2020ನೇ ಇಸವಿಯಲ್ಲಿ ಸ್ವಿಗ್ಗಿಯಲ್ಲಿ ಅತಿ ಹೆಚ್ಚು ಆರ್ಡರ್ ಮಾಡಿದ ಆಹಾರ ಚಿಕನ್ ಬಿರಿಯಾನಿ. ಮೂರು ಲಕ್ಷಕ್ಕೂ ಹೆಚ್ಚು ಬಳಕೆದಾರರು ತಮ್ಮ ಮೊದಲ ಆರ್ಡರ್ ಆಗಿ, ಈ ಆಹಾರ ಖಾದ್ಯವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ ಎಂಬ ಅಂಶ StatEATstics ವರದಿಯ ಐದನೇ ಅವತರಣಿಕೆಯಲ್ಲಿ ತಿಳಿದುಬಂದಿದೆ.
ಸಸ್ಯಾಹಾರಿ ಹಾಗೂ ಮಾಂಸಾಹಾರಿ ಹೀಗೆ ಎಲ್ಲ ಬಗೆಯ ಬಿರಿಯಾನಿ ಸೇರಿ 2020ರಲ್ಲಿ ಪ್ರತಿ ಸೆಕೆಂಡ್ ಗೆ ಒಂದು ಸಲಕ್ಕಿಂತ ಹೆಚ್ಚು ಆರ್ಡರ್ ಆಗಿದೆ. ಸ್ವಿಗ್ಗಿ ತಿಳಿಸಿರುವ ಪ್ರಕಾರ, ಕೊರೊನಾ ಬಿಕ್ಕಟ್ಟು ಇದ್ದುದರಿಂದ ಕಚೇರಿಗಿಂತಲೂ ಮನೆಗೆ ಹೆಚ್ಚಿನ ಡೆಲಿವರಿ ಮಾಡಲಾಗಿದೆ ಎಂದು ಮಂಗಳವಾರ ತಿಳಿಸಲಾಗಿದೆ.
5000 ರುಪಾಯಿ ಭಕ್ಷೀಸ್
ಅತಿ ಹೆಚ್ಚು ಆರ್ಡರ್ ಮಾಡಿದ ಖಾದ್ಯ ಚಿಕನ್ ಬಿರಿಯಾನಿ. ಆ ನಂತರದ ಸ್ಥಾನ ಮಸಾಲೆ ದೋಸೆ ಹಾಗೂ ಬಟರ್ ಮಸಾಲ, ಚಿಕನ್ ಫ್ರೈಡ್ ರೈಸ್ ಮತ್ತು ಗಾರ್ಲಿಕ್ ಬ್ರೆಡ್ ಸ್ಟಿಕ್ಸ್ ಗೆ ಸಿಕ್ಕಿದೆ. ಇನ್ನು ಕೆಲವು ಗ್ರಾಹಕರು ಅತಿ ಉದಾರವಾಗಿ ಭಕ್ಷೀಸ್ ಕೊಟ್ಟಿದ್ದಾರೆ. ಸ್ವಿಗ್ಗಿ ಪ್ಲಾಟ್ ಫಾರ್ಮ್ ಬಳಸುವಂಥವರು ಬೆಂಗಳೂರು ಮತ್ತು ಭೋಪಾಲ್ ನಲ್ಲಿ 5000 ರುಪಾಯಿಯನ್ನು ಡೆಲಿವರಿ ಮಾಡಿದವರಿಗೆ ನೀಡಿದ್ದಾರೆ. ಇದು ಅತಿ ಹೆಚ್ಚಿನ ಭಕ್ಷೀಸ್ ಆಗಿದೆ. ಇನ್ನು ಲಾಕ್ ಡೌನ್ ಅವಧಿಯಲ್ಲಿ ಸ್ವಿಗ್ಗಿ ಮೂಲಕ ಈ ವರ್ಷ 6 ಲಕ್ಷ ಕೇಕ್ ಗಳನ್ನು ವಿವಿಧ ಆಚರಣೆಗಾಗಿ ಆರ್ಡರ್ ಮಾಡಲಾಗಿದೆ. ಈ ವರ್ಷದ ಆಗಸ್ಟ್ ನಲ್ಲಿ ಕಂಪೆನಿಯಿಂದ ದಿನಸಿ ಹಾಗೂ ಅಗತ್ಯ ವಸ್ತುಗಳ ಡೆಲಿವರಿ ಸೇವೆಗಳನ್ನು ಕೂಡ ಆರಂಭಿಸಲಾಯಿತು. ಇನ್ ಸ್ಟಾಮಾರ್ಟ್ ಮೂಲಕ 1.6 ಲಕ್ಷ ಊಟದ ಕಿಟ್ ಆರ್ಡರ್ ಮಾಡಲಾಗಿದೆ.
