ಕರ್ನಾಟಕ ಲೋಕಾಯುಕ್ತ ಮಂಗಳವಾರ ಬೆಳಗ್ಗೆ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ 30 ಕ್ಕೂ ಹೆಚ್ಚು ಸ್ಥಳಗಳಲ್ಲಿ ಆರು ಸರ್ಕಾರಿ ಅಧಿಕಾರಿಗಳ ನಿವಾಸಗಳ ಮೇಲೆ ದಾಳಿ ಆರಂಭಿಸಿದೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣಗಳಿಗೆ ಸಂಬಂಧಿಸಿದಂತೆ ದಾಳಿ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ನಿನ್ನೆ (ಜನವರಿ 8) ಲೋಕಾಯುಕ್ತ ದಾಳಿ ನಡೆಸಲಾಗಿದ್ದು, ಬಿಇಒ ಕಚೇರಿ ಸಿಬ್ಬಂದಿಯನ್ನು ವಶಕ್ಕೆ ಪಡೆಯಲಾಗಿದೆ. ನಿವೃತ್ತ ಮುಖ್ಯ ಶಿಕ್ಷಕನಿಂದ ಲಂಚ ಪಡೆಯುತ್ತಿದ್ದ ವೇಳೆ ಬೀರೂರು ಬಿಇಒ ಕಚೇರಿ ಸಿಬ್ಬಂದಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಜನವರಿ 9 ರಂದು ಬೆಳಗ್ಗೆಯಿಂದ ಯಾವೆಲ್ಲ ಅಧಿಕಾರಿಗಳ ನಿವಾಸದ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ ಎಂಬ ವಿವರ ಈ ಕೆಳಗಿದೆ. ಮುಂದೆ ಓದಿ...

ಯಾವೆಲ್ಲ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ?
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ಮುಖ್ಯ ಜನರಲ್ ಮ್ಯಾನೇಜರ್ ಎಂ ಎಲ್ ನಾಗರಾಜ್ ಅವರ ಆಸ್ತಿಗಳ ಶೋಧ ಕಾರ್ಯಾಚರಣೆಯು ನಡೆಯುತ್ತಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ಇದಲ್ಲದೆ ಬೆಂಗಳೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಡಿಎಂ ಪದ್ಮನಾಭ ನಿವಾಸದಲ್ಲಿ ಶೋಧ ನಡೆಸಲಾಗುತ್ತಿದೆ.
ಬೆಂಗಳೂರಿನ ಸೂಪರಿಂಟೆಂಡೆಂಟ್ ಎಂಜಿನಿಯರ್ ಎನ್ ಸತೀಶ್, ಬೆಂಗಳೂರಿನಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿರುವ ಸೈಯದ್ ಮುನೀರ್ ಅಹಮದ್, ಚೆನ್ನೇನಹಳ್ಳಿ ಗ್ರಾ.ಪಂ.ಸದಸ್ಯ ಎಚ್.ಎಸ್.ಸುರೇಶ್ ಮತ್ತು ರಾಮನಗರದ ನಗರ ಮತ್ತು ಗ್ರಾಮಾಂತರ ಯೋಜನೆಯ ಸದಸ್ಯ ಕಾರ್ಯದರ್ಶಿ ಹಾಗೂ ಜಂಟಿ ನಿರ್ದೇಶಕ ಮಂಜೇಶ್ ಬಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ.
"ಬೆಸ್ಕಾಂ ಮುಖ್ಯ ಜನರಲ್ ಮ್ಯಾನೇಜರ್ ಎಂಎಲ್ ನಾಗರಾಜು ವಿರುದ್ಧ ದಾಖಲಾದ ಅಕ್ರಮ ಆಸ್ತಿ ಪ್ರಕರಣದ ಆಧಾರದ ಮೇಲೆ ಕೂಡ್ಲಿಗಿ, ಬಳ್ಳಾರಿಯ ಐದು ಸ್ಥಳಗಳಲ್ಲಿ ಮತ್ತು ಬೆಂಗಳೂರು ನಗರದ ಎರಡು ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ. ಒಂಬತ್ತು ನಿವೇಶನ, ಮೂರು ಮನೆ, ಎರಡು ಪೆಟ್ರೋಲ್ ಬಂಕ್, ಶಿಕ್ಷಣ ಸಂಸ್ಥೆಗಳು ಹಾಗೂ ನಾಲ್ಕು ಕಡೆ ಕೃಷಿ ಭೂಮಿ ಹೊಂದಿರುವುದು ಪತ್ತೆಯಾಗಿದೆ," ಎಂದು ಲೋಕಾಯುಕ್ತ ಅಧಿಕಾರಿ ಡೆಕ್ಕನ್ ತಿಳಿಸಿದ್ದಾರೆ.
ತುಮಕೂರಿನಲ್ಲಿ ತೋಟದ ಮನೆ, ಸೋಮಾಪುರದಲ್ಲಿ ವಾಣಿಜ್ಯ ಕಟ್ಟಡ ಮತ್ತು ಕೈಗಾರಿಕಾ ಶೆಡ್‌ನೊಂದಿಗೆ ಐದು ಎಕರೆ ಕೃಷಿ ಭೂಮಿ, ಕುಂದಾಣ ಗ್ರಾಪಂ ಪಿಡಿಒ ಪದ್ಮನಾಭ್‌ಗೆ ಸೇರಿದ ಎಜಿಬಿ ಲೇಔಟ್‌ನಲ್ಲಿ ನಾಲ್ಕು ಅಂತಸ್ತಿನ ಮನೆ ಕೂಡ ಶೋಧದ ವೇಳೆ ಪತ್ತೆಯಾಗಿದೆ ಎಂದು ರಾಜ್ಯ ಒಂಬುಡ್ಸ್‌ಮನ್ ತಿಳಿಸಿದ್ದಾರೆ. ಶೋಧ ಕಾರ್ಯಾಚರಣೆ ಮುಂದುವರಿದಿದೆ.


Click it and Unblock the Notifications