Boycott Chinese products ಎಂಬುದು ಹೊಸದಾಗಿ ಕೇಳಿ ಬರುತ್ತಿರುವ ಕೂಗಲ್ಲ. ಈ ಹಿಂದೆ ಅನೇಕ ಬಾರಿ ಕೇಳಿ ಬಂದಿತ್ತು. ಸ್ವದೇಶಿ ಮಂತ್ರ ಜಪಿಸಿ, ದೇಶಿ ಉತ್ಪನ್ನಗಳ ಬಳಕೆ ಬಗ್ಗೆ ಜಾಗೃತಿ ಮೂಡಿಸಿದ ಸ್ವದೇಶಿ ಭಾರತ್ ಖ್ಯಾತಿಯ ರಾಜೀವ್ ದೀಕ್ಷಿತ್ ಸೊಲ್ಲೆತ್ತಿದ್ದರು. ಈಗ ಪ್ರಧಾನಿ ಮೋದಿ ಅವರ ಆತ್ಮ ನಿರ್ಭರ್ ಭಾರತ್ ಭಾಷಣದ ನಂತರ ದೇಶದ ಜನತೆ ಸ್ವದೇಶಿ ಮಂತ್ರ ಜಪಿಸುತ್ತಿದ್ದಾರೆ.
ಚೀನಾ ಹಾಗೂ ಭಾರತ ನಡುವೆ ಲಡಾಕ್ ನ ಪೂರ್ವ ಭಾಗದ ಗಾಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ ಯೋಧರ ಬಲಿದಾನವಾದ ಬಳಿಕ ಸಾರ್ವಜನಿಕರಲ್ಲಿ ಮತ್ತೊಮ್ಮೆ ಚೀನಾ ಮೇಲೆ ಆಕ್ರೋಶ ವ್ಯಕ್ತವಾಗಿದೆ. 2017ರಲ್ಲಿ ಚೀನಾ ಜೊತೆ ಡೋಕ್ಲೋಮ್ ನಲ್ಲಿ ನಡೆದ ಸಂಘರ್ಷದ ನಂತರವೂ ಇದೇ ರೀತಿ ಪರಿಸ್ಥಿತಿ, ಚೀನಾ ವಿರುದ್ಧ ಆರ್ಥಿಕ ನಿರ್ಬಂಧದ ಕೂಗೆದ್ದಿತ್ತು.
ಆದರೆ, ಈ ಆಕ್ರೋಶಕ್ಕೆ ಬೆಲೆ ನೀಡಲು ಚೀನಾ ವಸ್ತುಗಳ ಮೇಲೆ ನಿರ್ಬಂಧ, ಆಮದು ನಿಷೇಧ ಸಾಧ್ಯವೇ? ಎಂದು ಪ್ರಶ್ನಿಸಿದರೆ, ಮಾರುಕಟ್ಟೆ ತಜ್ಞರು ಖಂಡಿತ ಸಾಧ್ಯವಿಲ್ಲ. ಏಕಾಏಕಿ ಚೀನಾದೊಡನೆ ವ್ಯವಹಾರ ಬಂದ್ ಮಾಡಿದರೆ ಇದರಿಂದ ಚೀನಾಕ್ಕಿಂತ ಭಾರತಕ್ಕೆ ದೊಡ್ಡ ಆರ್ಥಿಕ ಹೊಡೆತ ಬೀಳಲಿದೆ ಎಂದಿದ್ದಾರೆ.
