ಇಲಾನ್ ಮಸ್ಕ್ ಒಂದೇ ದಿನದಲ್ಲಿ 70 ಬಿಲಿಯನ್ ಡಾಲರ್‌ಗೂ ಹೆಚ್ಚು ಹಣ ಕಳೆದುಕೊಂಡಿರುವ ಸಂಗತಿಯನ್ನು ನೋಡಿದ್ದೇವೆ. ಇನ್ನೊಂದೆಡೆ 30 ವರ್ಷದ ವ್ಯಕ್ತಿಯೊಬ್ಬರು ರಾತ್ರೋರಾತ್ರಿ ಶೇ. 94ರಷ್ಟು ಆಸ್ತಿ ಕಳೆದುಕೊಂಡಿರುವ ಘಟನೆ ನಡೆದಿದೆ. ಸ್ಯಾಮ್ ಬ್ಯಾಂಕ್‌ಮ್ಯಾನ್ ಫ್ರೈಡ್ ಎಂಬ ವ್ಯಕ್ತಿ ಒಂದೇ ದಿನದಲ್ಲಿ 14.6 ಬಿಲಿಯನ್ ಡಾಲರ್‌ನಷ್ಟು ಸಂಪತ್ತು ಕಳೆದುಕೊಂಡಿದ್ದಾರೆ. 15.2 ಬಿಲಿಯನ್ ಡಾಲರ್ ಆಸ್ತಿಯ ಒಡೆಯನಾಗಿದ್ದ ಸ್ಯಾಮ್ ಬಳಿ ಈಗ ಉಳಿದಿರುವುದು 991.5 ಮಿಲಿಯನ್ ಮಾತ್ರವೇ.
ಅಂದರೆ 1.24 ಲಕ್ಷ ಕೋಟಿ ರೂಪಾಯಿಯಷ್ಟು ಸಂಪತ್ತು ಹೊಂದಿದ್ದ ಸ್ಯಾಮ್ ಬ್ಯಾಂಕ್‌ಮ್ಯಾನ್ ಫ್ರೈಡ್ ಒಂದೇ ದಿನದಲ್ಲಿ 1.19 ಲಕ್ಷ ಕೋಟಿ ರೂ ಕಳೆದುಕೊಂಡಿದ್ದಾರೆ. ಈಗ ಅವರಲ್ಲಿರುವ ಸಂಪತ್ತು ಕೇವಲ 8 ಸಾವಿರ ಕೋಟಿ ರೂಪಾಯಿ ಮಾತ್ರ. ಸ್ಯಾಮ್ ಬಹುತೇಕ ಶೇ. 94ಷ್ಟು ಆಸ್ತಿ ಕಳೆದುಕೊಂಡಿದ್ದಾರೆ.
ಯಾರು ಈ ಸ್ಯಾಮ್?
30 ವರ್ಷದ ಸ್ಯಾಮ್ ಬ್ಯಾಂಕ್‌ಮ್ಯಾನ್ ಫ್ರೈಡ್ ಕ್ರಿಪ್ಟೋ ಜಗತ್ತಿನ ಮಾಂತ್ರಿಕ ವ್ಯಕ್ತಿ ಎಂದಾಗಿದ್ದವ. ಎಫ್‌ಟಿಎಕ್ಸ್ ಎಂಬ ಕ್ರಿಪ್ಟೋಕರೆನ್ಸಿ ಎಕ್ಸ್‌ಚೇಂಜ್ ಕಂಪನಿಯ ಮಾಲೀಕ. ಕ್ರಿಪ್ಟೋ ಜಗತ್ತಿನಲ್ಲಿ ಬಹಳ ವೇಗವಾಗಿ ಬೆಳೆದ ಉದ್ಯಮಿ. ಸೋಷಿಯಲ್ ಮೀಡಿಯಾದಲ್ಲಿ ಎಸ್‌ಬಿಎಫ್ ಎಂದೇ ಕರೆಯಲಾಗುವ ಸ್ಯಾಮ್‌ನನ್ನು ಕೆಲ ಮಾಧ್ಯಮಗಳು ವಾರನ್ ಬಫೆಟ್‌ಗೂ ಹೋಲಿಕೆ ಮಾಡಿದ್ದವು. ಕ್ರಿಪ್ಟೋ ಜಗತ್ತಿನ ಒಂದು ಮಾದರಿಯಾಗಿ ಈತನನ್ನು ಕಾಣಲಾಗುತ್ತಿತ್ತು.
