ಯಾರೇ ಆಗಲಿ ಹಣ ಹೂಡಿಕೆ ಮಾಡಲು ಸೂಕ್ತ ಜಾಗ ಯಾವುದು ಎಂದು ಕೇಳಿದ್ರೆ ಮೊದಲು ಹೇಳೋದೇ ಯಾವುದಾದ್ರೂ ಬ್ಯಾಂಕ್ ಹೆಸರು. ಆದ್ರೆ ಇಂದಿನ ದಿನಗಳಲ್ಲಿ ಕೆಲವು ಬ್ಯಾಂಕ್ ಗಳು ಆರ್ಥಿಕವಾಗಿ ಸಮಸ್ಯೆ ಎದುರಿಸುತ್ತಿದೆ. ಅದೇ ಪರಿಣಾಮ ಇದೀಗ ಇಲ್ಲೊಂದು ಬ್ಯಾಂಕ್ ಆರ್ಬಿಐನ ಕೆಂಗಣ್ಣಿಗೆ ಗುರಿಯಾಗಿದೆ. ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಜಿಜಮಾತಾ ಮಹಿಳಾ ಸಹಕಾರಿ ಬ್ಯಾಂಕ್ ಸ್ಥಗಿತವಾಗಿದೆ. ಇನ್ನು ಮಂಗಳವಾರ ಭಾರತೀಯ ರಿಸರ್ವ್ ಬ್ಯಾಂಕ್ (RBI) ಆ ಬ್ಯಾಂಕಿನ ಪರವಾನಗಿಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.

RBI ನಿಂದ ಮಹತ್ವದ ನಿರ್ಧಾರ
ಇನ್ನು ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿರುವ ಈ ಜಿಜಮಾತಾ ಮಹಿಳಾ ಸಹಕಾರಿ ಬ್ಯಾಂಕ್ ಆರ್ಥಿಕವಾಗಿ ಕುಸಿತ ಕಂಡಿದೆ. ಇದೇ ಕಾರಣದಿಂದ ಆರ್ಬಿಐ ಮಹತ್ವದ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ. ಇನ್ನು ಆರ್‌ಬಿಐ ಆದೇಶದ ಪ್ರಕಾರ, ಅಕ್ಟೋಬರ್ 7, 2025 ರಿಂದ ಈ ಪರವಾನಗಿ ರದ್ದು ಮಡಿದ ಬ್ಯಾಂಕ್ ಯಾವುದೇ ರೀತಿಯ ಬ್ಯಾಂಕಿಂಗ್ ವ್ಯವಹಾರವನ್ನು ಅಥವಾ ಗ್ರಾಹಕರು ಈ ಬ್ಯಾಂಕಿನ ಜೊತೆಗೆ ವ್ಯವಹಾರ ನಡೆಸಲು ಸಾಧ್ಯವಾಗುವುದಿಲ್ಲ.
ಮೊದಲೇ ಎಚ್ಚರಿಕೆ ನೀಡಿತ್ತು RBI!
