ನವದೆಹಲಿ, ಅ. 30: ಬೆಂಗಳೂರು ಮೂಲದ ಡಿಸಿಎಕ್ಸ್ ಸಿಸ್ಟಮ್ಸ್ ಸೇರಿದಂತೆ ನಾಲ್ಕು ಕಂಪನಿಗಳು ಈ ವಾರ ಐಪಿಒಗೆ ತೆರೆದುಕೊಳ್ಳುತ್ತಿವೆ. ಗ್ಲೋಬಲ್ ಹೆಲ್ತ್, ಫ್ಯೂಷನ್ ಮೈಕ್ರೋಫೈನಾನ್ಸ್ ಲಿ ಮತ್ತು ಬೀಕಾಜಿ ಫೂಡ್ಸ್ ಇಂಟರ್ನ್ಯಾಷನಲ್ ಸಂಸ್ಥೆಗಳು ಆರಂಭಿಕ ಸಾರ್ವಜನಿಕ ಕೊಡುಗೆಗಳನ್ನು (ಐಪಿಒ- ಇನಿಷಿಯಲ್ ಪಬ್ಲಿಕ್ ಆಫರಿಂಗ್) ಬಿಡುಗಡೆ ಮಾಡುತ್ತಿರುವ ಇತರ ಮೂರು ಕಂಪನಿಗಳು.
ಈ ನಾಲ್ಕು ಕಂಪನಿಗಳು 4,500 ಕೋಟಿ ರೂ ಮೊತ್ತಕ್ಕೆ ಷೇರುಗಳನ್ನು ಐಪಿಒ ಮೂಲಕ ನೀಡುತ್ತಿವೆ. ಗ್ಲೋಬಲ್ ಹೆಲ್ತ್ ಲಿ ಸಂಸ್ಥೆ ಮೇದಾಂತ ಬ್ರ್ಯಾಂಡ್‌ನ ಆಸ್ಪತ್ರೆಗಳನ್ನು ನಿರ್ವಹಿಸುತ್ತದೆ. ಬೆಂಗಳೂರಿನ ಡಿಸಿಎಕ್ಸ್ ಸಿಸ್ಟಮ್ಸ್ ಕಂಪನಿಯು ಕೇಬಲ್ ಮತ್ತು ವೈರ್ ಹಾರ್ನೆಸ್ ಅಸೆಂಬ್ಲಿಗಳನ್ನು ತಯಾರಿಸುತ್ತದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಐಪಿಒ ಸಂಖ್ಯೆ ಭಾರೀ ಕಡಿಮೆ ಆಗಿದೆ. 2021ರ ಕ್ಯಾಲೆಂಡರ್ ವರ್ಷದಲ್ಲಿ 63 ಐಪಿಒಗಳು ಬಿಡುಗಡೆಯಾಗಿ ಹೂಡಿಕೆದಾರರಿಂದ 1.19 ಲಕ್ಷ ಕೋಟಿ ರೂ ಬಂಡವಾಳವನ್ನು ಆಕರ್ಷಿಸಿದ್ದವು. 2022ರಲ್ಲಿ ಇಲ್ಲಿಯವರೆಗೆ 22 ಐಪಿಒಗಳು ಮಾತ್ರ ಬಂದಿವೆ. ಮುಂದಿನ ವಾರ ನಾಲ್ಕು ಕಂಪನಿಗಳದ್ದು ಸೇರಿ ನವೆಂಬರ್ ತಿಂಗಳಲ್ಲಿ ಆರೇಳು ಕಂಪನಿಗಳು ಐಪಿಒ ದಾರಿ ಹಿಡಿಯುತ್ತಿವೆ. ಆದರೂ ಕೂಡ ಈ ವರ್ಷ ಕಂಪನಿಗಳು ಹೂಡಿಕೆ ಆಕರ್ಷಿಸಲು ಐಪಿಒ ಮಾರ್ಗಕ್ಕೆ ಹೋಗಲು ಹಿಂದೇಟು ಹಾಕುತ್ತಿರುವುದು ಮೇಲ್ನೋಟಕ್ಕೆ ಕಾಣುತ್ತದೆ.