ನಮಗೇ ಹೆಚ್ಚು ನಷ್ಟ ಎನ್ನುತ್ತಿದ್ದಾರೆ ಆರ್ಥಿಕ ತಜ್ಞರು
ಚೀನಾ ದೇಶದ ಸರಕುಗಳು ಭಾರತೀಯ ಮಾರುಕಟ್ಟೆಗೆ ಪ್ರವೇಶಿಸದಂತೆ ನಿಷೇಧಿಸಿದರೆ ಅದು ಚೀನಾಕ್ಕಿಂತ ಹೆಚ್ಚಾಗಿ ಭಾರತೀಯ ಹಣಕಾಸು ಪರಿಸ್ಥಿತಿಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಏಕೆಂದರೆ, ಭಾರತದ ಒಟ್ಟಾರೆ ಆರ್ಥಿಕ ವ್ಯವಹಾರಗಳಲ್ಲಿ ಚೀನಾದಿಂದ ಆಮದಾಗುವ ಸರಕುಗಳಿಂದ ಬರುವ ಪಾಲು ಸಾಕಷ್ಟಿದೆ. ಹಾಗಾಗಿ, ಚೀನಾದ ಸಾಮಗ್ರಿಗಳನ್ನು ಬಹಿಷ್ಕರಿಸಿದರೆ ನಮಗೇ ಹೆಚ್ಚು ನಷ್ಟ ಎನ್ನುತ್ತಿದ್ದಾರೆ ಆರ್ಥಿಕ ತಜ್ಞರು. ಆದರೆ, ಸುಮಾರು 371 ಚೀನಿ ವಸ್ತುಗಳ ಮೇಲೆ ನಿರ್ಬಂಧ ಹೇರಲು ವಾಣಿಜ್ಯ ಇಲಾಖೆ ಶಿಫಾರಸು ಮಾಡಿದೆ. 500 ಕ್ಕೂ ಅಧಿಕ ಚೀನಿ ಉತ್ಪನ್ನ ನಿಷೇಧಕ್ಕೆ ವಾಣಿಜ್ಯ ಒಕ್ಕೂಟಗಳು ಕರೆ ನೀಡಿವೆ.
ನಿರ್ಬಂಧ ಯಾವೆಲ್ಲ ವಸ್ತುಗಳ ಮೇಲೆ?
ಪ್ಲಾಸ್ಟಿಕ್ ಉತ್ಪನ್ನ, ಆಟಿಕೆ, ಕ್ರೀಡಾ ಉಪಕರಣ, ಪೀಠೋಪಕರಣಗಳು ಸೇರಿವೆ. ಸರಿ ಸುಮಾರು 127 ಬಿಲಿಯನ್ ಡಾಲರ್ ಮೌಲ್ಯದ ವಹಿವಾಟು ಲಕ್ಷಾಂತರ ಮಂದಿ ಉದ್ಯೋಗ, ದೈನಂದಿನ ಬದುಕು ಒಮ್ಮೆಗೆ ನೆಲಕಚ್ಚಲಿದೆ.
ಅಷ್ಟೇ ಏಕೆ ಕೊವಿಡ್ 19ಗೆ ಸೂಕ್ತ ಔಷಧಿ ಎನಿಸಿರುವ ಹೈಡ್ರೋಕ್ಸಿಕ್ಲೋರೋಕ್ವಿನ್ ಮಾತ್ರೆಯನ್ನು ಅಧಿಕ ಪ್ರಮಾಣದಲ್ಲಿ ಭಾರತದಲ್ಲೇ ತಯಾರಿಸಿದರೂ ಇದಕ್ಕೆ ಬೇಕಾದ ಕಚ್ಚಾವಸ್ತುವನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಬಟ್ಟೆ ಬರೆ, ಎಲೆಕ್ಟ್ರಾನಿಕ್ ವಸ್ತುಗಳಾದ ಟಿವಿ, ಫ್ರಿಜ್, ಫ್ಯಾನ್, ವಾಷಿಂಗ್ ಮಷಿನ್, ಸ್ಯೂಯಿಂಗ್ ಮಷಿನ್, ಕ್ಲೀನರ್, ಸ್ಮಾರ್ಟ್ ಫೋನ್, ಸ್ಮಾರ್ಟ್ ವಾಚ್ ಎಲ್ಲಕ್ಕೂ ಚೀನಾದ ಮೇಲೆ ಭಾರತೀಯ ಕಂಪನಿಗಳು ಅವಲಂಬಿತವಾಗಿದೆ. ಕೆಲವು ಚೀನಾ ಕಂಪನಿಗಳು ವಿದೇಶಿ ನೇರ ಬಂಡವಾಳ ಹೂಡಿಕೆ ಲಾಭದಿಂದ ಭಾರತದಲ್ಲೇ ಭದ್ರವಾಗಿ ನೆಲೆಯೂರಿದೆ.
