ಬೆಂಗಳೂರು, ಸೆಪ್ಟೆಂಬರ್ 8: ಏರಿಕೆಯಾಗುತ್ತಿರುವ ಈರುಳ್ಳಿ ದರ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿರುವ ಕೇಂದ್ರ ಸರ್ಕಾರ ನವದೆಹಲಿ - ಎನ್ ಸಿ ಆರ್ ಮತ್ತು ಮುಂಬೈನಲ್ಲಿ ಪ್ರತೀ ಕೆಜಿಗೆ 35ರೂ ದರದಲ್ಲಿ ಈರುಳ್ಳಿಯ ಚಿಲ್ಲರೆ ಮಾರಾಟಕ್ಕೆ ಕೇಂದ್ರ ಚಾಲನೆ ನೀಡಿದೆ. ರಾಷ್ಟ ರಾಜಧಾನಿ ಮತ್ತು ವಾಣಿಜ್ಯ ನಗರಿ ಮುಂಬೈನಲ್ಲಿ ಮಾತ್ರ ಈ ಸೌಲಭ್ಯವೆಂದು ಬೆಂಗಳೂರಿಗರು ನಿರಾಸೆಯಾಗಬೇಕಿಲ್ಲ. ಯಾಕೆಂದರೆ ಮುಂದಿನ ವಾರದಿಂದ ಈರುಳ್ಳಿ ಚಿಲ್ಲರೆ ಮಾರಾಟ ಸಿಲಿಕಾನ್ ಸಿಟಿಯಲ್ಲಿಯೂ ಆರಂಭವಾಗುವ ನಿರೀಕ್ಷೆ ಇದೆ.
ದೆಹಲಿಯಲ್ಲಿ ಈರುಳ್ಳಿಯ ಚಿಲ್ಲರೆ ಮಾರಾಟಕ್ಕೆ ಚಾಲನೆ ನೀಡಿ ಮಾತನಾಡಿದ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, "ಈರುಳ್ಳಿ ಚಿಲ್ಲರೆ ಮಾರಾಟವನ್ನು ಬೆಂಗಳೂರು ಸೇರಿ ಇತರ ನಗರಗಳಲ್ಲಿಯೂ ಆರಂಭಿಸಲಾಗುವುದು. ಆಹಾರ ಹಣದುಬ್ಬರವನ್ನು ನಿಯಂತ್ರಣದಲ್ಲಿಡುವುದು ಭಾರತ ಸರ್ಕಾರದ ಆದ್ಯತೆಯಾಗಿದೆ ಮತ್ತು ಇತ್ತೀಚಿನ ತಿಂಗಳುಗಳಲ್ಲಿ ಹಣದುಬ್ಬರ ದರವನ್ನು ಕಡಿಮೆ ಮಾಡುವಲ್ಲಿ ಬೆಲೆ ಸ್ಥಿರೀಕರಣ ಕ್ರಮಗಳ ಮೂಲಕ ಹಲವಾರು ನೇರ ಮಧ್ಯಸ್ಥಿಕೆಗಳು ಪ್ರಮುಖ ಪಾತ್ರವಹಿಸಿವೆ. ಈರುಳ್ಳಿ ಚಿಲ್ಲರೆ ಮಾರಾಟದ ಮೊದಲ ಹಂತವಾಗಿ ದೆಹಲಿ-ಎನ್ಸಿಆರ್ ಮತ್ತುಮುಂಬೈ ನಲ್ಲಿ ಈರುಳ್ಳಿ ಮಾರಾಟಕ್ಕೆ ಚಾಲನೆ ನೀಡಲಾಗಿದೆ" ಎಂದು ಹೇಳಿದ್ದಾರೆ.

