ದೇಶಾದ್ಯಂತ ಈಗೇನಿದ್ದರೂ ಕೊರೊನಾವೈರಸ್ ಭೀತಿಯೇ ಆವರಿಸಿಬಿಟ್ಟಿದೆ. ರಾಜ್ಯದಲ್ಲೂ ಎಲ್ಲಾ ಮಾಲ್‌ಗಳು ಥಿಯೇಟರ್‌ಗಳು ಬಂದ್ ಆಗಿವೆ. ರಾಜ್ಯ ಸರ್ಕಾರದ ಆದೇಶದಂತೆ ಮಾರ್ಚ್ 31ರವರೆಗೆ ಎಲ್ಲಾ ಥಿಯೇಟರ್, ಮಾಲ್‌ಗಳು ಬಂದ್ ಆಗಿರಲಿವೆ.
ಹೀಗೆ ಏಕಾಏಕಿ ಬಂದ್‌ನಿಂದಾಗಿ ಬೆಂಗಳೂರಿನ ಮಾಲ್‌ಗಳಲ್ಲಿನ ಮಳಿಗೆಗಳು ಸೇರಿದಂತೆ ವಿವಿಧೆಡೆಯ ರೆಸ್ಟೋರೆಂಟ್, ಬಾರ್‌ಗಳಿಗೆ, ಪಬ್, ಕ್ಲಬ್‌ಗಳಿಗೆ ಭಾರೀ ಹೊಡೆತ ಬಿದ್ದಿದೆ. ಬೆಂಗಳೂರಿಗೆ ಬಂದಿರುವ ವಲಸಿಗರು ಬಹುತೇಕರು ತಮ್ಮ ಊರು ಕಡೆ ತೆರಳಿದ್ದಾರೆ. ಅನೇಕ ಕಂಪನಿಗಳಲ್ಲಿ ವರ್ಕ್ ಫ್ರಮ್ ಹೋಮ್ ಜಾರಿಯಲ್ಲಿದೆ. ಪಿಜಿಗಳು ಖಾಲಿಯಾಗುತ್ತಿವೆ.
ಸದಾ ಜನಜಂಗುಳಿಯಿಂದ ಗಿಜಿಗುಡುತ್ತಿದ್ದ ಬೆಂಗಳೂರು ಈಗ ಬಹುತೇಕ ಕಡೆ ಖಾಲಿ ಖಾಲಿಯಾಗಿರುವಂತೆ ಭಾಸವಾಗುತ್ತಿದೆ. ಹೋಟೆಲ್, ಶಾಪ್‌ಗಳು, ಜ್ಯುವೆಲರಿ ಮಳಿಗೆಗಳು ಸೇರಿದಂತೆ ಹಲವೆಡೆ ಗ್ರಾಹಕರೇ ಇಲ್ಲದೆ ಖಾಲಿ ಖಾಲಿ. ಅದರಲ್ಲೂ ಆಹಾರ ತಯಾರಕರ ಮೇಲೆ ಈ ಅಘೋಷಿತ ಬಂದ್ ವಾತಾವರಣ ಭಾರೀ ಹೊಡೆತ ನೀಡಿದೆ.
1,500 ಹೋಟೆಲ್, ಬೇಕರಿ, ಕೆಫೆಗಳಿಗೆ ನಷ್ಟ
ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಅಡಿಯಲ್ಲಿ ನೋಂದಾಯಿತಗೊಂಡಿರುವ 1,021 ತಿಂಡಿ ತಿನಿಸುಗಳ ಮಳಿಗೆ, 365 ಕೆಫೆಗಳು ಮತ್ತು ಬೇಕರಿಗಳು ಹಾಗೂ 115 ರೆಸ್ಟೋರೆಂಟ್‌ಗಳ ವಹಿವಾಟಿನ ಮೇಲೆ ಕೊರೊನಾ ತನ್ನ ಪ್ರಭಾವ ಬೀರಿದೆ. ಗ್ರಾಹಕರ ಸಂಖ್ಯೆಯು ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿದ್ದು ಚಿಂತೆಗೀಡಾಗಿದ್ದಾರೆ.
ಶಾಪಿಂಗ್ ಮಾಲ್‌ಗಳ ಬಳಿಯ ಶಾಪ್‌ಗಳಿಗೂ ಹೊಡೆತ
ಬೆಂಗಳೂರಿನ ಶಾಪಿಂಗ್ ಮಾಲ್‌ಗಳು, ಥಿಯೇಟರ್‌ಗಳು ಬಂದ್ ಆಗಿರುವುದರಿಂದ ಸುತ್ತಮುತ್ತಲಿನ ಶಾಪ್‌ಗಳು ಕೂಡ ಭಾರೀ ನಷ್ಟ ಎದುರಿಸುವಂತಾಗಿದೆ. ಶಾಪಿಂಗ್ ಮಾಲ್‌ಗಳಿಗೆ ತೆರಳುವ ಜನರು ಆಚೆ ಬೀದಿ ಬದಿಯ ತಿನಿಸುಗಳು, ವಸ್ತುಗಳ ಖರೀದಿಗೂ ಮುಂದಾಗುತ್ತಿದ್ದರು. ಆದರೆ ಎಲ್ಲವೂ ಬಂದ್ ಆದ ಕಾರಣ ಸುತ್ತಮುತ್ತಲಿನ ಶಾಪ್‌ಗಳು ನಷ್ಟದ ಬಿಸಿ ಎದುರಿಸಬೇಕಿದೆ.
