ಜಗತ್ತಿನ ಎರಡನೇ ಅತ್ಯಂತ ಶ್ರೀಮಂತ ಬಿಲ್ ಗೇಟ್ಸ್ ವಿಲಾಸಿ ವಿಹಾರ ನೌಕೆಯೊಂದನ್ನು ಖರೀದಿಸಿದ್ದು, ಅದು ದ್ರವ ಜಲಜನಕದ ಮೂಲಕ ಚಲಿಸುತ್ತದೆ ಎಂದು ವರದಿ ಆಗಿದೆ. ಮೊನಾಕೋ ವಿಹಾರ ನೌಕೆ ಪ್ರದರ್ಶನದಲ್ಲಿ ಈ ಹೊಸ ನೌಕೆಯನ್ನು ಪ್ರದರ್ಶಿಸಿದ್ದು, ಡಚ್ ಕಂಪೆನಿ ಸೈನೊಟ್ ಇದರ ನಿರ್ಮಾಣ ಮಾಡಿದೆ.
ಜಲಜನಕದಿಂದಲೇ ಸಂಪೂರ್ಣವಾಗಿ ಕಾರ್ಯ ನಿರ್ವಹಿಸುವ ಹಡಗು ನಿರ್ಮಾಣದಲ್ಲಿ ಸೈನೊಟ್ ತೊಡಗಿಕೊಂಡಿದೆ. ಅದರರ್ಥ ಆ ಹಡಗಿನಿಂದ ಹೊರಬರುವುದು ನೀರು ಮಾತ್ರ. ಗರಿಷ್ಠ ಅಂದರೆ 17 ನಾಟ್ಸ್ ವೇಗದಲ್ಲಿ ಕಾರ್ಯ ನಿರ್ವಹಿಸುವ ಇದು, ಗರಿಷ್ಠ ದೂರ 3,750 ನಾಟಿಕಲ್ ಮೈಲುಗಳ ತನಕ ಸಾಗಬಹುದು.
ಲೇಟೆರಲ್ ನೌಕಾ ಆರ್ಕಿಟಿಕ್ಟ್ ಗಳ ಜತೆಗೂಡಿ ಈ ಹಡಗನ್ನು ರೂಪಿಸಲಾಗಿದೆ. ಇದು 112 ಮೀಟರ್ ಉದ್ದ ಇದೆ. ದ್ರವ ಜಲಜನಕದ ಮೂಲಕ ಚಲಿಸುವ ಹಡಗು ಇಂಧನದ ಸೆಲ್ ಗಳಿಗೆ ವಿದ್ಯುಚ್ಛಕ್ತಿಯನ್ನು ಪೂರೈಸುತ್ತದೆ.

ಇನ್ನು ಈ ದೊಡ್ಡ ಹಡಗಿನಲ್ಲಿ ಐದು ಡೆಕ್ ಗಳಿವೆ. ಹದಿನಾಲ್ಕು ಅತಿಥಿಗಳಿಗೆ ಮತ್ತು ಮೂವತ್ತೊಂದು ಸಿಬ್ಬಂದಿಗೆ ಇಲ್ಲಿ ಎಲ್ಲ ವ್ಯವಸ್ಥೆ ಮಾಡಬಹುದಾಗಿದೆ. ನಾಲ್ಕು ಅತಿಥಿಗಳ ಕೋಣೆ, ಎರಡು ವಿಐಪಿ ಕೋಣೆ, ಒಂದು ಮಾಲೀಕರ ಪೆವಿಲಿಯನ್ ಒಳಗೊಂಡಿದೆ. ಇನ್ನು ಸಿಬ್ಬಂದಿಗಾಗಿ ಹದಿನಾಲ್ಕು ಕ್ಯಾಬಿನ್ ಗಳು (ಇಬ್ಬರು ಸಿಬ್ಬಂದಿ ಇರಬಹುದಾದದ್ದು), ಎರಡು ಅಧಿಕಾರಿಗಳ ಕ್ಯಾಬಿನ್ ಮತ್ತು ಒಂದು ಕ್ಯಾಪ್ಟನ್ ಕ್ಯಾಬಿನ್ ಇದೆ.
ಒಳಾಂಗಣದ ಆರೋಗ್ಯ ಕೇಂದ್ರ, ಜಿಮ್, ಹೈಡ್ರೋ ಮಸಾಜ್ ರೂಮ್ ಮತ್ತು ಯೋಗ ಸ್ಟುಡಿಯೋ ಇದೆ. ಅಷ್ಟೇ ಅಲ್ಲ, ವಿಲಾಸಿ ಸೌಕರ್ಯಗಳು ಸಹ ಇವೆ. ಹೆಲಿ ಪ್ಯಾಡ್, ಸ್ಪಾ, ಒಳಾಂಗಣ ಕೊಳ ಸಹ ಇವೆ. ಇದರ ಒಳಾಂಗಣ ಮಟ್ಟು ಹೊರಾಂಗಣವನ್ನು ಹೇಗಿರಬೇಕು ಎಂದು ರೂಪ ನೀಡಲು ಐದು ತಿಂಗಳು ಸಮಯ ಹಿಡಿಸಿದೆ.
ಇದರಲ್ಲಿ ಬಿಲ್ ಗೇಟ್ಸ್ ಹಣ ಹೂಡಿಕೆ ಮಾಡುವ ಬಗ್ಗೆ ವದಂತಿ ಇದ್ದರೂ ಸದ್ಯಕ್ಕೆ ಈ ರೀತಿಯ ವಿಹಾರ ನೌಕೆ ಕಾನ್ಸೆಪ್ಟ್ ಹಂತದಲ್ಲೇ ಇದೆ.


Click it and Unblock the Notifications