ಸ್ಯಾಮ್ ಬ್ಯಾಂಕ್‌ಮ್ಯಾನ್ ಫ್ರೈಡ್ ಧನದಾಹಿಯಾಗಿರಲಿಲ್ಲ. ತನ್ನ ಬಿಲಿಯನ್‌ಗಟ್ಟಲೆ ಹಣವನ್ನು ಇಟ್ಟುಕೊಳ್ಳುವ ಇಚ್ಛೆ ಇಲ್ಲದ ಅವರು ತನ್ನ ಹಲವು ಆಸ್ತಿಯನ್ನು ದಾನವಾಗಿ ಕೊಡುವ ಬಗ್ಗೆ ಸಾಕಷ್ಟು ಬಾರಿ ಮಾತನಾಡಿದ್ದ. ಪ್ರಾಣಿ ದಯೆ ಪರವಾಗಿ, ಗ್ಲೋಬಲ್ ವಾರ್ಮಿಂಗ್ ವಿರುದ್ಧವಾಗಿ ಹೀಗೆ ಜೀವಪರ, ನಿಸರ್ಗಪರ ಕಾರ್ಯಗಳಿಗೆ ತನ್ನ ಆಸ್ತಿ ಕೊಡುವುದಾಗಿ ಹೇಳಿಕೊಂಡಿದ್ದ.
ಷೇರುಪೇಟೆಯಲ್ಲಿ ಮೊದಲು ದಲ್ಲಾಳಿಯಾಗಿ ಕೆಲಸ ಮಾಡುತ್ತಿದ್ದ ಸ್ಯಾಮ್ 2017ರಲ್ಲಿ ಕ್ರಿಪ್ಟೋಕರೆನ್ಸಿ ಕ್ಷೇತ್ರಕ್ಕೆ ಧುಮುಕಿದ್ದ. ದಿನಕ್ಕೆ ಕೇವಲ 4 ಗಂಟೆ ಮಾತ್ರ ಮಲಗುತ್ತಿದ್ದ ಸ್ಯಾಮ್ ಬಹಳ ಅದ್ಭುತ ರೀತಿಯಲ್ಲಿ ಕ್ರಿಪ್ಟೋ ಜಗತ್ತಿನಲ್ಲಿ ಹೆಜ್ಜೆ ಹಾಕಿದ್ದ.
ಪ್ರಪಾತಕ್ಕೆ ಬಿದ್ದಿದ್ದು ಹೇಗೆ?
ಸ್ಯಾಮ್ ಬ್ಯಾಂಕ್‌ಮ್ಯಾನ್ ಫ್ರೈಡ್ ಎಫ್‌ಟಿಎಕ್ಸ್ ಎಂಬ ಕ್ರಿಪ್ಟೋ ವಿನಿಮಯ ಕೇಂದ್ರದ ಮಾಲೀಕ. ವಿಶ್ವದ ಅತಿದೊಡ್ಡ ಕ್ರಿಪ್ಟೋಕರೆನ್ಸಿ ಪ್ಲಾಟ್‌ಫಾರ್ಮ್ ಎನಿಸಿದ ಬೈನಾನ್ಸ್ ಸಂಸ್ಥೆ ತಾನು ಎಫ್‌ಟಿಎಕ್ಸ್ ಅನ್ನು ಖರೀದಿಸುತ್ತಿರುವುದಾಗಿ ಘೋಷಿಸಿದ್ದೇ ಬಂತು, ಸ್ಯಾಮ್‌ನ ಬಹುತೇಕ ಸಂಪತ್ತು ಕರಗಿಹೋಗಿದೆ.
ನಿನ್ನೆ ಮಂಗಳವಾರ (ನ. 8) ಬೈನಾನ್ಸ್ ಕಂಪನಿಯ ಮುಖ್ಯಸ್ಥ ಚಾಂಗ್‌ಪೆಂಗ್ ಝಾವೋ ಈ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಎಫ್‌ಟಿಎಕ್ಸ್ ಅನ್ನು ಖರೀದಿಸಲು ಲೆಟರ್ ಆಫ್ ಇಂಟೆಂಟ್‌ಗೆ ತಮ್ಮ ಕಂಪನಿ ಸಹಿ ಹಾಕಿದೆ ಎಂದು ಚ್ಯಾಂಗ್‌ಪೆಂಗ್ ಝಾವೋ ಹೇಳಿದ್ದರು.
