ದೇಶಾದ್ಯಂತ ಈರುಳ್ಳಿ ಬೆಲೆ ಗಗನಕ್ಕೇರಿದೆ. ಒಂದೊಂದು ನಗರದಲ್ಲಿ ಒಂದೊಂದು ದರದಂತೆ ಬೆಲೆ ಏರಿಳಿತ ಕಾಣುತ್ತಿದೆ. ಆದರೆ ಬಿಹಾರದಲ್ಲಿ ಮಾತ್ರ ಒಂದು ಕಿಲೋ ಈರುಳ್ಳಿಗೆ 35 ರುಪಾಯಿ ಮಾತ್ರ. ಈರುಳ್ಳಿ ಕೊಳ್ಳಲು ಜನರು ಸರದಿ ಸಾಲಿನಲ್ಲಿ ನಿಂತಿದ್ದು, ರಕ್ಷಣೆಗಾಗಿ ಅಧಿಕಾರಿಗಳು ಹೆಲ್ಮೆಟ್ ಧರಿಸಿ ಈರುಳ್ಳಿ ವಿತರಿಸುತ್ತಿದ್ದಾರೆ.
ಬಿಹಾರದ ರಾಜ್ಯ ಸಹಕಾರಿ ಮಾರುಕಟ್ಟೆ ಕೇಂದ್ರದಲ್ಲಿ ಸರ್ಕಾರದ ಆದೇಶದಂತೆ ಈರುಳ್ಳಿಯನ್ನು ಕೆಜಿಗೆ 35 ರುಪಾಯಿಯಂತೆ ಮಾರಾಟ ಮಾಡಲಾಗುತ್ತಿದೆ. ದೇಶಾದ್ಯಂತ ಈರುಳ್ಳಿ ದರ ಗಗನಕ್ಕೇರಿದ್ದು, ಬಿಹಾರದ ಜನತೆಯು ನಿರಾಳತೆ ಎಂಬಂತೆ, ಸಹಕಾರಿ ಮಾರುಕಟ್ಟೆ ಕೌಂಟರ್‌ನಲ್ಲಿ ಕಳೆದ ವಾರದಿಂದ ಕಡಿಮೆ ಬೆಲೆಗೆ ಈರುಳ್ಳಿಯನ್ನು ಖರೀದಿಸುತ್ತಿದ್ದಾರೆ.

ಒಬ್ಬ ವ್ಯಕ್ತಿಯು ಇಲ್ಲಿ 2 ಕೆಜಿ ಈರುಳ್ಳಿ ಖರೀದಿಸಬಹುದು. ವಿವಾಹ ಕಾರ್ಯಕ್ರಮ ಆಗಿದ್ದಲ್ಲಿ ಆಮಂತ್ರಣ ಪತ್ರಿಕೆ ತೋರಿಸಿದರೆ ಆ ವ್ಯಕ್ತಿಗೆ 25 ಕೆಜಿ ಈರುಳ್ಳಿ ಖರೀದಿಸಬಹುದಾಗಿದೆ ಎಂದು ವರದಿಯಾಗಿದೆ.
ಕಡಿಮೆ ದರಕ್ಕೆ ಈರುಳ್ಳಿ ಮಾರಾಟ ಮಾಡುತ್ತಿರುವುದರಿಂದ ಜನರು ಈರುಳ್ಳಿ ಖರೀದಿಸಲು ಬಹುಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ ಮತ್ತು ಸರದಿ ಸಾಲಿನಲ್ಲಿ ನಿಂತಿದ್ದಾರೆ. ಈ ವೇಳೆ ಏನಾದರೂ ಕಾಲ್ತುಳಿತ ಇಲ್ಲವೇ ಕಲ್ಲು ತೂರಾಟ ನಡೆಯಬಹುದು ಎಂಬ ಭಯದಲ್ಲಿ ಮಾರಾಟಗಾರರು ಹೆಲ್ಮೆಟ್ ಧರಿಸಿ ಈರುಳ್ಳಿ ಮಾರಾಟ ಮಾಡುತ್ತಿದ್ದಾರೆ.
ನಾವು ನಮ್ಮ ಸುರಕ್ಷತೆಯ ದೃಷ್ಟಿಯಿಂದ ಹೆಲ್ಮೆಟ್ ಧರಿಸಿ ಬಂದಿದ್ದೇವೆ. ಅರ್ರಾದಲ್ಲಿ ನಿನ್ನೆ ಜನರು ಕಲ್ಲು ತೂರಾಟ ನಡೆಸಿದ್ದರು, ಇದರಿಂದ ಅನೇಕರು ಗಾಯಗೊಂಡಿದ್ದರು. ಆಡಳಿತ ಮಂಡಳಿ ಯಾವುದೇ ಭದ್ರತೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ' ಎಂದು ಅಧಿಕಾರಿ ರೋಹಿತ್ ಕುಮಾರ್ ಎಎನ್‌ಐಗೆ ತಿಳಿಸಿದ್ದಾರೆ.
'ನಾನು ಬೆಳಗ್ಗೆ 4 ಗಂಟೆಗೆ ಇಲ್ಲಿಗೆ ಬಂದು ಕ್ಯೂ ನಿಂತಿದ್ದೇನೆ. ಮಾರುಕಟ್ಟೆಯಲ್ಲಿ ಈರುಳ್ಳಿ ದರ ಕೆಜಿಗೆ 80 ರಿಂದ 100 ರುಪಾಯಿಗೆ ತಲುಪಿದೆ. ಆದರೆ ಈ ಮಳಿಗೆಗಳಲ್ಲಿ ಕೆಜಿಗೆ 35 ರುಪಾಯಿಯಂತೆ ಮಾರಾಟ ಮಾಡಲಾಗುತ್ತಿದೆ ಎಂದು ಈರುಳ್ಳಿ ಖರೀದಿಸಲು ಬಂದಿದ್ದ ಶೀಲಾ ದೇವಿ ಎಂಬ ಗ್ರಾಹಕಿ ಎಎನ್ಐಗೆ ಹೇಳಿದ್ದಾರೆ.
ದೇಶದ ಹಲವೆಡೆ ಈರುಳ್ಳಿ ಬೆಲೆಯಲ್ಲಿ ಸಾಕಷ್ಟು ಏರಿಕೆ ಕಾಣುತ್ತಿದೆ. ಅನೇಕ ನಗರಗಳಲ್ಲಿ ಕೆಜಿಗೆ 100 ರುಪಾಯಿ ದಾಖಲಾಗಿರುವುದು ವರದಿಯಾಗಿದೆ.


Click it and Unblock the Notifications