ಭಾರತದ ಆರ್ಥಿಕ ಸ್ಥಿತಿ ದಿವಾಳಿಯಾಗುತ್ತದೆ
ಹೀಗಾಗಿ, ತಕ್ಷಣಕ್ಕೆ ಟ್ವಿಟ್ಟರ್, ಫೇಸ್ಬುಕ್, ಮಾಧ್ಯಮಗಳಲ್ಲಿನ ಟ್ರೆಂಡ್ ನಂತೆ ಚೀನಾ ವಸ್ತುಗಳನ್ನು ನಿಷೇಧಿಸಿದರೆ ಭಾರತದ ಆರ್ಥಿಕ ಸ್ಥಿತಿ ದಿವಾಳಿಯಾಗುತ್ತದೆ. ಸಾಲ ಪಡೆದು ದೇಶ ಉದ್ಧಾರ ಮಾಡೋಣ ಎಂದು ಸಲಹೆ ಸಿಕ್ಕರೂ, ಸಾಲ ನೀಡುವ ದೊಡ್ಡ ದೊಡ್ಡ ಖಾಸಗಿ ಹಣಕಾಸು ಸಂಸ್ಥೆ ಕೂಡಾ ಚೀನಾದ ಹಿಡಿದಲ್ಲಿವೆ.. ಹಾಗಾದರೆ ಇದಕ್ಕೆ ಪರಿಹಾರವೇ ಇಲ್ಲವೇ? ಮೋದಿ ಕನಸಿನ ಆತ್ಮ ನಿರ್ಭರ ಅಥವಾ ಸ್ವಾವಲಂಬಿ ಭಾರತ ನಿರ್ಮಾಣ ಸಾಧ್ಯವಿಲ್ಲವೇ? ಖಂಡಿತ ಸಾಧ್ಯ.. ಇದಕ್ಕೆ ಸೂಕ್ತವಾದ ಸಂಕಲ್ಪ, ಯೋಜನೆ, ಅನುಷ್ಠಾನ ಅಗತ್ಯ, ಇಲ್ಲದಿದ್ದರೆ, ಭಾವನಾತ್ಮಕವಾಗಿ ಆತುರವಾಗಿ ಈಗ ಇಡುವ ಒಂದು ಹೆಜ್ಜೆ ದೇಶವನ್ನು ದಶಕಗಳ ಹಿಂದಿನ ದುಃಸ್ಥಿತಿಗೆ ದೂಡಬಹುದು.
ಚೀನಾದಿಂದ 7 ಪಟ್ಟು ಅಧಿಕ ಆಮದು
ಚೀನಾಕ್ಕೆ ಭಾರತ ರಫ್ತು ಮಾಡುವ ಪ್ರಮಾಣದ 7 ಪಟ್ಟು ವಸ್ತುಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಜನವರಿ 2020ರಲ್ಲಿ 429.55 ಬಿಲಿಯನ್ ಮೌಲ್ಯದ ಸರಕು ಆಮದಾಗಿತ್ತು. ಫೆಬ್ರವರಿಯಲ್ಲಿ 317.64 ಬಿಲಿಯನ್ ಗೆ ಇಳಿಕೆಯಾಗಿದೆ. 2018-19ರಲ್ಲಿ ಚೀನಾಕ್ಕೆ ರಫ್ತು ಪ್ರಮಾಣ 16.7 ಬಿಲಿಯನ್ ಡಾಲರ್ ನಷ್ಟಿತ್ತು. ಆದರೆ, ಆಮದು ಮೌಲ್ಯ 70.3 ಬಿಲಿಯನ್ ಡಾಲರ್ ನಷ್ಟಿತ್ತು. 2020ರಲ್ಲಿ ಭಾರತದ ಒಟ್ಟಾರೆ ರಫ್ತು ಪ್ರಮಾಣ ಮೇ ತಿಂಗಳಲ್ಲಿ 19.05 ಬಿಲಿಯನ್ ಡಾಲರ್ ನಷ್ಟಿದೆ. ಆಮದು ಪ್ರಮಾಣ 22.20 ಬಿಲಿಯನ್ ಡಾಲರ್ ನಷ್ಟಿದೆ.