ಬೈನಾನ್ಸ್ ಮತ್ತು ಎಫ್‌ಟಿಎಕ್ಸ್ ಕ್ರಿಪ್ಟೋಕರೆನ್ಸಿ ಎಕ್ಸ್‌ಚೇಂಜ್ ಕಂಪನಿಗಳಾಗಿವೆ. ಇವು ಬಿಟ್‌ಕಾಯಿನ್, ಡೋಜೆಕಾಯಿನ್, ಈತರ್ ಇತ್ಯಾದಿ ಕ್ರಿಪ್ಟೋಕರೆನ್ಸಿಗಳ ಚಲಾವಣೆ ಮಾಡಲು ಇರುವ ವೇದಿಕೆಗಳಾಗಿವೆ. ಬೈನಾನ್ಸ್ ಸಂಸ್ಥೆಯದ್ದೇ ಬಿಎನ್‌ಬಿ ಎಂಬ ಕ್ರಿಪ್ಟೋಕರೆನ್ಸಿ ಕೂಡ ಇದೆ. ಬೈನಾನ್ಸ್‌ನಂತೆ ಇನ್ನೂ ಹಲವಾರು ಕ್ರಿಪ್ಟೋ ಎಕ್ಸ್‌ಚೇಂಜ್ ಸಂಸ್ಥೆಗಳು ಇವೆ.
ಎರಡು ಸಲಹೆ
ನಿನ್ನೆ ಎಫ್‌ಟಿಎಕ್ಸ್ ಅನ್ನು ಬೈನಾನ್ಸ್ ಖರೀದಿ ಮಾಡಲು ಮುಂದಾಗುತ್ತಿರುವುದಾಗಿ ಟ್ವೀಟ್ ಮಾಡಿದ್ದ ಬೈನಾನ್ಸ್ ಸಿಇಒ ಚ್ಯಾಂಗ್‌ಪೆಂಗ್ ಝಾವೋ, ಅದೇ ಸಮಯದಲ್ಲಿ ಎರಡು ಕ್ರಿಪ್ಟೋ ಪಾಠಗಳನ್ನೂ ಹೇಳಿ ಗಮನ ಸೆಳೆದಿದ್ದಾರೆ.
1) ನೀವು ರಚಿಸಿದ ಟೋಕನ್ ಅನ್ನು ಕೊಲಾಟರಲ್ (ಸೆಕ್ಯೂರಿಟಿ) ಆಗಿ ಯಾವತ್ತೂ ಬಳಸಬೇಡಿ.
2) ನೀವು ಕ್ರಿಪ್ಟೋ ವ್ಯವಹಾರ ನಡೆಸುತ್ತಿದ್ದರೆ ಸಾಲ ಪಡೆಯಬೇಡಿ. ಹಣವನ್ನು ದಕ್ಷತೆಯಿಂದ ಬಳಸಬೇಡಿ. ಬಹಳ ದೊಡ್ಡ ಮೊತ್ತದ ಮೀಸಲು ನಿಧಿ ಹೊಂದಿರಿ.
ಇವೆರಡು ಸೂತ್ರಗಳನ್ನು ಝಾವೋ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ಧಾರೆ. ಇದು ಎಫ್‌ಟಿಎಕ್ಸ್ ಅನ್ನು ಪರೋಕ್ಷವಾಗಿ ಉದಾಹರಿಸಿದಂತಿತ್ತು. ಬೈನಾನ್ಸ್ ಸಂಸ್ಥೆ ಯಾವತ್ತೂ ಬಿಎನ್‌ಬಿಯನ್ನು ಸೆಕ್ಯೂರಿಟಿಯಾಗಿ ಬಳಕೆ ಮಾಡಿಲ್ಲ. ಯಾವ ಸಾಲವನ್ನೂ ಪಡೆದಿಲ್ಲ ಎಂದು ಬೈನಾನ್ಸ್ ಸಂಸ್ಥೆಯ ಮುಖ್ಯಸ್ಥರು ಸ್ಪಷ್ಟಪಡಿಸಿದ್ದಾರೆ.


Click it and Unblock the Notifications