75,000 ಕೇಜಿ ಈರುಳ್ಳಿ ಆರ್ಡರ್
ಈ ಮಧ್ಯೆ ಇನ್ ಸ್ಟಾಮಾರ್ಟ್ ನಲ್ಲಿ ಆರ್ಡರ್ ಅತಿ ಹೆಚ್ಚು ಮಾಡಿದ ಪದಾರ್ಥ ಈರುಳ್ಳಿ. 75,000 ಕೇಜಿ ಈರುಳ್ಳಿಯನ್ನು ಆರ್ಡರ್ ಮಾಡಲಾಗಿದೆ. ಆ ನಂತರದ ಸ್ಥಾನದಲ್ಲಿ ಆಲೂಗಡ್ದೆ, ಬಾಳೆಹಣ್ಣು, ಕೊತ್ತಂಬರಿ ಸೊಪ್ಪು ಹಾಗೂ ಹಾಲಿದೆ. 2020ರ ಜನವರಿ ಹಾಗೂ ಡಿಸೆಂಬರ್ ಮಧ್ಯೆ StatEATstics ಒದಗಿಸಿರುವ ಮಾಹಿತಿ ಆಧಾರದಲ್ಲಿ ಈ ಸಂಖ್ಯೆ ನಮ್ಮೆದುರಿಗಿದೆ. ಸ್ವಿಗ್ಗಿಯು 500ಕ್ಕೂ ಹೆಚ್ಚು ನಗರಗಳಲ್ಲಿ 1,00,000 ರೆಸ್ಟೋರೆಂಟ್ ಗಳ ಸಹಭಾಗಿತ್ವದಲ್ಲಿ ಮತ್ತು ಮಳಿಗೆಗಳ ಜತೆಗೆ ಕೆಲಸ ಮಾಡುತ್ತದೆ. ಇನ್ನು ಸ್ವಿಗ್ಗಿ ಜಿನಿ ಪಿಕ್ ಅಪ್ ಸೇವೆಯನ್ನು ಸಹ ಆರಂಭಿಸಲಾಯಿತು. 2020ರಲ್ಲಿ ಮನೆಯಲ್ಲಿ ಮಾಡಿದ ಅಡುಗೆಗೂ ಬೇಡಿಕೆ ಹೆಚ್ಚಿತ್ತು. ಸ್ವಿಗ್ಗಿ ಜಿನಿಗೆ 1,20,000ಕ್ಕೂ ಹೆಚ್ಚು ಆಹಾರಕ್ಕೆ ಸಂಬಂಧಿಸಿದ ಕೆಲಸಗಳನ್ನು ವಹಿಸಲಾಗಿದೆ ಎಂದು ತಿಳಿಸಲಾಗಿದೆ.
ಆರೋಗ್ಯಕರ ಆಹಾರಕ್ಕೆ ಬೇಡಿಕೆ
ಸ್ವಿಗ್ಗಿಯಿಂದ ಆರೋಗ್ಯಕರ ಆಹಾರವನ್ನು ಸಹ ಈ ವರ್ಷ ಶುರು ಮಾಡಲಾಯಿತು. "ಹೆಲ್ತ್ ಹಬ್"ನಲ್ಲಿ ಆಹಾರ ಪದಾರ್ಥಗಳಿಗೆ ಬೇಡಿಕೆ ಹೆಚ್ಚಾಗಿದೆ. ಅದರಲ್ಲೂ ಬೆಂಗಳೂರು, ದೆಹಲಿ ಮತ್ತು ಹೈದರಾಬಾದ್ ನಲ್ಲಿ ಬೇಡಿಕೆ ಹೆಚ್ಚಿದೆ. ಎನ್ ಸಿಆರ್ ನಲ್ಲಿ ಆರೋಗ್ಯಯುಕ್ತ ಆಹಾರವನ್ನು ಆರ್ಡರ್ ಮಾಡುವುದು ಹೆಚ್ಚಿದ್ದರೆ, ಈ ರೀತಿ ಆರೋಗ್ಯಯುತ ಆಹಾರ ಆರ್ಡರ್ ಮಾಡುವ ಪ್ರಮಾಣ ಹೆಚ್ಚಾಗಿರುವುದು ಬೆಂಗಳೂರಿನಲ್ಲಿ. ಸಲಾಡ್ ಗಳು, ಆರೋಗ್ಯಯುಕ್ತ ಸ್ಯಾಂಡ್ ವಿಚ್ ಗಳು, ಹೆಚ್ಚಿನ ಫೈಬರ್ ಅಂಶವುಳ್ಳ ಇಡ್ಲಿ, ಹೆಚ್ಚಿನ ಪ್ರೊಟೀನ್ ವುಳ್ಳ ಖಿಚಡಿ ಇವು ಸ್ವಿಗ್ಗಿ ಹೆಲ್ತ್ ಹಬ್ ನಲ್ಲಿ ಬಹಳ ಹೆಸರುವಾಸಿ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಪಾನಿಪೂರಿಗೆ ಎರಡು ಲಕ್ಷಕ್ಕೂ ಅಧಿಕ ಆರ್ಡರ್
ಇನ್ನು ಪಾನಿಪೂರಿಗೆ ಸ್ವಿಗ್ಗಿಯಲ್ಲಿ ಹೆಚ್ಚಿನ ಬೇಡಿಕೆ ಬಂದಿದೆ. ಲಾಕ್ ಡೌನ್ ನಂತರದ ಕಾಲದಲ್ಲಿ ಎರಡು ಲಕ್ಷಕ್ಕೂ ಅಧಿಕ ಆರ್ಡರ್ ಬಂದಿದೆ. 125 ನಗರಗಳಲ್ಲಿ 36,000 ರಸ್ತೆ ಬದಿ ವ್ಯಾಪಾರಿಗಳನ್ನು ಸೇರ್ಪಡೆ ಮಾಡಿಕೊಂಡಿರುವುದಾಗಿ ಹೇಳಲಾಗಿದೆ. ವರ್ಕ್ ಫ್ರಮ್ ಹೋಮ್ ಹೆಚ್ಚಿದ್ದರಿಂದ ವಿವಿಧ ಬಗೆಯ ಕಾಫೀ- ಟೀ ಆರ್ಡರ್ ಮಾಡುತ್ತಿದ್ದರು ಎಂದು ತಿಳಿಸಿದೆ.


Click it and Unblock the Notifications