"ರೈತರೊಂದಿಗೆ ನೇರವಾಗಿ ತೊಡಗಿಸಿಕೊಳ್ಳುವ ಮೂಲಕ ಮತ್ತು ರಿಯಾಯಿತಿ ದರದಲ್ಲಿ ಈರುಳ್ಳಿಯನ್ನು ನೀಡುವ ಮೂಲಕ, ಗ್ರಾಹಕರ ಮೇಲೆ ಬೆಲೆ ಏರಿಳಿತದ ಪರಿಣಾಮವನ್ನು ತಗ್ಗಿಸುವಲ್ಲಿ ರಾಷ್ಟ್ರೀಯ ಸಹಕಾರ ಮಹಾಮಂಡಲ ನಿರ್ಣಾಯಕ ಪಾತ್ರವನ್ನು ವಹಿಸುತ್ತಿದೆ. ಸೆಪ್ಟೆಂಬರ್ 2ನೇ ವಾರದಿಂದ ಎರಡನೇ ಹಂತದಲ್ಲಿ ಕೋಲ್ಕತ್ತ, ಗುವಾಹಟಿ, ಹೈದರಾಬಾದ್, ಚೆನ್ನೈ, ಬೆಂಗಳೂರು, ಅಹಮದಾಬಾದ್ ಮತ್ತು ರಾಯ್ಪುರದಲ್ಲಿ ಮಾರಾಟ ಮಾಡಲಾಗುವುದು. ಮೂರನೇ ವಾರದಿಂದ ದೇಶದೆಲ್ಲೆಡೆ ಮಾರಾಟ ಆರಂಭಿಸುವ ಚಿಂತನೆ ನಡೆಸಲಾಗಿದೆ" ಎಂದು ತಿಳಿಸಿದ್ದಾರೆ.
ಹಿಂಗಾರು ಹಂಗಾಮಿನಲ್ಲಿ ಬೆಳೆದ 4.7 ಲಕ್ಷ ಟನ್ ಈರುಳ್ಳಿ ಸದ್ಯ ಸಂಗ್ರಹವಿದೆ. ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (ಎನ್‌ಸಿಸಿಎಫ್) ಮತ್ತು ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟದ (ಎನ್‌ಎಎಫ್‌ಇಡಿ) ಮಳಿಗೆಗಳು ಮತ್ತು ಸಂಚಾರಿ ವಾಹನಗಳು, ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಮತ್ತು ಕೇಂದ್ರೀಯ ಭಂಡಾರ ಮತ್ತು ಸಫಲ್ ಮಳಿಗೆಗಳ ಮೂಲಕ ಚಿಲ್ಲರೆ ಮಾರಾಟಕ್ಕೆ ಕ್ರಮ ಕೈಗೊಳ್ಳಲಾಗಿದೆ. ಗ್ರಾಹಕ ವ್ಯವಹಾರಗಳ ಇಲಾಖೆ ಈರುಳ್ಳಿಯ ಲಭ್ಯತೆ ಮತ್ತು ಬೆಲೆಗಳ ಮೇಲೆ ತೀವ್ರ ನಿಗಾ ಇರಿಸಿದೆ" ಎಂದು ಮಾಹಿತಿ ನೀಡಿದ್ದಾರೆ.
ಪ್ರಸ್ತುತ ದೆಹಲಿ ಮತ್ತು ಎನ್ ಸಿಆರ್ ವ್ಯಾಪ್ತಿಯಲ್ಲಿ ಪ್ರತೀ ಕೆಜಿ ಈರುಳ್ಳಿ 60 ರೂ. ನಂತೆ ಮಾರಾಟವಾಗುತ್ತಿದ್ದು, ಇದು ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿತ್ತು. ದೆಹಲಿ ಮಾತ್ರವಲ್ಲದೇ ಭಾರತದ ಇತರೆ ರಾಜ್ಯಗಳಲ್ಲೂ ಈರುಳ್ಳಿ ದರದಲ್ಲಿ ಶೇ.40ರಷ್ಟು ದರ ಏರಿಕೆ ಕಂಡುಬಂದಿದೆ. ಬೆಂಗಳೂರಿನಲ್ಲಿಯೂ ಕೆ.ಜಿ ಈರುಳ್ಳಿಗೆ 60 ರೂ. ಇದ್ದು ಬೆಲೆ ಏರಿಕೆ ಬಿಸಿ ಗ್ರಾಹಕರ ಕೈ ಸುಡುವಂತೆ ಆಗಿದೆ.
ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುತ್ತಿರುವ ಗುಣಮಟ್ಟದ ದೊಡ್ಡ ಗಾತ್ರದ ಈರುಳ್ಳಿ ಕ್ವಿಂಟಾಲ್ ಗೆ 4,800 ರೂ. ತಲುಪಿದೆ. ರಾಜ್ಯದಲ್ಲಿ ಚಿತ್ರದುರ್ಗ ಮತ್ತು ಹಗರಿಬೊಮ್ಮನಹಳ್ಳಿಯಿಂದ ಮಾತ್ರ ಈರುಳ್ಳಿ ಪೂರೈಕೆಯಾಗುತ್ತಿದೆ. ಹವಮಾನದ ಪ್ರತಿಕೂಲ ಪರಿಣಾಮದಿಂದಾಗಿ ಈರುಳ್ಳಿಯ ಇಳುವರಿ ಕುಂಠಿತವಾಗಿದೆ. ಅತಿಯಾದ ಬೆಲೆಗಳಿಂದ ಗ್ರಾಹಕರನ್ನು ರಕ್ಷಿಸಲು ಮತ್ತು ಮಧ್ಯವರ್ತಿಗಳಿಗೆ ಆಗುವ ಲಾಭವನ್ನು ತಡೆಯಲು ಅದೇ ಈರುಳ್ಳಿಯನ್ನು ಪ್ರತಿ ಕೆಜಿಗೆ 35 ರೂ.ಗಳ ಸಬ್ಸಿಡಿ ದರದಲ್ಲಿ ಚಿಲ್ಲರೆ ಮಾರಾಟಕ್ಕೆ ಅನುಕೂಲತೆ ಮಾಡಲಾಗುತ್ತದೆ.
ಸೆಪ್ಟೆಂಬರ್ ಮೂರನೇ ವಾರದಲ್ಲಿ ಭಾರತದಾದ್ಯಂತ ವಿತರಣೆ ಪ್ರಾರಂಭವಾಗುತ್ತದೆ. ಏಜೆನ್ಸಿಗಳು ಇತರ ಸಹಕಾರಿ ಸಂಸ್ಥೆಗಳು ಮತ್ತು ಭಾರತದಾದ್ಯಂತ ದೊಡ್ಡ ಚಿಲ್ಲರೆ ಸರಪಳಿಗಳೊಂದಿಗೆ ಸಹ ಒಪ್ಪಂದ ಮಾಡಿಕೊಳ್ಳುತ್ತಿವೆ ಎಂದು ಸಚಿವರು ತಿಳಿಸಿದ್ದಾರೆ.
More From GoodReturns

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ



Click it and Unblock the Notifications