ಆರ್ಬಿಐ ಈ ಬ್ಯಾಂಕಿಗೆ ಮೊದಲೇ ಪರವಾನಗಿ ರದ್ದು ಮಾಡಿ ಬಿಸಿ ಮುಟ್ಟಿಸಿತ್ತು. ಕಳೆದ 2016 ಜೂನ್ 16 ರಂದು ಇದೇ ಜಿಜಮಾತಾ ಮಹಿಳಾ ಸಹಕಾರಿ ಬ್ಯಾಂಕಿನ ಲೈಸೆನ್ಸ್ ಅನ್ನು ಆರ್ಬಿಐ ರದ್ದು ಗೊಳಿಸಿತ್ತು. ಆದ್ರೆ ಎಚ್ಛೆತ್ತುಕೊಂಡ ಬ್ಯಾಂಕ್ ತಕ್ಷಣ ಪರವಾನಗಿ ರದ್ದುಪಡಿಸದಂತೆ, ವಾಪಾಸ್ ನೀಡುವಂತೆ, ಆರ್ಬಿಐ ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸಿತ್ತು. ಅದೇ ರೀತಿ ಅಕ್ಟೋಬರ್ 23, 2019 ರಂದು, ಮೇಲ್ಮನವಿ ಪ್ರಾಧಿಕಾರವು ಪರವಾನಗಿಯನ್ನು ವಾಪಾಸ್ ಬ್ಯಾಂಕಿಗೆ ನೀಡಿತು, ಆದ್ರೆ ಇದರ ಜೊತೆಗೆ ಮೇಲ್ಮನವಿ ಪ್ರಾಧಿಕಾರವು ಬ್ಯಾಂಕಿನ ಆರ್ಥಿಕ ಸ್ಥಿತಿ ಹೇಗಿದೆ ಎಂದು ನಿರ್ಣಯಿಸಲು 2013-14ರ ಆರ್ಥಿಕ ವರ್ಷಕ್ಕೆ ವಿಧಿವಿಜ್ಞಾನ ಲೆಕ್ಕಪರಿಶೋಧನೆಯನ್ನು (Forensic Audit) ನಡೆಸಬೇಕೆಂದು ನಿರ್ದೇಶಿಸಿತು. ಆದ್ರೆ ಈ ಲೆಕ್ಕ ಪರಿಶೋಧನೆಗೆ ಈ ಸಹಕಾರಿ ಬ್ಯಾಂಕ್ ಸಹಕರಿಸದ ಕಾರಣ, ಇಂದು ಸಂಕಷ್ಟದಲ್ಲಿ ಸಿಲುಕುವಂತಾಗಿದೆ.
ಪರವಾನಗಿ ರದ್ದತಿಗೆ ಕಾರಣವೇನು?
ಬ್ಯಾಂಕಿನ ಬಳಿ ಸಾಕಷ್ಟು ಬಂಡವಾಳವಿರಲಿಲ್ಲ, ಯಾವುದೇ ಹೆಚ್ಚಿನ ಮಟ್ಟದಲ್ಲಿ ಲಾಭವೂ ಇರಲಿಲ್ಲ. ಅಲ್ಲದೆ ಬ್ಯಾಂಕಿನ ಆರ್ಥಿಕ ಸ್ಥಿತಿ ನಿರಂತರವಾಗಿ ಕುಸಿತ ಕಂಡಿದ್ದರಿಂದ ಆರ್ಬಿಐ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.
ಆರ್ಬಿಐ ಹೇಳಿದ್ದೇನು?
ಪರವಾನಗಿ ರದ್ಧತಿ ಬಗ್ಗೆ ಸ್ಪಷ್ಟನೆ ನೀಡಿರುವ ಆರ್ಬಿಐ "ಪ್ರಸ್ತುತ , ಆರ್ಥಿಕವಾಗಿ ಕುಸಿದಿರುವ ಈ ಬ್ಯಾಂಕ್ ತನ್ನ ಎಲ್ಲಾ ಠೇವಣಿದಾರರಿಗೆ ಪೂರ್ಣ ಮೊತ್ತವನ್ನು ಮರುಪಾವತಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಬ್ಯಾಂಕ್ ಕಾರ್ಯನಿರ್ವಹಿಸುವುದಕ್ಕೆ ಅನುಮತಿ ನೀಡುವುದು ಕಷ್ಟಸಾಧ್ಯ. ಇದು ಸಾರ್ವಜನಿಕ ಹಿತಾಸಕ್ತಿಗೆ ಹಾನಿಕಾರಕವಾಗಿದೆ ಎಂದು ಹೇಳಿದೆ.
ಬ್ಯಾಂಕ್ ಮುಚ್ಚಿದ ನಂತರ, ಪ್ರತಿಯೊಬ್ಬ ಠೇವಣಿದಾರರು ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (DICGC) ಅಡಿಯಲ್ಲಿ ತಮ್ಮ ಡೆಪಾಸಿಟ್ ಮೇಲೆ ₹5 ಲಕ್ಷದವರೆಗಿನ ವಿಮಾ ಕ್ಲೇಮ್ ಪಡೆಯಬಹುದು ಎಂದು ಆರ್ಬಿಐ ಹೇಳಿದೆ


Click it and Unblock the Notifications