ಡಿಸಿಎಕ್ಸ್ ಸಂಸ್ಥೆಯ ಐಪಿಒ
ಬೆಂಗಳೂರಿನ ಡಿಸಿಎಕ್ಸ್ ಸಿಸ್ಟಮ್ಸ್ ಕೇಬಲ್ ಮತ್ತು ವೈರ್ ಅಸೆಂಬ್ಲಿಗಳನ್ನು ತಯಾರಿಸುವ ಕಂಪನಿ. ಅಕ್ಟೋಬರ್ 31ರಂದು ಡಿಸಿಎಕ್ಸ್‌ನ ಐಪಿಒ ಆರಂಭವಾಗುತ್ತದೆ. ನವೆಂಬರ್ 2ಕ್ಕೆ ಇದು ಮುಗಿಯುತ್ತದೆ.
ಐಪಿಒದಲ್ಲಿ ಡಿಸಿಎಕ್ಸ್ ಸಿಸ್ಟಮ್ಸ್‌ನ ಒಂದು ಷೇರಿನ ಬೆಲೆ 197ರಿಂದ 207 ರೂವರೆಗೂ ನಿಗದಿ ಮಾಡಲಾಗಿದೆ. ಇದರಲ್ಲಿ ಕಂಪನಿಯ ಪ್ರೊಮೋಟರ್‌ಗಳಾದ ಎನ್‌ಸಿಬಿಜಿ ಹೋಲ್ಡಿಂಗ್ಸ್ ಮತ್ತು ವಿಎನ್‌ಜಿ ಟೆಕ್ನಾಲಜಿ ಸಂಸ್ಥೆಗಳು 100 ಕೋಟಿ ರೂವರೆಗೂ ಈಕ್ವಿಟಿ ಷೇರುಗಳ ಮಾರಾಟವೂ ಈ ಐಪಿಒದಲ್ಲಿ ಒಳಗೊಂಡಿದೆ.
ಡಿಸಿಎಕ್ಸ್ ಸಿಸ್ಟಮ್ಸ್ ಭಾರತದ ಪ್ರಮುಖ ಕೇಬಲ್ ಮತ್ತು ವೈರ್ ಹಾರ್ನೆಸ್ ಅಸೆಂಬ್ಲಿ ತಯಾರಿಸುವ ಕಂಪನಿ. ವೈಮಾನಿಕ ಮತ್ತು ರಕ್ಷಣಾ ಯೋಜನೆಗಳಲ್ಲಿ ವಿದೇಶೀ ಮೂಲ ಉಪಕರಣ ತಯಾರಕರು ಭಾರತೀಯ ಪಾರ್ಟ್ನರ್ ಕಂಪನಿಯಾಗಿ ಡಿಸಿಎಕ್ಸ್ ಸಿಸ್ಟಮ್ಸ್‌ಗೆ ಹೆಚ್ಚು ಆದ್ಯತೆ ಕೊಡುತ್ತವೆ. ಕಳೆದ 10 ವರ್ಷಗಳಿಂದ ಡಿಸಿಎಕ್ಸ್ ಗಮನಾರ್ಹ ಬೆಳವಣಿಗೆ ಸಾಧಿಸಿದೆ. ಇಸ್ರೇಲ್, ಅಮೆರಿಕ, ಕೊರಿಯಾ ಮೊದಲಾದಕ ಕಡೆ 26 ಗ್ರಾಹಕರು ಡಿಸಿಎಕ್ಸ್ ಸಿಸ್ಟಮ್ಸ್‌ನ ಸೇವೆಯನ್ನು ಪಡೆಯುತ್ತಿವೆ.
ಡಿಸಿಎಕ್ಸ್ ಸಿಸ್ಟಮ್ಸ್ ಐಪಿಒ ನೀಡುವ ಮುನ್ನ ಅಕ್ಟೋಬರ್ 28ರಂದು ಆಂಕರ್ ಇನ್ವೆಸ್ಟ್‌ಮೆಂಟ್ ಮೂಲಕ 225 ಕೋಟಿ ರೂ ಸಂಗ್ರಹಿಸಿದೆ. ಆಂಕರ್ ಇನ್ವೆಸ್ಟ್‌ಮೆಂಟ್ ಎಂದರೆ ಸಾಂಸ್ಥಿಕ ಹೂಡಿಕೆ. ಶುಕ್ರವಾರದ ಆಂಕರ್ ಬುಕ್‌ನಲ್ಲಿ 12 ಹೂಡಿಕೆದಾರರು ಪಾಲ್ಗೊಂಡಿದ್ದರು. ಪ್ರತೀ ಷೇರಿಗೆ 207 ರೂಗಳಂತೆ 1.08 ಕೋಟಿ ರೂ ಮೊತ್ತದ ಈಕ್ವಿಟಿ ಷೇರುಗಳನ್ನು ಈ 12 ಸಂಸ್ಥೆಗಳು ಖರೀದಿಸಿವೆ. ಹೆಚ್‌ಡಿಎಫ್‌ಸಿ ಮ್ಯೂಚುವಲ್ ಫಂಡ್ ಮತ್ತು ಮೋತಿಲಾಲ್ ಓಸ್ವಾಲ್ ಮ್ಯೂಚುವಲ್ ಫಂಡ್‌ನಿಂದ 75 ಕೋಟಿ ರೂ ಹೂಡಿಕೆಯಾಗಿದೆ.
