲಿ ಸಂಸ್ಥೆ ಹೇಳಿರುವುದು ಏನು?
"ನಿದ್ರೆಗೆ ಅಧಿಕ ಪ್ರಾಮುಖ್ಯತೆಯನ್ನು ನೀಡುವ ನಾವು, ವಿಶ್ವ ನಿದ್ರಾ ದಿನವನ್ನು ಹಬ್ಬವನ್ನಾಗಿ ಪರಿಗಣಿಸುತ್ತೇವೆ. ಅದು ಕೂಡಾ ಮುಖ್ಯವಾಗಿ ಶುಕ್ರವಾರದಂದು ಈ ದಿನ ಬರುವುದರಿಂದ ನಾವು ಅತೀ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದ್ದೇವೆ. ಇತರೆ ರಜೆಯನ್ನು ನೀವು ಪಡೆಯುವಂತೆಯೇ ಈ ರಜೆಯನ್ನು ಕೂಡಾ ಎಚ್‌ಆರ್ ಪೋರ್ಟಲ್ ಮೂಲಕ ಪಡೆದುಕೊಳ್ಳಬಹುದು," ಎಂದು ವೇಕ್‌ಫಿಟ್ ಸಂಸ್ಥೆಯು ಹೇಳಿಕೊಂಡಿದೆ.
"ನಮ್ಮ ಗ್ರೇಟ್ ಇಂಡಿಯನ್ ಸ್ಲೀಪ್ ಸ್ಕೋರ್‌ಕಾರ್ಡ್ 2022ರಲ್ಲಿ ಕೆಲಸದ ಅವಧಿಯಲ್ಲಿ ಉದ್ಯೋಗಿಗಳಿಗೆ ನಿದ್ದೆ ಬರುವ ಪ್ರಮಾಣವು ಶೇಕಡ 21ರಷ್ಟು ಏರಿಕೆಯಾಗಿದೆ ಎಂದು ಬಹಿರಂಗಪಡಿಸಿದೆ. ಹಾಗೆಯೇ ಜನರು ಅತೀ ಆಯಾಸವಾಗಿ ನಿದ್ರೆಯಿಂದ ಏಳುವುದು ಶೇಕಡ 11ರಷ್ಟು ಹೆಚ್ಚಳವಾಗಿದೆ ಎಂದು ಇದರಲ್ಲಿ ಉಲ್ಲೇಖ ಮಾಡಲಾಗಿದೆ. ನಿದ್ರೆಯೂ ಕೂಡಾ ಜೀವನದ ಬಹುಮುಖ್ಯ ಅಂಗ ಎಂದು ನಾವು ಪರಿಗಣಿಸುತ್ತೇವೆ. ಈ ನಿಟ್ಟಿನಲ್ಲಿ ನಿದ್ರಾ ದಿನಕ್ಕೆ ರಜೆ ಘೋಷಿಸುತ್ತೇವೆ," ಎಂದು ಸಂಸ್ಥೆ ತಿಳಿಸಿದೆ.
ನಿದ್ರಾ ಪಾಲಿಸಿ ಜಾರಿ ಮಾಡಿದ್ದ ಸಂಸ್ಥೆ
ಕಳೆದ ವರ್ಷ ಸಂಸ್ಥೆಯು ತನ್ನ ಉದ್ಯೋಗಿಗಳಿಗೆ ನಿದ್ರಾ ಪಾಲಿಸಿಯನ್ನು ಜಾರಿ ಮಾಡಿದೆ. "ನಮ್ಮ ದೇಹವನ್ನು ಮತ್ತೆ ಚೈತನ್ಯಗೊಳಿಸಲು, ನಾವು ಮಾಡುವ ಕಾರ್ಯಕ್ಕೆ ಹೆಚ್ಚಿನ ಗಮನವನ್ನು ಕೊಡಲು ಮಧ್ಯಾಹ್ನದ ಹೊತ್ತಿನ ನಿದ್ದೆಯು ಅತೀ ಮುಖ್ಯವಾಗಿದೆ. ಉದ್ಯೋಗ ಸ್ಥಳದಲ್ಲಿ ಉತ್ಪಾದಕತೆ ಹೆಚ್ಚಿಸಲು, ಪ್ರೋತ್ಸಾಹ ನೀಡಲು ಇದು ಸಹಕಾರಿಯಾಗಿದೆ. ವರ್ಕ್ ಫ್ರಮ್ ಹೋಮ್ ವಿಚಾರಕ್ಕೆ ಬಂದಾಗ ಮಧ್ಯಾಹ್ನದ ನಿದ್ದೆ ಮುಖ್ಯವಾಗುತ್ತದೆ," ಎಂದು ಪಾಲಿಸಿಯಲ್ಲಿ ಸಂಸ್ಥೆಯು ತಿಳಿಸಿದೆ.
"ಸಂಸ್ಥೆಯು ನಿಧಾನವಾಗಿಯಾದರೂ ನಿರ್ದಿಷ್ಟವಾಗಿ ಮಧ್ಯಾಹ್ನದ ನಿದ್ದೆಯ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಂಡಿದೆ. ಆದ್ದರಿಂದಾಗಿ ಈ ನಮ್ಮ ನಿರ್ಧಾರದಿಂದಾಗಿ ಸಂಸ್ಥೆಯು ನಿದ್ರೆಯ ವಿಚಾರದಲ್ಲಿ ಒಂದು ಕ್ರಾಂತಿಯನ್ನೇ ಸೃಷ್ಟಿಸುವ ಪ್ರಯತ್ನ ಆಗಲಿದೆ. ಇತರೆ ಸಂಸ್ಥೆಗಳು ಕೂಡಾ ಈ ನಿದ್ರಾ ಪಾಲಿಸಿಯನ್ನು ಜಾರಿ ಮಾಡಲು ಪ್ರೋತ್ಸಾಹ ನೀಡಿದ್ದಂತೆ ಆಗುತ್ತದೆ," ಎಂದು ಸಂಸ್ಥೆ ಹೇಳಿದೆ.
ವಿಶ್ವ ನಿದ್ರಾ ದಿನದ ಬಗ್ಗೆ ತಿಳಿಯಿರಿ
ವಿಶ್ವ ನಿದ್ರಾ ದಿನ 2023ರ ಪ್ರಮುಖ ಥೀಮ್ ನಮ್ಮ ಆರೋಗ್ಯಕ್ಕೆ ನಿದ್ದೆ ಅತೀ ಮುಖ್ಯ ಎಂಬುವುದಾಗಿದೆ. ಉತ್ತಮ ಆಹಾರ ಸೇವನೆ, ವ್ಯಾಯಾಮದಂತೆಯೇ ನಿದ್ದೆ ಕೂಡಾ ನಮ್ಮ ದೈಹಿಕ, ಮಾನಸಿಕ, ಸಾಮಾಜಿಕ ಆರೋಗ್ಯಕ್ಕೆ ಮುಖ್ಯವಾಗಿದೆ. ಆದರೆ ಈ ಟೆಕ್ ಯುಗದಲ್ಲಿ ಸಾಮಾನ್ಯವಾಗಿ ನಿದ್ದೆಯನ್ನು ಪ್ರಮುಖ ಅಂಶವನ್ನಾಗಿ ಪರಿಗಣಿಸಲಾಗುತ್ತಿಲ್ಲ. ನಿದ್ದೆಯ ಪ್ರಾಮುಖ್ಯತೆಯನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ವಿಶ್ವ ನಿದ್ರಾ ದಿನವನ್ನು ಆಚರಿಸಲಾಗುತ್ತದೆ.


Click it and Unblock the Notifications