ರೆಗ್ಯುಲರ್ ಗ್ರಾಹಕರು ಇಲ್ಲದೆ ಚಿಂತೆಗೀಡಾದ ಹೋಟೆಲ್ ಮಾಲೀಕರು
ಕೆಲವೊಂದು ಹೋಟೆಲ್‌ಗಳಿಗೆ ತಮ್ಮದೇ ರೆಗ್ಯುಲರ್ ಗ್ರಾಹಕರು ಇರುತ್ತಾರೆ. ಮತ್ತೆ ಕಡಿಮೆ ಪ್ರಮಾಣದಲ್ಲಿ ಹೊಸ ಗ್ರಾಹಕರು ಬರುತ್ತಿರುತ್ತಾರೆ. ಆದರೆ ಬಹುತೇಕ ಹೋಟೆಲ್‌ಗಳಿಗೆ ದಿನ ಬರುತ್ತಿದ್ದ ಗ್ರಾಹಕರು ಕೂಡ ಬರದೇ ಇರುವುದು ಮಾಲೀಕರನ್ನು ಚಿಂತೆಗೀಡು ಮಾಡಿದೆ. ಈ ಕಡೆ ಹೋಟೆಲ್ ಮುಚ್ಚುವುದಾ? ಅಥವಾ ಹೇಗೋ ದಿನ ದೂಡುವುದೇ ಎಂದು ಎದುರು ನೋಡುತ್ತಿದ್ದಾರೆ.
ಈ ತಿಂಗಳು ಬಿಲ್ ಪಾವತಿ, ಸಂಬಳ ನೀಡುವುದು ಹೇಗೆ ಎಂಬ ಚಿಂತೆ
ವ್ಯಾಪಾರವೇ ಕಡಿಮೆಯಾಗಿರಬೇಕಾದ್ರೆ ಆದಾಯ ಎಲ್ಲಿಂದ ಬರಬೇಕು. ಆದರೆ ಹೋಟೆಲ, ಬೇಕರಿಗಳನ್ನು ಮುಚ್ಚಿಬಿಡುವ ಪರಿಸ್ಥಿತಿಯಲ್ಲೂ ಇಲ್ಲ. ಅನೇಕ ಕಮಿಟ್‌ಮೆಂಟ್ ಜೊತೆಗೆ ತಿಂಗಳ ಕೊನೆಗೆ ಕಾರ್ಮಿಕರಿಗೆ ಸಂಬಳ ನೀಡಬೇಕು. ವಿದ್ಯುತ್ ಬಿಲ್ ಸೇರಿದಂತೆ ಅನೇಕ ಹಣ ಪಾವತಿಯ ಗುರಿಗಳು ಎದುರಿವೆ. ಹೀಗಾಗಿ ಹೋಟೆಲ್, ಬೇಕರಿ ಸೇರಿದಂತೆ ಅನೇಕ ಮಳಿಗೆಗಳಲ್ಲಿ ಮಾಲೀಕರು ವ್ಯಾಪಾರವಿಲ್ಲದೆ ದಿಕ್ಕೇ ತೋಚದಂತಾಗಿದ್ದಾರೆ.
ಬೆಂಗಳೂರಿನ ಹೊರ ಭಾಗದಲ್ಲಿ ಬಿಜಿನೆಸ್ ಸಾಮಾನ್ಯವಾಗಿದೆ
ಬೆಂಗಳೂರು ನಗರದಲ್ಲಿ ಈ ಪರಿಸ್ಥಿತಿ ಇದ್ದರೆ, ನಗರದ ಹೊರವಲಯದಲ್ಲಿ ಸಾಮಾನ್ಯವಾಗಿ ಬಿಜಿನೆಸ್ ಮುಂದುವರಿದಿದೆ. ಬೆಂಗಳೂರು ಹೊರವಲಯದಲ್ಲಿರುವ ಆಹಾರ ಮಾರಾಟಗಾರರು ಮತ್ತು ಸಣ್ಣ ರೆಸ್ಟೋರೆಂಟ್‌ಗಳು ಇನ್ನೂ ಕಾರ್ಯನಿರ್ವಹಿಸುತ್ತಿದ್ದು, ಲಾಕ್‌ಡೌನ್ ಹೊರತಾಗಿಯೂ ಅವರ ನಿಯಮಿತ ಗ್ರಾಹಕರು ಅವರಿಗೆ ಬರುತ್ತಿದ್ದಾರೆ.


Click it and Unblock the Notifications