ಈಗ ಐಪಿಒ ಮೂಲಕ ಡಿಸಿಎಕ್ಸ್ ಸಿಸ್ಟಮ್ಸ್ 500 ಕೋಟಿ ರೂ ಬಂಡವಾಳ ಸಂಗ್ರಹದ ನಿರೀಕ್ಷೆಯಲ್ಲಿದೆ. ಇದರಲ್ಲಿ ಹೊಸ ಷೇರುಗಳ ಮೂಲಕ 400 ಕೋಟಿ ರೂ ಸಂಗ್ರಹಕ್ಕೆ ಗುರಿ ಇಡಲಾಗಿದೆ.
ಗ್ಲೋಬಲ್ ಹೆಲ್ತ್ ಐಪಿಒ
ಮೇದಾಂತ ಬ್ರ್ಯಾಂಡ್‌ನ ಆಸ್ಪತ್ರೆಗಳ ಮಾಲೀಕ ಗ್ಲೋಬಲ್ ಹೆಲ್ತ್ ಸಂಸ್ಥೆ ನವೆಂಬರ್ 3-7ರವರೆಗೆ ಐಪಿಒ ಆಫರ್ ಕೊಟ್ಟಿದೆ. ಒಟ್ಟು 2,206 ಕೋಟಿ ರೂ ಬಂಡವಾಳ ಸಂಗ್ರಹಿಸುವ ಗುರಿ ಹೊಂದಿರುವ ಗ್ಲೋಬಲ್ ಹೆಲ್ತ್ ಈ ಐಪಿಒನಲ್ಲಿ ಪ್ರತೀ ಷೇರನ್ನು 319-336 ರೂಗೆ ಬಿಕರಿ ಮಾಡುತ್ತಿದೆ. ಸಾಂಸ್ಥಿಕ ಹೂಡಿಕೆದಾರರಿಗೆ ನವೆಂಬರ್ 2ರಂದು ಬಿಡ್ಡಿಂಗ್ ಇರುತ್ತದೆ.
ಆನಂದ್ ಇನ್ವೆಸ್ಟ್‌ಮೆಂಟ್ಸ್ ಮತ್ತು ಸುಮನ್ ಸಚ್‌ದೇವ ಸೇರಿದಂತೆ ಗ್ಲೋಬಲ್ ಹೆಲ್ತ್ ಸಂಸ್ಥೆಯಲ್ಲಿ ಪಾಲುದಾರಿಕೆ ಹೊಂದಿರುವವರಿಂದ 5.08 ಕೋಟಿ ಈಕ್ವಿಟಿ ಷೇರುಗಳನ್ನು ಒಎಫ್‌ಎಸ್ ಮೂಲಕ ವಿಕ್ರಯ ಮಾಡಲಾಗುತ್ತಿದೆ. ಇದರ ಜೊತೆಗೆ 500 ಕೋಟಿ ರೂ ಮೊತ್ತದ ಹೊಸ ಷೇರುಗಳನ್ನು ಸಾರ್ವಜನಿಕರಿಗೆ ನೀಡಲಾಗುತ್ತಿದೆ.