ಹೀಗಾಗಿ, ವರ್ಷದಿಂದ ವರ್ಷಕ್ಕೆ ವ್ಯಾಪಾರ ವಹಿವಾಟು ಕೊರತೆ 50 ಬಿಲಿಯನ್ ಡಾಲರ್ ನಷ್ಟಿರುತ್ತದೆ. ಹಾಗಾಗಿ, ಚೀನಿ ಸರಕುಗಳ ನಿಷೇಧವು ಭಾರತಕ್ಕೆ ಹೊಡೆತವೇ ಹೆಚ್ಚು. ಚೀನಾದ ಒಟ್ಟು ವ್ಯಾಪಾರ ವಹಿವಾಟಿನಲ್ಲಿ ಭಾರತದ ಪಾಲು ಶೇ 2ರಷ್ಟು ಮಾತ್ರ ಅಂದರೆ, ಭಾರತದ ರಫ್ತು ಪಾಲು 2% ಹೀಗಾಗಿ ಚೀನಾಕ್ಕೆ ಯಾವುದೇ ರೀತಿ ನಿರ್ಬಂಧ, ನಿಷೇಧದ ಬಿಸಿ ತಟ್ಟಲಾರದು. ಮಾಹಿತಿ ಕೃಪೆ: https://commerce.gov.in/
ಭಾರತದ ಮಾರುಕಟ್ಟೆಯಲ್ಲಿ ಚೀನಾ ಪ್ರಭಾವ
ಮೇ ತಿಂಗಳ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಶೇ 73ರಷ್ಟು ಚೀನಾ ಮೂಲದ ಶಿಯೋಮಿ, ಒಪ್ಪೋ, ಒನ್ ಪ್ಲಸ್ ಒನ್, ರಿಯಲ್ ಮಿ, ವಿವೋ ಫೋನ್ ಗಳು ಸೇಲ್ ಆಗಿವೆ. ಮಾರುಕಟ್ಟೆಯಲ್ಲಿ ಮಿಕ್ಕ ಪಾಲನ್ನು ದಕ್ಷಿಣ ಕೊರಿಯಾ ಮೂಲದ ಸ್ಯಾಮ್ ಸಂಗ್, ಫಿನ್ಲೆಂಡ್ ನ ನೋಕಿಯಾ ಹಂಚಿಕೊಂಡಿವೆ.
* ಭಾರತದ ಪ್ರಮುಖ 30 ಬಿಲಿಯನ್ ಡಾಲರ್ ಸ್ಟಾರ್ ಅಪ್ ಕಂಪನಿಗಳ ಪೈಕಿ 18ರಲ್ಲಿ ಚೀನಾ ಹೂಡಿಕೆ ಹೊಂದಿದೆ. ಬೈಜೂಸ್,ಜೊಮ್ಯಾಟೋ, ಡ್ರೀಮ್ 11, ಹೈಕ್ ಮೆಸೆಂಜರ್, ಸ್ವಿಗ್ಗಿ, ಓಲಾ ಕ್ಯಾಬ್ಸ್, ಫ್ಲಿಪ್ ಕಾರ್ಟ್, ಪೇಟಿಯಂ, ಬಿಗ್ ಬ್ಯಾಸ್ಕೆಟ್, ಸ್ನಾಪ್ ಡೀಲ್ ಸಂಸ್ಥೆಗಳಲ್ಲಿ ಚೀನಾದ ಆಲಿಬಾಬಾ (ಸುಮಾರು 5 ಬಿಲಿಯನ್ ಡಾಲರ್), ಟೆನ್ ಸೆಂಟ್ ಕಂಪನಿ(3 ಬಿಲಿಯನ್ ಡಾಲರ್) ಹೂಡಿಕೆಯಿದೆ.
* ಆಟೋಮೊಬೈಲ್ ಕ್ಷೇತ್ರದಲ್ಲಿ ಶೇ 30ರಷ್ಟು, ಬೊಂಬೆ, ಆಟಿಕೆ, ಟಾಯ್ಸ್ ಗೇಮ್ಸ್ ಕ್ಷೇತ್ರದಲ್ಲಿ ಶೇ 90ರಷ್ಟು ಪಾಲು, ಬೈಸಿಕಲ್ ನಿರ್ಮಾಣಕ್ಕೆ ಶೇ 50ರಷ್ಟು ಚೀನಾ ಪಾಲು ಅಗತ್ಯ.
* ಮೊದಲೇ ಹೇಳಿದಂತೆ ಎಚ್ ಸಿಕ್ಯೂ ತಯಾರಿಕೆಗೆ ಬೇಕಾದ Active Pharmaceutical Ingredients (APIs), ಪಿಪಿಇ ಕಿಟ್ಸ್ ಚೀನಾದಿಂದ ಮಾತ್ರ ಪೂರೈಕೆಯಾಗುತ್ತಿದೆ.
ಭಾರತ ಏನು ಮಾಡಬಹುದು?
