ಇಂದು ರಾತ್ರಿಯಿಂದ (ಜುಲೈ 14, 2020) ಬೆಂಗಳೂರಿನಲ್ಲಿ ಲಾಕ್ ಡೌನ್ ಜಾರಿಗೆ ಬರುತ್ತದೆ. ಜುಲೈ 31ನೇ ತಾರೀಕಿನ ತನಕ ಕಂಟೇನ್ ಮೆಂಟ್ ಜೋನ್ ನಲ್ಲಿ ಲಾಕ್ ಡೌನ್ ವಿಸ್ತರಣೆ ಮಾಡಿದೆ ಕರ್ನಾಟಕ ಸರ್ಕಾರ. ಧಾರವಾಡ, ದಕ್ಷಿಣ ಕನ್ನಡ ಮತ್ತು ಕಲಬುರಗಿಯಲ್ಲಿ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಲಾಗಿದೆ.
ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್ ಡೌನ್ ಜಾರಿಗೆ ಬರಲಿದೆ. ಜುಲೈ 14ನೇ ತಾರೀಕಿನ ಮಂಗಳವಾರ ರಾತ್ರಿ 8 ಗಂಟೆಗೆ ಲಾಕ್ ಡೌನ್ ಜಾರಿಗೆ ಬರಲಿದ್ದು, ಜುಲೈ 23ನೇ ತಾರೀಕಿನ ಬೆಳಗ್ಗೆ 5 ಗಂಟೆಯ ತನಕ ಇರಲಿದೆ. ತರಕಾರಿ, ಹಾಲು, ದಿನಸಿ ಮಳಿಗೆಗಳು ಬೆಳಗ್ಗೆ 5ರಿಂದ ಮಧ್ಯಾಹ್ನ 12ರ ತನಕ ತೆರೆದಿರುತ್ತವೆ. ಅಗತ್ಯ ವಸ್ತುಗಳನ್ನು ಮನೆಗೇ ಡೆಲಿವರಿ ಮಾಡಲಾಗುತ್ತದೆ.
ಪಾರ್ಸೆಲ್ ಅಥವಾ ಮನೆಗಳಿಗೆ ಡೆಲಿವರಿ ಸೇವೆ ನೀಡಲು ಹೋಟೆಲ್ ಮತ್ತು ರೆಸ್ಟೋರೆಂಟ್ ಗಳಿಗೆ ಅವಕಾಶ ಇದೆ. ಕೆಎಸ್ ಆರ್ ಟಿಸಿ, ಬಿಎಂಟಿಸಿ ಮತ್ತು ಖಾಸಗಿ ಬಸ್ ಗಳು ಲಾಕ್ ಡೌನ್ ಅವಧಿಯಲ್ಲಿ ಸಂಚರಿಸುವುದಿಲ್ಲ. ಟ್ಯಾಕ್ಸಿ, ಆಟೋರಿಕ್ಷಾ, ಕ್ಯಾಬ್ ಗಳು ಹಾಗೂ ಮೆಟ್ರೋ ರೈಲು ಸೇವೆಗೆ ಅವಕಾಶ ಇಲ್ಲ. ಈಗಾಗಲೇ ವೇಳಾಪಟ್ಟಿ ಸಿದ್ಧವಾದ ವಿಮಾನಗಳು, ರೈಲುಗಳು ಕಾರ್ಯ ನಿರ್ವಹಿಸಲಿವೆ.

ಸರ್ಕಾರದ ಬಹುತೇಕ ಕಚೇರಿಗಳು ಮುಚ್ಚಿರುತ್ತವೆ. ವಿಧಾನಸೌಧ ಮತ್ತು ವಿಕಾಸಸೌಧದ ಕಾರ್ಯಾಲಯದ ಕಚೇರಿಗಳಲ್ಲಿ ಶೇಕಡಾ ಐವತ್ತರಷ್ಟು ಸಿಬ್ಬಂದಿಯ ಜತೆಗೆ ಕಾರ್ಯ ನಿರ್ವಹಿಸಲಿವೆ.
ಕಲಬುರಗಿಯಲ್ಲಿ ಜುಲೈ 14ರಿಂದ 20ರ ತನಕ ಲಾಕ್ ಡೌನ್ ಗೆ ಜಿಲ್ಲಾಡಳಿತ ಆದೇಶ ನೀಡಿದೆ. ಧಾರವಾಡ ಜಿಲ್ಲೆಯಲ್ಲಿ ಜುಲೈ 15ರಿಂದ 24ರ ವರೆಗೆ ಲಾಕ್ ಡೌನ್ ಇರಲಿದೆ. ಜುಲೈ 15ರ ಬೆಳಗ್ಗೆ 10 ಗಂಟೆಯಿಂದ ಜುಲೈ 24ರ ರಾತ್ರಿ 8ರ ತನಕ ಲಾಕ್ ಡೌನ್ ಜಾರಿಯಲ್ಲಿ ಇರುತ್ತದೆ.
ದಕ್ಷಿಣ ಕನ್ನಡದಲ್ಲಿ ಜುಲೈ 16ರಿಂದ ಆರಂಭವಾಗಿ ಒಂದು ವಾರಗಳ ಕಾಲ ಲಾಕ್ ಡೌನ್ ಇರಲಿದೆ. ನಿಯಮಾವಳಿಗಳನ್ನು ಶೀಘ್ರದಲ್ಲೇ ನೀಡುವುದಾಗಿ ಡಿ.ಸಿ. ಹೇಳಿದ್ದಾರೆ.


Click it and Unblock the Notifications