ಗ್ಲೋಬಲ್ ಹೆಲ್ತ್ ಸಂಸ್ಥೆ ಕಳೆದ ಹಣಕಾಸು ವರ್ಷದಲ್ಲಿ 2,205.8 ಕೋಟಿ ರೂ ಆದಾಯ ಮತ್ತು 196.2 ಕೋಟಿ ರೂ ಲಾಭ ತೋರಿಸಿದೆ. ಗುರುಗ್ರಾಮ್, ಇಂದೋರ್, ರಾಂಚಿ, ಲಕ್ನೋ ಮತ್ತು ಪಾಟ್ನಾದಲ್ಲಿ ಮೇದಾಂತ ಆಸ್ಪತ್ರೆಗಳನ್ನು ಇದು ನಿರ್ವಹಿಸುತ್ತಿದೆ. ನೋಯ್ಡಾದಲ್ಲೂ ಹೊಸ ಆಸ್ಪತ್ರೆ ನಿರ್ಮಿಸುತ್ತಿದೆ.
ಫ್ಯೂಷನ್ ಮೈಕ್ರೋ ಫೈನಾನ್ಸ್ ಐಪಿಒ
ಸಣ್ಣ ಸಾಲ ನೀಡುವ ಫ್ಯೂಷನ್ ಮೈಕ್ರೋ ಫೈನಾನ್ಸ್ ಸಂಸ್ಥೆ ನವೆಂಬರ್ 2ರಂದು ಐಪಿಒ ಖಾತೆ ತೆರೆಯುತ್ತಿದೆ. 4ನೇ ತಾರೀಖಿನವರೆಗೂ ಸಮಯಾವಧಿ ಇದೆ. ಅದರ ಒಂದು ಈಕ್ವಿಟಿ ಷೇರಿನ ಬೆಲೆಯನ್ನು 350 ರೂನಿಂದ 368 ರೂವರೆಗೆ ನಿಗದಿ ಮಾಡಲಾಗಿದೆ. ಒಟ್ಟು 1,26,95,466 ಈಕ್ವಿಟಿ ಷೇರುಗಳನ್ನು ಮಾರಾಟಕ್ಕಿಡಲಾಗಿದೆ. 600 ಕೋಟಿ ರೂ ಬಂಡವಾಲ ಸಂಗ್ರಹದ ಗುರಿ ಇಟ್ಟುಕೊಂಡಿದೆ ಈ ಕಂಪನಿ.
ಇದು ಹೊರಡಿಸಿರುವ ನಿಯಮಗಳ ಪ್ರಕಾರ ಅದರ ಐಪಿಒ ಮೂಲಕ ಹೂಡಿಕೆ ಮಾಡಬಯಸುವವರು 40 ಈಕ್ವಿಟಿ ಷೇರುಗಳ ಗುಚ್ಛಗಳ ಲೆಕ್ಕದಲ್ಲಿ ಖರೀದಿ ಮಾಡಬೇಕು.
ಬಿಕಾಜಿ ಫೂಡ್ಸ್ ಐಪಿಒ
ಸಿಹಿ ತಿಂಡಿ, ಹಪ್ಪಳ ಇತ್ಯಾದಿ ಆಹಾರವಸ್ತುಗಳ ಮಾರಾಟದಲ್ಲಿ ತನ್ನದೇ ಛಾಪು ಮೂಡಿಸಿರುವ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನೂ ಹೊಂದಿರುವ ಬಿಕಾಜಿ ಫೂಡ್ಸ್ ಲಿ ಸಂಸ್ಥೆ ನವೆಂಬರ್ 3-7ರವರೆಗೂ ಐಪಿಒ ಆಫರ್ ಕೊಟ್ಟಿದೆ. ಒಟ್ಟು 2,93,74,984 ಷೇರುಗಳನ್ನು ಸಾರ್ವಜನಿಕರಿಗೆ ನೀಡಲಾಗುತ್ತಿದೆ. ಒಟ್ಟು ಒಂದು ಸಾವಿರ ಕೋಟಿ ರೂಪಾಯಿ ಬಂಡವಾಳವನ್ನು ಸಂಗ್ರಹಿಸುವ ನಿರೀಕ್ಷೆಯಲ್ಲಿ ಈ ಕಂಪನಿ ಇದೆ. ಒಎಫ್‌ಸಿ ಮೂಲಕ ಈ ಸಂಸ್ಥೆಯ ಪ್ರಮೋಟರ್‌ಗಳು 2.94 ಕೋಟಿ ಷೇರುಗಳನ್ನು ಐಪಿಒ ಅವಧಿಯಲ್ಲಿ ಮಾರಾಟ ಮಾಡಲಿದ್ದಾರೆ.


Click it and Unblock the Notifications