ಉತ್ತರ ತುಂಬಾ ಸುಲಭ ಆದರೆ, ಅನುಷ್ಠಾನ ಕಷ್ಟ. ಆಮದು ಕಡಿಮೆ ಮಾಡಿಕೊಳ್ಳುವುದು ರಫ್ತು ಹೆಚ್ಚಾಗುವಂತೆ ನೋಡಿಕೊಂಡು ವ್ಯಾಪಾರ ವಹಿವಾಟಿನಲ್ಲಿ ಸಮತೋಲನ ಕಾಯ್ದುಕೊಳ್ಳುವುದು.
ಇದರ ಜೊತೆಗೆ ಯಾವುದರ ಮೇಲೆ ಹೆಚ್ಚಿನ ಹೂಡಿಕೆ ಮಾಡಬೇಕು ಎಂಬುದನ್ನು ಗುರುತಿಸಿಕೊಳ್ಳಬೇಕು. ಇಸ್ರೇಲ್ ನಂಥ ದೇಶ ತನ್ನ ಜಿಡಿಪಿಯ 4.3% ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರಕ್ಕೆ ಮೀಸಲಿಟ್ಟಿದೆ. ಭಾರತದಲ್ಲಿ ಆರ್ ಅಂಡ್ ಡಿ ಕ್ಷೇತ್ರಕ್ಕೆ ಇನ್ನಷ್ಟು ಮಾನವ ಸಂಪನ್ಮೂಲ, ಅನುದಾನ ಸಿಕ್ಕರೆ, ಉತ್ತಮ ಗುಣಮಟ್ಟದ ಸ್ವದೇಶಿ ಉತ್ಪನ್ನಗಳು ಹೊರ ಬರಲು ಸಾಧ್ಯ.
* ದೇಶಿ ಕಂಪನಿಗಳಿಗೆ ನೀಡುವ ಸಾಲ, ಬಡ್ಡಿದರದಲ್ಲಿ ಭಾರಿ ವಿನಾಯಿತಿ, ರಿಯಾಯಿತಿ ಅಗತ್ಯ. ಇದು ಚೀನಾ ಕೂಡಾ ಅನುಸರಿಸಿಕೊಂಡು ಬಂದಿರುವ ಮಾರ್ಗ. ದೇಶಿ ಕಂಪನಿಗಳಿಗೆ ಬೇಕಾದ ಆರ್ಥಿಕ ಪ್ಯಾಕೇಜ್ ಈಗಾಗಲೇ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಮೂಲ ಸೌಕರ್ಯ ಒದಗಿಸುವುದು, ಮಾರುಕಟ್ಟೆಯಲ್ಲಿ ಚೀನಿ ಕಂಪನಿ ವಿರುದ್ಧ ಸ್ಪರ್ಧಿಸಲು ಬಲ ತುಂಬುವುದು ಆಗಬೇಕಿರುವ ಕೆಲಸ.
* ವಿದೇಶಿ ನೇರ ಬಂಡವಾಳ (ಎಫ್ ಡಿಐ) ಕ್ಷೇತ್ರದಲ್ಲಿ ಇನ್ನಷ್ಟು ಉದಾರೀಕರಣ ನೀತಿ ಅಗತ್ಯ. ಚೀನಾದಿಂದ ಎಫ್ ಡಿಐ ಮೂಲಕ ಶೆ 25 ಹಾಗೂ ಯುಎಸ್ ನಿಂದ ಶೇ 10ರಷ್ಟು ಮಾತ್ರ ಭಾರತಕ್ಕೆ ದಕ್ಕುತ್ತಿದೆ. ಉತ್ತಮ್ಮ ಉತ್ಪನ್ನವಿದ್ದರೆ ಮಾರುಕಟ್ಟೆಯಲ್ಲಿ ಬೆಲೆ ನಿಗದಿ, ಗ್ರಾಹಕರ ಅಗತ್ಯ ಪೂರೈಕೆ ಸಾಧ್ಯ ಇಲ್ಲದಿದ್ದರೆ, ಮೋದಿ ಆತ್ಮ ನಿರ್ಭರ ಭಾರತ ಕನಸಾಗಿ ಉಳಿಯುತ್ತದೆ. ದೇಶದ ಬಗ್ಗೆ ಉಗ್ರ ಭಾಷಣ ಬಿಟ್ಟು ದೇಶಿ ವಸ್ತುಗಳನ್ನು ಖರೀದಿಸುವತ್ತ ಚಿಂತಿಸಿ.


Click it and Unblock the Notifications